ಬೆಂಗಳೂರು: ಪಿಎಸ್‌ಐ ಜಗದೀಶ್ ಹಂತಕರನ್ನು ಬಂಧಿಸಿದ ತಂಡಕ್ಕೆ ರು.10 ಲಕ್ಷ ಬಹುಮಾನ

Spread the love

ಬೆಂಗಳೂರು: ದೊಡ್ಡಬಳ್ಳಾಪುರ ನಗರ ಠಾಣೆ ಪಿಎಸ್‌ಐ ಎಸ್.ಜಗದೀಶ್ ಹತ್ಯೆ ಪ್ರಕರಣದ ಆರೋಪಿಗಳಾದ ಮಧು ಹಾಗೂ ಹರಿಶ್ ಬಾಬುರನ್ನು ಬಂಧಿಸಿದ ಮಹಾರಾಷ್ಟ್ರ ಹಾಗೂ ಕರ್ನಾಟಕ ಪೊಲೀಸ್ ತಂಡಕ್ಕೆ ರಾಜ್ಯ ಸರ್ಕಾರ 10 ಲಕ್ಷ ರುಪಾಯಿ ಬಹುಮಾನ ಘೋಷಿಸಿದೆ.

ಆರೋಪಿಗಳನ್ನು ಬಂಧಿಸಿದ ಕರ್ನಾಟಕ ಹಾಗೂ ಮಹಾರಾಷ್ಟ್ರದ ನಾಗ್ಪುರ ಪೊಲೀಸ್ ತಂಡಗಳಿಗೆ ತಲಾ 5 ಲಕ್ಷ ರುಪಾಯಿ ಬಹುಮಾನ ನೀಡುವುದಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಘೋಷಿಸಿದ್ದಾರೆ.

ಇದೇ ವೇಳೆ ಪ್ರತಿಪಕ್ಷ ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದ ಸಿಎಂ, ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಸಮರ್ಪಕವಾಗಿದ್ದು, ಜನರು ಕೂಡ ನೆಮ್ಮದಿಯಾಗಿದ್ದಾರೆ. ಆದರೆ ಬಿಜೆಪಿ ಕಾಮಾಲೆ ಕಣ್ಣಿಗೆಎಲ್ಲವೂ ಹಳದಿಯಾಗಿ ಕಾಣುತ್ತಿದೆ ಎಂದರು.

ಮಧು ಬಳಕೆ ಮಾಡುತ್ತಿದ್ದ ಮೊಬೈಲ್ ಫೋನ್ ಟವರ್ ಲೊಕೆಶನ್ ಆಧರಿಸಿ ರಾಜ್ಯ ಪೊಲೀಸರು ನೀಡಿದ ಮಾಹಿತಿ ಆಧಾರದಲ್ಲಿ ಮಹಾರಾಷ್ಟ್ರದ ನಾಗ್ಪುರ ಪೊಲೀಸರು ನಿನ್ನೆ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದರು.

ಸೋಮವಾರ ಸಂಜೆ 4.30ಕ್ಕೆ ಆಂಧ್ರಪ್ರದೇಶ ಎಕ್ಸ್‌ಪ್ರೆಸ್ ರೈಲು ನಾಗ್ಪುರ ಜಂಕ್ಷನ್ ತಲುಪುತ್ತಿದ್ದಂತೆ ರಾಜ್ಯ ಪೊಲೀಸರು ವಾಟ್ಸ್‌ಆಪ್ ಮೂಲಕ ಕಳುಹಿಸಿದ್ದ ಫೋಟೋ ಕೈಯಲ್ಲಿಡಿದು ಜನರಲ್ ಕೋಚ್‌ಗಳಲ್ಲಿ ನಾಗ್ಪುರ ಪೊಲೀಸರ ತಂಡ ತೀವ್ರ ಶೋಧ ಕಾರ್ಯ ನಡೆಸಿತ್ತು. ಈ ವೇಳೆ ಆರೋಪಿ ಮಧು ಕೋರ್ಚ್‌ನಲ್ಲಿ ಸಿಕ್ಕಿಬಿದ್ದಿದ್ದಾನೆ. ಬಳಿಕ ತಲೆ ಬೋಳಿಸಿಕೊಂಡಿದ್ದ ಹರೀಶ್ ಬಾಬುನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.


Spread the love