ಬೆಳ್ತಂಗಡಿ| ತಿಮರೋಡಿ ಬಂಧನದ ವೇಳೆ ಕರ್ತವ್ಯಕ್ಕೆ ಅಡ್ಡಿ: ಗಿರೀಶ್ ಮಟ್ಟಣ್ಣನವರ್ ಸೇರಿ ಹಲವರ ವಿರುದ್ಧ ಪ್ರಕರಣ ದಾಖಲು
ಬೆಳ್ತಂಗಡಿ: ಉಜಿರೆಯ ತಿಮರೋಡಿ ಮನೆಯಲ್ಲಿ ಮಹೇಶ್ ಶೆಟ್ಟಿ ಅವರನ್ನು ಬಂಧನ ಮಾಡಲು ಬ್ರಹ್ಮವಾರ ಪೊಲೀಸರು ಹೋದಾಗ ಕರ್ತವ್ಯಕ್ಕೆ ಅಡ್ಡಿಪಡಿಸಿದ ಬಗ್ಗೆ ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ಮಹೇಶ್ ಶೆಟ್ಟಿ ತಿಮರೋಡಿ, ಗಿರೀಶ್ ಮಟ್ಟಣ್ಣಣವರ್, ಜಯಂತ್.ಟಿ ಸೇರಿ ಹಲವರ ವಿರುದ್ಧ ಪ್ರಕರಣ ದಾಖಲಾಗಿದೆ.
ಯೂಟ್ಯೂಬ್ ಮೂಲಕ ಬಿ.ಎಲ್.ಸಂತೋಷ್ ವಿರುದ್ಧ ಮಹೇಶ್ ಶೆಟ್ಟಿ ತಿಮರೋಡಿ ಅವಹೇಳನಕಾರಿ ಹೇಳಿಕೆ ನೀಡಿದ ಆರೋಪ ಸಂಬಂಧ ಉಡುಪಿ ಜಿಲ್ಲೆಯ ಬ್ರಹ್ಮವಾರ ಪೊಲೀಸ್ ಠಾಣೆಯಲ್ಲಿ ಆ.18 ರಂದು ರಾಜೀವ್ ಕುಲಾಲ್ ದಾಖಲಿಸಿದ ಪ್ರಕರಣದಲ್ಲಿ ಆ.21 ರಂದು ಠಾಣೆಗೆ ಹಾಜರಾಗಲು ನೋಟಿಸ್ ನೀಡಿದರೂ ಮಹೇಶ್ ಶೆಟ್ಟಿ ತಿಮರೋಡಿ ಹಾಜರಾಗದ ಹಿನ್ನಲೆಯಲ್ಲಿ ಆ.21 ರಂದು ಬೆಳಗ್ಗೆ ಉಜಿರೆ ತಿಮರೋಡಿ ಮನೆಯಲ್ಲಿ ಬ್ರಹ್ಮವಾರ ಪೊಲೀಸರು ಬಂಧನ ಮಾಡಲು ಬಂದಾಗ ಕರ್ತವ್ಯಕ್ಕೆ ಅಡ್ಡಿಪಡಿಸಿದ ಬಗ್ಗೆ ಆ.21 ರಂದು ಬೆಳ್ತಂಗಡಿ ಪೊಲೀಸ್ ಠಾಣೆಗೆ ಬ್ರಹ್ಮವಾರ ಪೊಲೀಸ್ ಠಾಣೆಯ ಸಬ್ ಇನ್ ಸ್ಪೆಕ್ಟರ್ ಅಶೋಕ್ ಮಲಬಾಗಿಲು ಅವರು ದೂರು ನೀಡಿದ್ದಾರೆ.
ಮಹೇಶ್ ಶೆಟ್ಟಿ ತಿಮರೋಡಿ, ಗಿರೀಶ್ ಮಟ್ಟಣ್ಣನವರ್, ಜಯಂತ್.ಟಿ ಹಾಗೂ ಇತರ 10-15 ಮಂದಿ ಪೊಲೀಸರು ಕರ್ತವ್ಯ ನಿರ್ವಹಿಸದಂತೆ ಬಲಪ್ರಯೋಗ ಮಾಡಿ ಅಡ್ಡಿಪಡಿಸಿದ್ದಾರೆ, ಅಲ್ಲದೆ ಸಾಮಾಜಿಕ ಜಾಲತಾಣಗಳಲ್ಲಿ ಮಾನಹಾನಿಕರವಾಗಿ ಸಂದೇಶಗಳನ್ನು ಪ್ರಸಾರ ಮಾಡುವುದಾಗಿ ಬೆದರಿಕೆ ಹಾಕಿದ್ದಾರೆ. ಮಹೇಶ್ ಶೆಟ್ಟಿಯನ್ನು ವಶಕ್ಕೆ ಪಡೆದ ಬಳಿಕ ಇಲಾಖಾ ವಾಹನದಲ್ಲಿ ಬರಲು ನಿರಾಕರಿಸಿದ್ದು, ಖಾಸಗಿ ಕಾರಿನಲ್ಲಿ ಬಂದಿದ್ದು, ಈ ವೇಳೆ ಸ್ಥಳದಲ್ಲಿ ನೆರೆದಿದ್ದ 10ರಿಂದ 15 ಮಂದಿ ಕಾರುಗಳನ್ನು ಹಿಂಬಾಲಿಸಿ ಬಂದು ಕರ್ತವ್ಯಕ್ಕೆ ಅಡ್ಡಿ ಪಡಿಸಿದ್ದಾರೆ ಎಂದು ದೂರು ನೀಡಿದ್ದು, ಅದರಂತೆ ಆರೋಪಿಗಳ ವಿರುದ್ಧ ಕರ್ತವ್ಯಕ್ಕೆ ಅಡ್ಡಿಪಡಿಸಿರುವ ಬಗ್ಗೆ ಆ.22 ರಂದು ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ 132,189(2),351(2), 263a, 190, 262, ಬಿಎನ್.ಎಸ್. ನಂತೆ ಪ್ರಕರಣ ದಾಖಲಾಗಿದೆ.