ಬೆಳ್ಮಣ್ ನ ಟೋಲ್ ಗೇಟ್ ವಿರುದ್ದ ಪ್ರತಿಭಟನೆಗೆ ಭಾರಿ ಬೆಂಬಲ ವ್ಯಕ್ತಪಡಿಸಿದ ನಾಗರಿಕರು

Spread the love

ಬೆಳ್ಮಣ್ ನ ಟೋಲ್ ಗೇಟ್ ವಿರುದ್ದ ಪ್ರತಿಭಟನೆಗೆ ಭಾರಿ ಬೆಂಬಲ ವ್ಯಕ್ತಪಡಿಸಿದ ನಾಗರಿಕರು

ವರದಿ : ಅಲಿಸ್ಟರ್ ಪಿಂಟೊ

ಕಾರ್ಕಳ: ಬೆಳ್ಮಣ್ ನ ಟೋಲ್ ಗೇಟ್ ವಿರುದ್ದ ಗುರುವಾರ ಬ್ರಹತ್ ಪ್ರತಿಭಟನೆ ನಡೆಸಲಾಗುತ್ತಿದ್ದು, ಯಶಸ್ವಿಯಾಗಿ ಅಂಗಡಿ ಮುಂಗಟ್ಟು,ಶಾಲೆ,ಕಾಲೇಜುಗಳು ಮತ್ತು ಹೆದ್ದಾರಿಯನ್ನು ಬಂದ್ ಮಾಡಿ ಆಕ್ರೋಶ ಹೊರ ಹಾಕಲಾಯಿತು.

ಪ್ರತಿಭಟನೆಯಲ್ಲಿ ಭಾಗವಹಿಸಿ ಮಾತನಾಡಿದ ಕೇಮಾರು ಸಾಂದಿಪನಿ ಆಶ್ರಮದ ಶ್ರೀ ಈಶ ವಿಠಲದಾಸ ಸ್ವಾಮೀಜಿಯವರು ಸರಕಾರಗಳು ಹಲವಾರು ಭಾಗ್ಯಗಳ ಜೊತೆಗೆ ಟೋಲ್ ಭಾಗ್ಯವನ್ನು ಸಹ ಕರುಣಿಸಿದೆ. ವಾಹನ ಖರಿದೀಸುವಾಗ ರಸ್ತೆ ತೆರಿಗೆ ಕಟ್ಟಿದ ಮೇಲೆ ಮತ್ತೆ ಪುನಃ ಟೋಲ್ ಹೆಸರಿನಲ್ಲಿ ಜನರನ್ನು ಲೂಟುವುದು ನಿಲ್ಲಬೇಕು. ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆ ಸಂಪೂರ್ಣ ಟೋಲ್ ಮುಕ್ತವಾಗಬೇಕು ಇದಕ್ಕಾಗಿ ಸದಾ ತಾನು ಯಾವುದೇ ತ್ಯಾಗಕ್ಕೂ ಸಿದ್ದ ಎಂದರು.

ಬೆಳ್ಮಣ್ಣು ಟೋಲ್ ಗೇಟ್ ಹೋರಾಟ ಸಮಿತಿ ಅಧ್ಯಕ್ಷ ಎನ್.ಸುಹಾಸ್ ಹೆಗ್ಡೆ ಮಾತನಾಡಿ ಪಡುಬಿದ್ರಿ–ಕಾರ್ಕಳ ರಾಜ್ಯ ಹೆದ್ದಾರಿ 40ಕ್ಕೂ ಹೆಚ್ಚಿನ ಹಳ್ಳಿಗಳನ್ನು ಸಂಪರ್ಕಿಸುವ ಮುಖ್ಯ ರಸ್ತೆಯಾಗಿದೆ. ನಿತ್ಯ ಸಾವಿರಾರು ಜನರು ಕೆಲಸದ ನಿಮಿತ್ತ ಬೇರೆ ಬೇರೆ ಪ್ರದೇಶಗಳಿಗೆ ತೆರಳಲು ಈ ರಸ್ತೆಯನ್ನೇ ಅವಲಂಬಿಸಿದ್ದಾರೆ. ಈ ಭಾಗದಲ್ಲಿ ರಾಜ್ಯ ಸರ್ಕಾರ ಸುಂಕ ವಸೂಲಾತಿ ಕೇಂದ್ರವನ್ನು ನಿರ್ಮಿಸಲು ಹೊರಟಿದ್ದು, ಜನ ಸಾಮಾನ್ಯರಿಗೆ ಹೊರೆಯಾಗಿ ಪರಿಣಮಿಸಲಿದೆ ಎಂದು ಹೇಳಿದರು.

ಪ್ರತಿಭಟನಾ ಸ್ಥಳಕ್ಕೆ ಅಪರ ಜಿಲ್ಲಾಧಿಕಾರಿ ಶ್ರೀ ವಿದ್ಯಾ ಅವರು ಆಗಮಿಸಿ ಮನವಿ ಸ್ವೀಕರಿಸಿದರು. ಸರ್ಕಾರದ ಗಮನಕ್ಕೆ ಇಂದೇ ವಿಚಾರವನ್ನು ತಿಳಿಸುವುದಾಗಿ ತಿಳಿಸಿದರು.

ಬಳಿಕ ಸಾಂಕೇತಿಕವಾಗಿ ಪ್ರತಿಭಟನೆ ನಡೆಸುತ್ತಿದ್ದ ಸುಹಾಸ್ ಹೆಗ್ಡೆ ಸೇರಿದಂತೆ 25 ಕ್ಕೂ ಹೆಚ್ಚು ಮಂದಿಯನ್ನು ವಶಕ್ಕೆ ಪಡೆದು ಬಳಿಕ ಬಿಡುಗಡೆಗೊಳಿಸಿದರು..


Spread the love