ಬೇಡಿಕೆಯ ಭದ್ರ ಬಿತ್ತನೆ ಬೀಜ ಪೂರೈಸದ ಉಡುಪಿ ಕೃಷಿ ಇಲಾಖೆ, ತವರೂರಲ್ಲಿ ಭತ್ತ ಬೆಳೆಸಲು ಉತ್ಸುಕ ಹರೀಶ್ ಶೆಟ್ಟಿ ಎರ್ಮಾಳ್ ನಿರಾಶೆ

Spread the love

ಬೇಡಿಕೆಯ ಭದ್ರ ಬಿತ್ತನೆ ಬೀಜ ಪೂರೈಸದ ಉಡುಪಿ ಕೃಷಿ ಇಲಾಖೆ, ತವರೂರಲ್ಲಿ ಭತ್ತ ಬೆಳೆಸಲು ಉತ್ಸುಕ ಹರೀಶ್ ಶೆಟ್ಟಿ ಎರ್ಮಾಳ್ ನಿರಾಶೆ

ಮುಂಬಯಿ: ಕಳೆದ ಅನೇಕ ದಶಕಗಳಿಂದ ಮುಂಬಯಿಯಲ್ಲಿದ್ದೂ ಓರ್ವ ಉದ್ಯಮಿ, ಸಮಾಜ ಸೇವಕರಾಗಿದ್ದರೂ ವರ್ಷಂಪ್ರತೀ ತವರೂರಲ್ಲಿ ಕೃಷಿ ಮಾಡಿ ಹಲವಾರು ಮಂದಿಗೆ ಕೆಲಸವೂ, ಕಳಸೆ ತುಂಬಾ ಭತ್ತವನ್ನೂ ಬೆಳೆಸಿ ಸಂತಸ ಪಡುತ್ತಿರುವ ಹರೀಶ್ ಶೆಟ್ಟಿ ಎರ್ಮಾಳ್ ತನ್ನ ತವರೂರು ಉಡುಪಿ ತೆಂಕಎರ್ಮಾಳ್ ಅಲ್ಲಿನ ಅಂಬೋಡಿ ಕಲಾ ನಿವಾಸದಲ್ಲಿ ವಾಸ್ತವ್ಯಹೂಡಿ ಬಂದು ಈ ಬಾರಿಯೂ ಕೃಷಿಯಲ್ಲಿ ತೊಡಗಿಸಿ ಕೊಂಡಿದ್ದಾರೆ. ಅಂತೆಯೇ ತನ್ನ ಸುಮಾರು ಎಂಟು ಎಕ್ರೆ ಕೃಷಿ ಭೂಮಿಯಲ್ಲಿ ಕಳೆದ ಎಪ್ರಿಲ್-ಮೇ ತಿಂಗಳ ಬೇಸಿಗೆ ಕಾಲದ ಉರಿಬಿಸಿಲ ತಾಪವನ್ನು ಲೆಕ್ಕಿಸದೆ ಜಮೀನು ಸಮತಟ್ಟು ಗೊಳಿಸಿ ಅಂದಾಜು 37 ಗದ್ದೆಗಳನ್ನು ಸಿದ್ಧ ಪಡಿಸಿದ್ದಾರೆ. ಬಳಿಕ ಸ್ಥಾನೀಯ ಕೃಷಿ ವ್ಯವಸಾಯ ಕೇಂದ್ರ ಕಾಪು ಇಲ್ಲಿಗೆ ಕಳೆದ ಹತ್ತಾರು ದಿನಗಳಿಂದ ದಿನಾಲೂ ಭೇಟಿ ನೀಡಿ ತನ್ನ ಬೇಡಿಕೆಯ ಭದ್ರ ಭತ್ತದ ಬೀಜಕ್ಕೆ ಮೊರೆ ಹೋದರೆ ಉತ್ತರ ಶೂನ್ಯವಾಗಿದೆ. ತಾನು ಸುಮಾರು 400 ಕಿಲೋ ಭದ್ರ ಮಾರ್ಕಿನ ಭತ್ತದ ಬೀಜಕ್ಕೆ ಬೇಡಿಕೆಯಿಟ್ಟರೂ ಅದರ ಬದಲು ನಿಮಗೆ ಬೇರೆ ಬತ್ತದ ಬೀಜಗಳನ್ನು ನೀಡುತ್ತೇವೆ ಅದನ್ನು ಕೊಂಡೊಯ್ಯಿರಿ ಎಂದು ಕೃಷಿ ಇಲಾಖೆ ಸಿಬ್ಬಂದಿಗಳು ಪುಸಲಾಯಿಸಿ ಉತ್ತರಿಸುತ್ತಿದ್ದಾರೆ. ದಿನಾ ಕಛೇರಿಯನ್ನು ಸುತ್ತಾಡಿ ಸುಸ್ತಾದ ನಮ್ಮಲ್ಲಿ ಇದೀಗ ಕೃಷಿ ಮಾಡುವ ಆಸಕ್ತಿ ಕುಂದುತ್ತಿದೆ. ಇಲಾಖೆಯ ಇಂತಹ ನಡವಳಿಕೆಗೆ ಬೇಸತ್ತ ಹರೀಶ್ ಶೆಟ್ಟಿ ಉನ್ನತಾಧಿಕಾರಿಗಳ ಮೊರೆಹೋದ ಸಂಗತಿ ಇದೀಗ ಬೆಳಕಿಗೆ ಬಂದಿದೆ.

ಕಳೆದ ಅನೇಕ ದಶಕಗಳಿಂದ ಮುಂಬಯಿ ಮಹಾನಗರದಲ್ಲಿ ಓರ್ವ ಹೊಟೇಲು ಉದ್ಯಮಿಯಾಗಿ ಪ್ರತಿಷ್ಠಿತ ವ್ಯಕ್ತಿತ್ವದೊಂದಿಗೆ ಅತ್ಯುನ್ನತ ಹುದ್ದೆಗಳನ್ನು ಅಲಂಕರಿಸಿ ಸೇವೆಯಲ್ಲಿ ತೊಡಗಿಸಿ ಕೊಂಡಿರುವ ಹರೀಶ್ ಶೆಟ್ಟಿ ಭಾರೀ ಉತ್ಸುಕತೆಯಲ್ಲಿ ಭತ್ತ ಬೆಳೆಸಲು ಮುಂದಾಗಿ ಪೂರ್ವ ಸಿದ್ಧತೆಗಾಗಿ ಸದ್ಯ ಊರಲ್ಲೇ ಮೊಕ್ಕಂ ಹೂಡಿ ಸ್ವತಃ ಕೃಷಿಯಲ್ಲಿ ತೊಡಗಿಸಿ ಕೊಂಡಿದ್ದಾರೆ. ಆದರೆ ಕೃಷಿ ಇಲಾಖೆ ನಮ್ಮ ಉತ್ಸುಕತೆಗೆ ತಣ್ಣೀರೆರಚಿ ನಮ್ಮ ಯೋಚಿತ ಕೃಷಿ ಯೋಜನೆಯ ಕನಸನ್ನು ನುಚ್ಚುನೂರುಗೊಳಿಸುತ್ತಿರುವುದು ನಮ್ಮಂತಹ ರೈತರ ದುರದೃಷ್ಟವೇ ಸರಿ. ದಿನಾ ಕೃಷಿ ಕಛೇರಿಗೆ ಸುತ್ತಾಡಿದರೂ ಯಾವುದೇ ಪ್ರಯೋಜನ ಆಗುತ್ತಿಲ್ಲ ಎಂದು ಹರೀಶ್ ಶೆಟ್ಟಿ ಬಾರೀ ಬೇಸರ ವ್ಯಕ್ತ ಪಡಿಸಿದ್ದಾರೆ.

ರೈತರಿಗೆ ಭದ್ರತೆ ನೀಡದ ಭದ್ರ…! ಅಕ್ಕಿ ಬೆಳೆಸುವವರ ಕನಸು ಛಿದ್ರ…! ನಮ್ಮಂತಹ ಉದ್ಯಮಿಗಳು ನಾಡಿಗೆ ಬಂದು ಕೃಷಿಯಲ್ಲಿ ತೊಡಗಿಸಿ ಕೊಂಡರೆ ಇಂತಹ ಶ್ರಮದಾಯಕ ಕಾಯಕಕ್ಕೆ ಸರಕಾರವಾಗಲೀ, ಜಿಲ್ಲಾಡಳಿತವಾಗಲಿ ಖುಷಿ ಪಡಬೇಕು. ರೈತರು ಹೆಚ್ಚಾಗ್ತಾರೆ ಅನ್ನುವ ಸಂತಸ ಆಗಬೇಕು. ಆದರೆ ರೈತರ ಅಗತ್ಯ, ಅವಶ್ಯಗಳಿಗೆ ತತ್‍ಕ್ಷಣವೇ ಸ್ಪಂದಿಸಿ ಪೆÇ್ರೀತ್ಸಾಹಿಸಬೇಕೇ ಹೊರತು ಅಲ್ಲಿಲ್ಲಿ ನಲಿದಾಡಿಸಿ, ಪದೇಪದೇ ತಮ್ಮ ಕಛೇರಿಗಳನ್ನು ಸುತ್ತಾಡಿಸುವುದು ಸರಿಯಲ್ಲ. ನಮ್ಮನ್ನು ಕರೆಸಿ ಕಛೇರಿಗಳಲ್ಲಿ ಕಾಯಿಸುವುದು ಉಚಿತವಲ್ಲ. ಇದು ದುಡಿಯುವ ರೈತರಲ್ಲಿ ನಿರಾಸಕ್ತಿ ಮೂಡಿಸುವ ಧೋರಣೆ ಆಗಿದೆ. ಬೇಡಿಕೆಯ ಭದ್ರ ಬಿತ್ತನೆ ಬೀಜ ಪೂರೈಸದ ಕೃಷಿ ಇಲಾಖೆಯ ಕ್ರಮದಿಂದ ಬತ್ತಿದ ಭತ್ತ ಬೆಳೆಯ ಆಸಕ್ತಿ ಕುಂದಿದೆ ಎಂದು ಹರೀಶ್ ಶೆಟ್ಟಿ ಖೇದ ವ್ಯಕ್ತ ಪಡಿಸಿದ್ದಾರೆ.

ಸ್ವಇಚ್ಛೆಯಿಂದ ಪ್ರಾಮಾಣಿಕ, ಜವಾಬ್ದಾರಿಯುತ ಮತ್ತು ಮನಸಾರೆಯಾಗಿ ದುಡಿಯುವ ರೈತರಿಗೆ ಅವರು ಬಯಸುವ ಬಿತ್ತನೆ ಬೀಜಗಳನ್ನಾಗಲೀ, ಉಪಕರಣ, ಸೌಲತ್ತುಗಳಾಗಲಿ ನೀಡದಿದ್ದರೆ ಇನ್ಯಾರು ಬೆಳೆ ಬೆಳೆಸಲು ಸಾಧ್ಯ. ಪ್ರತೀಯೋರ್ವ ರೈತರ ಅಗತ್ಯಗಳಿಗೆ ತಕ್ಕಂತೆ ಸ್ಪಂದಿಸಿ ಕೃಷಿ ಇಲಾಖೆಯು ಯೋಗ್ಯ ವಾತಾವರಣ ಸೃಷ್ಟಿಸುವ ಅಗತ್ಯವಿದೆ.

ಇಂದಿಲ್ಲಿ ಹಸಿರು ನಿಶಾನೆಯ ಶಾಲು ಹೊದಿಸಿ ರೈತರ ಹೆಸರಲ್ಲಿ ಮತ್ತೆ ರಾಜ್ಯದ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ ಬಿ.ಎಸ್ ಯಡಿಯೂರಪ್ಪ ಮತ್ತು ಅವರ ಸಂಪುಟದಲ್ಲಿ ಕೃಷಿ ಸಚಿವರಾಗಿ ನೇಮಕಗೊಳ್ಳುವ ಮಂತ್ರಿಯೂ ಸೂಕ್ತ ಕ್ರಮಕೈಗೊಂಡು ನಾಡಿನ ಸಮಸ್ತ ರೈತರಿಗೆ ಪೆÇ್ರೀತ್ಸಾಹಿಸುವ ಅಗತ್ಯವಿದೆ ಎಂದು ಹರೀಶ್ ಎರ್ಮಾಳ್ ಆಶಯ ವ್ಯಕ್ತ ಪಡಿಸಿದ್ದಾರೆ.

ಬಂಟರ ಸಂಘ ಮುಂಬಯಿ ಇದರ ಶೈಕ್ಷಣಿಕ ನೂತನ ಯೋಜನಾ ಸಮಿತಿಯ ಉಪಾಧ್ಯಕ್ಷರಾಗಿ ಶ್ರಮಿಸುತ್ತಿದ್ದಾರೆ. ಈ ಹಿಂದೆ ಇಂಡಿಯಾನ್ ಹೊಟೇಲ್ ಎಂಡ್ ರೆಸ್ಟೋರೆಂಟ್ ಅಸೋಸಿಯೇಶನ್ (ಆಹಾರ್) ಇದರ ಉಪಾಧ್ಯಕ್ಷರಾಗಿದ್ದ ಹರೀಶ್ ಶೆಟ್ಟಿ ಮುಂಬಯಿಯಾದ್ಯಾಂತ ಎರ್ಮಾಳ್ ಹರೀಶ್ ಎಂದೇ ಪ್ರಸಿದ್ಧರು.


Spread the love