ಬ್ಯಾರಿ ಭಾಷೆಗೆ ತುಳು ಕೃತಿಗಳ ಅನುವಾದ: ಕತ್ತಲ ಸಾರ್  

Spread the love

ಬ್ಯಾರಿ ಭಾಷೆಗೆ ತುಳು ಕೃತಿಗಳ ಅನುವಾದ: ಕತ್ತಲ ಸಾರ್  

ಮಂಗಳೂರು :  ತುಳು ಭಾಷೆಯ ಕೃತಿಗಳನ್ನು ಬ್ಯಾರಿ ಭಾಷೆಗೆ ಅನುವಾದ ಮಾಡಲು ಅವಕಾಶ ನೀಡಲಾಗುವುದು ಎಂದು ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿಯ ಅಧ್ಯಕ್ಷ ದಯಾನಂದ ಕತ್ತಲಸಾರ್ ಹೇಳಿದರು.

ಸೋಮವಾರ ತಾಲೂಕು ಪಂಚಾಯತ್ ಸಭಾಂಗಣದಲ್ಲಿ ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡೆಮಿ ವತಿಯಿಂದ ನಡೆದ ಪುಸ್ತಕ ಮತ್ತು ಸಿಡಿ ಬಿಡುಗಡೆ ಸಮಾರಂಭವನ್ನು ಉದ್ದೇಶಿಸಿ ಮಾತನಾಡಿದರು.

ಲೇಖನಿ ಹಿಡಿದುಕೊಂಡು ನ್ಯಾಯಕ್ಕಾಗಿ ಹೊರಾಡುವವರು ಸಾಹಿತಿಗಳು. ಅವರು ಸತ್ಯ, ನ್ಯಾಯ, ನೀತಿ, ಧರ್ಮವನ್ನು ಎತ್ತಿ ಹಿಡಿದುಕೊಂಡು ಸ್ವಾಭಿಮಾನದಿಂದ ವಾಸ್ತವತೆಯನ್ನು ಬಿಂಬಿಸಬೇಕು. ತುಳು ಸಾಹಿತ್ಯದಲ್ಲಿ ಹಲವಾರು ಕೃತಿಗಳಿದ್ದು ಆಸಕ್ತಿಯಿರುವ ಬ್ಯಾರಿ ಸಾಹಿತಿಗಳು ಈ ಕೃತಿಯನ್ನು ಬ್ಯಾರಿ ಭಾಷೆಗೆ ಅನುವಾದ ಮಾಡಿಕೊಳ್ಳಬಹುದು ಎಂದರು.

ತುಳು, ಮಲಯಾಳಂ, ಅರಬಿ ಭಾಷೆಯ ಸಮ್ಮಿಶ್ರದಿಂದ ಬ್ಯಾರಿ ಭಾಷೆಯಾಗಿದೆ. ಇಂದಿನ ಸಂಘರ್ಷಾತ್ಮಕ ಈ ಜಗತ್ತಿನಲ್ಲಿ ವಾಸ್ತವತೆಯನ್ನು ತಿಳಿಸುವ ವ್ಯಕ್ತಿತ್ವವೇ ತುಂಬಾ ಮುಖ್ಯ, ಇಂತಹ ಸಂದರ್ಭದಲ್ಲಿ ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡೆಮಿ, ವಿವಿಧ ಯೋಜನೆ, ಚಟುವಟಿಕೆಗಳ ಮೂಲಕ ಕಲಾವಿದರನ್ನು ಪ್ರೋತ್ಸಾಹಿಸಿ ಭಾಷಾ ಸಾಹಿತ್ಯವನ್ನು ಶ್ರೀಮಂತಗೊಳಿಸುತ್ತಿದೆ ಎಂತಹ ಸಂಕಷ್ಟ ಎದುರಾದರೂ ಜಾತಿ, ಧರ್ಮ ಬಿಟ್ಟು ಐಕ್ಯತೆಯಿಂದ ಮುನ್ನಡೆಯಬೇಕು. ಬ್ಯಾರಿ ಭಾಷೆಯ ಸಾಹಿತಿಗಳು ಕೇವಲ ಒಂದೇ ಭಾಷೆಗೆ ಸೀಮಿತಿವಾಗದೆ ಇತರ ತುಳು, ಮಳೆಯಾಳಂ, ಕೊಂಕಣಿ ಇತ್ಯಾದಿ ಭಾಷೆಗಳಿಗೂ ತಮ್ಮ ಕೊಡುಗೆ ನೀಡಬೇಕು ಎಂದು ಹೇಳಿದರು.

ಫಕ್ರುದ್ದೀನ್ ಇರುವೈಲು ಬರೆದ ‘ಮೂನು ಮಿನಿ ಕಾದಂಬರಿಙ’, ಅಬ್ದುಲ್ ರಹ್ಮಾನ್ ಕುತ್ತೆತ್ತೂರು ಬರೆದ ಬ್ಯಾರಿ ‘ಪಂಚತಂತ್ರ’, ಹಾರೂನ್ ರಶೀದ್ ಅರ್ಕುಳ್ ಬರೆದ ‘ಪಾರ್‍ರೊ ಪಕಿ’್ಕ, ಶಂಶೀರ್ ಬುಡೋಳಿ ಬರೆದ ‘ಪಿರ್ಸತ್ತೊ ಪಲಕ’, ಬಿ.ಎ. ಷಂಶುದ್ದೀನ್ ಮಡಿಕೇರಿ ಬರೆದ ‘ನೆನಪುಙ,’ ಅನ್ಸಾರ್ ಕಾಟಿಪಳ್ಳ ಬರೆದ ‘ಅಂಗಲಾಪು’ ಹಾಗೂ ಕುಸೊವು ಬ್ಯಾರಿ ಹಾಡುಗಳ ಸಿಡಿ ಬಿಡುಗಡೆಯಾಯಿತು.

ಬ್ಯಾರಿ ಅಕಾಡೆಮಿ ಸದಸ್ಯ ಸಂಚಾಲಕ ಶಂಶೀರ್ ಬುಡೋಳಿ ಕೃತಿ ಪರಿಚಯ ಮಾಡಿದರು.

ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡೆಮಿಯ ಅಧ್ಯಕ್ಷ ರಹೀಂ ಉಚ್ಚಿಲ್ ಪ್ರಾಸ್ತಾವಿಕ ನುಡಿಗಳನ್ನಾಡಿದರು. ಅಕಾಡೆಮಿಯ ರಿಜಿಸ್ಟ್ರಾರ್ ಪೂರ್ಣಿಮಾ, ಸದಸ್ಯರು ಉಪಸ್ಥಿತರಿದ್ಧರು.


Spread the love