ಬ್ರಹ್ಮಾವರ: ಬಾರ್ಕೂರು ಶ್ರೀ ಕಾಳಿಕಾಂಬ ದೇವಸ್ಥಾನದಲ್ಲಿ ಕಳ್ಳತನ; ಸಿಸಿ ಟಿವಿಯಲ್ಲಿ ಕೃತ್ಯ ಸೆರೆ

Spread the love

ಬ್ರಹ್ಮಾವರ: ದೇವಸ್ಥಾನದ ವ್ಯವಸ್ಥಾಪನ ಸಮಿತಿಯ ಚುನಾವಣೆಯ ಬಳಿಕ ಸದಾ ಒಂದಲ್ಲ ಒಂದು ವಿಚಾರದ ಮೂಲಕ ಸುದ್ದಿಯಲ್ಲಿದ್ದ ಬಾರ್ಕೂರು ಶ್ರೀ ಕಾಳಿಕಾಂಬ ದೇವಸ್ಥಾನದಲ್ಲಿ ಶುಕ್ರವಾರ ಮುಂಜಾನೆ ವೇಳೆಗೆ ನಡೆದ ಕಳ್ಳತನದ ಮೂಲಕ ಮತ್ತೆ ಸುದ್ದಿಯ ಕೇಂದ್ರ ಬಿಂದುವಾಗಿದೆ. ಶುಕ್ರವಾರ ಬೆಳಿಗ್ಗೆಯ ವೇಳೆಗೆ ದೇವಸ್ಥಾನವನ್ನು ಪ್ರವೇಶಿಸಿದ ಕಳ್ಳರು ದೇವರ ಅತ್ಯಮೂಲ್ಯವಾದ ವಸ್ತುಗಳನ್ನು ಕದ್ದು ಪರಾರಿಯಾಗಿದ್ದಾರೆ.

IMG-20150626-WA0044 IMG-20150626-WA0045

 

ದೇವಾಲಯಗಳ ನಗರಿ ಬಾರ್ಕೂರು ಇಲ್ಲಿನ ಪ್ರಮುಖ ದೇವಸ್ಥಾನಗಳಲ್ಲಿ ಒಂದಾದ ಶ್ರೀ ಕಾಳಿಕಾಂಬ ದೇವಸ್ಥಾನವು ವಿಶ್ವಕರ್ಮ ಸಮುದಾಯದವರ ಶ್ರದ್ಧಾ ಭಕ್ತಿಯ ಕೇಂದ್ರ. ಸಾಕಷ್ಟು ಕಾರಣೀಕವನ್ನು ಹೊಂದಿರುವ ಈ ದೇವಸ್ಥಾನದ ಆರಾಧ್ಯ ದೈವ ಜಗನ್ಮಾತೆ ಕಾಳಿಕಾಂಬೆ. ಶುಕ್ರವಾರ ಮುಂಜಾನೆಯ ಸುಮಾರು 2.10ರ ಸುಮಾರಿಗೆ ದೇವಸ್ಥಾನದ ಮುಂಭಾಗದ ಸೇವಾ ಕೌಂಟರ್ ಪಕ್ಕದ ಕಂಬವೇರಿ ದೇವಸ್ಥಾನದ ಮಾಡು ಏರಿದ ಕಳ್ಳರು ಒಳಗಡೆ ಇರುವ ದೇವಸ್ಥಾನದ ಮಾಡಿದ ಫೈಬರ್ ಶೀಟ್ ಎತ್ತಿ ಒಗೆ ಇಳಿದ್ದಿದ್ದಾರೆ. ಬಳಿಕ ದೇವಸ್ಥಾನ ಗರ್ಭ ಗುಡಿಯ ಬಾಗಿಲಿಗೆ ಅಳವಡಿಸಲಾದ ಸುಮಾರು 14 ಕೆಜಿ ಬೆಳ್ಳಿಯ ತಗಡನ್ನು ಕಿತ್ತು ತೆಗೆದಿರುವುದು ಅಲ್ಲದೇ, ಗರ್ಭಗುಡಿ ಪ್ರವೇಶಿಸಿ ದೇವಿಗೆ ಹಾಕಲಾಗಿದ್ದ ಕರಿಮಣಿ ಸರ ಮತ್ತು ಬೆಲೆ ಕಟ್ಟಲಾಗಿದ್ದ ನೀಲಿ ಮಣಿಯ ಸರವನ್ನು ಕದ್ದಿದ್ದಾರೆ. ಕಳ್ಳರ ಗರ್ಭ ಗುಡಿಯ ಮುಂಭಾಗದಲ್ಲಿ ನಡೆಸಿದ ಎಲ್ಲ ಕೃತ್ಯವು ದೇವಸ್ಥಾನದ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, 3.40 ಗಂಟೆಗೆ ದೇವಸ್ಥಾನದ ಎಡಭಾಗದ ಬಾಗಿಲು ತೆಗೆದು ಮರೆಯಾಗಿದ್ದಾರೆ. ಓರ್ವ ಸಣಕಲು ದೇಹದ ವ್ಯಕ್ತಿ ಮತ್ತೋರ್ವ ವ್ಯಕ್ತಿ ಕಳ್ಳತನ ಮಾಡುತ್ತಿರುವುದು ಸಿಸಿ ಕ್ಯಾಮೆರಾದಲ್ಲಿ ಪತ್ತೆಯಾಗಿದೆ.

ಮುಂಜಾನೆ ಪೂಜೆಗೆ ಆಗಮಿಸಿದ್ದ ಅರ್ಚಕರಿಗೆ, ದೇವಸ್ಥಾನ ಸಿಬ್ಬಂದಿಗಳಿಗೆ ಕಳ್ಳತನವಾದ ಬಗ್ಗೆ ಗೋಚರವಾದಗ ದೇವಸ್ಥಾನದ ಮೋಕ್ತೇಸರರಿಗೆ ಮಾಹಿತಿ ನೀಡಿದ್ದಾರೆ. ಮೋಕ್ತೇಸರರು ಬ್ರಹ್ಮಾವರ ವೃತ್ತ ನಿರೀಕ್ಷಕ ಠಾಣೆಗೆ ಕರೆ ಮಾಡಿ ಕಳ್ಳತನವಾದ ಮಾಹಿತಿ ನೀಡಿದ್ದಾರೆ ಎನ್ನಲಾಗಿದೆ.

ಘಟನಾಸ್ಥಳಕ್ಕೆ ಆಗಮಿಸಿದ ವೃತ್ತ ನಿರೀಕ್ಷಕ ಅರುಣ್ ಬಿ.ನಾಯಕ್ ಮತ್ತು ಸಿಬ್ಬಂದಿಗಳು ದೇವಸ್ಥಾನ ವಠಾರವನ್ನು, ಅಪರಾಧ ತನಿಖಾ ದಳದವರಿಗೆ ಸಂರಕ್ಷಿಸಿ ಸಿಸಿ ಕ್ಯಾಮೆರಾ ಘಟನಾವಳಿಗಳನ್ನು ವಶಕ್ಕೆ ಪಡೆದಿದ್ದಾರೆ. ಸ್ಥಳಕ್ಕೆ ಆಗಮಿಸಿದ್ದ ಶ್ವಾನ ದಳ ಮತ್ತು ಬೆರಳಚ್ಚು ತಜ್ಞರು ಪರಿಶೀಲನೆ ನಡೆಸಿ ಅಗತ್ಯ ದಾಖಲೆಗಳನ್ನು ಕಲೆ ಹಾಕಿದ್ದಾರೆ. ಮಳೆ ಹಿನ್ನಲೆಯಲ್ಲಿ ಶ್ವಾನದಳದವರಿಗೆ ಅಗತ್ಯ ಮಾಹಿತಿ ನಾಶವಾಗಿದ್ದು, ಸಿಸಿ ಕ್ಯಾಮೆರಾ ಮತ್ತು ಬೆರಳಚ್ಚು ಮಾದರಿಯಲ್ಲಿಯೇ ಅಪರಾಧಿಗಳ ಪತ್ತೆ ಸಾಗಬೇಕಾಗಿದೆ. ಕಳ್ಳರು ಸುಮಾರು ಒಂದು ತಿಂಗಳಿನಿಂದ ದೇವಸ್ಥಾನಕ್ಕೆ ಆಗಮಿಸಿ ಸೂಕ್ಷ್ಮವಾಗಿ ದೇವಸ್ಥಾನವನ್ನು ಗಮನಿಸಿ ಈ ಕಳ್ಳತನ ನಡೆಸಿರುವ ಶಂಕೆ ವ್ಯಕ್ತವಾಗಿದೆ.

ಸುಮಾರು 25 ವರ್ಷಗಳ ಹಿಂದೆ ದೇವಸ್ಥಾನದ ದೇವಸ್ಥಾನದ ಬ್ರಹ್ಮಕಲಶೋತ್ಸವ ನಡೆದು ಮೂರು ತಿಂಗಳ ಬಳಿಕ ದೇವಸ್ಥಾನದಲ್ಲಿ ಇದೇ ರೀತಿ ಕಳ್ಳತನವಾಗಿತ್ತು. ಆಗ ದೇವಿಯ ಬೆಳ್ಳಿ ಸಾಮಾಗ್ರಿಗಳು ಕಳ್ಳತವಾಗಿತ್ತು, ಪೊಲೀಸ್‍ರು ಈ ಕೃತ್ಯ ನಡೆಸಿದವರಿಗಾಗಿ ತೀವ್ರ ಶೋಧ ನಡೆಸಿದ್ದರು. ದೇವರ ಕೃಪೆಯಂತೆ ಕುಂದಾಪುರ ಬಳೆಗಾರರ ದೇವಸ್ಥಾನದಲ್ಲಿ ಕಳವಾದಗ ಬಂಧಿಸಿದ ಕಳ್ಳರನ್ನು ತೀವ್ರ ವಿಚಾರಣೆಗೊಳಪಡಿಸಿದಾಗ ಬಾರ್ಕೂರು ದೇವಸ್ಥಾನದಲ್ಲಿಯೂ ಕಳ್ಳತನ ನಡೆಸಿರುವುದಾಗಿ ಒಪ್ಪಿಕೊಂಡಿದ್ದರು ಎನ್ನಲಾಗಿದೆ. ಈ ಹಿಂದೆ ನಡೆದ ದೇವಸ್ಥಾನದ ಸಭೆಯಲ್ಲಿ ದೇವಸ್ಥಾನಕ್ಕೆ ವಾಚ್‍ಮೆನ್ ಕಾವಲು ಹಾಕಿಸುವ ವಿಚಾರವಾಗಿ ಚರ್ಚೆ ನಡೆದಾಗ, ಕೆಲವರು ವಾಚ್‍ಮೆನ್ ಸಂಬಳ ನಿರ್ವಹಣೆ ಕಷ್ಟ ಎನ್ನುವ ಅಭಿಪ್ರಾಯ ವ್ಯಕ್ತಪಡಿಸಿದಾಗ ಆ ಆಲೋಚನೆ ಕೈಬಿಡಲಾಗಿತ್ತು. ಆದರೆ ಇಂದು ವಾಚ್‍ಮೆನ್ ಇರುತ್ತಿದ್ದರೆ ಕಳ್ಳತನವಾಗುತ್ತಿರುಲಿಲ್ಲ ಎಂದು ಪೊಲೀಸ್‍ರು ತಿಳಿಸಿದ್ದಾರೆ.

ಘಟನಾಸ್ಥಳಕ್ಕೆ ಬಾರ್ಕೂರು ಹಿರಿಯರಾದ ಶಾಂತರಾಮ ಶೆಟ್ಟಿ, ದೇವಸ್ಥಾನದ ಮೊಕ್ತೇಸರ ಅಲೆವೂರು ಯೋಗಿಶ್ ಆಚಾರ್ಯ, ಜಯರಾಮ್ ಆಚಾರ್ಯ, ಉಮೇಶ್ ಆಚಾರ್ಯ, ಉಳ್ಳೂರು ಸತೀಶ್ ಆಚಾರ್ಯ, ಶ್ರೀಧರ ಆಚಾರ್ಯ ವಡೇರಹೋಬಳಿ, ಚೇಂಪಿ ಜನಾರ್ದನ ಆಚಾರ್ಯ, ಪುರೋಹಿತ್ ಲಕ್ಷ್ಮೀಕಾಂತ್ ಶರ್ಮಾ, ಪುರೋಹಿತ್ ಲೋಹಿತಾಶ್ವ ಮೊದಲಾದರು ಆಗಮಿಸಿದ್ದರು.


Spread the love