ಬ್ರಹ್ಮಾವರ ಸಕ್ಕರೆ ಕಾರ್ಖಾನೆಗೆ 13.92 ಕೋಟಿ ರೂ. ನಷ್ಟ: ಆಡಳಿತ ಮಂಡಳಿ ಮೇಲೆ ಕ್ರಿಮಿನಲ್‌ ಪ್ರಾಸಿಕ್ಯೂಷನ್ ಗೆ ಅನುಮತಿ

Spread the love

ಬ್ರಹ್ಮಾವರ ಸಕ್ಕರೆ ಕಾರ್ಖಾನೆಗೆ 13.92 ಕೋಟಿ ರೂ. ನಷ್ಟ: ಆಡಳಿತ ಮಂಡಳಿ ಮೇಲೆ ಕ್ರಿಮಿನಲ್‌ ಪ್ರಾಸಿಕ್ಯೂಷನ್ ಗೆ ಅನುಮತಿ

ಇಬ್ಬರು ಅಧಿಕಾರಿಗಳ ಮೇಲೆ ಇಲಾಖಾ ವಿಚಾರಣೆಗೆ ನಿರ್ದೇಶನ

ಹಳೆಯ ಯಂತ್ರೋಪಕರಣಗಳ ಮಾರಾಟದಲ್ಲಿ ಅವ್ಯವಹಾರ ಸಾಬೀತು

* ತಾಂತ್ರಿಕ ಸಲಹಾ ಸಮಿತಿ ಸದಸ್ಯರ ವಿರುದ್ಧ ಕ್ರಿಮಿನಲ್‌ ಕೇಸ್

* ನಷ್ಟದ ಹಣ ವಸೂಲು ಹಾಗೂ ಅಧಿಕಾರಿಗಳ ಮೇಲೆ ಇಲಾಖಾ ವಿಚಾರಣೆ

ಉಡುಪಿ: ಬ್ರಹ್ಮಾವರದ ದಕ್ಷಿಣ ಕನ್ನಡ ಸಹಕಾರಿ ಸಕ್ಕರೆ ಕಾರ್ಖಾನೆಯ ಹಳೆಯ ಯಂತ್ರೋಪಕರಣಗಳ ಮಾರಾಟದಲ್ಲಿ ಒಟ್ಟು 13.92 ಕೋಟಿ ರೂ. ನಷ್ಟ ಉಂಟಾಗಿರುವುದು ತನಿಖೆಯಲ್ಲಿ ದೃಢಪಟ್ಟಿದ್ದು, ಆಡಳಿತ ಮಂಡಳಿ ಮೇಲೆ ಕ್ರಿಮಿನಲ್‌ ಪ್ರಾಸಿಕ್ಯೂಷನ್‌ಗೆ ಅನುಮತಿ ನೀಡಲಾಗಿದೆ ಎಂದು ಜವಳಿ, ಕಬ್ಬು ಅಭಿವೃದ್ಧಿ ಮತ್ತು ಸಕ್ಕರೆ ಹಾಗೂ ಕೃಷಿ ಮಾರುಕಟ್ಟೆ ಸಚಿವ ಶಿವಾನಂದ ಪಾಟೀಲ ತಿಳಿಸಿದ್ದಾರೆ.

ಕಾರ್ಖಾನೆಗೆ ಒಟ್ಟು 13.92 ಕೋಟಿ ರೂ. ಆರ್ಥಿಕ ನಷ್ಟ ಉಂಟಾಗಲು ಆಡಳಿತ ಮಂಡಳಿ, ಟೆಂಡರ್‌ ಕಮ್‌ ಹರಾಜಿನ ತಾಂತ್ರಿಕ ಸಮಿತಿ ಸದಸ್ಯರು ಹಾಗೂ ಆಗಿನ ವ್ಯವಸ್ಥಾಪಕ ನಿರ್ದೇಶಕರಾದ ಪ್ರವೀಣ್‌ ಬಿ. ನಾಯಕ್‌ ಮತ್ತು ಜಿ. ಎನ್‌. ಲಕ್ಷ್ಮೀನಾರಾಯಣ ಅವರ ನಿರ್ಲಕ್ಷ್ಯವೇ ಕಾರಣ ಎಂಬುದು ತನಿಖಾ ವರದಿಯಲ್ಲಿ ಕಂಡು ಬಂದಿದೆ.

ಹೀಗಾಗಿ ಈ ಹಿಂದೆ ದಾಖಲಾಗಿರುವ ಕ್ರಿಮಿನಲ್‌ ಮೊಕದ್ದಮೆಗೆ ಸಂಬಂಧಿಸಿದಂತೆ ಹಿಂದಿನ ವ್ಯವಸ್ಥಾಪಕ ನಿರ್ದೇಶಕರಾದ ಪ್ರವೀಣ್‌ ಬಿ. ನಾಯ್ಕ ಹಾಗೂ ಜಿ. ಎನ್‌. ಲಕ್ಷ್ಮೀನಾರಾಯಣ ಅವರ ವಿರುದ್ಧ ಕ್ರಿಮಿನಲ್‌ ಪ್ರಾಸಿಕ್ಯೂಷನ್‌ಗೆ ಅನುಮತಿ ನೀಡಲಾಗಿದೆ. ಹಾಗೂ ಈ ಇಬ್ಬರು ಅಧಿಕಾರಿಗಳ ಮೇಲೆ ಇಲಾಖಾ ವಿಚಾರಣೆಗೆ ಸಹಕಾರ ಇಲಾಖೆಗೆ ಶಿಫಾರಸು ಮಾಡಲಾಗಿದೆ. ಅಲ್ಲದೆ ನಷ್ಟದ ಹಣವನ್ನು ಸಂಬಂಧಪಟ್ಟವರಿಂದ ವಸೂಲು ಮಾಡಲು ಸೂಚಿಸಲಾಗಿದೆ ಎಂದು ಸಚಿವರು ತಿಳಿಸಿದ್ದಾರೆ.

ಸರ್ಕಾರದ ಅನುಮತಿ ಪಡೆದು ಆಡಳಿತ ಮಂಡಳಿಯು ಕಾರ್ಖಾನೆ ಕಟ್ಟಡ ಮತ್ತು ಯಂತ್ರೋಪಕರಣಗಳನ್ನು ಚೆನ್ನೈನ ನ್ಯೂ ರಾಯಲ್‌ ಟ್ರೇಡರ್ಸ್‌ಗೆ ಮಾರಾಟ ಮಾಡಿತ್ತು. ಈ ಟೆಂಡರ್‌ ಪ್ರಕ್ರಿಯೆಯಲ್ಲಿ ಅವ್ಯವಹಾರ ನಡೆದಿದೆ ಎಂದು ವಿಧಾನಪರಿಷತ್‌ ಸದಸ್ಯ ಮಂಜುನಾಥ ಭಂಡಾರಿ ಹಾಗೂ ಉಡುಪಿ ಜಿಲ್ಲಾ ರೈತ ಸಂಘದ ಪ್ರಧಾನ ಕಾರ್ಯದರ್ಶಿ ಸರ್ಕಾರಕ್ಕೆ ದೂರು ಸಲ್ಲಿಸಿದ್ದರು.

ಅವ್ಯವಹಾರದ ಆರೋಪಗಳು ಕೇಳಿ ಬಂದಾಗ ತನಿಖೆಗೆ ನಿವೃತ್ತ ಜಿಲ್ಲಾ ನ್ಯಾಯಾಧೀಶ ಕೆ. ರಾಧಾಕೃಷ್ಣ ಹೊಳ್ಳ ಅವರನ್ನು ನೇಮಕ ಮಾಡಲಾಗಿದ್ದು, ಅವರು ಸಲ್ಲಿಸಿರುವ ವರದಿಯಲ್ಲಿ ಅವ್ಯವಹಾರ ಸಾಬೀತಾಗಿದೆ ಎಂದು ಸಚಿವರು ತಿಳಿಸಿದ್ದಾರೆ.

ಹಿನ್ನೆಲೆ ಏನು?

1985ರಲ್ಲಿ ಆರಂಭವಾಗಿದ್ದ ಸಕ್ಕರೆ ಕಾರ್ಖಾನೆ 2002-03ನೇ ಸಾಲಿನವರೆಗೆ ಕಬ್ಬು ನುರಿಸಿದ್ದು, ಕಬ್ಬಿನ ಕೊರತೆ ಮತ್ತು ದುಡಿಯುವ ಬಂಡವಾಳದ ಕೊರತೆ ಕಾರಣ 2003-04ನೇ ಸಾಲಿನಿಂದ ಕಬ್ಬು ನುರಿಸುವ ಕಾರ್ಯ ಸ್ಥಗಿತಗೊಳಿಸಲಾಗಿತ್ತು.

17 ವರ್ಷಗಳಿಂದ ಕಾರ್ಯನಿರ್ವಹಿಸದ ಕಾರಣ ತುಕ್ಕು ಹಿಡಿದು ಹಾಳಾಗುತ್ತಿರುವ ಯಂತ್ರೋಪಕರಣ ಮತ್ತು ಕಾರ್ಖಾನೆ ಕಟ್ಟಡವನ್ನು ಟೆಂಡರ್‌ ಕಮ್‌ ಹರಾಜು ಮೂಲಕ ಮಾರಾಟ ಮಾಡಲು ಆಡಳಿತ ಮಂಡಳಿ ಕೋರಿದ್ದರಿಂದ ಅನುಮತಿ ನೀಡಲಾಗಿತ್ತು.

ಟೆಂಡರ್‌ ಪ್ರಕ್ರಿಯೆಯನ್ನು ನಿಯಮಗಳ ಪ್ರಕಾರ ನಡೆಸದಿರುವುದು ದಾಖಲಾತಿಗಳಿಂದ ಸ್ಪಷ್ಟವಾಗಿದೆ. ಯಂತ್ರೋಪಕರಣ ಹಾಗೂ ನಿರುಪಯುಕ್ತ ಸಾಮಗ್ರಿಗಳನ್ನು ಟೆಂಡರ್‌ ಕಮ್‌ ಹರಾಜು ಮೂಲಕ ಮಾರಾಟ ಮಾಡುವ ಪ್ರಕ್ರಿಯೆಯಲ್ಲಿ ಪ್ರತಿ ಕೆಜಿಗೆ ಅತಿ ಹೆಚ್ಚು ದರ ನಮೂದಿಸಿದ ಬಿಡ್ದಾರರಿಗೆ ಮಾರಾಟ ಮಾಡಬೇಕು ಎಂದು ಆಡಳಿತ ಮಂಡಳಿ ನಿರ್ಧಾರ ಕೈಗೊಂಡು, 50 ಲಕ್ಷ ರೂ. ಭದ್ರತಾ ಠೇವಣಿ ಹಾಗೂ 5 ಕೋಟಿ ರೂ. ಬ್ಯಾಂಕ್‌ ಗ್ಯಾರಂಟಿ ಪಾವತಿಸಬೇಕು ಎಂದು ಬಿಡ್‌ದಾರರಿಗೆ ತಿಳಿಸಿತ್ತು.

ಹಳೆಯ ಯಂತ್ರೋಪಕರಣಗಳನ್ನು ಕೆಜಿ ಲೆಕ್ಕದಲ್ಲಿ ತೆಗೆದುಕೊಂಡು ಹೋಗುವುದು ಕಷ್ಟ, ಹೀಗಾಗಿ ಲಾಟ್‌ ಆಧಾರದ ಮೇಲೆ ನೀಡಬೇಕು ಎಂದು ನ್ಯೂ ರಾಯಲ್‌ ಟ್ರೇಡರ್ಸ್‌ ನವರು ಮನವಿ ಮಾಡಿಕೊಂಡಿದ್ದು, ಈ ಮನವಿಗೆ ಆಡಳಿತ ಮಂಡಳಿ ಸಮ್ಮತಿಸಿರುವುದು ಟೆಂಡರ್‌ ನಿಯಮಗಳ ಸ್ಪಷ್ಟ ಉಲ್ಲಂಘನೆಯಾಗಿದೆ ಎಂದು ವಿಚಾರಣಾಧಿಕಾರಿಗಳು ವರದಿಯಲ್ಲಿ ತಿಳಿಸಿದ್ದಾರೆ.

ರಾಯಲ್‌ ಟ್ರೇಡರ್ಸ್‌ನವರು 46 ಲೋಡುಗಳಲ್ಲಿ 1139.37 ಮೆಟ್ರಿಕ್‌ ಟನ್‌ ಸ್ಕ್ರಾಪ್‌ ತೆಗೆದುಕೊಂಡು ಹೋಗಿದ್ದೇವೆ ಎಂದು ತಿಳಿಸಿದ್ದಾರೆ. ಆದರೆ 83 ಲೋಡುಗಳಲ್ಲಿ 2245.65 ಮೆಟ್ರಿಕ್‌ ಟನ್‌ ಸ್ಕ್ರಾಪ್‌ ಸಾಗಾಟ ಮಾಡಿರುವುದು ದಾಖಲೆಗಳಲ್ಲಿ ಸ್ಪಷ್ಟವಾಗಿದೆ. ಖರೀದಿದಾರರು ಕಾರ್ಖಾನೆಗೆ ನೀಡಿರುವ ಹಣವನ್ನು ಕಳೆದು ಇನ್ನೂ 12.63 ಕೋಟಿ ರೂ. ಬರಬೇಕಾಗಿದೆ. ಇದಲ್ಲದೆ ಹಳೆಯ ಕಟ್ಟಡ ಸಾಮಗ್ರಿಗಳನ್ನು ಕೂಡ ಮಾರಾಟ ಮಾಡಿದ್ದು, ಇದರಿಂದ 1.28 ಕೋಟಿ ರೂ. ಮೌಲ್ಯದ ವಸ್ತುಗಳನ್ನು ಕಾರ್ಖಾನೆಯಿಂದ ಸಾಗಾಟ ಮಾಡಲಾಗಿದೆ ಎಂದು ತನಿಖಾ ವರದಿಯಲ್ಲಿ ವಿವರಿಸಲಾಗಿದೆ.

ಕಾರ್ಖಾನೆ ಯಂತ್ರೋಪಕರಣ ಮತ್ತು ಕಟ್ಟಡ ಮಾರಾಟದಲ್ಲಿ ಅವ್ಯವಹಾರ ನಡೆದಿದೆ ಎಂಬುದು ತನಿಖೆಯಲ್ಲಿ ಸ್ಪಷ್ಟವಾಗಿದ್ದು, ಆಡಳಿತ ಮಂಡಳಿ ನಿರ್ದೇಶಕರ ಮೇಲೆ ಕ್ರಿಮಿನಲ್‌ ಪ್ರಾಸಿಕ್ಯೂಷನ್‌ಗೆ ಅನುಮತಿ ನೀಡಲಾಗಿದೆ. ತಾಂತ್ರಿಕ ಸಲಹಾ ಸಮಿತಿ ಮೇಲೆ ಕ್ರಿಮಿನಲ್‌ ಮೊಕದ್ದಮೆ ದಾಖಲಿಸಲು ಕ್ರಮ ಕೈಗೊಳ್ಳುವಂತೆ ಸೂಚನೆ ನೀಡಲಾಗಿದೆ.

ಶಿವಾನಂದ ಪಾಟೀಲ

ಕಬ್ಬು ಅಭಿವೃದ್ಧಿ, ಸಕ್ಕರೆ, ಜವಳಿ ಹಾಗೂ ಕೃಷಿ ಮಾರುಕಟ್ಟೆ ಸಚಿವರು.


Spread the love
Subscribe
Notify of

0 Comments
Inline Feedbacks
View all comments