ಬ್ರಿಟಿಷರಿಗೆ ಇದ್ದಷ್ಟು ಕಾಳಜಿ ನಮ್ಮನ್ನಾಳುವ ರಾಜ್ಯ, ಕೇಂದ್ರ ಸರಕಾರಗಳಿಗಿಲ್ಲ – ಬಿ.ಕೆ ಇಮ್ತಿಯಾಜ್

Spread the love

ಬ್ರಿಟಿಷರಿಗೆ ಇದ್ದಷ್ಟು ಕಾಳಜಿ ನಮ್ಮನ್ನಾಳುವ ರಾಜ್ಯ, ಕೇಂದ್ರ ಸರಕಾರಗಳಿಗಿಲ್ಲ – ಬಿ.ಕೆ ಇಮ್ತಿಯಾಜ್

ದ.ಕ ಜಿಲ್ಲೆ ಸೇರಿದಂತೆ ಹತ್ತಿರದ ಆರೇಳು ಜಿಲ್ಲೆಯ ಬಡವರ ಎರಡು ಕಣ್ಣುಗಳಂತಿರುವ ಸರಕಾರಿ ಆಸ್ಪತ್ರೆ ವೆನ್ಲಾಕ್ ಮತ್ತು ಲೇಡಿಗೋಶನ್ ಆಸ್ಪತ್ರೆಯ ಸ್ಥಿತಿ ಚಿಂತಾಜನಕವಾಗಿದೆ. ಈ ಆಸ್ಪತ್ರೆಗೆ ಚಿಕಿತ್ಸೆಗೆಂದು ಬರುವ ರೋಗಿಗಳು ಹಲವು ರೀತಿಯ ಸಮಸ್ಯೆಗಳಿಗೆ ತುತ್ತಾಗಿದ್ದಾರೆ.ಆಸ್ಪತ್ರೆಯನ್ನು ಸ್ಥಾಪಿಸಿದಂತಹ ಸಂದರ್ಭದಲ್ಲಿ ಈ ಜಿಲ್ಲೆಯ ಬಡವರ ಬಗ್ಗೆ ಬ್ರಿಟಿಷರಿಗೆ ಇದ್ದಷ್ಟು ಕಾಳಜಿ ನಮ್ಮನ್ನಾಳುವ ರಾಜ್ಯ, ಕೇಂದ್ರ ಸರಕಾರಗಳಿಗಿಲ್ಲ ಅನ್ನೋದೆ ಬಹಳ ವಿಷಾದನೀಯ ಎಂದು ಡಿವೈಎಫ್ಐ ಜಿಲ್ಲಾದ್ಯಕ್ಷ ಬಿ.ಕೆ ಇಮ್ತಿಯಾಜ್ ಇಂದು ಡಿವೈಎಫ್ಐ ದ.ಕ ಜಿಲ್ಲಾ ಸಮಿತಿ ನೇತೃತ್ವದಲ್ಲಿ ಸರಕಾರಿ ಲೇಡಿಗೋಶನ್ ಆಸ್ಪತ್ರೆಯ ಮುಂಭಾಗ ಆಸ್ಪತ್ರೆಯ ಅವ್ಯವಸ್ಥೆ ಹಾಗೂ ನೂತನ ಕಟ್ಟಡದ ವಿಳಂಬ ನೀತಿಯನ್ನು ಖಂಡಿಸಿ  ಪ್ರತಿಭಟನೆಯನ್ನು ಉದ್ದೇಶಿಸಿ ಮಾತನಾಡಿದರು.

ನಂತರ ಮಾತನಾಡಿದ ಡಿವೈಎಫ್ಐ ದ.ಕ ಜಿಲ್ಲಾ ಕಾರ್ಯದರ್ಶಿ  ಸಂತೋಷ್ ಬಜಾಲ್ 1848 ರಲ್ಲಿ ಆಗಿನ ವೈಸರಾಯ್ ತನ್ನ ಹೆಂಡತಿಯ ಹೆಸರಲ್ಲಿ ಪ್ರಾರಂಭಿಸಿದ ಆಸ್ಪತ್ರೆಗೆ 170 ವರುಷ ಸಂದರೂ ನಮ್ಮನ್ನಾಳುವ ಸರಕಾರಗಳಿಗೆ ಕನಿಷ್ಟ ಈ ಆಸ್ಪತ್ರೆಯನ್ನು ಅಭಿವೃದ್ಧಿ ಪಡಿಸಲು ಈವರೆಗೂ ಸಾದ್ಯವಾಗಿಲ್ಲ.ಈಗಾಗಲೇ ನೂತನ ಕಟ್ಟಡದ ಉದ್ಗಾಟನೆಗೆ ಹಲವು ಗಡುವುಗಳು ಕಳೆದು ಹೋದರು ಆಸ್ಪತ್ರೆಯನ್ನು ಪ್ರಾರಂಭಿಸುವ ಕಾಳಜಿ ಜನಪ್ರತಿನಿಧಿಗಳಿಗಾಗಲಿ, ಜಿಲ್ಲಾಡಳಿತಕ್ಕಾಗಲಿ ಇಲ್ಲ.ಹಿಂದೆ ಆರೋಗ್ಯ ಮಂತ್ರಿಯಾಗಿ ಈ ಆಸ್ಪತ್ರೆಗೆ ಭೇಟಿ ನೀಡಿದ್ದ ರಮೇಶ್ ಕುಮಾರ್ ಸರಕಾರಿ ಆಸ್ಪತ್ರೆಯ ಪರಿಸ್ಥಿತಿ ನೋಡುವಾಗ ಕಣ್ಣಲ್ಲಿ ರಕ್ತ ಸುರಿಯುತ್ತೆ ಅಂತ ಹೇಳಿಕೆಯಷ್ಟೇ ನೀಡಿದರಲ್ಲದೆ ಆನಂತರ ಅವರ ಪತ್ತೆನೇ ಇಲ್ಲ.ಕನಿಷ್ಟ ಸರಕಾರಿ ಆಸ್ಪತ್ರೆ ಬಲಪಡಿಸುವ ಯಾವುದೇ ಯೋಜನೆಯನ್ನು ಕೈಗೊಂಡಿಲ್ಲ.ಒಟ್ಟಾರೆಯಾಗಿ ನಮ್ಮನ್ನಾಳುವ ಸರಕಾರ ,ಜನಪ್ರತಿನಿಧಿಗಳು ಖಾಸಗೀ ಆಸ್ಪತ್ರೆಯ ಲಾಭಿಗೆ ಮಣಿದು ಖಾಸಗಿ ಆಸ್ಪತ್ರೆಯ ಧಣಿಗಳ ಹಿತವನ್ನು ಕಾಯುತ್ತಿದ್ದಾರೆ.ಡಿವೈಎಫ್ಐ ಈ ಪ್ರಶ್ನೆಯನ್ನು ಗಂಭೀರವಾಗಿ ಪರಿಗಣಿಸಿದೆ ಸರಕಾರಿ ಆಸ್ಪತ್ರೆಯಲ್ಲಿನ ಅವ್ಯವಸ್ಥೆಯನ್ನು ಕೂಡಲೇ ಸರಿಪಡಿಸಬೇಕು ಅಲ್ಲದೇ ಖಾಲಿ ಇರುವ ಹುದ್ದೆಗಳನ್ನು ಭರ್ತಿಗೊಳಿಸಬೇಕು ಹಾಗು ಹೆಚ್ಚುವರಿ ಸಿಬ್ಬಂದಿ ಹಾಗು ವೈದ್ಯರನ್ನು ನೇಮಕ ಮಾಡಬೇಕೆಂದು ಈ ಸಂದರ್ಭದಲ್ಲಿ ಒತ್ತಾಯಿಸಿದರು.

ಈ ವೇಳೆ ಡಿವೈಎಫ್ಐ ದ.ಕ ಜಿಲ್ಲಾ ಮುಖಂಡರಾದ ನಿತಿನ್ ಕುತ್ತಾರ್, ಸಾಧಿಕ್ ಕಣ್ಣೂರು, ಆಶಾ ಬೋಳೂರು, ಮಯೂರಿ ಬೋಳಾರ, ಯೋಗೀಶ್ ಜಪ್ಪಿನಮೊಗರು, ನವೀನ್ ಕೊಂಚಾಡಿ, ಮನೋಜ್ ವಾಮಂಜೂರು , ರಫೀಕ್ ಹರೇಕಳ ಮುಂತಾದವರು ಉಪಸ್ಥಿತರಿದ್ದರು.

ಪ್ರತಿಭಟನಾ ನಂತರ ಆಸ್ಪತ್ರೆಯ ಅಧೀಕ್ಷಕರಿಗೆ ಮನವಿಯನ್ನು ಸಲ್ಲಿಸಲಾಯಿತು.


Spread the love