ಭತ್ತ ಬೆಂಬಲ ಬೆಲೆ ರೂ 1750, ಖರೀದಿ ಕೇಂದ್ರ ತರೆಯಲು ನಿರ್ಧಾರ- ಜಿಲ್ಲಾಧಿಕಾರಿ ಪ್ರಿಯಾಂಕ ಮೇರಿ ಫ್ರಾನ್ಸಿಸ್ 

Spread the love

ಭತ್ತ ಬೆಂಬಲ ಬೆಲೆ ರೂ 1750, ಖರೀದಿ ಕೇಂದ್ರ ತರೆಯಲು ನಿರ್ಧಾರ- ಜಿಲ್ಲಾಧಿಕಾರಿ ಪ್ರಿಯಾಂಕ ಮೇರಿ ಫ್ರಾನ್ಸಿಸ್ 

ಉಡುಪಿ: ಜಿಲ್ಲೆಯಲ್ಲಿ 2018-19 ನೇ ಸಾಲಿನ ಮುಂಗಾರು ಹಂಗಾಮಿನಲ್ಲಿ ಬೆಳೆದಿರುವ ಭತ್ತವನ್ನು, ಕೇಂದ್ರ ಸರ್ಕಾರ ನಿಗಧಿಪಡಿಸಿರುವ ಬೆಂಬಲ ಬೆಲೆ ಪ್ರತಿ ಕ್ವಿಂಟಾಲ್ ಗೆ ರೂ.1750 ದರದಲ್ಲಿ ಖರೀದಿಸಲು ನಿರ್ಧರಿಸಿದ್ದು, ಈ ಕುರಿತಂತೆ ಜಿಲ್ಲೆಯಲ್ಲಿ ಅಗತ್ಯ ಭತ್ತ ಖರೀದಿ ಕೇಂದ್ರ ತೆರೆಯುವ ಕುರಿತಂತೆ ಅನುಮತಿ ಕೋರಿ ಸರ್ಕಾರಕ್ಕೆ ಮನವಿ ಸಲ್ಲಿಸಲು ನಿರ್ಧರಿಸಿದೆ ಎಂದು ಜಿಲ್ಲಾಧಿಕಾರಿ ಪ್ರಿಯಾಂಕ ಮೇರಿ ಫ್ರಾನ್ಸಿಸ್ ತಿಳಿಸಿದ್ದಾರೆ.

ಅವರು ಸೋಮವಾರ, ಜಿಲ್ಲಾಧಿಕಾರಿ ಕಚೇರಿಯಲ್ಲಿ ನಡೆದ ಜಿಲ್ಲಾ ಟಾಸ್ಟ್ ಫೋರ್ಸ್ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಜಿಲ್ಲೆಯಲ್ಲಿ ಪ್ರಸ್ತುತ ಮುಂಗಾರು ಹಂಗಾಮಿನ ಭತ್ತ ಕಟಾವು ಪ್ರಾರಂಭವಾಗಿದ್ದು, ಪ್ರಸ್ತುತ ಸರಾಸರಿ ಕ್ವಿಂಟಾಲ್ ಗೆ ರೂ.1650 ರ ದರದಲ್ಲಿ ಭತ್ತ ಮಾರಾಟ ನಡೆಯುತ್ತಿದ್ದು, ಮುಂದಿನ ದಿನದಲ್ಲಿ ಒಮ್ಮಲೆ ಕಟಾವು ಮುಗಿದು ಮಾರುಕಟ್ಟೆಯಲ್ಲಿ ಭತ್ತದ ಆವಕ ಹೆಚ್ಚಾಗುವುದರಿಂದ ಭತ್ತದ ದರ ಕಡಿಮೆಯಾಗುವ ಸಂಭವವಿರುವುದರಿಂದ, ರೈತರಿಗೆ ನಷ್ಠವಾಗುವದನ್ನು ತಪ್ಪಿಸುವ ಉದ್ದೇಶದಿಂದ, ರೈತರು ತಾವು ಬೆಳೆದ ಭತ್ತವನ್ನು ಸರಕಾರದ ಭತ್ತ ಖರೀದಿ ಕೇಂದ್ರದಲ್ಲಿ, ಕೇಂದ್ರ ಸರ್ಕಾರ ನಿಗಧಿಪಡಿಸಿರುವ ಪ್ರತಿ ಕ್ವಿಂಟಾಲ್ಗೆ ಬೆಂಬಲ ಬೆಲೆ ರೂ.1750 ರ ದರದಲ್ಲಿ ಮಾರಾಟ ಮಾಡುವಂತೆ ತಿಳಿಸಿದ ಜಿಲ್ಲಾಧಿಕಾರಿ, ಜಿಲ್ಲೆಯಲ್ಲಿ ಅಗತ್ಯವಿರುವ ಭತ್ತ ಖರೀದಿ ಕೇಂದ್ರಗಳನ್ನು ತೆರೆಯುವ ಕುರಿತು, ರಾಜ್ಯ ಸರ್ಕಾರಕ್ಕೆ ಅನುಮತಿ ಕೋರಿ ತಕ್ಷಣ ಪತ್ರ ಬರೆಯುವಂತೆ ಕೃಷಿ ಮಾರಾಟ ಇಲಾಖೆಯ ಸಹಾಯಕ ನಿರ್ದೇಶಕರಿಗೆ ಸೂಚಿಸಿದರು.

ಬೆಂಬಲ ಬೆಲೆಯಲ್ಲಿ ಭತ್ತ ಮಾರಾಟ ಮಾಡುವ ರೈತರು, ತಾವು ಬೆಳೆದ ಭತ್ತವನ್ನು ಸೂಕ್ತ ರೀತಿಯಲ್ಲಿ ದಾಸ್ತಾನು ಮಾಡಿ, ನಿಗಧಿತ ಗುಣಮಟ್ಟ ಕಾಯ್ದುಕೊಂಡು ಭತ್ತ ಖರೀದಿ ಕೇಂದ್ರಗಳಲ್ಲಿ ಮಾರಾಟ ಮಾಡುವಂತೆ ಜಿಲ್ಲಾಧಿಕಾರಿ ತಿಳಿಸಿದರು.

ಸಭೆಯಲ್ಲಿ ಕೃಷಿ ಮಾರಾಟ ಇಲಾಖೆಯ ಸಹಾಯಕ ನಿರ್ದೇಶಕ ರಾಮಚಂದ್ರ ಕೆ ನಾಯ್ಕ, ಕೃಷಿ ಇಲಾಖೆಯ ಜಂಟಿ ನಿರ್ದೇಶಕ ಕೆಂಪೇಗೌಡ, ಸಹಾಯಕ ನಿರ್ದೇಶಕ ಚಂದ್ರಶೇಖರ್ ನಾಯಕ್, ತೋಟಗಾರಿಕಾ ಇಲಾಖೆ ಉಪ ನಿರ್ದೇಶಕಿ ಭುವನೇಶ್ವರಿ, ಸಹಕಾರ ಇಲಾಖೆಯ ಉಪ ನಿಬಂದಕ ಪ್ರವೀಣ್ ನಾಯಕ್ ಮತ್ತಿತರರು ಉಪಸ್ಥಿತರಿದ್ದರು.


Spread the love