ಭೂಮಾಲೀಕತ್ವದ ಇತಿಹಾಸ ತಿಳಿದುಕೊಳ್ಳಲು ಜಿಲ್ಲಾಧಿಕಾರಿ ದರ್ಶನ್ ಹೆಚ್.ವಿ ಕರೆ
ಮಂಗಳೂರು: ಲಕ್ಷಾಂತರ ಮಂದಿ ಭೂರಹಿತರು ಭೂಮಾಲೀಕರಾಗಲು ಕಾರಣರಾದ ಭೂಸುಧಾರಣೆ ಕಾನೂನು ಮತ್ತು ಅಂದಿನ ವ್ಯವಸ್ಥೆಯ ಇತಿಹಾಸದ ಬಗ್ಗೆ ಇಂದಿನ ಮಕ್ಕಳು ಮತ್ತು ಯುವಪೀಳಿಗೆ ತಿಳಿದುಕೊಳ್ಳಬೇಕಿದೆ ಎಂದು ಜಿಲ್ಲಾಧಿಕಾರಿ ದರ್ಶನ್ ಹೆಚ್.ವಿ ಹೇಳಿದ್ದಾರೆ.
ಅವರು ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಹಾಗೂ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಇವರ ಸಯುಕ್ತ ಆಶ್ರಯದೊಂದಿಗೆ ಬುಧವಾರ ಜಿಲ್ಲಾ ಪಂಚಾಯತ್ ನೇತ್ರಾವತಿ ಸಭಾಂಗಣದಲ್ಲಿ ನಡೆದ ಸಾಮಾಜಿಕ ನ್ಯಾಯದ ಹರಿಕಾರ ಕರ್ನಾಟಕ ರಾಜ್ಯದ ಮಾಜಿ ಮುಖ್ಯಮಂತ್ರಿಗಳಾದ ಡಿ. ದೇವರಾಜ ಅರಸು ಅವರ 110ನೇ ಜನ್ಮದಿನಾಚರಣೆ ಸಮಾರಂಭ ಉದ್ಘಾಟಿಸಿ ಮಾತನಾಡಿದರು.
ದೇವರಾಜು ಅರಸು ಅವರು ಜಾರಿಗೆ ತಂದ ಭೂ ಸುಧಾರಣೆ ಕಾನೂನಿನಿಂದಾಗಿ ಹಲವಾರು ಮಂದಿ ಗೇಣಿದಾರರು ಹಾಗೂ ಭೂ ರಹಿತರಿಗೆ ಭೂಮಿಯ ಮಾಲೀಕತ್ವ ಲಭ್ಯವಾಯಿತು. ಇಂದು ಈ ಭೂಮಿಯಲ್ಲಿ ಪ್ರಯೋಜನ ಪಡೆಯುತ್ತಿರುವ ಇಂದಿನ ಪೀಳಿಗೆಯವರಿಗೆ ತಮಗೆ ಈ ಭೂಮಿ ಹೇಗೆ ದೊರಕಿದ್ದು ಎಂಬುದರ ಮಾಹಿತಿ ಇಲ್ಲದಿರುವುದು ವಿಷಾದÀಕರ. ತಮ್ಮ ಕುಟುಂಬದ ಹಿರಿಯರಿಂದ ಮತ್ತು ಪಾಲಕರಿಂದ ಈಗಿನ ಮಕ್ಕಳು ಇದರ ಮಾಹಿತಿ ಪಡೆಯಬೇಕು ಎಂದು ಅವರು ತಿಳಿಸಿದರು.
ಉಳುವವನೇ ಹೊಲದ ಒಡೆಯ ಎಂಬ ಕಾನೂನು ದೇಶದಲ್ಲಿ ಪರಿಣಾಮಕಾರಿಯಾಗಿ ಜಾರಿಯಾದ ರಾಜ್ಯಗಳಲ್ಲಿ ಕರ್ನಾಟಕ ಪ್ರಮುಖವಾಗಿದೆ. ತಮ್ಮ ರಾಜಕೀಯ ಭವಿಷ್ಯವನ್ನು ಪಣಕ್ಕಿಟ್ಟು ದೇವರಾಜ ಅರಸು ಅವರು ಇದನ್ನು ಜಾರಿಗೆ ತಂದರು ಎಂದು ಜಿಲ್ಲಾಧಿಕಾರಿಗಳು ಹೇಳಿದರು.
ಉಪನ್ಯಾಸ ನೀಡಿದ ಪುತ್ತೂರು ಸರಕಾರಿ ಪದವಿ ಪೂರ್ವ ಕಾಲೇಜಿನ ಉಪನ್ಯಾಸಕ ಅಬ್ದುಲ್ ರಜಾಕ್ ಮಾತನಾಡಿ, ಅರಸು ಅವರ ಸಂಪುಟದಲ್ಲಿ ಅಂದು ಸಚಿವರಾಗಿದ್ದ ಸುಬ್ಬಯ್ಯ ಶೆಟ್ಟಿ ಅವರು ಅರಸು ಅವರೊಂದಿಗೆ ಗಟ್ಟಿಯಾಗಿ ನಿಂತಿದ್ದರಿಂದ ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಭೂಸುಧಾರಣೆ ಕಾನೂನು ಪರಿಣಾಮಕಾರಿಯಾಗಿ ಜಾರಿಗೆ ಬರುವಂತಾಯಿತು ಎಂದರು.
ಹಾಸ್ಟೆಲ್ಗಳನ್ನು ಸ್ಥಾಪಿಸುವ ಮೂಲಕ ದುರ್ಬಲ ವರ್ಗದ ಮಕ್ಕಳಿಗೆ ಉನ್ನತ ಶಿಕ್ಷಣ ದೊರಕಿಸಲು ಕಾರಣಕರ್ತರಾದರು. ಜನತಾ ಮನೆ, ನಿವೇಶನ ಒದಗಿಸುವ ಹಾಗೂ ಪ್ರತಿ ಮನೆಗೆ ಒಂದು ಬಲ್ಬ್ ವಿದ್ಯುತ್ ಒದಗಿಸುವ ಭಾಗ್ಯಜ್ಯೋತಿ ಯೋಜನೆ ಜಾರಿಗೆ ತರುವ ಮೂಲಕ ಬಡವರ ಪ್ರಗತಿಗೆ ದೇವರಾಜ ಅರಸು ಪ್ರಾಮಾಣಿಕವಾಗಿ ಶ್ರಮಿಸಿದ್ದರು ಎಂದರು.
ಸಮಾರಂಭದಲ್ಲಿ ಕರ್ನಾಟಕ ಗೇರು ಅಭಿವೃದ್ಧಿ ನಿಗಮದ ಅಧ್ಯಕ್ಷೆ ಮಮತಾ ಡಿ ಎಸ್ ಗಟ್ಟಿ, ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಅಧ್ಯಕ್ಷ ತಾರನಾಥ್ ಗಟ್ಟಿ, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ನರ್ವಡೆ ವಿನಾಯಕ ಕಾರ್ಭಾರಿ, ಜಿಲ್ಲಾ ಕೌಶಲ್ಯಾಭಿವೃದ್ಧಿ ಅಧಿಕಾರಿ ಪ್ರದೀಪ್ ಡಿಸೋಜಾ ಮತ್ತಿತರರು ಉಪಸ್ಥಿತರಿದ್ದರು. ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಜಿಲ್ಲಾ ಅಧಿಕಾರಿ ಬಿಂದಿಯಾ ಎನ್ ನಾಯಕ್ ಸ್ವಾಗತಿಸಿದರು.
ಇದೇ ಸಂದರ್ಭದಲ್ಲಿ ಕಳೆದ ಸಾಲಿನ ಎಸ್.ಎಸ್.ಎಲ್.ಸಿ ಮತ್ತು ಪಿಯುಸಿ ಪರೀಕ್ಷೆಯಲ್ಲಿ ಅತಿ ಹೆಚ್ಚು ಅಂಕ ಗಳಿಸಿದ ಹಿಂದುಳಿದ ವರ್ಗಗಳ ಹಾಸ್ಟೆಲ್ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು.