ಮಂಗಳೂರಿನ ಮಾಜಿ ಡಿಸಿಪಿ ಡಿ. ಧರ್ಮಯ್ಯ ಹೃದಯಾಘಾತದಿಂದ ನಿಧನ
ಮಂಗಳೂರು: ಮಂಗಳೂರಿನ ಡಿಸಿಪಿ (ಅಪರಾಧ–ಸಂಚಾರ) ಆಗಿ ಸೇವೆ ಸಲ್ಲಿಸಿ ನಿವೃತ್ತರಾಗಿದ್ದ ಡಿ. ಧರ್ಮಯ್ಯ (71) ಅವರು ಮಂಗಳೂರು ಬೆಂದೂರುವೆಲ್‌ನ ತಮ್ಮ ನಿವಾಸದಲ್ಲಿ ಸೆಪ್ಟೆಂಬರ್ 24ರಂದು ಸಂಜೆ ಹೃದಯಾಘಾತದಿಂದ ನಿಧನ ಹೊಂದಿದರು.
ಮೂಲತಃ ಹಾಸನ ಜಿಲ್ಲೆಯ ಸಕಲೇಶಪುರ ತಾಲ್ಲೂಕು ಹೊಸೂರಿನವರಾದ ಧರ್ಮಯ್ಯ ಅವರು ತಮ್ಮ ಸೇವಾ ಜೀವನವನ್ನು ಮೈಸೂರು ನಗರದಲ್ಲಿ ಉಪನಿರೀಕ್ಷಕರಾಗಿ (SI) ಆರಂಭಿಸಿದ್ದರು. ನಂತರ ಯಳಂದೂರು, ಚಾಮರಾಜನಗರ, ವಿರಾಜಪೇಟೆ ಠಾಣೆಗಳಲ್ಲಿ ಸೇವೆ ಸಲ್ಲಿಸಿದ ಅವರು ಸರ್ಕಲ್ ಇನ್‌ಸ್ಪೆಕ್ಟರ್ ಆಗಿ ಬೆಳ್ತಂಗಡಿ, ಕಾರ್ಕಳ ಹಾಗೂ ಉಡುಪಿಯಲ್ಲಿ ಕಾರ್ಯ ನಿರ್ವಹಿಸಿದ್ದರು. ನಂತರ ಡಿವೈಎಸ್‌ಪಿ ಹುದ್ದೆಯಲ್ಲಿ ಸೇವೆ ಸಲ್ಲಿಸಿ, ಬಳಿಕ ಬೆಂಗಳೂರಿನಲ್ಲಿ ಎಸಿಪಿಯಾಗಿ ಕಾರ್ಯ ನಿರ್ವಹಿಸಿದರು.
ಮಂಗಳೂರಿನಲ್ಲಿ ಡಿಸಿಪಿ (ಅಪರಾಧ ಮತ್ತು ಸಂಚಾರ ವಿಭಾಗ) ಹುದ್ದೆಯನ್ನು ಭರಿಸಿ, 2013ರಲ್ಲಿ ಸೇವಾ ನಿವೃತ್ತಿ ಹೊಂದಿದ ಅವರು ಬಳಿಕ ಮಂಗಳೂರಿನಲ್ಲೇ ನೆಲೆಸಿದ್ದರು.
ಅವರು ಪತ್ನಿ, ಓರ್ವ ಪುತ್ರಿ, ಇಬ್ಬರು ಪುತ್ರರು ಹಾಗೂ ನಾಲ್ವರು ಮೊಮ್ಮಕ್ಕಳನ್ನು ಅಗಲಿದ್ದಾರೆ.