‘ಮಂಗಳೂರು ಚಲೋ’ ಬೈಕ್‌ ರ‍್ಯಾಲಿಗೆ ನಗರ ಪೊಲೀಸ್ ಕಮಿಷನರ್ ಅನುಮತಿ ನಿರಾಕರಣೆ

Spread the love

‘ಮಂಗಳೂರು ಚಲೋ’ ಬೈಕ್‌ ರ‍್ಯಾಲಿಗೆ ನಗರ ಪೊಲೀಸ್ ಕಮಿಷನರ್ ಅನುಮತಿ ನಿರಾಕರಣೆ

ಮಂಗಳೂರು: ಹಿಂದೂ ಕಾರ್ಯಕರ್ತರ ಹತ್ಯೆ ಖಂಡಿಸಿ ಸಪ್ಟೆಂಬರ್ 7 ರಂದು  ಬಿಜೆಪಿ ಯುವ‌ ಮೋರ್ಚಾ ವತಿಯಿಂದ ನಡೆಸಲು ಉದ್ದೇಶಿಸಿದ್ದ ಮಂಗಳೂರು ಚಲೋ ಬೈಕ್  ರ‍್ಯಾಲಿಗೆ ನಗರ ಪೊಲೀಸರು ಅನುಮತಿ ನಿರಾಕರಿಸಿದ್ದಾರೆ.

ಮಂಗಳೂರು ನಗರ ಪೊಲೀಸ್ ಕಮಿಷನರ್ ಟಿ.ಆರ್.ಸುರೇಶ್ ಅಧ್ಯಕ್ಷತೆಯಲ್ಲಿ ‌ಸೋಮವಾರ ನಡೆದ ಹಿರಿಯ‌ ಪೊಲೀಸ್ ಅಧಿಕಾರಿಗಳ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ.  ಈ ಕುರಿತು ಅಧಿಕೃತ ಮಾಧ್ಯಮ ಪ್ರಕಟಣೆ ನೀಡಿರುವ ನಗರ ಪೋಲಿಸ್ ಆಯುಕ್ತ ಟಿ. ಆರ್. ಸುರೇಶ್ ಅವರು ಮಂಗಳೂರು ನಗರದ ಕೋಮು ಸೌಹಾರ್ದತೆಯ ದೃಷ್ಟಿಯಿಂದ ಅತೀ ಸೂಕ್ಷ ಪ್ರದೇಶವಾಗಿದ್ದು, ಹಿಂದೆ ನಡೆದಂತಹ ಘಟನೆಗಳನ್ನು ಗಮನದಲ್ಲಿಟ್ಟುಕೊಂಡು ಮಂಗಳೂರು ನಗರದ ಶಾಂತಿ ಕಾಪಾಡುವ ಸಲುವಾಗಿ ಮತ್ತು ಸಾರ್ವಜನಿಕ ಹಿತಾಸಕ್ತಿಯಿಂದ ಸಾರ್ವಜನಿಕ ಅಸ್ವಸ್ಥತೆ ಆಗದಂತೆ ನೋಡಿಕೊಳ್ಳುವ ದೃಷ್ಟಿಯಿಂದ ಮಂಗಳೂರು ಚಲೋ ಬೈಕ್ ರ‍್ಯಾಲಿಗೆ ಅನುಮತಿ ನಿರಾಕರಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ.

ರ‍್ಯಾಲಿಗೆ ಅನುಮತಿ ನಿರಾಕರಿಸಿರುವ ಕುರಿತು ಬಿಜೆಪಿ ಯುವ ‌ಮೋರ್ಚಾ ಮುಖಂಡರಿಗೆ ಅಧಿಕೃತವಾಗಿ ಮಾಹಿತಿ ರವಾನಿಸಲಾಗಿದೆ’ ಎಂದು ಕಮಿಷನರ್ ತಿಳಿಸಿದ್ದಾರೆ.‍‍‍‍‍‍

ಬಿಜೆಪಿ, ಸಂಘ ಪರಿವಾರದ ಕಾರ್ಯಕರ್ತರ ಹತ್ಯೆ , ಹಲ್ಲೆ ಪ್ರಕರಣದಲ್ಲಿ ಪಿ.ಎಫ್‌.ಐ. ಹಾಗೂ ಕೆ.ಎಫ್‌.ಡಿ. ಸಂಘಟನೆಯು ಭಾಗಿಯಾಗಿರುವುದು ರುಜುವಾತಾದ ಹಿನ್ನೆಲೆಯಲ್ಲಿ ಈ ಎರಡೂ ಸಂಘಟನೆಗಳನ್ನು ನಿಷೇಧಿಸಬೇಕು ಹಾಗೂ ಸಮಾಜಘಾತುಕ ಸಂಘಟನೆಗಳಿಗೆ ಮತ್ತು ಕೋಮು ಹಿಂಸೆಗೆ ಕುಮ್ಮಕ್ಕು ನೀಡುತ್ತಿರುವ ಸಚಿವ ರಮಾನಾಥ ರೈ ಅವರನ್ನು ಸಂಪುಟದಿಂದ ವಜಾಗೊಳಿಸಬೇಕು ಎಂದು ಒತ್ತಾಯಿಸಿ ಬಿಜೆಪಿ ಯುವಮೋರ್ಚಾ ನೇತೃತ್ವದಲ್ಲಿ “ಮಂಗಳೂರು ಚಲೋ’ ಬೈಕ್‌ ಜಾಥಾ ಆಯೋಜಿಸಲಾಗಿತ್ತು.

ಸೆ.5ರಂದು ಹುಬ್ಬಳ್ಳಿಯಿಂದ ಬೈಕ್‌ ಜಾಥಾ ಆರಂಭ ವಾಗಲಿದ್ದು, ಬೈಂದೂರು, ಕುಂದಾಪುರ, ಉಡುಪಿ ಮೂಲಕ ಮಂಗಳೂರಿಗೆ ತಲುಪಲು ನಿರ್ಧರಿಸಲಾಗಿತ್ತು. ಸೆ. 6ರಂದು ಶಿವಮೊಗ್ಗದಿಂದ ಹೊರಡುವ ಬೈಕ್‌ ಜಾಥಾ ಕಾರ್ಕಳ, ಮೂಡಬಿದಿರೆ ಮೂಲಕ ಮಂಗಳೂರಿಗೆ ಬರಲು ನಿರ್ಧರಿಸಲಾಗಿತ್ತು. ಮೈಸೂರಿನಿಂದ ಸೆ. 6ರಂದು ಹೊರಡುವ ಬೈಕ್‌ ಜಾಥಾ ಕುಶಾಲನಗರ, ಮಡಿಕೇರಿ, ಸುಳ್ಯ, ಪುತ್ತೂರು ಮೂಲಕ ಮಂಗಳೂರಿಗೆ, ಸೆ. 5ರಂದು ಬೆಂಗಳೂರಿನಿಂದ ಹೊರಡುವ ಬೈಕ್‌ ರ್ಯಾಲಿ ಹಾಸನ, ಸಕಲೇಶಪುರ, ಉಪ್ಪಿನಂಗಡಿ, ಮಾಣಿ ಮೂಲಕ ಮಂಗಳೂರಿಗೆ ಹಾಗೂ ಸೆ.6ರಂದು ಚಿಕ್ಕಮಗಳೂರಿನಿಂದ ಹೊರಡುವ ಬೈಕ್‌ ಜಾಥಾಮೂಡಿಗೆರೆ, ಕೊಟ್ಟಿಗೆಹಾರ, ಉಜಿರೆ ಮೂಲಕ ಮಂಗಳೂರಿಗೆ ಆಗಮಿಸುವ ತಯಾರಿಯನ್ನು ಬಿಜೆಪಿ ಯುವ ಮೋರ್ಚಾ ಮಾಡಿಕೊಂಡಿತ್ತು.


Spread the love