ಮಂಗಳೂರು| ಜಾತಿ ನಿಂದನೆ ಪ್ರಕರಣ: ಆರೋಪಿಗೆ 1 ವರ್ಷ ಕಾರಾಗೃಹ ಶಿಕ್ಷೆ
ಮಂಗಳೂರು: ವೇಣೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ದಾಖಲಾಗಿದ್ದ ಜಾತಿ ನಿಂದನೆ ಪ್ರಕರಣದಲ್ಲಿ ಆರೋಪಿಗೆ 1 ವರ್ಷದ ಕಾರಾಗೃಹ ಶಿಕ್ಷೆ ಹಾಗೂ ದಂಡ ವಿಧಿಸಿ ನ್ಯಾಯಾಲಯ ತೀರ್ಪು ನೀಡಿದೆ.
ವೇಣೂರು ಪೊಲೀಸ್ ಠಾಣೆ ಅ.ಕ್ರ.15/2021ರಡಿ ಐಪಿಸಿ ಕಲಂ 452, 354(a), 506 ಹಾಗೂ ಎಸ್‌ಸಿ/ಎಸ್‌ಟಿ (ಅತ್ಯಾಚಾರ ನಿರೋಧಕ) ಕಾಯ್ದೆಯ ಕಲಂ 3(1)(w)(i), 3(2)(Va) ಅನ್ವಯ ಪ್ರಕರಣ ದಾಖಲಾಗಿತ್ತು.
ಪ್ರಕರಣದ ತನಿಖಾಧಿಕಾರಿಯಾಗಿದ್ದ ಬಂಟ್ವಾಳ ಉಪವಿಭಾಗದ ಪೊಲೀಸ್ ಉಪಾಧೀಕ್ಷಕರಾದ ವ್ಯಾಲೆಂಟೈನ್ ಡಿ’ಸೋಜಾ ಅವರು ಪ್ರಕರಣದ ಸಮಗ್ರ ತನಿಖೆ ನಡೆಸಿ ಅಗತ್ಯ ಸಾಕ್ಷ್ಯಾಧಾರಗಳನ್ನು ಸಂಗ್ರಹಿಸಿ ದೋಷಾರೋಪಣಾ ಪಟ್ಟಿಯನ್ನು ಮಾನ್ಯ ನ್ಯಾಯಾಲಯಕ್ಕೆ ಸಲ್ಲಿಸಿದ್ದರು.
ಮಂಗಳೂರಿನ 2ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದಲ್ಲಿ ವಿಚಾರಣೆ ನಡೆದಿದ್ದು, ಮಾನ್ಯ ನ್ಯಾಯಾಧೀಶರಾದ ಜಗದೀಶ್ ವಿ.ಎನ್. ಅವರು 26-02-2026 ರಂದು ತೀರ್ಪು ಪ್ರಕಟಿಸಿದ್ದಾರೆ. ಆರೋಪಿಯಾದ ಖಾಲಿದ್ @ ಅಬ್ದುಲ್ ಖಾದರ್ ಅವರಿಗೆ ಐಪಿಸಿ ಕಲಂ 354-A ಹಾಗೂ ಎಸ್‌ಸಿ/ಎಸ್‌ಟಿ ಕಾಯ್ದೆ 1989ರ ಕಲಂ 3(1)(w)(i) ಅನ್ವಯ 1 ವರ್ಷಗಳ ಸರಳ ಕಾರಾಗೃಹ ಶಿಕ್ಷೆ ಮತ್ತು ₹10,000 ದಂಡ ವಿಧಿಸಲಾಗಿದೆ.
ಸರಕಾರದ ಪರವಾಗಿ ಸರಕಾರಿ ಅಭಿಯೋಜಕರಾದ ಜ್ಯೋತಿ ನಾಯ್ಕ್ ಅವರು ಸಮರ್ಥವಾಗಿ ವಾದ ಮಂಡಿಸಿದ್ದರು.













