ಮಂಗಳೂರು: ದರೋಡೆ ನಡೆಸದೆ ಎಟಿಎಮ್ ನಲ್ಲಿದ್ದ ಕೋಟ್ಯಾಂತರ ಹಣ ನಾಪತ್ತೆ ; ಆರೋಪಿಗಳ ಪತ್ತೆಗೆ ಬಲೆ ಬೀಸಿದ ಪೋಲಿಸರು

Spread the love

ಮಂಗಳೂರು: ಎಟಿಎಮ್ ಒಡೆಯದೆ ದರೋಡೆಯೂ ಕೂಡ ನಡೆಸದೆ ಎಟಿಎಂನಲ್ಲಿದ್ದ ಕೋಟ್ಯಾಂತರ ಹಣ ನಾಪತ್ತೆಯಾದ ಘಟನೆ ಮಂಗಳೂರಿನಲ್ಲಿ ನಡೆದಿದೆ.

ದಕ್ಷಿಣ ಕನ್ನಡ ಜಿಲ್ಲಾದ್ಯಂತ ಇರುವ ಎಸ್.ಬಿ.ಐ ಬ್ಯಾಂಕಿನ ಎಟಿಎಂಗಳಿಗೆ ಹಣ ತುಂಬಿಸುವ ಜವಾಬ್ದಾರಿಯನ್ನು “ಕ್ಯಾಷ್‍ಟೆಕ್” ಎನ್ನುವ ಮುಂಬೈ ಮೂಲದ ಏಜೆನ್ಸಿಗೆ ಕಳೆದ ಎರಡೂವರೆ ವರ್ಷಗಳ ಹಿಂದೆ(2012 ನವೆಂಬರ್)ನೀಡಲಾಗಿತ್ತು. ಈ ಕ್ಯಾಶ್‍ಟೆಕ್ ಸಂಸ್ಥೆ ಮಂಗಳೂರಿನ ಯುವಕರನ್ನು ಆಯ್ಕೆ ಮಾಡಿ ಜಿಲ್ಲೆಯ 48 ಎಟಿಎಂಗಳಿಗೆ ಹಣ ತುಂಬುವ ಕೆಲಸವನ್ನು ಮಾಡಿಸುತ್ತಿತ್ತು.

ಈ ನಡುವೆ ಕಳೆದ ಎರಡು ತಿಂಗಳ ಹಿಂದೆ ಏಜೆನ್ಸಿಯ ಗುತ್ತಿಗೆ ಕೊನೆಗೊಂಡಿದ್ದರಿಂದ ಮಂಗಳೂರಿನ ಮ್ಯಾನೇಜರ್ ಆಗಿದ್ದ ಪ್ರದೀಪ್ ಎಂಬಾತನಿಗೆ ಬ್ಯಾಲೆನ್ಸ್ ಶೀಟ್ ತೋರಿಸಲು ಏಜೆನ್ಸಿ ಸೂಚಿಸಿತ್ತು. ಆದರೆ ಪ್ರದೀಪ್ ಕೇವಲ 29 ಎಟಿಎಂಗಳ ಲೆಕ್ಕ ಕೊಟ್ಟಿದ್ದು ಉಳಿದ 19 ಎಟಿಎಂಗಳ ಲೆಕ್ಕ ನೀಡಿಲ್ಲ. ತಿಂಗಳು ಕಳೆದರೂ ಲೆಕ್ಕ ಸಿಗದೇ ಇದ್ದಾಗ ಮುಂಬೈ ಹಾಗೂ ಬೆಂಗಳೂರಿನ ಏಜೆನ್ಸಿಯ ಹಿರಿಯ ಅಧಿಕಾರಿಗಳು ವಿಚಾರಣೆ ನಡೆಸಿದ್ದು, ಆಗ 19 ಎಟಿಎಂಗಳಿಂದ 2 ತಿಂಗಳಲ್ಲಿ ಬರೋಬ್ಬರಿ 4,13,57,500 ಕೋಟಿ ರೂ.ಗಳಷ್ಟು ಹಣ ನಾಪತ್ತೆಯಾಗಿರುವ ವಿಚಾರ ಬೆಳಕಿಗೆ ಬಂದಿದೆ.

ಎಟಿಎಂಗೆ ಹಾಕಲು ಬ್ಯಾಂಕ್ ನೀಡುತ್ತಿದ್ದ ಹಣವನ್ನು ಆರೋಪಿಗಳು ಅದರ ಪಾಸ್‍ವರ್ಡ್ ಬಳಸಿ ಓಪನ್ ಮಾಡಿ ಎಟಿಎಂಗೆ ಹಣ ಹಾಕುತ್ತಿದ್ದರು. ನಂತರ ಕೆಲವೇ ಸಮಯದಲ್ಲಿ ಮತ್ತೆ ಅದೇ ಎಟಿಎಂಗೆ ಬಂದು ಪಾಸ್‍ವರ್ಡ್ ಹಾಕಿ ಪ್ರತಿ ಎಟಿಎಂನಿಂದ ಲಕ್ಷಾಂತರ ರೂ. ಪಡೆಯುತ್ತಿದ್ದರು. ವಿಪರ್ಯಾಸವೆಂದರೆ ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ ಕಚೇರಿ ಒಳಗಡೆ ಇರುವ ಎಟಿಎಂನಿಂದಲೂ 21,13 ಲಕ್ಷ ರೂ. ಹಣ ಲಪಟಾಯಿಸಿರುವುದು ಬೆಳಕಿಗೆ ಬಂದಿದೆ.

ಆರೋಪಿಗಳು ನಾಪತ್ತೆಯಾಗುವ ಮೊದಲು ಏರಿಯಾ ಮ್ಯಾನೇಜನರ್ ಪ್ರದೀಪ್‍ನನ್ನು ಹಿರಿಯ ಅಧಿಕಾರಿಗಳು ವಿಚಾರಣೆ ನಡೆಸಿದ್ದಾಗ ನಾವು ಒಂದು ರೂ. ಲಪಟಾಯಿಸಿಲ್ಲ ಎನ್ನುತ್ತಿದ್ದ ಈತ, ವಂಚನೆಯ ಕುರಿತು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗುತ್ತಿದಂತೆಯೇ ಉದಯ, ಮಹೇಶ್, ಗುರುಪ್ರಸಾದ್, ಶ್ರೀಧರ್ ,ಹರೀಶ್ ಸೇರಿ ಒಟ್ಟು 19 ಮಂದಿ ತಲೆಮರೆಸಿಕೊಂಡಿದ್ದಾರೆ.

ಇನ್ನು ಆರೋಪಿಗಳಲ್ಲಿ ಕೆಲವರು ಬಡವರಾದರೂ ಐಷಾರಾಮಿ ಮನೆ, ಕಾರು, ಬೈಕ್ ಎಂದು ಜೀವನ ಸಾಗಿಸುತ್ತಿದ್ದರು. ತಮ್ಮ ಏಜೆನ್ಸಿಯವರೇ ಎಸ್‍ಬಿಐನಲ್ಲಿ ಠೇವಣಿ ಇರಿಸಿದ್ದ ಜನರ ಹಣವನ್ನು ಲಪಟಾಯಿಸಿದ್ದಾರೆ ಎಂದು ಏಜೆನ್ಸಿ ಪಾಂಡೇಶ್ವರ ಪೊಲೀಸ್ ಠಾಣೆಯಲ್ಲಿ ದೂರು ನೀಡಿದೆ. ಇದೀಗ ಸಿಬ್ಬಂದಿ ತಿಂದು ತೇಗಿದ ಕೋಟ್ಯಾಂತರ ರೂಪಾಯಿ ಹಣವನ್ನು ಏಜೆನ್ಸಿ ಕೆಲವು ದಿನಗಳ ಗಡುವಿನಲ್ಲಿ ಬ್ಯಾಂಕಿಗೆ ಪಾವತಿಸಬೇಕಾಗಿದೆ.

 


Spread the love