ಮಂಗಳೂರು| ಪ್ರತ್ಯೇಕ ಪ್ರಕರಣ: ತಲೆಮರೆಸಿಕೊಂಡಿದ್ದ ಇಬ್ಬರು ಆರೋಪಿಗಳ ಬಂಧನ
ಮಂಗಳೂರು: ನಗರದ ಮಹಿಳಾ ಠಾಣೆಯಲ್ಲಿ ದಾಖಲಾಗಿದ್ದ ಎರಡು ಪ್ರತ್ಯೇಕ ಪ್ರಕರಣಗಳಲ್ಲಿ ದೀರ್ಘಕಾಲದಿಂದ ತಲೆಮರೆಸಿಕೊಂಡಿದ್ದ ಇಬ್ಬರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.
ಬಂಧಿತರನ್ನು ಕಂಕನಾಡಿಯ ಅಪಾರ್ಟ್‌ಮೆಂಟ್‌ವೊಂದರ ನಿವಾಸಿ ಉಬೇದುಲ್ಲಾ ಮತ್ತು ಹೊಯಿಗೆ ಬಜಾರ್ ನಿವಾಸಿ ದಾಮೋದರ ಎಂದು ಗುರುತಿಸಲಾಗಿದೆ.
2011ರ ಮಾರ್ಚ್ 14ರಂದು ನಗರದ ಹಂಪನಕಟ್ಟೆಯ ಲಾಡ್ಜ್‌ವೊಂದರಲ್ಲಿ ವೇಶ್ಯಾವಾಟಿಕೆ ನಡೆಯುತ್ತಿದ್ದ ಬಗ್ಗೆ ಮಾಹಿತಿ ಪಡೆದ ಮಹಿಳಾ ಪೊಲೀಸರು ದಾಳಿ ನಡೆಸಿ ನಾಲ್ಕು ಮಂದಿಯ ವಿರುದ್ಧ ಪ್ರಕರಣ ದಾಖಲಿಸಿ ನ್ಯಾಯಾಲಯಕ್ಕೆ ದೋಷಾರೋಪಣಾ ಪಟ್ಟಿ ಸಲ್ಲಿಸಿದ್ದರು.
ಈ ಪೈಕಿ ಮೂವರ ವಿಚಾರಣೆಯಾಗಿದ್ದು, ಅವರು ಪ್ರಕರಣದಿಂದ ಖುಲಾಸೆಗೊಂಡಿದ್ದರು. ಆದರೆ 4ನೇ ಆರೋಪಿ ಪಿ. ದಾಮೋದರ ಎಂಬಾತನು 14 ವರ್ಷದಿಂದ ತಲೆಮರೆಸಿಕೊಂಡಿದ್ದ. ಹಾಗಾಗಿ ನ್ಯಾಯಾಲಯವು ಆತನ ಬಂಧನಕ್ಕೆ ವಾರಂಟ್ ಹೊರಡಿಸಿತ್ತು. ಅದರಂತೆ ಮಹಿಳಾ ಠಾಣೆಯ ಪೊಲೀಸರು ದಾಮೋದರನನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ. ನ್ಯಾಯಾಲಯವು ಆರೋಪಿಗೆ ನ್ಯಾಯಾಂಗ ಬಂಧನ ವಿಧಿಸಿದೆ.
ಉಬೇದುಲ್ಲಾ ಎಂಬಾತನು ಹೆಚ್ಚುವರಿ ವರದಕ್ಷಿಣೆಗಾಗಿ ತನ್ನ ಹೆಂಡತಿಗೆ ದೈಹಿಕ ಮತ್ತು ಮಾನಸಿಕ ಹಿಂಸೆ ನೀಡಿದ ಬಗ್ಗೆ 2018ರಲ್ಲಿ ಮಹಿಳಾ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಆರೋಪಿಯು ನ್ಯಾಯಾಲಯಕ್ಕೆ ಹಾಜರಾಗದೆ ತಲೆಮರೆಸಿಕೊಂಡಿದ್ದ. ಈ ಬಗ್ಗೆ ನ್ಯಾಯಾಲಯವು ಆರೋಪಿಯ ವಿರುದ್ಧ ವಾರಂಟ್ ಹೊರಡಿಸಿತ್ತು. 7 ವರ್ಷಗಳ ಕಾಲ ತಲೆಮರೆಸಿಕೊಂಡಿದ್ದ ಆರೋಪಿಯು ವಿದೇಶದಿಂದ ಬರುತ್ತಿರುವ ಬಗ್ಗೆ ಮಾಹಿತಿ ಪಡೆದ ಪೊಲೀಸರು ಮಂಗಳವಾರ ಕೇರಳದ ಕಣ್ಣೂರು ವಿಮಾನ ನಿಲ್ದಾಣದಲ್ಲಿ ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ.