ಮಂಗಳೂರು: ಬಹುಕೋಟಿ ವಂಚಕ ರೋಶನ್ ಸಲ್ಡಾನ ಬಂಧನ

Spread the love

ಮಂಗಳೂರು: ಬಹುಕೋಟಿ ವಂಚಕ ರೋಶನ್ ಸಲ್ಡಾನ ಬಂಧನ

ಮಂಗಳೂರು: ಮಂಗಳೂರು ನಗರ ಪೊಲೀಸ್ ಆಯುಕ್ತರ ನೇತೃತ್ವದಲ್ಲಿ ಗುರುವಾರ ತಡರಾತ್ರಿ ನಡೆದ ಮಹತ್ವದ ಕಾರ್ಯಾಚರಣೆಯೊಂದರಲ್ಲಿ ಉದ್ಯಮಿ ಮತ್ತು ಶ್ರೀಮಂತ ವ್ಯಕ್ತಿಗಳಿಗೆ ಕೋಟ್ಯಂತರ ರೂ. ವಂಚಿಸಿದ ಪ್ರಕರಣದ ಆರೋಪಿಯೊಬ್ಬನನ್ನು ಬಂಧಿಸಿರುವುದು ವರದಿಯಾಗಿದೆ.

ಜಪ್ಪಿನಮೊಗರು ನಿವಾಸಿ ರೋಶನ್ ಸಲ್ಡಾನ(45) ಬಂಧಿತ ಆರೋಪಿ. ಈತನನ್ನು ಗುರುವಾರ ರಾತ್ರಿ ಮಂಗಳೂರು ಕಮಿಷನರ್ ಸುಧೀರ್ ಕುಮಾರ್ ರೆಡ್ಡಿ ಮತ್ತು ಎಸಿಪಿ ರವೀಶ್ ನಾಯಕ್ ನೇತೃತ್ವದ ತಂಡ ಕಾರ್ಯಾಚರಣೆ ನಡೆಸಿ ಬಂಧಿಸಿದೆ ಎಂದು ತಿಳಿದುಬಂದಿದೆ.

ರೋಹನ್ ಸಲ್ಡಾನ ಉದ್ಯಮಿಯೆಂದು ಹೇಳಿಕೊಂಡು ಹೊರರಾಜ್ಯ, ಹೊರಜಿಲ್ಲೆಯ ಶ್ರೀಮಂತ ವ್ಯಕ್ತಿಗಳನ್ನು ಗುರಿಯಾಗಿಸಿ ಜಾಗದ ವ್ಯವಹಾರದ ಜೊತೆಗೆ ಸಾಲ ನೀಡುವುದಾಗಿ ಹೇಳಿ ನಂಬಿಸುತ್ತಿದ್ದ. ಈ ರೀತಿಯಾಗಿ ಆರೋಪಿ ಕೇವಲ 3 ತಿಂಗಳಲ್ಲೇ 45 ಕೋಟಿ ರೂ. ವ್ಯವಹಾರ ಮಾಡಿರುವುದು ಪತ್ತೆಯಾಗಿದೆ. ಕಳೆದ ಅನೇಕ ವರ್ಷಗಳಿಂದ 200 ಕೋಟಿ ರೂ.ಗೂ ಅಧಿಕ ವಂಚನೆ ಮಾಡಿದ್ದಾನೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ಉದ್ಯಮಿ ಹಾಗೂ ಶ್ರೀಮಂತ ವ್ಯಕ್ತಿಗಳನ್ನು ತನ್ನ ಮೋಸದ ಬಲೆಗೆ ಬೀಳಿಸುತ್ತಿದ್ದ ಆರೋಪಿ ತನ್ನ ಜಪ್ಪಿನಮೊಗರುವಿನ ಐಷಾರಾಮಿ ಬಂಗಲೆಗೆ ಕರೆದು ವ್ಯವಹಾರ ನಡೆಸುತ್ತಿದ್ದ. ಈತ 5ರಿಂದ 100 ಕೋಟಿ ರೂ.ವರೆಗೆ ವ್ಯವಹಾರ ಕುದುರಿಸಿಕೊಳ್ಳುತ್ತಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.

ಆರಂಭಿಕ ಮಾತುಕತೆ ಬಳಿಕ ಉದ್ಯಮಿಗಳಿಂದ 50-100 ಕೋಟಿ ರೂ. ವ್ಯವಹಾರ ಅಥವಾ ಅದಕ್ಕಿಂತ ದೊಡ್ಡ ಮೊತ್ತದ ವ್ಯವಹಾರಕ್ಕೆ 5-10 ಕೋಟಿ ರೂ. ಸ್ಟ್ಯಾಂಪ್ ಡ್ಯೂಟಿ ಹಣ ಪಡೆದು ವ್ಯವಹಾರ ನಡೆಸಿ ತಾನು ನಿರೀಕ್ಷೆ ಮಾಡಿದಷ್ಟು ಹಣ ವಸೂಲಿಯಾದ ಬಳಿಕ ನಾನಾ ನೆಪ ಹೇಳಿ ಉದ್ಯಮಿಗಳಿಂದ ತಪ್ಪಿಸಿಕೊಳ್ಳುತ್ತಿದ್ದ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ಆರೋಪಿಯು ತನ್ನ ಮೋಸದ ಬಲೆಗೆ ಬಿದ್ದವರಿಂದ 50 ಲಕ್ಷ ರೂ.ನಿಂದ ನಾಲ್ಕು ಕೋಟಿ ರೂ.ವರೆಗೆ ಪಡೆದು ಆಮೇಲೆ ಯಾರಿಗೂ ಕಾಣದಂತೆ ನಿಗೂಢವಾಗಿ ತಪ್ಪಿಸಿಕೊಳ್ಳುತ್ತಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.

ಆರೋಪಿಯ ಮನೆ ಮಾಯಾಲೋಕ

ಆರೋಪಿಯ ಮನೆಯಲ್ಲಿ ಬೆಲೆಬಾಳುವ ಗಿಡಗಳು, ಐಷಾರಾಮಿ ಶಾಂಪೇನ್‌ಗಳು, ಮಾದಕ ಪೇಯಗಳ ದಾಸ್ತಾನು ಕಂಡು ಪೊಲೀಸರೇ ದಂಗಾಗಿದ್ದಾರೆ.

ಭವ್ಯ ಬಂಗಲೆಯಂತಿರುವ ಆರೋಪಿಯ ಮನೆಯಲ್ಲಿ ಒಳಗಿಂದೊಳಗೆ ಐಷಾರಾಮಿ ವ್ಯವಸ್ಥೆಯ ಜೊತೆಗೆ ಅಡಗು ತಾಣಗಳು ಅಲ್ಲಲ್ಲಿ ಸಿಸಿಟಿವಿ ಕ್ಯಾಮೆರಾ ವ್ಯವಸ್ಥೆ ಇದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.


Spread the love
Subscribe
Notify of

0 Comments
Inline Feedbacks
View all comments