ಮಂಗಳೂರು: ಭಾರೀ ಮಳೆಗೆ ಸರ್ಕ್ಯೂಟ್ ಹೌಸ್ ಬಳಿ ಗುಡ್ಡ ಕುಸಿತ
ಮಂಗಳೂರು: ಜಿಲ್ಲೆಯಲ್ಲಿ ಧಾರಾಕಾರವಾಗಿ ಸುರಿದ ಮಳೆ ಹಿನ್ನೆಲೆಯಲ್ಲಿ ಮಂಗಳೂರು ನಗರದ ಅಲ್ಲಲ್ಲಿ ಜನಜೀವನ ಅಸ್ತವ್ಯಸ್ತಗೊಂಡಿದೆ. ಸರ್ಕ್ಯೂಟ್ ಹೌಸ್ – ಬಿಜೈ ಬಳಿ ತಡರಾತ್ರಿ ಗುಡ್ಡ ಕುಸಿದು ರಸ್ತೆಗೆ ಬಿದ್ದು ಸಂಚಾರ ವ್ಯವಸ್ಥೆಗೆ ತೊಂದರೆ ಆಗಿದೆ.
ದ.ಕ.ಜಿಲ್ಲೆಯ ನಗರ ಮತ್ತು ಗ್ರಾಮಾಂತರ ಪ್ರದೇಶಗಳಲ್ಲಿ ಭಾರೀ ಮಳೆಯಾಗಿದೆ. ಬುಧವಾರ ರಾತ್ರಿ ಬಿರುಸು ಪಡೆದ ಮಳೆ ಈಗಲೂ ಮುಂದುವರಿದಿದೆ. ಕೆಲವಡೆ ಮನೆಗಳಿಗೂ ಹಾನಿಯಾಗಿದೆ.
ಜಿಲ್ಲಾಧಿಕಾರಿ ದರ್ಶನ್ ಎಚ್ ವಿ ಅವರು ಬುಧವಾರ ರಾತ್ರಿ ಬಿಜೈ ಬಟ್ಟಗುಡ್ಡ, ಆರ್ಯಸಮಾಜ ರಸ್ತೆ, ಪಂಪ್‌ವೆಲ್ , ಮಾಲೆಮಾರ್, ಕಾವೂರು ಉಲ್ಲಾಸ ನಗರ, ಕೊಟ್ಟಾರ ಚೌಕಿ ಮತ್ತಿತರ ಕಡೆಗಳಲ್ಲಾದ ಮಳೆ ಹಾನಿ ಪ್ರದೇಶಕ್ಕೆ ಭೇಟಿ ನೀಡಿ ಪರಿಶೀಲಿಸಿದರು.
ಭಾರೀ ಮಳೆಗೆ ಉಳ್ಳಾಲದಲ್ಲಿ ಹಲವು ಮನೆಗಳು ಜಲಾವೃತ; ಜನರ ಸ್ಥಳಾಂತರ
ಉಳ್ಳಾಲ: ಕಳೆದ ಕೆಲವು ದಿನಗಳಿಂದ ಸುರಿಯುತ್ತಿರುವ ಭಾರೀ ಮಳೆ ಪರಿಣಾಮ ಉಳ್ಳಾಲದಲ್ಲಿ ಕೆಲವು ಮನೆಗಳಿಗೆ ನೀರು ನುಗ್ಗಿ ಹಾನಿಯಾಗಿದೆ. ಸುಮಾರು 100 ಮನೆಗಳಿಗೆ ನೀರು ನುಗ್ಗಿದೆ ಎಂದು ಅಂದಾಜಿಸಲಾಗಿದೆ.
ಕಲ್ಲಾಪು ಬಳಿ ಕೆಲವು ಮನೆಗಳು ಜಲಾವೃತವಾಗಿವೆ. ರೆಂಜಾಡಿ ಮನೆ ಸಮೀಪ ಗುಡ್ಡ ಜರಿದು ಬಿದ್ದಿದ್ದು, ಸಮೀಪದಲ್ಲಿ ಮನೆ ಇದ್ದರೂ ಯಾವುದೇ ಹಾನಿಯಾದ ಬಗ್ಗೆ ವರದಿಯಾಗಿಲ್ಲ. ಈ ಕುಟುಂಬ ರಾತ್ರಿ ವೇಳೆಯೇ ಸ್ಥಳಾಂತರಗೊಂಡಿದೆ.
ಮಂಜನಾಡಿ ಗ್ರಾಮದ ಉರುಮನೆಯ ಎಂ.ಎಚ್ ಬಾವ ಅವರ ಮನೆಯ ಕಾಂಪೌಂಡ್ ಕುಸಿದು ಬಿದ್ದಿದ್ದು, ಮನೆ ಅಪಾಯದಲ್ಲಿ ಇದೆ.
ತೊಕ್ಕೊಟ್ಟು ರಾಷ್ಟ್ರೀಯ ಹೆದ್ದಾರಿ ಯಲ್ಲಿ ಕೃತಕ ನೆರೆ ಆವರಿಸಿ ಸಂಚಾರಕ್ಕೆ ಅಡ್ಡಿಯಾಗಿದೆ. ಉಳ್ಳಾಲದಲ್ಲಿ ಜಲಾವೃತಗೊಂಡ ಮನೆಗಳ ಕುಟುಂಬಸ್ಥರು ರಾತ್ರಿ ವೇಳೆ ಸ್ಥಳಾಂತರಗೊಂಡಿದ್ದಾರೆ.
ಘಟನಾ ಸ್ಥಳಕ್ಕೆ ಉಳ್ಳಾಲ ತಾಲೂಕು ತಹಶೀಲ್ದಾರ್, ಕಂದಾಯ ನಿರೀಕ್ಷಕ ಪ್ರಮೋದ್, ಗ್ರಾಮಕರಣಿಕರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.