ಮಂಗಳೂರು: ಮಂತ್ರಿಗಿರಿಗೆ ಪೂಜಾರಿ ಬೆನ್ನಿಗೆ ಬಿದ್ದದ್ದು ಮೊಯ್ಲಿ ; ಜನಾರ್ದನ ಪೂಜಾರಿಯಿಂದ ಮೊಯ್ಲಿಗೆ ತಿರುಗೇಟು

Spread the love

ಮಂಗಳೂರು: ಜನಾರ್ದನ ಪೂಜಾರಿಯವರನ್ನು ರಾಜಕೀಯವಾಗಿ ಬೆಳಿಸಿದ್ದು ತಾನು ಎಂಬ ಮಾಜಿ ಮುಖ್ಯಮಂತ್ರಿ ವೀರಪ್ಪ ಮೊಯ್ಲಿ ಮಾತಿಗೆ ಕಾಲವೇ ಉತ್ತರ ನೀಡಲಿದೆ ಎಂದು ಪೂಜಾರಿ ತಿರುಗೇಟು ನೀಡಿದ್ದಾರೆ.

Poojary-peace-meet-16092015 (10)

ನಗರದಲ್ಲಿ ಬುಧವಾರ ಸುದ್ದಿಗೋಷ್ಟಿ ನಡೆಸಿದ ಅವರು ಮೊಯ್ಲಿ ಪ್ರಾಯದಲ್ಲಿ ತನಗಿಂತ ಚಿಕ್ಕವರಾಗಿದ್ದು, ಬೆಳೆದಿರುವುದು ಕಾರ್ಕಳದಲ್ಲಿಯಾದರೆ ತಾನು ಮಂಗಳೂರಿನಲ್ಲಿ ವಕೀಲ ವೃತ್ತಿ ಮಾಡಿಕೊಂಡಿದ್ದೆ. ಗುಂಡುರಾವ್ ಮುಖ್ಯಮಂತ್ರಿಯಾಗಿದ್ದ ವೇಳೆ ಅರ್ಥ ಮಂತ್ರಿ ಮಾಡಿ ಎಂದು ನನ್ನಲ್ಲಿ ಬೇಡಿಕೊಂಡದ್ದು ವೀರಪ್ಪ ಮೊಯ್ಲಿ. ತಾನು ಇಂದಿರಾಗಾಂಧಿಯವರಿಗೆ ಆಪ್ತನಾಗಿದ್ದ ಕಾರಣಕ್ಕೆ ನನಗೆ ಮಂತ್ರಿ ಹುದ್ದೆ ಲಭಿಸಿತು ಮೊಯ್ಲಿಯವರಿಗೆ ಕೈತಪ್ಪಿತು.

ಸುಖಾ ಸುಮ್ಮನೆ ನನ್ನ ಬಾಯಿಗೆ ಕೋಲು ಹಾಕಿ ನನ್ನನ್ನು ಕೆಣಕಿದರೆ ವೀರಪ್ಪ ಮೋಯ್ಲಿ ಬೆಳೆದು ಬಂದ ಎಲ್ಲಾ ಜಾತಕವನ್ನು ನಾನು ಹೊರಹಾಕಬೇಕಾದಿತು. ನೇತ್ರಾವತಿ ವಿಚಾರದಲ್ಲಿ ತಾವು ಹುಟ್ಟಿ ಬೆಳೆದ ಜಿಲ್ಲೆಗೆ ಅನ್ಯಾಯ ಮಾಡಬೇಡಿ ಎಂದು ನಾನು ಹೇಳಿದ್ದು ತಪ್ಪಾ? ಎಂದು ಪ್ರಶ್ನಿಸಿದ್ದಾರೆ.

ನಾನು ನನ್ನ ರಾಜಕೀಯ ಜೀವನದಲ್ಲಿ ಸತ್ಯ ಹೇಳಿದ ಪರಿಣಾಮವಾಗಿಯೇ ಅರ್ಧ ಸತ್ತಿದ್ದೇನೆ ಹಾಗೆಂದು ನಾನು ನಿಮ್ಮ ಮಾತನ್ನು ಕೇಳಿ ಸತ್ಯ ಹೇಳುವುದನ್ನು ನಿಲ್ಲಿಸುವುದಿಲ್ಲ ಎಂದು ಖಾರವಾಗಿಯೇ ಮೊಯ್ಲಿಗೆ ತಿರುಗೇಟು ನೀಡಿದ್ದಾರೆ. ನಾವು ದಕ್ಷಿಣ ಕನ್ನಡದವರು ನೀರು ಕೊಡುವುದಿಲ್ಲ ಎಂದು ಎಲ್ಲಿಯೂ ಹೇಳಿಲ್ಲ ನೇತ್ರಾವತಿ ಬದಲಾಗಿ ಮೇಕೆ ದಾಟು ಯೋಜನೆಯನ್ನು ಜಾರಿಗೆ ತನ್ನಿ ಅಥವಾ ಹಾರಂಗಿ ಹೇಮಾವತಿ ನದಿಗಳಿಗೆ ಎರಡು ಕಡೆ ಪೈಪ್ ಹಾಕಿ ನೀರು ಕೊಡಿ ಬದಲಾಗಿ ನಮ್ಮ ಜಿಲ್ಲೆಯ ಜನರನ್ನು ಬಲಿಕೊಡಬೇಡಿ ಎಂದಿದ್ದಾರೆ.

ವೀರಪ್ಪ ಮೊಯ್ಲಿ ಮತ್ತು ಸದಾನಂದ ಗೌಡರು ಅಧಿಕಾರ ಮತ್ತು ಸೀಟಿನ ಆಸೆಗಾಗಿ ಜಿಲ್ಲೆಯನ್ನು ಬಿಟ್ಟು ಹೋಗಿ ಬೇರೆ ಜಿಲ್ಲೆಯಲ್ಲಿ ಮರುಜನ್ಮ ಪಡೆದು ಈಗ ನಮ್ಮ ಜಿಲ್ಲೆಗೆ ಅನ್ಯಾಯ ಮಾಡುವುದು ತಪ್ಪು. ಜಿಲ್ಲೆಯ ಜನ ಈಗಾಗಲೇ ಎದ್ದಿದ್ದಾರೆ, ಆದರೆ ಜಿಲ್ಲೆಯ ಜನಪ್ರತಿನಿಧಿಗಳು ಇನ್ನೂ ಎಚ್ಚರವಾಗಿಲ್ಲ, ಒಂದು ವೇಳೆ ಜನಪ್ರತಿನಿಧಿಗಳು ಇನ್ನೂ ಎಚ್ಚರವಾಗದೆ ಹೋದರೆ ನಾಳೆ ಜಿಲ್ಲೆಯ ಜನ ನಿಮಗೂ ಬುದ್ದಿ ಕಲಿಸುತ್ತಾರೆ ಆದ್ದರಿಂದ ಜಿಲ್ಲೆಯ ಎಲ್ಲಾ ಜನಪ್ರತಿನಿಧಿಗಳು ಎತ್ತಿನ ಹೊಳೆ ವಿಚಾರದಲ್ಲಿ ಪಕ್ಷ ಭೇಧ ಮರೆತು ವೀರೋಧಿಸಿ ಎಂದು ಪೂಜಾರಿ ಹೇಳಿದರು.


Spread the love