ಮಂಗಳೂರು ವಿವಿಯಲ್ಲಿ ಚಿನ್ನದ ಪದಕ ಪಡೆದ ಇನಾಯತ್ ಗೆ ಎಸ್ ಐ ಓ ದಿಂದ ಸನ್ಮಾನ

Spread the love

ಮಂಗಳೂರು ವಿವಿಯಲ್ಲಿ ಚಿನ್ನದ ಪದಕ ಪಡೆದ ಇನಾಯತ್ ಗೆ ಎಸ್ ಐ ಓ ದಿಂದ ಸನ್ಮಾನ
ಮಂಗಳೂರು: ಇಂದು ಮುಸ್ಲಿಂ ಸಮುದಾಯದಲ್ಲಿ ಹೆಣ್ಣುಮಕ್ಕಳ ವಿದ್ಯಾಭ್ಯಾಸಕ್ಕೆ ಕೊಡುವಷ್ಟು ಪ್ರಾಮುಖ್ಯತೆ ಗಂಡು ಮಕ್ಕಳಿಗೆ ನೀಡುತ್ತಿಲ್ಲ. ಇದರಿಂದಾಗಿ ಮುಸ್ಲಿಂ ಸಮುದಾಯದ ಹೆಣ್ಣು-ಗಂಡು ಮಕ್ಕಳ ವಿದ್ಯಾಭ್ಯಾಸದ ಮಟ್ಟದಲ್ಲಿ ಗಣನೀಯವಾದ ಏರಿಳಿಕೆ ಕಂಡು ಬರುತ್ತಿದೆ. ಗಂಡು ಮಕ್ಕಳು ಪದವಿ ಪೂರೈಸದೆ ವಿದ್ಯಾಭ್ಯಾಸವನ್ನು ಅರ್ಧದಲ್ಲಿ ಮೊಟಕುಗೊಳಿಸುತ್ತಿರುವ ಬಗ್ಗೆ ಸಮುದಾಯದ ನಾಯಕರು, ಧಾರ್ಮಿಕ ಮುಖಂಡರು ಗಂಭೀರ ಚಿಂತನೆ ನಡೆಸಬೇಕಿದೆ ಎಂದು ಸ್ಟೂಡೆಂಟ್ಸ್ ಇಸ್ಲಾಮಿಕ್ ಆರ್ಗನೈಝೇಶನ್ ಆಫ್ ಇಂಡಿಯಾ(ಎಸ್ ಐ ಓ) ದ.ಕ. ಜಿಲ್ಲಾಧ್ಯಕ್ಷ ತಲ್ಹಾ ಇಸ್ಮಾಯೀಲ್ ಹೇಳಿದರು.
ಮಂಗಳೂರು ವಿವಿಯಲ್ಲಿ ಅರ್ಥಶಾಸ್ತ್ರ ವಿಭಾಗದಲ್ಲಿ ಚಿನ್ನದ ಪದಕ ಪಡೆದ ಇನಾಯತ್ ಹಸನ್ ಗೆ ಎಸ್ ಐ ಓ ಬೆಂಗ್ರೆ ಶಾಖೆಯ ಕಚೇರಿಯಲ್ಲಿ ಆಯೋಜಿಸಲಾಗಿದ್ದ ಸನ್ಮಾನ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡುತ್ತಿದ್ದರು.
ಬೆಂಗ್ರೆಯಂತಹಾ ಹಿಂದುಳಿದ ಪ್ರದೇಶದ ಬಡ ಯುವಕನಾಗಿರುವ ಇನಾಯತ್ ಹಸನ್ ಅರ್ಥಶಾಸ್ತ್ರದಲ್ಲಿ ಚಿನ್ನದ ಪದಕ ಗಳಿಸಿರುವುದು ದೊಡ್ಡ ಸಾಧನೆಯಾಗಿದೆ. ಎಷ್ಟೇ ಕಷ್ಟವಿದ್ದರೂ ಸಾಧನೆಗೈಯ್ಯುವ ಮೂಲಕ ಊರಿಗೆ ಕೀರ್ತಿ ತಂದಿದ್ದಾರೆ. ಇವರನ್ನು ಗುರುತಿಸುವ ಕೆಲಸ ಮಾಧ್ಯಮಗಳು ಮಾಡಬೇಕು. ಅದು ಊರಿಗೂ ಖುಷಿಯ ವಿಚಾರ ಎಂದು ತಲ್ಹಾ ಅಭಿಪ್ರಾಯಿಸಿದರು.
ಬಳಿಕ ಸನ್ಮಾನ ಸ್ವೀಕರಿಸಿ ಮಾತನಾಡಿದ ಇನಾಯತ್ ಹಸನ್, ಛಲದೊಂದಿಗೆ ಹಾಗೂ ಕಠಿಣ ಪರಿಶ್ರಮ ನಡೆಸಿದಾಗ ಯಶಸ್ಸು ನಮ್ಮದಾಗುತ್ತದೆ ಎಂದ ಅವರು, ಮನೆಯಲ್ಲಿ ಬಡತನದಿಂದಾಗಿ ಕಷ್ಟವಿದ್ದರೂ, ಕಲಿಯುವ ಸಂದರ್ಭದಲ್ಲಿ ಪಾರ್ಟ್ ಟೈಂ ಕೆಲಸ ಮಾಡಿ ಕಲಿಕೆಗೂ ಮಹತ್ವ ಕೊಟ್ಟೆ. ದೇವನ ಅನುಗ್ರಹದಿಂದ ಹಾಗೂ ಹಲವರ ಸಹಕಾರದಿಂದ ನನಗೆ ಇಂದು ಅರ್ಥಶಾಸ್ತ್ರದಲ್ಲಿ ಚಿನ್ನದ ಪದಕ ದೊರೆಯುವಂತಾಯಿತು ಎಂದು ತಮ್ಮ ಅನುಭವ ಹೇಳಿಕೊಂಡರು.
ಈ ಸಂದರ್ಭದಲ್ಲಿ ಎಸ್ ಐ ಓ ಮಂಗಳೂರು ನಗರ ಕಾರ್ಯದರ್ಶಿ ಮುಬೀನ್ ಬೆಂಗ್ರೆ, ಹಸನ್ ಮುಹಾಝ್, ತಿಹಾಮ್ ಬೆಂಗ್ರೆ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.

Spread the love