ಮಂಗಳೂರು: ಸಾಮಾಜಿಕ ಜಾಲತಾಣದಲ್ಲಿ ಸುಳ್ಳು, ಕೋಮು ಪ್ರಚೋದಕ ಸಂದೇಶ ಹಂಚಿದ ಇಬ್ಬರು ಬಂಧನ
ಮಂಗಳೂರು: ಸಾಮಾಜಿಕ ಜಾಲತಾಣವಾದ ವಾಟ್ಸಾಪ್ ಮೂಲಕ ಬ್ಯಾರಿ ಭಾಷೆಯಲ್ಲಿ ಸಮಾಜದಲ್ಲಿ ಕೋಮು ಗಲಭೆಗೆ ಕಾರಣವಾಗುವಂತಹ ಸುಳ್ಳು ಮತ್ತು ಆತಂಕಕಾರಿ ಸಂದೇಶ ಹಂಚಿದ ಇಬ್ಬರನ್ನು ಮಂಗಳೂರು ನಗರ ಪೊಲೀಸರು ಬಂಧಿಸಿದ್ದಾರೆ.
ದಿನಾಂಕ 15-10-2025 ರಂದು ಓರ್ವ ವ್ಯಕ್ತಿ ವಾಯ್ಸ್ ಮೆಸೇಜ್ ಮೂಲಕ “ಒಂದು ಗ್ಯಾಂಗ್ ಇದೆ, ಯಾರೂ careless ಮಾಡಬೇಡಿ… ಕಿನ್ನಿಗೋಳಿ, ಭಟ್ಟಕೋಡಿ ಬಾರ್‌ನಲ್ಲಿ ಕುಡುಕರ ಗ್ಯಾಂಗ್ ಇದೆ, ಜನರು ಎಚ್ಚರಿಕೆಯಿಂದ ಇರಬೇಕು” ಎಂಬಂತ ಸಂದೇಶವನ್ನು ಪ್ರಸಾರ ಮಾಡಿದ್ದಾನೆ.
ಈ ಸಂದೇಶವು ಸಾಮಾಜಿಕ ಅಶಾಂತಿ ಮತ್ತು ಆತಂಕ ಉಂಟುಮಾಡುವ ಉದ್ದೇಶದಿಂದ ಶೇರ್ ಮಾಡಲ್ಪಟ್ಟಿದ್ದು, ಸಾರ್ವಜನಿಕರಲ್ಲಿ ಗೊಂದಲ ಹಾಗೂ ಕೋಮು ಭಾವನೆಗಳನ್ನು ಪ್ರಚೋದಿಸುವಂತಿತ್ತು ಎಂದು ಪೊಲೀಸರು ತಿಳಿಸಿದ್ದಾರೆ.
ಈ ಕುರಿತು ಮುಲ್ಕಿ ಪೊಲೀಸ್ ಠಾಣೆಯಲ್ಲಿ ಅ.ಕ್ರ.108/2025, ಕಲಂ 353(2) ಬಿಎನ್ಎಸ್ ಪ್ರಕಾರ ಪ್ರಕರಣ ದಾಖಲಾಗಿದ್ದು, ಇಬ್ಬರನ್ನು ಬಂಧಿಸಲಾಗಿದೆ.
ಬಂಧಿತರು:1️⃣ ಮೊಹಮ್ಮದ್ ಅನ್ವರ್ (44), ತಂದೆ ಟಿ.ಎ. ಮೊಯಿದ್ದಿನ್, ನಿವಾಸಿ – ಮೆಹನಾಜ್ ಮಂಜಿಲ್, ಶಾಂತಿನಗರ, ಗುತ್ತಕಾಡು, ತಾಳಿಪಾಡಿ ಗ್ರಾಮ.
2️⃣ ತಾಯಿರ್ ನಕಾಶ್ (42), ತಂದೆ ಟಿ.ಎ. ಮೊಯಿದ್ದಿನ್, ನಿವಾಸಿ – ಮೆಹನಾಜ್ ಮಂಜಿಲ್, ಶಾಂತಿನಗರ, ಗುತ್ತಕಾಡು, ತಾಳಿಪಾಡಿ ಗ್ರಾಮ.
ಪೊಲೀಸರು ಇಬ್ಬರನ್ನೂ ದಸ್ತಗಿರಿ ಮಾಡಿಕೊಂಡು ನ್ಯಾಯಾಂಗ ಕ್ರಮ ಕೈಗೊಂಡಿದ್ದಾರೆ.
ಮಂಗಳೂರು ನಗರ ಪೊಲೀಸ್ ಘಟಕವು ಸಾರ್ವಜನಿಕರಿಗೆ ಎಚ್ಚರಿಕೆ ನೀಡಿದ್ದು — “ಸೋಷಿಯಲ್ ಮೀಡಿಯಾದಲ್ಲಿ ಹರಿದಾಡುವ ಸುಳ್ಳು, ಆತಂಕಕಾರಿ ಅಥವಾ ಕೋಮು ಪ್ರಚೋದಕ ಸಂದೇಶಗಳಿಗೆ ಗಮನ ಕೊಡಬಾರದು. ಇಂತಹ ಸಂದೇಶಗಳನ್ನು ಫಾರ್ವರ್ಡ್ ಮಾಡುವುದರಿಂದ ಕಾನೂನು ಕ್ರಮ ಎದುರಿಸಬೇಕಾಗುತ್ತದೆ.”
ಪೊಲೀಸರು ಇಂತಹ ಸಂದೇಶಗಳನ್ನು ತಕ್ಷಣವೇ ಸಂಬಂಧಿತ ಠಾಣೆಗೆ ಕಳುಹಿಸಿ ಮಾಹಿತಿ ನೀಡುವಂತೆ ಸಾರ್ವಜನಿಕರಲ್ಲಿ ಮನವಿ ಮಾಡಿದ್ದಾರೆ.