ಮಕ್ಕಳ ತಜ್ಞೆ ಅಂಜಲಿ ಎಸ್. ರಾಜ್ ರವರಿಗೆ “ಸಿಐಎಲ್ ವುಮನ್ ಆಫ್ ಸಬ್‌ಸ್ಟೆನ್ಸ್ 2024” ಗೌರವ
ಮಂಗಳೂರು: ನಗರ ಮೂಲದ ಎನ್‌ಜಿಒ ಸೆಂಟರ್ ಫಾರ್ ಇಂಟಿಗ್ರೇಟೆಡ್ ಲರ್ನಿಂಗ್‌ನಿಂದ 2024 ನೇ ಸಾಲಿನ “ಸಿಐಎಲ್ ವುಮನ್ ಆಫ್ ಸಬ್‌ಸ್ಟೆನ್ಸ್ 2024” ಪ್ರಶಸ್ತಿಯನ್ನು ಬೆಂಗಳೂರಿನ ಶಿಶುಪಾಲನಾ ತಜ್ಞೆ ನಿಯೋನಾಟಾಲಜಿಸ್ಟ್ ಡಾ ಅಂಜಲಿ ಎಸ್. ರಾಜ್ ರವರಿಗೆ ನೀಡಲಾಗುವುದು.
ಅಂತರಾಷ್ಟ್ರೀಯ ಮಹಿಳಾ ದಿನಾಚರಣೆಯ ಮುನ್ನಾ ದಿನದಂದು ಸಿಐಎಲ್ ಕಾರ್ಯನಿರ್ವಾಹಕ ನಿರ್ದೇಶಕಿ ಸಚಿತಾ ನಂದಗೋಪಾಲ್ ಅವರು ಈ ಮಾನ್ಯತೆಯನ್ನು ಘೋಷಿಸಿದ್ದಾರೆ.
ಡಾ ಅಂಜಲಿ ಎಸ್. ರಾಜ್ ಪ್ರಸ್ತುತ ಬೆಂಗಳೂರು ಬ್ಯಾಪ್ಟಿಸ್ಟ್ ಆಸ್ಪತ್ರೆಯಲ್ಲಿ ನಿಯೋನಾಟಾಲಜಿಯಲ್ಲಿ ಕನ್ಸಲ್ಟೆಂಟ್ ಸೂಪರ್ ಸ್ಪೆಷಲಿಸ್ಟ್ ಆಗಿದ್ದಾರೆ.
ಮಹಿಳೆಯರಿಗೆ ಸ್ಪೂರ್ತಿ ಯಾಗಿರುವ ಇವರು ತಮ್ಮ ವೈದ್ಯಕೀಯ ಶೈಕ್ಷಣಿಕ ಉನ್ನತಿಯೊಂದಿಗೆ ಸಾಂಸಾರಿಕ ಜೀವನದ ಸಮತೋಲನವನ್ನು ಯಶಸ್ವಿಯಾಗಿ ನಿರ್ವಹಿಸುವುದಕ್ಕೆ ಉದಾಹರಣೆಯಾಗಿರುವುದರಿಂದ ಇವರನ್ನು CIL ಸಂಸ್ಥೆಯು ಈ ವರ್ಷದ ಪ್ರಶಸ್ತಿಗಾಗಿ ಪರಿಗಣಿಸಿದೆ.
ಈ ಮನ್ನಣೆಯು ಈ ವರ್ಷದ ಅಂತರಾಷ್ಟ್ರೀಯ ಮಹಿಳಾ ದಿನದ ಥೀಮ್ “ಇನ್‌ಸ್ಪೈರ್ ಇನ್‌ಕ್ಲೂಷನ್” ನ ಸಾಲಿನಲ್ಲಿದೆ.
ಎರಡು ಪುಟ್ಟ ಹೆಣ್ಣುಮಕ್ಕಳ ತಾಯಿಯಾಗಿರುವ ಡಾ. ಅಂಜಲಿ, ಇತ್ತೀಚೆಗೆ ಬೆಂಗಳೂರಿನ ಸೇಂಟ್ ಜಾನ್ಸ್ ಆಸ್ಪತ್ರೆ ಮತ್ತು ಸಂಶೋಧನಾ ಕೇಂದ್ರದಿಂದ ಡಿಎಂ ನಿಯೋನಾಟಾಲಜಿಯಲ್ಲಿ ಚಿನ್ನದ ಪದಕದೊಂದಿಗೆ ವಿಶ್ವವಿದ್ಯಾನಿಲಯದಲ್ಲಿ ಅಗ್ರಸ್ಥಾನ ಪಡೆದಿದ್ದಾರೆ.
ಇವರು ವಿಜಯನಗರ ಇನ್‌ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸಸ್, ಬಳ್ಳಾರಿಯಲ್ಲಿ MBBS ಪದವಿ ಯನ್ನು ಗಳಿಸಿ ತದನಂತರ 2014 ರಲ್ಲಿ ಅಹಮದಾಬಾದ್‌ನ B J ವೈದ್ಯಕೀಯ ಕಾಲೇಜಿನಲ್ಲಿ ತಮ್ಮ MD (ಪೀಡಿಯಾಟ್ರಿಕ್ಸ್) ನಲ್ಲಿ ಚಿನ್ನದ ಪದಕ ವಿಜೇತೆ ಮತ್ತು ಗುಜರಾತ್ ವಿಶ್ವವಿದ್ಯಾಲಯದ ಟಾಪರ್ ಆಗಿದ್ದರು. ಮುಂಬೈನ ಬಾಯಿ ಜೆರ್ಬೈ ವಾಡಿಯಾ ಹೆರಿಗೆ ಮತ್ತು ಮಕ್ಕಳ ಆಸ್ಪತ್ರೆಯಿಂದ ನಿಯೋನಾಟಾಲಜಿಯಲ್ಲಿ IAP ಫೆಲೋಶಿಪ್ ನಲ್ಲಿ ಚಿನ್ನದ ಪದಕವನ್ನು ಗಳಿಸಿ, DNB (ಪೀಡಿಯಾಟ್ರಿಕ್ಸ್) ಅನ್ನು ಪೂರ್ಣಗೊಳಿಸಿದರು.
ಅವರು ಹಲವಾರು ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ವಿಚಾರ ಸಂಕೀರ್ಣ ಹಾಗೂ ಕಾನ್ಫರೆನ್ಸ್ ಗಳಲ್ಲಿ ತಮ್ಮ ಸಂಶೋಧನಾ ಪ್ರಬಂಧಗಳನ್ನು ಮಂಡಿಸಿರುತ್ತಾರೆ ಹಾಗೂ ಹಲವು ವೈದ್ಯಕೀಯ ಜರ್ನಲ್ ಗಳಲ್ಲಿ ಅವರ ಅಧ್ಯಯನಗಳು ಪ್ರಕಟಗೊಂಡಿದೆ.
ಕೇಂದ್ರೀಯ ವಿದ್ಯಾಲಯ, ಕುದುರೆಮುಖ ಇದರ ಹಳೆಯ ವಿದ್ಯಾರ್ಥಿನಿಯಾಗಿರುವ ಅಂಜಲಿ ಅವರು ಕುದುರೆಮುಖ ಕಬ್ಬಿಣದ ಅದಿರು ಕಂಪನಿ ಲಿಮಿಟೆಡ್ (KIOCL) ನ ನಿವೃತ್ತ ಉದ್ಯೋಗಿ ಶ್ರೀ ಸುಂದರ್ ರಾಜ್ ಮತ್ತು ಶ್ರೀಮತಿ ರಾಜಲಕ್ಷ್ಮಿ ಎಸ್. ರಾಜ್ ಅವರ ಪುತ್ರಿ. ಅವರ ಕಿರಿಯ ಸಹೋದರಿ ಅಕ್ಷತಾ ಆರ್. ರಾಜ್ ಅವರು ಕರ್ನಾಟಕ ಪವರ್ ಟ್ರಾನ್ಸ್ಮಿಷನ್ ಕಾರ್ಪೊರೇಷನ್ ಲಿಮಿಟೆಡ್ (ಕೆಪಿಟಿಸಿಎಲ್) ನಲ್ಲಿ ಸಹಾಯಕ ಇಂಜಿನಿಯರ್ ಆಗಿ ಸೇವೆ ಸಲ್ಲಿಸುತ್ತಿದ್ದಾರೆ.
ಸೇಂಟ್ ಜಾನ್ಸ್, ಬೆಂಗಳೂರು ಆಸ್ಪತ್ರೆಯಲ್ಲಿ ಕ್ರಿಟಿಕಲ್ ಕೇರ್ ಮೆಡಿಸಿನ್ ನ ಅಸೋಸಿಯೇಟ್ ಪ್ರೊಫೆಸರ್ ಆಗಿರುವ ಡಾ ನಟೇಶ್ ಪ್ರಭು. ಆರ್ ರವರ ಪತ್ನಿಯಾಗಿ ತನ್ನ ಇಬ್ಬರು ಪುಟ್ಟ ಹೆಣ್ಣು ಮಕ್ಕಳು ಮೇಧಾ ಹಾಗೂ ಆದ್ಯ ಇವರ ಪ್ರೀತಿಯ ತಾಯಿಯಾಗಿರುವರು.
ಅಂಜಲಿ ಅವರನ್ನು “ಸಿಐಎಲ್ ವುಮನ್ ಆಫ್ ಸಬ್‌ಸ್ಟೆನ್ಸ್” ಎಂದು ಗುರುತಿಸುವುದು ಯಾಕೆಂದರೆ ಅವರು ಉನ್ನತ ಶ್ರೇಣಿಯ ವೈದ್ಯೆಯಾಗಿ, ವೈದ್ಯಕೀಯ ಉನ್ನತ ಶಿಕ್ಷಣವನ್ನು ಮುಂದುವರೆಸಿಕೊಂಡು ಅದರ ಜೊತೆಗೆ ತನ್ನ ಕುಟುಂಬದ ಜವಾಬ್ದಾರಿಯನ್ನು ಉತ್ತಮ ರೀತಿಯಲ್ಲಿ ತನ್ನ ಪತಿ, ಅತ್ತೆ ಮಾವ ಮತ್ತು ತಂದೆ ತಾಯಿಯವರ ಸಹಕಾರದೊಂದಿಗೆ ಯಶಸ್ವಿ ಯಾಗಿ ನಿಭಾಯಿಸುತ್ತ ಇವರು ಸಮಾಜಕ್ಕೆ, ಮುಖ್ಯವಾಗಿ ಮಹಿಳೆಯರಿಗೆ ಮಾದರಿಯಾಗಿರುವರು ಎಂದು ಸಚಿತ ನಂದಗೋಪಾಲ್ ರವರು ತಿಳಿಸಿದ್ದಾರೆ.
ಈ ಪ್ರಶಸ್ತಿಯನ್ನು 2023 ರಲ್ಲಿ ಸಿ ಐ ಎಲ್ ಸಂಸ್ಥೆಯು ಆರಂಭಿಸಿದ್ದು ಮೊದಲ ಪ್ರಶಸ್ತಿಗೆ ಲೆಫ್ಟಿನೆಂಟ್ ಕಮಾಂಡರ್ ದಿಶಾ ಅಮೃತ್ ಮತ್ತು ಅವರ ಸಹೋದರಿ ಜ್ಯೋತ್ಸ್ನಾ ಅಮೃತ್ ಭಾಜನರಾಗಿರುವರು.