ಮಣಿಪಾಲ: ಬಡವರು ಮತ್ತು ಕೊಳಚೆ ಪ್ರದೇಶದಲ್ಲಿ ವಾಸಿಸುವವರ ಆರೋಗ್ಯಕ್ಕೆ ಹೆಚ್ಚಿನ ಗಮನ ನೀಡಿ ಜಿಲ್ಲಾ ಲಸಿಕಾ ಕಾರ್ಯಪಡೆ ಸಭೆಯಲ್ಲಿ ಜಿಲ್ಲಾಧಿಕಾರಿ ಸೂಚನೆ

Spread the love

ಮಣಿಪಾಲ:   ಜಿಲ್ಲೆಯ ನಗರ ಪ್ರದೇಶಗಳಲ್ಲಿ ವಾಸಿಸುವ ಬಡವರು ಮತ್ತು ಕೊಳಚೆ ಪ್ರದೇಶಗಳಲ್ಲಿ ವಾಸಿಸುವ ವಲಸೆ ಜನರ ಆರೋಗ್ಯದ ಬಗ್ಗೆ ಹೆಚ್ಚಿನ ಒತ್ತು ನೀಡಿ ಅವರಿಗೆ ಆರೋಗ್ಯ ಸೇವೆ ಒದಗಿಸುವುದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಆದ್ಯತೆಯಾಗಲಿ ಎಂದು ಜಿಲ್ಲಾಧಿಕಾರಿ ಡಾ ವಿಶಾಲ್ ಆರ್ ಹೇಳಿದರು.

     ಅವರಿಂದು ಜಿಲ್ಲಾ ಪಂಚಾಯತ್‍ನ ವಿ ಎಸ್ ಆಚಾರ್ಯ ಸಭಾಂಗಣದಲ್ಲಿ ಆಯೋಜಿಸಲಾದ ಉಡುಪಿ ಜಿಲ್ಲಾ ಮಟ್ಟದ ಲಸಿಕಾ ಕಾರ್ಯಪಡೆ ಸಮಿತಿ ಅಧ್ಯಕ್ಷತೆ ವಹಿಸಿ ಮಾತನಾಡುತ್ತಿದ್ದರು.

     ಆರೋಗ್ಯ ಹಾಗೂ ಶೈಕ್ಷಣಿಕ ವಲಯದಲ್ಲಿ ಮುಂಚೂಣಿಯಲ್ಲಿರುವ ಉಡುಪಿ ಜಿಲ್ಲೆಯಲ್ಲಿ ಕಟ್ಟಡ ನಿರ್ಮಾಣ ಕಾರ್ಯದ ವಲಸೆ ಕಾರ್ಮಿಕರ ಆರೋಗ್ಯ , ಮುಖ್ಯವಾಗಿ ತಾಯಿ, ಮಗುವಿನ ಆರೋಗ್ಯದ ಬಗ್ಗೆ ಕಾಳಜಿ ವಹಿಸುವುದು ಆದ್ಯತೆಯಾಗಬೇಕು.

ಜಿಲ್ಲೆಯ ನಗರ ಮತ್ತು ಕ್ಷೇತ್ರವಾರು ಲಸಿಕಾ ಕಾರ್ಯಕ್ರಮದ ಪ್ರಗತಿ, ಇಲ್ಲಿನ ತಾಯಿ ಮರಣ, ಶಿಶು ಮರಣ ಪ್ರಮಾಣ ಜಿಲ್ಲೆಯಲ್ಲಿ ಕಡಿಮೆಯಲ್ಲಿದ್ದರೂ, ವೈದ್ಯಕೀಯ ಸೇವೆ ಅಗತ್ಯವಿರುವ ಕೆಳಮಟ್ಟದ ಜನಸಮೂಹವನ್ನು ನಿಗದಿತ ಗುರಿಗೆ ಸೇರಿಸಿ ಅವರಿಗೆ ಸೇವೆ ನೀಡಲು ಅಧಿಕಾರಿಗಳು ಕ್ರಮಕೈಗೊಳ್ಳಬೇಕು.

    ಮಣಿಪಾಲದ ಕೆಎಂಸಿ ಯ ಕಮ್ಯುನಿಟಿ ಮೆಡಿಸಿನ್ ವಿಭಾಗದವರು ಈ ಬಗ್ಗೆ ಹೊಸ ಸಮೀಕ್ಷೆ ಮಾಡಿ ಹೊಸ ವರದಿ ನೀಡಿದರೆ ಜಿಲ್ಲಾಡಳಿತ ಈ ನಿಟ್ಟಿನಲ್ಲಿ ಕಾರ್ಯೋನ್ಮುಖವಾಗಲು ನೆರವಾಗಲಿದೆ ಎಂದರು.

     ಜಿಲ್ಲಾ ಆರೋಗ್ಯ ಮತ್ತುಕುಟುಂಬ ಕಲ್ಯಾಣಾಧಿಕಾರಿ (ಪ್ರಭಾರ) ಡಾ ರೋಹಿಣಿ ಅವರು ಸಭೆಯಲ್ಲಿ ಮಾತನಾಡಿ, ಎಲ್ಲ ಖಾಸಗಿ ಆಸ್ಪತ್ರೆಗಳು ಎಲ್ಲ ಶಿಶುಗಳಿಗೆ ಹೆಪಟಿಟೀಸ್ ಬಿ 0 ಡೋಸ್ ಲಸಿಕೆ ಹಾಕಬೇಕು ಎಂದು ವಿನಂತಿಸಿದರು. ಈ ಸಂಬಂಧ ಆಯೋಜಿಸಲಾದ ಇಮ್ಯುನೈಸೇಷನ್ ಕಾರ್ಯಾಗಾರದಲ್ಲಿ ಎಲ್ಲರಿಗೂ ಮಾಹಿತಿಯನ್ನೂ ನೀಡಲಾಗಿದೆ. ಜಿಲ್ಲೆಯಲ್ಲಿನ ಎಲ್ಲ ಆರೋಗ್ಯ ಸಹಾಯಕಿಯರು, ವೈದ್ಯಾಧಿಕಾರಿಯವರು, ತಾಲೂಕು ಆರೋಗ್ಯಾಧಿಕಾರಿಗಳು ಹಾಗೂ ಜಿಲ್ಲಾ ಕಾರ್ಯಕ್ರಮ ಅನುಷ್ಠಾನಾಧಿಕಾರಿಗಳು 2 ವರ್ಷದ ಒಳಗಿರುವ ಮಕ್ಕಳಿರುವ ತಲಾ 10 ಮನೆಗಳಿಗೆ ಭೇಟಿ ನೀಡಿ ಶಿಶುಗಳು ಚುಚ್ಚುಮದ್ದು ಪಡೆದ ಬಗ್ಗೆ ಸರ್ವೇ ಮಾಡಿ ವರದಿ ನೀಡಲಿದ್ದಾರೆ ಎಂದರು.

     ಜಿಲ್ಲೆಯ 2 ವರ್ಷದೊಳಗಿನ ಲಸಿಕೆ ಹಾಕದ ಮಕ್ಕಳ ಪಟ್ಟಿಯನ್ನು ತಯಾರಿಸಿ ಚುಚ್ಚುಮದ್ದಿನ ದಿನದಂದು ಮತ್ತು ಸ್ಪೆಷಲ್ ಇಮ್ಯುನೈಸೇಷನ್ ವಾರದಂದು ಸದ್ರಿ ಶಿಶುಗಳಿಗೆ ಸಂಪೂರ್ಣ ಲಸಿಕೆ ನೀಡಲು ಕ್ರಮವಹಿಸುವಂತೆ ವೈದ್ಯಾಧಿಕಾರಿಗಳಿಗೆ ತಿಳಿಸಲಾಗಿದೆ ಎಂದರು.

ಹೆಪಟಿಟೀಸ್ ಬಿ 0 ಲಸಿಕೆ ಯನ್ನು ಹೆರಿಗೆಯಾದ 24 ಗಂಟೆಯೊಳಗೆ ಎಲ್ಲ ಶಿಶುಗಳಿಗೆ ಮತ್ತು ಮೀಸಲ್ಸ್ 1 ನೇ ಡೋಸ್ ಪಡೆಯದ ಶಿಶುಗಳಿಗೆ ಎಂಎಂಆರ್ ಲಸಿಕೆಯನ್ನು 12 ತಿಂಗಳ ಒಳಗೆ ಹಾಕಿಸಬೇಕಿದೆ ಎಂದರು.

ಆರೋಗ್ಯ ಇಲಾಖೆಯ ಕರ್ತವ್ಯಕ್ಕೆ ಪೂರಕವಾಗಿ ಈಗಾಗಲೇ ಅಗತ್ಯ ಡಾಕ್ಟರ್ ಗಳನ್ನು ಮತ್ತು ವಾಹನಗಳನ್ನು ಒದಗಿಸಲಾಗಿದ್ದು, ಅಗತ್ಯ ಜನರಿಗೆ ಉತ್ತಮ ಸೇವೆ ನೀಡುವುದು ಇಲಾಖೆಯ ಧ್ಯೇಯವಾಗಬೇಕು ಎಂದು ಜಿಲ್ಲಾಧಿಕಾರಿಗಳು ಹೇಳಿದರು.

   ಸಮಾಜಕಲ್ಯಾಣ ಇಲಾಖೆ, ಐಟಿಡಿಪಿಯ ಹಾಸ್ಟೆಲ್ ಗಳ ವಿದ್ಯಾರ್ಥಿಗಳಿಗೆ ಸೂಕ್ತ ಆರೋಗ್ಯ ತಪಾಸಣೆ ಮಾಡಿ. ಅವರಿಗೆ ಆರೋಗ್ಯ ಸಲಹೆ ನೀಡಿ. ಅದೇ ರೀತಿ ಗರ್ಭಿಣಿ ಮಹಿಳೆಯರಿಗೆ ಅನಿಮೀಯ (ರಕ್ತಹೀನತೆ) ತಡೆಗೆ ಮುಂಜಾಗ್ರತೆ ವಹಿಸಿ ಕಬ್ಬಿಣಾಂಶ ಕೊಡುವುದರಿಂದ ತಾಯಿ ಮರಣ ಮತ್ತು ಶಿಶು ಮರಣ ತಡೆ ಸಾಧ್ಯ. ಇಂತಹುದರ ಬಗ್ಗೆ ಪೂರ್ವಭಾವಿ ಕ್ರಮಗಳಿಂದ ಹೆರಿಗೆ ವೇಳೆಯ  ಸಾವುಗಳನ್ನು ತಡೆಯಬಹುದು ಎಂದರು.

ಸಭೆಯಲ್ಲಿ ಜಿ.ಪಂ. ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಎಂ. ಕನಗವಲ್ಲಿ, ಆರ್ ಸಿಹೆಚ್ ಡಾಕ್ಟರ್ ಡಾ ರಾಮ ಮತ್ತು ಜಿಲ್ಲೆಯ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯರುಗಳು ಉಪಸ್ಥಿತರಿದ್ದರು.


Spread the love