ಮಣಿ ಅಕಾಡಮಿಯಿಂದ ನಿಕ್ಷಿತ್ ಟಿ ಯವರಿಗೆ 2017 ರ ಯುವ ಕಲಾಮಣಿ ಪ್ರಶಸ್ತಿ

Spread the love

ಮಣಿ ಅಕಾಡಮಿಯಿಂದ ನಿಕ್ಷಿತ್ ಟಿ ಯವರಿಗೆ 2017 ರ ಯುವ ಕಲಾಮಣಿ ಪ್ರಶಸ್ತಿ

2004 ನವೆಂಬರ 7 ರಂದು ಮಂಗಳೂರಿನಲ್ಲಿ ಬಹಳ ಅದ್ಧೂರಿಯಾಗಿ ಮಣಿಕೃಷ್ಣಸ್ವಾಮಿ ಅಕಾಡಮಿ ಉದ್ಘಾಟನೆಗೊಂಡಿತ್ತು. ಮಣಿಕೃಷ್ಣ ಸ್ವಾಮಿಯವರು ಚೆನ್ನೈ ಮ್ಯೂಸಿಕ್ ಅಕಾಡಮಿಯಿಂದ ‘ಸಂಗೀತ ಕಲಾನಿಧಿ’, ತಿರುಪತಿ ವಿಶ್ವ ವಿದ್ಯಾಲಯದಿಂದ ಡಾಕ್ಟರೇಟ್, ಭಾರತ ಸರ್ಕಾರದಿಂದ ಪದ್ಮಶ್ರೀ ಹೀಗೆ ಹಲವಾರು ಪ್ರತಿಷ್ಠಿತ ಪ್ರಶಸ್ತಿಗಳನ್ನು ಪಡೆದ ಸಾಂಪ್ರದಾಯಿಕ ಕರ್ನಾಟಕ ಸಂಗೀತದ ಹಿರಿಯ ಕಲಾವಿದೆ. ಪ್ರಾರ್ಥನಾ ಸಾಯಿನರಸಿಂಹನ್ ತನ್ನ 13ನೇ ವಯಸ್ಸಿನಿಂದ 1996 ರಿಂದ 2002ರ ವರೆಗೆ ಮಣಿಕೃಷ್ಣಸ್ವಾಮಿಯವರಲ್ಲಿ ಸಂಗೀತಾಭ್ಯಾಸ ಮಾಡಿದರು. ಮಣಿಯಮ್ಮ ವಿಧಿವಶರಾಗಿ ಎರಡು ವರುಷಗಳ ಬಳಿಕ ಮಣಿಕೃಷ್ಣಸ್ವಾಮಿ ಅಕಾಡಮಿಯನ್ನು ಹುಟ್ಟುಹಾಕಿ ಸಂಗೀತದ ಸರ್ವಾಂಗೀಣ ಪ್ರಗತಿಗೆ ಪೂರಕ ವಾತಾವರಣ ನಿರ್ಮಾಣ ಮಾಡುವಲ್ಲಿ ಉನ್ನತ ಮಟ್ಟದ ಹತ್ತು ಹಲವು ಹೆಜ್ಜೆಗಳನ್ನು ಇಡಲಾಯಿತು.

ಸಂಗೀತದ ಬಾಲಪಾಠದ ಧ್ವನಿ ಸುರುಳಿ ಬಿಡುಗಡೆ, ವಾರ್ಷಿಕ ಕ್ಯಾಲೆಂಡರ್, ಕರ್ನಾಟಕ-ಹಿಂದೂಸ್ಥಾನಿ ಸಂಗೀತ ಕಛೇರಿಗಳು, ಸ್ಮøತಿರಂಜನಿ ಸ್ಮರಣ ಸಂಚಿಕೆ, ಹಿರಿಯ ಗುರುಗಳಿಂದ ಸಂಗೀತ ಕಾರ್ಯಾಗಾರ, ಸುಬ್ರಾಯ ಮಾಣಿ ಭಾಗವತರ ಸಂಸ್ಮರಣೆ, ಸಂಗೀತ ಕಛೇರಿಗಳ ಮೂಲಕ ಈಶ್ವರಯ್ಯ ಹಾಗೂ ರಂಜನಿ ಹುಟ್ಟುಹಬ್ಬದ ಆಚರಣೆ, ವಿಚಾರ ಗೋಷ್ಠಿಗಳು, ಪ್ರಶಸ್ತಿ ಪ್ರದಾನ, ಆಳ್ವಾಸ್ ಧೀಂಕಿಟ ಯಕ್ಷಗಾನ ಅಧ್ಯಯನ ಕೇಂದ್ರದ ಜತೆ ಸೇರಿ ಯಕ್ಷಗಾನ ಛಂದಸ್ಸಿನ ವೀಡಿಯೋ ದಾಖಲೀಕರಣ ಹೀಗೆ ಹತ್ತು ಹಲವು ಕಾರ್ಯಕ್ರಮಗಳ ಮೂಲಕ ಜನರ ಮೆಚ್ಚುಗೆಗೆ ಪಾತ್ರವಾಗಿದೆ. ಒಟ್ಟಿನಲ್ಲಿ ಜಿಲ್ಲೆಯ ಸಂಗೀತರಸಿಕರ ಕೇಳ್ಮೆಯ ಗುಣಮಟ್ಟವನ್ನು ಹೆಚ್ಚಿಸುವುದು, ಯುವ ಗಾಯಕರಿಗೆ ಒಳ್ಳೆಯ ಸಂಗೀತ ಶಿಕ್ಷಣ ನೀಡುವುದು, ಸಂಗೀತಕ್ಕೆ ಸಂಬಂಧಿಸಿ ಅಧ್ಯಯನ ಮತ್ತು ಸಂಶೋಧನೆ ಮುಂತಾದುವನ್ನು ಅಕಾಡಮಿಯು ಕೈಗೆತ್ತಿಕೊಂಡಿದೆ.

2010 ರಿಂದ ಪ್ರಾರಂಭಗೊಂಡ ‘ರಾಗ ಸುಧಾರಸ’ ರಾಷ್ಟ್ರೀಯ ಸಂಗೀತೋತ್ಸವವು, ಮರುವರ್ಷದಿಂದÀ ವಿಶೇಷವಾಗಿ ಸಾಧನೆ ಮಾಡಿದ ಯುವ ಕಲಾವಿದರಿಗೆ ‘ಯುವ ಕಲಾಮಣಿ’ ಪ್ರಶಸ್ತಿ ಪ್ರಧಾನ ಮಾಡಲು ಪ್ರಾರಂಭಿಸಿತು. ಹಿರಿಯ ಸಂಗೀತ ವಿಮರ್ಶಕ ಎ ಈಶ್ವರಯ್ಯ ಹಾಗೂ ಅವರ ತಂಡ ಈ ಪ್ರಶಸ್ತಿಗೆ ಕಲಾವಿದರನ್ನು ಆಯ್ಕೆಮಾಡಿಕೊಂಡು ಬರುತ್ತಿದೆ. ಪ್ರಶಸ್ತಿಯು ಇಪ್ಪತ್ತೈದುಸಾವಿರ ರೂಪಾಯಿಗಳ ನಗದಿನೊಂದಿಗೆ ಪ್ರಶಸ್ತಿ ಪತ್ರವನ್ನು ಒಳಗೊಂಡಿರುತ್ತದೆ. ಶ್ರೀಮತಿ ಪ್ರಾರ್ಥನಾ ಸಾಯಿನರಸಿಂಹನ್, ಕುಮಾರಿ ಮೇಘನಾ ಮೂರ್ತಿ, ಶ್ರೀ ಎಂ ಬಾಲಚಂದ್ರ ಪ್ರಭು, ಶ್ರೀಮತಿ ತನ್ಮಯಿ ಕೃಷ್ಣಮೂರ್ತಿ, ಹಾಗೂ ಶ್ರೀ ದಿಲೀಪ್ ಕೆ ಜೆ ಇವರಿಗೆ ಈಗಾಗಲೇ ಪ್ರಶಸ್ತಿಗಳು ಸಂದಿವೆ.

ಬಹು ನಿರೀಕ್ಷಿತ ರಾಗ ಸುಧಾರಸ ರಾಷ್ಟ್ರೀಯ ಸಂಗೀತೋತ್ಸವ ನವೆಂಬರ 3,4,5ರಂದು ಮಂಗಳೂರಿನ ಪುರಭವನದಲ್ಲಿ ನಡೆಯುತ್ತದೆ. ಕುಮಾರಿ ಅರ್ಚನಾ ಸಮನ್ವಿಯರಂತಹ ಅಭಿಜಾತ ಕಲಾವಿದರಿಂದ ತೊಡಗಿ ಹಿಂದೂಸ್ಥಾನಿ ಸಂಗೀತದ ಮೇರು ಕಲಾವಿದ ಪಂಡಿತ್ ವೆಂಕಟೇಶ್ ಕುಮಾರ್ ತನಕ ಸುಮಾರು 40 ಮಂದಿ ಕಲಾವಿದರು ಇದರಲ್ಲಿ ಭಾಗವಹಿಸಲಿರುವರು. ಈ ಬಾರಿಯ 2017ರ ಯುವ ಕಲಾಮಣಿ ಪ್ರಶಸ್ತಿ ಪುತ್ತೂರಿನ ನಿಕ್ಷಿತ್ ಟಿ ಯವರಿಗೆ ಸಲ್ಲಲಿದೆ.

1991 ಜುಲೈ 4 ರಂದು ಶ್ರೀಯುತ ಚಂದ್ರಶೇಖರ ಕಲ್ಲೂರಾಯ ಹಾಗೂ ಶ್ರೀಮತಿ ಪುಷ್ಪಲತಾ ದಂಪತಿಗಳ ಸುಪುತ್ರನಾಗಿ ನಿಕ್ಷಿತ್ ಜನಿಸಿದರು. ವಿವೇಕಾನಂದ ಕಾಲೇಜಿನಲ್ಲಿ ಬಿ.ಬಿ.ಎಂ ಶಿಕ್ಷಣವನ್ನು ಮುಗಿಸಿ ಮೈಸೂರು ಮುಕ್ತ ವಿಶ್ವವಿದ್ಯಾಲಯದಿಂದ ಬಿ.ಎಸ್.ಸಿ ಪದವಿಯನ್ನು ಪಡೆದಿರುತ್ತಾರೆ. ನಾಲ್ಕನೇ ತರಗತಿಯಿಂದಲೇ ಪುತ್ತೂರಿನ ಕುಕ್ಕಿಲ ಶಂಕರ್ ಭಟ್ ಇವರಲ್ಲಿ ಗುರುಕುಲ ಪದ್ಧತಿಯಲ್ಲಿ ಮೃದಂಗ ತರಬೇತಿಯನ್ನು ಪಡೆದು ಕಳೆದ 9 ವರ್ಷಗಳಿಂದ ಮುನ್ನಾರ್‍ಕೋಯಿಲ್ ಜೆ ಬಾಲಾಜಿಇವರಿಂದ ಶಿಕ್ಷಣವನ್ನು ಮುದುವರಿಸುತ್ತಿದ್ದಾರೆ.ಈಗಾಗಲೇ ವಿದ್ವಾಂಸರಾದ ತ್ರಿಶ್ಯೂರ್ ರಾಮಚಂದ್ರನ್ , ನೀಲಾ ರಾಮಗೋಪಾಲ, ತ್ರಿಶ್ಯೂರ್ ಅನಂತ ಪದ್ಮನಾಭನ್, ಎಸ್ ಶಂಕರ್, ಒ ಎಸ್ ತ್ಯಾಗರಾಜನ್, ಶೇರ್ತಲೈ ರಂಗನಾಥನ್ ಶರ್ಮ ಮುಂತಾದ ಕಲಾವಿದರಿಗೆ ಮೃದಂಗ ನುಡಿಸಿ ಮೆಚ್ಚುಗೆ ಪಡೆದಿರುತ್ತಾರೆ. ಪುತ್ತೂರಿನ ಮಹಾಬಲ ಲಲಿತ ಕಲಾ ಸಭಾದಲ್ಲಿ ಸಕ್ರಿಯ ಪದಾಧಿಕಾರಿಯಾಗಿ ತಾನೊಬ್ಬ ಕಲಾವಿದ್ದು ತನ್ನಂತೆಯೇ ಹಲವಾರು ಕಲಾವಿದರಿಗೆ ವೇದಿಕೆಯನ್ನು ಒದಗಿಸಿಕೊಡುವ ಅಪರೂಪದ ಗುಣ ನಿಕ್ಷಿತ್ ಅವರಲ್ಲಿದೆ. ಇವರ ವಯಸ್ಸು ಕಿರಿದಾದರೂ ಕಠಿಣ ಪರಿಶ್ರಮದಿಂದ ಸಾಧನೆ ಮಾಡಿ ಮುಂದೆ ಬಂದ ಇವರು ಅತ್ಯಂತ ಬೇಡಿಕೆಯುಳ್ಳ ಮೃದಂಗವಾದಕ ಎನಿಸಿಕೊಂಡಿರುತ್ತಾರೆ. ಈ ಬಾರಿಯ ‘ಯುವ ಕಲಾ ಮಣಿ’ ಪ್ರಶಸ್ತಿಯು ನಿಕ್ಷಿತ್ ಅವರಿಗೆ ಸಲ್ಲುತ್ತಿರುವುದು ಅತ್ಯಂತ ನ್ಯಾಯೋಚಿತ ಮತ್ತು ಶ್ಲಾಘನೀಯ.

ಇದೇ ಸಂದರ್ಭದಲ್ಲಿ ನಾದಸರಸ್ವತಿ ಸಂಗೀತ ವಿದ್ಯಾಲಯದ ಹಿರಿಯ ಗುರುಗಳಾದ ಶ್ರೀಮತಿ ಸತ್ಯವತಿ ಮೂಡಂಬಡಿತ್ತಾಯ, ಕರ್ನಾಟಕ ಸರ್ಕಾರದ ‘ಕರ್ನಾಟಕ ಕಲಾಶ್ರೀ’ ವಿಶೇಷ ಗೌರವ ಪ್ರಶಸ್ತಿಗೆ ಆಯ್ಕೆಯಾಗಿರುವ ಶ್ರೀಮತಿ ಶಾರದಾಮಣಿಶೇಖರ್, ಜಿಲ್ಲೆಯ ಕಲಾಸಕ್ತರಲ್ಲಿ ಭರವಸೆ ಮೂಡಿಸಿರುವಕಲೈಮಾಮಣಿ ರಮಾ ವೈದ್ಯನಾಥನ್ ಇವರ ಶಿಷ್ಯೆ ಕುಮಾರಿ ಶುಭಮಣಿ ಶೇಖರ್, ಈ ಬಾರಿಯ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿಗೆ ಪಾತ್ರರಾಗಿರುವ ಯಕ್ಷಗಾನ ಕಲಾವಿದ ಶಿವರಾಮ ಜೋಗಿ, ನೃತ್ಯ ಗುರು ಉಳ್ಳಾಲ ಮೋಹನ ಕುಮಾರ್ ಹಾಗೂ ಸಾಹಿತಿ ಡಾ| ವೈದೇಹಿ ಇವರನ್ನು ಸನ್ಮಾನಿಸಲಾಗುವುದು. ಕ್ಯಾ| ಗಣೇಶ್ ಕಾರ್ಣಿಕ್ ಹಾಗೂ ಶ್ರೀಪಿ ನಿತ್ಯಾನಂದರಾಯರು ಜತೆಗೂಡಿ ಕಂಡ ಕನಸು ನನಸಾಗುವ ಕ್ಷಣ, ಗುರುಹಿರಿಯರ ಸಹಯೋಗದೊಂದಿಗೆ ಸಹೃದಯರೆಲ್ಲರೂ ಸಾರ್ಥಕ ಸಂಭ್ರಮಪಡುವ ಘಳಿಗೆ ಸಮೀಪಿಸುತ್ತಿದೆ. ಸಂಗೀತವೆಂಬ ಸಾಗರದಲ್ಲಿಮಥನ ಆರಂಭವಾಗಿದೆ. ರಾಗ ಸುಧಾರಸವೆಂಬ ಅಮೃತ ಉದ್ಭವವಾಗಿ ಕಲಾರಸಿಕರಿಗೆ ಹಂಚುವ ಶುಭ ಮುಹೂರ್ತಕ್ಕೆ ಕ್ಷಣಗಣನೆ ನಡೆಯುತ್ತಿದೆ.


Spread the love