ಮತಾಂತರ ವಿರುದ್ದ ಪ್ರತಿಭಟನೆ ಹೆಸರಿನಲ್ಲಿ ” ಪವಿತ್ರ ಶಿಲುಬೆ”ಗೆ ಅವಮಾನ ಖಂಡನೀಯ – ಕೆಥೊಲಿಕ್ ಸಭಾ

Spread the love

ಮತಾಂತರ ವಿರುದ್ದ ಪ್ರತಿಭಟನೆ ಹೆಸರಿನಲ್ಲಿ ” ಪವಿತ್ರ ಶಿಲುಬೆ”ಗೆ ಅವಮಾನ ಖಂಡನೀಯ – ಕೆಥೊಲಿಕ್ ಸಭಾ

ಉಡುಪಿ: ಮತಾಂತರದ ಹೆಸರಿನಲ್ಲಿ ಸುಳ್ಳು ಆರೋಪ ಹೊರಿಸಿ ಅದರ ವಿರುದ್ದ ಆಯೋಜಿಸಿರುವ ಪ್ರತಿಭಟನೆಯ ಬ್ಯಾನರಿನಲ್ಲಿ ಕ್ರೈಸ್ತರ ಧಾರ್ಮಿಕ ಸಂಕೇತವಾಗಿರುವ ‘ಪವಿತ್ರ ಶಿಲುಬೆ’ಯನ್ನು ಅವಮಾನಿಸಿರುವುದು ಖಂಡನೀಯ ಎಂದು ಕೆಥೊಲಿಕ್ ಸಭಾ ಉಡುಪಿ ಪ್ರದೇಶ್ ಅಧ್ಯಕ್ಷರಾದ ಆಲ್ವಿನ್ ಕ್ವಾಡ್ರಸ್ ಹೇಳಿದ್ದಾರೆ.

ಉಡುಪಿ ಜಿಲ್ಲೆಯ ಉದ್ಯಾವರ ಸಮೀಪದ ಹಿಂದೂ ಸಹೋದರ ಒರ್ವರಿಗೆ ದಕ್ಷಿಣ ಕನ್ನಡ ಜಿಲ್ಲೆಯ ಮೂಲ್ಕಿ ಸಮೀಪದ ಡಿವೈನ್ ರೆಟ್ರಿಟ್ ಸೆಂಟರ್ ವತಿಯಿಂದ ಬಲವಂತವಾಗಿ ಕ್ರೈಸ್ತ ಧರ್ಮಕ್ಕೆ ಮತಾಂತರಗೊಳಿಸಿದ್ದಾರೆ ಎಂಬ ಕುರಿತು ಕಳೆದ ಕೆಲವು ದಿನಗಳಿಂದ ನಡೆಯುತ್ತಿರುವ ಚರ್ಚೆ ಹಾಗೂ ಇದಕ್ಕೆ ಸಂಬಂಧಿಸಿ ನಮ್ಮ ಹಿಂದೂ ಸಮುದಾಯದ ಸಂಘಟನೆಗಳು ಆಯೋಜಿಸಿರುವ ಪ್ರತಿಭಟನೆಯ ಹಾಗೂ ಪ್ರತಿಭಟನೆಯ ಹೆಸರಿನಲ್ಲಿ ಕ್ರೈಸ್ತ ಧರ್ಮದ ಧಾರ್ಮಿಕ ಭಾವನೆಗಳಿಗೆ ನೋವುಂಟಾದ ಕುರಿತಾಗಿ ಮಂಗಳವಾರ ಉಡುಪಿ ಪ್ರೆಸ್ ಕ್ಲಬ್ಬಿನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಸ್ಪಷ್ಟನೆ ನೀಡಿ ಕ್ರೈಸ್ತ ಸಮುದಾಯವು ಈ ದೇಶದ ಶೈಕ್ಷಣಿಕ, ಸಾಮಾಜಿಕ, ಆರೋಗ್ಯ ಕ್ಷೇತ್ರಕ್ಕೆ ಕಳೆದ ನೂರಾರು ವರ್ಷಗಳಿಂದ ತನ್ನದೇ ಆದ ಕೊಡುಗೆಯನ್ನು ನೀಡಿಕೊಂಡು ಬಂದಿದ್ದು ಶಾಂತಿಯುತ ಸಮಾಜವಾಗಿ ತನ್ನ ಸೇವೆಯನ್ನು ನೀಡಿಕೊಂಡು ದೇಶದ ಎಲ್ಲಾ ಸಮುದಾಯಗೊಳೊಂದಿಗೆ ಬೆರೆತು ಬಾಳುತ್ತಿದೆ. ಸೇವೆಯೇ ತಮ್ಮ ಧ್ಯೇಯವಾಗಿಟ್ಟುಕೊಂಡು ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯ ಕ್ರೈಸ್ತರು ಸೌಹಾರ್ದತೆಯ ವಾತವರಣದೊಂದಿಗೆ ಕೂಡಿ ಬಾಳುತ್ತಿದ್ದು, ಈ ಸೌಹಾರ್ದತಗೆ ಮತಾಂತರ ಎಂಬ ಹೆಸರಿನಲ್ಲಿ ಕಿಚ್ಚು ಹಚ್ಚುವ ಕೆಲಸ ಕೆಲವೊಂದು ವ್ಯಕ್ತಿಗಳಿಂದ ನಡೆಯುತ್ತಿರುವುದು ಖೇದಕರ ವಿಚಾರವಾಗಿದೆ ಎಂದರು.

ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸುಮಾರು 350ಕ್ಕೂ ಅಧಿಕ ಶಿಕ್ಷಣ ಸಂಸ್ಥೆಗಳು ಸೇರಿದಂತೆ ಆರೋಗ್ಯ ಕ್ಷೇತ್ರದಲ್ಲಿ ನಿಸ್ವಾರ್ಥ ಸೇವೆಯನ್ನು ಈ ಸಮಾಜದ ಎಲ್ಲಾ ವರ್ಗದ ಹಾಗೂ ಸಮುದಾಯಕ್ಕೆ ನೀಡುತ್ತಿದೆ. ಕ್ರೈಸ್ತ ಶಿಕ್ಷಣ ಸಂಸ್ಥೆಗಳಲ್ಲಿ ಎಲ್ಲಾ ಧರ್ಮದ ವಿದ್ಯಾರ್ಥಿಗಳು ಸಮಾನವಾಗಿ ಶಿಕ್ಷಣವನ್ನು ಪಡೆಯುತ್ತಿದ್ದು ಎಲ್ಲಿಯೂ ಕೂಡ ಮತಾಂತರಗಳು ನಡೆದ ಉದಾಹರಣೆಗಳಿಲ್ಲ. ಎಲ್ಲಾ ಮಕ್ಕಳಿಗೆ ಭಾರತೀಯತೆಯ ಪಾಠವನ್ನು ಕಲಿಸುವ ಕೆಲಸವನ್ನು ಕ್ರೈಸ್ತ ಶಿಕ್ಷಣ ಸಂಸ್ಥೆಗಳು ನಡೆಸುತ್ತಿವೆ ಎಂಬುದನ್ನು ಹೆಮ್ಮೆಯಿಂದ ಹೇಳ ಬಯಸುತ್ತೇವೆ. ಹೆಚ್ಚಿನ ಕ್ರೈಸ್ತ ಶಿಕ್ಷಣ ಸಂಸ್ಥೆಗಳು ಸರಕಾರದ ಅನುದಾನದ ಹೊರತಾಗಿಯೂ ಮಕ್ಕಳಿಗೆ ರಿಯಾಯತಿ ದರದಲ್ಲಿ ಮತ್ತು ಕೆಲವು ಸಂದರ್ಭದಲ್ಲಿ ಉಚಿತವಾಗಿ ಕೂಡ ಶಿಕ್ಷಣ ನೀಡುತ್ತಿದ್ದು ಸರಕಾರದ ಶಿಕ್ಷಕರಿಲ್ಲದೆ ಹೋದರೂ ಮಕ್ಕಳು ಶಿಕ್ಷಣದಿಂದ ವಂಚಿತರಾಗಬಾರದು ಎಂಬ ಉದ್ದೇಶದಿಂದ ಆಯಾ ಶಾಲೆಗಳ ಆಡಳಿತ ಮಂಡಳಿಯೇ ತಮ್ಮ ಸ್ವಂತ ಖರ್ಚಿನಿಂದ ಶಿಕ್ಷಕರ ವೇತನವನ್ನು ನೀಡಿಕೊಂಡು ಬಂದಿವೆ. ಈ ಎಲ್ಲಾ ಸಂಸ್ಥೆಗಳಲ್ಲಿ ಸೇವೆ ನೀಡುವ ಉದ್ಯೋಗಿಗಳು ಕ್ರೈಸ್ತೆತೇತರು ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ ಎನ್ನುವುದು ಗಮನಿಸಬೇಕಾದ ವಿಚಾರವಾಗಿದೆ. ಆದರೆ ಎಲ್ಲಿಯೂ ಕೂಡ ಅವರುಗಳಿಂದ ಕ್ರೈಸ್ತ ಶಿಕ್ಷಣ ಸಂಸ್ಥೆಗಳಿಂದ ಬಲವಂತದ ಮತಾಂತರ ಆರೋಪಗಳು ಕೇಳಿ ಬಂದಿಲ್ಲ.

ಕ್ರೈಸ್ತರು ಮತಾಂತರ ಮಾಡುತ್ತಾರೆ ಎಂಬ ವಾದದಲ್ಲಿ ಯಾವುದೇ ಹುರುಳಿಲ್ಲ ನಿಜವಾಗಿಯೂ ಮತಾಂತರ ನಡೆದಿದ್ದೇ ಆದರೆ ಇಂದು ಭಾರತದಲ್ಲಿ ಇಂದು ಕ್ರೈಸ್ತರ ಜನಸಂಖ್ಯೆ ಕಡಿಮೆಯೆಂದರೂ 15-20 ಶೇಕಡಾ ಇರಬೇಕಿತ್ತು. ಆದರೆ ವಿದೇಶಿಯರ ಆಳ್ವಿಕೆಯಿಂದ ಹಿಡಿದು ಇಂದಿನವರೆಗೂ ಅದು 2.5% ರ ಆಸುಪಾಸಿನಲ್ಲಿಯೇ ಇದೆ. ಸ್ವತಂತ್ರ ಭಾರತದ ಮೊತ್ತಮೊದಲ ಜನಗಣತಿ (1951) ಯ ಪ್ರಕಾರ 2.3% ಇದ್ದ ಕ್ರೈಸ್ತರ ಜನಸಂಖ್ಯೆ, ಇತ್ತೀಚಿನ ಜನಗಣತಿ (2011)ರವರೆಗೂ 2.3% ನಷ್ಟೇ ಇದೆ. ವರದಿಗಳ ಪ್ರಕಾರ ಮುಂದಿನ ಜನಗಣತಿ (2021) ಯ ವೇಳೆ ಈ ಶೇಕಡಾಂಶ ಒಂದಿಷ್ಟು ಕಡಿಮೆಯಾಗಲಿದೆ ಹೊರತು ಹೆಚ್ಚಾಗುವುದಿಲ್ಲ ಎಂದರು.

ಇತ್ತೀಚಿಗೆ ಮೂಲ್ಕಿಯ ಡಿವೈನ್ ರೆಟ್ರಿಟ್ ಸೆಂಟರ್ ನಲ್ಲಿ ಮತಾಂತರ ನಡೆದಿದೆ ಎಂದು ಆರೋಪಿಸಿ ಇದೇ ಸೆಪ್ಟೆಂಬರ್ 26ರಂದು ನಮ್ಮ ಸಹೋದರ ಹಿಂದೂ ಸಂಘಟನೆಗಳು ಪಾದಯಾತ್ರೆಯ ಜೊತೆಗೆ ಪ್ರತಿಭಟನೆಯನ್ನು ಹಮ್ಮಿಕೊಂಡಿರುವುದು ನಮ್ಮ ಗಮನಕ್ಕೆ ಬಂದಿರುತ್ತದೆ. ದೇಶದ ಸಂವಿಧಾನದಲ್ಲಿ ಪ್ರತಿಯೊಬ್ಬರಿಗೂ ಪ್ರತಿಭಟನೆಗೆ ಅವಕಾಶವಿದ್ದು ಅದನ್ನು ನಾವು ವಿರೋಧಿಸುವುದಿಲ್ಲ. ಆದರೆ ಮತಾಂತರದ ಸುಳ್ಳು ಆರೋಪ ಹೊರಿಸಿ ಅದರ ವಿರುದ್ದ ಆಯೋಜಿಸಿರುವ ಪ್ರತಿಭಟನೆಯ ಬ್ಯಾನರ್ ಒಂದರಲ್ಲಿ ಹಿಂದೂ ಸಂಘಟನೆಯ ಸಹೋದರರು ಕ್ರೈಸ್ತರ ಧಾರ್ಮಿಕ ಸಂಕೇತವಾಗಿರುವ ‘ ಪವಿತ್ರ ಶಿಲುಬೆ’ಯನ್ನು ನಿಷೇಧಿಸುವ ಚಿಹ್ನೆ ಹಾಕಿರುವುದು ಇಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು. ಶಿಲುಬೆ ಕ್ರೈಸ್ತರ ಧಾರ್ಮಿಕ ಸಂಕೇತವಾಗಿದ್ದು ಅದಕ್ಕೆ ಅದರದ್ದೇ ಆದ ಗೌರವವನ್ನು ನಾವು ನೀಡುತ್ತೆವೆ. ಸಂಘಟನೆಯ ಸದಸ್ಯರು ಬ್ಯಾನರಿನಲ್ಲಿ ಪವಿತ್ರ ಶಿಲುಬೆಗೆ ಅವಮಾನಿಸಿದರುವುದ ನಮ್ಮ ಸಮುದಾಯದ ಧಾರ್ಮಿಕ ಭಾವನೆಗಳಿಗೆ ನೋವು ತಂದಿದೆ. ಯಾವುದೇ ಸಮುದಾಯದ ಧಾರ್ಮಿಕ ಭಾವನೆಗಳಿಗೆ ನೋವುಂಟು ಮಾಡುವ ಮೊದಲು ಸಂಘಟಕರು ಗಮನಿಸದೇ ಇರುವುದು ವಿಷಾದದ ಸಂಗತಿಯಾಗಿದೆ. ಕ್ರೈಸ್ತ ಸಮುದಾಯ ಸದಾ ಶಾಂತಿ ಪ್ರಿಯರಾಗಿದ್ದು ಪ್ರೀತಿಯಿಂದಲೇ ಸಂಘಟಕರಿಗೆ ಮನವಿ ಮಾಡುತ್ತಿದ್ದು ಇಂತಹ ವರ್ತನೆಗಳು ಮುಂದಿನ ದಿನಗಳಲ್ಲಿ ವ್ಯತಿರಿಕ್ತ ಪರಿಣಾಮಕ್ಕೆ ಕಾರಣವಾಗದಂತೆ ಎಚ್ಚರಿಕೆ ವಹಿಸಬೇಕು.

ದೇಶದ ಸಂವಿಧಾನದಲ್ಲಿ ಮತಾಂತರದ ಬಗ್ಗೆ ಅದರದ್ದೇ ಆದ ವ್ಯಾಖ್ಯಾನವನ್ನು ಹೊಂದಿದ್ದು ದೇಶದ ಸಂವಿಧಾನವನ್ನು ಗೌರವಿಸಿ ಕ್ರೈಸ್ತ ಸಮುದಾಯ ಬಾಳುತ್ತಿದ್ದ ಕೆಲವೊಂದು ವ್ಯಕ್ತಿಗಳ ಮಾಡುವ ಸುಳ್ಳು ಅಪಪ್ರಚಾರಕ್ಕೆ ಇಡೀ ಕ್ರೈಸ್ತ ಧರ್ಮವನ್ನು ಮತ್ತು ಧರ್ಮದ ಸಂಕೇತಗಳಿಗೆ ಅವಮಾನಿಸುವುದು ಸರಿಯಲ್ಲ.
ಎಲ್ಲಿಯಾದರೂ ಬಲವಂತದ ಮತಾಂತರದ ಪ್ರಕ್ರಿಯೆ ನಡೆದಲ್ಲಿ ಕಾನೂನಿನ ಮೂಲಕ ಪರಿಹಾರ ಕಂಡುಕೊಳ್ಳುವಂತೆ ಮತ್ತು ಇದಕ್ಕೆ ನಮ್ಮ ಕ್ರೈಸ್ತ ಸಮುದಾಯ ಕೂಡ ಬೆಂಬಲವಾಗಿರುತ್ತದೆ ಎಂದು ಈ ಮೂಲಕ ಸಂಬಂಧಿತ ವ್ಯಕ್ತಿಗಳ ಗಮನಕ್ಕೆ ತರಬಯುಸುತ್ತೇವೆ. ಕ್ರೈಸ್ತ ಸಮುದಾಯದ ವಿರುದ್ದ ನಡೆಯುತ್ತಿರುವ ಹುನ್ನಾರದಿಂದ ಕ್ರೈಸ್ತ ಸಂಸ್ಥೆಗಳು ಭೀತಿಯ ವಾತಾವರಣವನ್ನು ಅನುಭವಿಸುತ್ತಿದ್ದ ಸರಕಾರ ಈ ಬಗ್ಗೆ ಗಮನಹರಿಸಬೇಕಾಗಿ ಆಗ್ರಹಿಸಿದರು.

ಸುದ್ದಿಗೋಷ್ಟಿಯಲ್ಲಿ ಕೆಥೊಲಿಕ್ ಸಭಾ ಉಡುಪಿ ಪ್ರದೇಶ್ ಇದರ ನಿಕಟಪೂರ್ವ ಅಧ್ಯಕ್ಷರಾದ ವಲೇರಿಯನ್ ಫೆರ್ನಾಂಡಿಸ್, ನಿಯೋಜಿತ ಅಧ್ಯಕ್ಷರಾದ ರೋಬರ್ಟ್ ಮಿನೇಜಸ್, ಮಾಜಿ ಅಧ್ಯಕ್ಷರಾದ ಎಲ್ ರೋಯ್ ಕಿರಣ್ ಕ್ರಾಸ್ಟೊ, ಉಡುಪಿ ವಲಯ ಮಾಜಿ ಅಧ್ಯಕ್ಷರಾದ ಮೇರಿ ಡಿಸೋಜಾ ಸುದ್ದಿಗೋಷ್ಟಿಯಲ್ಲಿ ಉಪಸ್ಥಿತರಿದ್ದರು.


Spread the love