ಮದುವೆ ಹಾಲಿನಲ್ಲಿ ಮಕ್ಕಳ ಚಿನ್ನಾಭರಣ ಕಳ್ಳತನ – ಇಬ್ಬರ ಬಂಧನ

Spread the love

ಮದುವೆ ಹಾಲಿನಲ್ಲಿ ಮಕ್ಕಳ ಚಿನ್ನಾಭರಣ ಕಳ್ಳತನ – ಇಬ್ಬರ ಬಂಧನ

ಮಂಗಳೂರು: ಮದುವೆ ಹಾಲ್‌ಗಳಲ್ಲಿ ಸಣ್ಣ ಮಕ್ಕಳ ಚಿನ್ನಾಭರಣವನ್ನು ಕಳವು ಮಾಡುತ್ತಿದ್ದ ಮತ್ತು ಕಳವು ಮಾಲನ್ನು ಸ್ವೀಕರಿಸುತ್ತಿದ್ದ ಆರೋಪಿಗಳನ್ನು ಕೊಣಾಜೆ ಪೋಲಿಸರು ಬಂಧಿಸಿದ್ದಾರೆ.

ಬಂಧಿತರನ್ನು ಉಳ್ಳಾಲ ಕೋಡಿ ನಿವಾಸಿ ಮಿನ್ನತ್ (39) ಹಾಗೂ ಯೋಗಿಶ್ ಆಚಾರಿ ಮಾಡೂರು ಎಂದು ಗುರುತಿಸಲಾಗಿದೆ.

ಡಿಸೆಂಬರ್ 26 ರಂದು ಕೊಣಾಜೆ ಅಸೈಗೋಳಿಯ ಫಾತಿಮತ್ ಝೊಹರಾ ಮತ್ತು ಆಯಿಷಾ ಎಂಬವರು ಡಿಸೆಂಬರ್ 25 ರಂದು ತಿಬ್ಲೆಪದವು ಅಲ್-ಮದೀನಾ ಹಾಲ್‌‌ನಲ್ಲಿ ಮದುವೆ ಕಾರ್ಯಕ್ರಮದ ಸಮಯ ಸಣ್ಣ ಮಕ್ಕಳ ಕಾಲಿನಿಂದ ಚಿನ್ನದ ಚೈನನ್ನು ಕಳವು ಮಾಡಿರುವ ಬಗ್ಗೆ ಕೊಣಾಜೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು.

ಈ ಹಾಲ್‌ನ ಸಿಬ್ಬಂದಿಯವರನ್ನು ವಿಚಾರಣೆ ಮಾಡಿದಾಗ, ಇಲ್ಲಿ ಈ ಹಿಂದಿನಿಂದಲೂ ಮದುವೆ ಸಮಯದಲ್ಲಿ ಈ ರೀತಿಯ ಬಂಗಾರದ ಚೈನ್‌ ಕಳವು ನಡೆಯುತ್ತಿದ್ದು, ಈ ಬಗ್ಗೆ ಸಾರ್ವಜನಿಕರಿಂದ ಮಾಹಿತಿ ಸಂಗ್ರಹಿಸಿ ಉಳ್ಳಾಲ ಕೋಡಿಯ ಮಹಿಳೆಯಾದ ಮಿನ್ನತ್, ಎಂಬಾಕೆಯನ್ನು ದಸ್ತಗಿರಿ ಮಾಡಿಕೊಂಡು, ಆಕೆಯು ತೊಕ್ಕೊಟ್ಟಿನ ಯೂನಿಟಿ ಹಾಲ್, ದೇರಳಕಟ್ಟೆಯ ಬಿ.ಸಿ.ಸಿ ಹಾಲ್ ಮತ್ತು ನಾಟೆಕಲ್ ಅಲ್-ಮದೀನಾ ಹಾಲ್‌ನಲ್ಲಿ ಹಾಗೂ ಇತರೆಡೆಗಳಲ್ಲಿ ಮದುವೆ ಸಮಯದಲ್ಲಿ ಹೋಗಿ ತಾಯಿಯಂದಿರು ಮಕ್ಕಳನ್ನು ಎತ್ತಿಕೊಂಡಿದ್ದ ಸಮಯ ಅವರ ಗಮನಕ್ಕೆ ಬಾರದಂತೆ ಸಣ್ಣ ಮಕ್ಕಳ ಕಾಲಿನಿಂದ ಚೈನ್, ಒಂಟಿಯಾಗಿ ತಿರುಗಾಡುವ ಮಕ್ಕಳ ಕುತ್ತಿಗೆಯಿಂದ ಚೈನನ್ನು ಕಳವು ಮಾಡುತ್ತಿದ್ದು, ಕಳವು ಮಾಡಿದ ಚಿನ್ನವನ್ನು ಉಳ್ಳಾಲ ಒಂಬತ್ತು ಕೆರೆಯ ಬಂಗಾರದ ಅಂಗಡಿಯ ಯೋಗೀಶ್ ಎಂಬವರಿಗೆ ಮಾರಾಟ ಮಾಡಿದ್ದು, ಇದರಂತೆ ಡಿಸೆಂಬರ್ 27ರಂದು ಬೆಳಿಗ್ಗೆ ಮಿನ್ನತ್‌ಳನ್ನು ದಸ್ತಗಿರಿ ಮಾಡಿಕೊಂಡು, ಮಿನ್ನತ್‌ಳ ವಶದಿಂದ ಸುಮಾರು 60 ಗ್ರಾಂ ತೂಕದ ಬಂಗಾರದ ಒಡವೆಗಳನ್ನು ವಶಪಡಿಸಲಾಗಿದೆ.

ಈ ಬಂಗಾರದ ಕಳವು ಮಾಲೆಂದು ತಿಳಿದೂ ಖರೀದಿಸಿರುವ ಯೋಗೀಶ್ ಆಚಾರಿ, ಮಾಡೂರು ಎಂಬಾತನನ್ನು ದಸ್ತಗಿರಿ ಮಾಡಿಕೊಂಡು ಮಿನ್ನತ್‌ಳು ಯೋಗೀಶನಿಗೆ ಮಾರಾಟ ಮಾಡಿದ್ದ ಸುಮಾರು 23 ಗ್ರಾಂ ಚಿನ್ನವನ್ನು ವಶಪಡಿಸಿಕೊಳ್ಳಲಾಗಿದೆ.

ಆರೋಪಿಗಳಿಬ್ಬರಿಂದ ಸುಮಾರು 2,15,000/- ರೂ ಮೌಲ್ಯದ ಒಟ್ಟು 83 ಗ್ರಾಂ ಚಿನ್ನವನ್ನು ವಶಪಡಿಸಿಕೊಳ್ಳಲಾಗಿರುತ್ತದೆ. ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ.

ಕೊಣಾಜೆ ಪೊಲೀಸ್ ಠಾಣಾ ಪೊಲೀಸ್ ನಿರೀಕ್ಷಕರಾದ ಅಶೋಕ್. ಪಿ, ಪಿ.ಎಸ್.ಐಗಳಾದ ಶ್ರೀಕಲಾ, ಸುಕುಮಾರನ್, ವಿನಾಯಕ್, ಸಿಬ್ಬಂದಿಗಳಾದ ಶಿವಪ್ರಸಾದ್, ಪ್ರದೀಪ್, ಸುಖಲತಾ, ವಿನೋದ್, ಸತೀಶ್, ಭಾಗ್ಯಶ್ರೀ ಯವರು ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿರುತ್ತಾರೆ. ಈ ಬಗ್ಗೆ ತನಿಖೆಯನ್ನು ಮುಂದುವರಿಸಲಾಗಿದೆ.


Spread the love