ಮನಪಾ ಅಭ್ಯರ್ಥಿಗಳ ಟಿಕೇಟ್ ವಿಚಾರದಲ್ಲಿ 10 ರೂ ಕೂಡ ಪಡೆದಿದ್ದರೆ ನಾನು ಮನೆಗೆ ಮುಟ್ಟಲ್ಲ – ಬಾವಾ

Spread the love

ಮನಪಾ ಅಭ್ಯರ್ಥಿಗಳ ಟಿಕೇಟ್ ವಿಚಾರದಲ್ಲಿ 10 ರೂ ಕೂಡ ಪಡೆದಿದ್ದರೆ ನಾನು ಮನೆಗೆ ಮುಟ್ಟಲ್ಲ – ಬಾವಾ

ಮಂಗಳೂರು: ಮನಪಾ ಚುನಾವಣೆಯ ಅಭ್ಯರ್ಥಿಗಳ ಟಿಕೆಟ್ಗಾಗಿ 10 ರೂ. ಕೂಡಾ ಪಡೆದಿದ್ದರೆ ನಾನು ನೇರವಾಗಿ ಮನೆ ಮುಟ್ಟಲಿಕ್ಕಿಲ್ಲ. ಈಗಷ್ಟೇ ಮಸೀದಿಯಲ್ಲಿ ಪ್ರಾರ್ಥನೆ ಸಲ್ಲಿಸಿ ಬಂದಿದ್ದೇನೆ ಎಂದು ಮಾಜಿ ಶಾಸಕ ಮೊಯ್ದಿನ್ ಬಾವ ಹೇಳಿದ್ದಾರೆ.

ಕಾಂಗ್ರೆಸ್ ಜಿಲ್ಲಾ ಕಚೇರಿಯಲ್ಲಿಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮನಪಾ ಚುನಾವಣೆಯ ಅಭ್ಯರ್ಥಿಗಳ ಪಟ್ಟಿ ಪ್ರಕಟದ ದಿನ ರಾತ್ರಿ ನಡೆದ ಅಹಿತಕರ ಘಟನೆಯ ಸಂದರ್ಭ ನನ್ನ ಕಪಾಳಕ್ಕೆ ಹೊಡೆದದ್ದು ನಿಜ ಅನಿರೀಕ್ಷಿತವಾಗಿ ನನಗೆ ಅರಿವಿಲ್ಲದೆ ನಡೆದ ಘಟನೆ ಅದಾಗಿತ್ತು ಎಂದು ಹೇಳಿದರು.

ಈ ಹಿಂದೆ ಎಂದೂ ಇಂತಹ ಘಟನೆ ನಡೆದಿಲ್ಲ. ಈ ರೀತಿಯಲ್ಲಿ ನನ್ನ ಚಾರಿತ್ರಹರಣವೂ ಆಗಿಲ್ಲ. ನಾನು ಟಿಕೆಟ್ಗಾಗಿ 10 ಲಕ್ಷ ರೂ. ಪಡೆದಿದ್ದೇನೆಂಬ ಸುಳ್ಳು ಆರೋಪವನ್ನೂ ಮಾಡಲಾಗಿದೆ. ನಾನು ವಿಧಾನಸಭೆಗೆ ಚುನಾವಣೆಗೆ ಸ್ಪರ್ಧಿಸಿದ ವೇಳೆಯಲ್ಲೂ ಯಾರಲ್ಲೂ ಹಣ ದೇಣಿಗೆ ಕೇಳಿಲ್ಲ. ಪಕ್ಷದಿಂದಲೂ ಹಣ ಪಡೆಯದೆ ನಾನೇ ಖರ್ಚು ಮಾಡಿದ್ದೇನೆ. ಇದೀಗ ನಾನು ಟಿಕೆಟ್ಗಾಗಿ 10 ರೂ. ಕೂಡಾ ಪಡೆದಿದ್ದರೆ ನಾನು ನೇರವಾಗಿ ಮನೆ ಮುಟ್ಟಲಿಕ್ಕಿಲ್ಲ. ಈಗಷ್ಟೇ ಮಸೀದಿಯಲ್ಲಿ ಪ್ರಾರ್ಥನೆ ಸಲ್ಲಿಸಿ ಬಂದಿದ್ದೇನೆ ಎಂದು ಅವರು ಹೇಳಿದರು.

ಪಕ್ಷಕ್ಕಾಗಿ ಪ್ರಾಮಾಣಿಕವಾಗಿ ಕೆಲಸ ಮಾಡಿ ಪೆಟ್ಟು ತಿನ್ನುವುದಲ್ಲದೆ ಲಂಚ ಪಡೆದಿದ್ದೇನೆಂಬ ಆರೋಪವನ್ನೂ ಕೇಳಬೇಕಾಗಿರುವುದು ಬೇಸರ ಮೂಡಿಸಿದೆ. ಹಾಗಿದ್ದರೂ ನಾನು ಪ್ರಕರಣದ ಬಗ್ಗೆ ದೂರು ನೀಡಿರಲಿಲ್ಲ. ಆದರೆ ರಾತ್ರಿ ಹೊತ್ತು ಕಿವಿಯಲ್ಲಿ ನೋವು ಕಾಣಿಸಿಕೊಂಡ ಕಾರಣ ನಿನ್ನೆ ಆಸ್ಪತ್ರೆಗೆ ದಾಖಲಾಗಿದ್ದೆ. ಆ ಸಂದರ್ಭ ಪೊಲೀಸರು ಬಂದು ಮಾಹಿತಿ ಪಡೆದುಕೊಂಡು ಹೋಗಿದ್ದಾರೆ. ಹಲ್ಲೆ ಘಟನೆ ನಡೆದ ದಿನದಂದು ಸಾವಿರಾರು ಸಂಖ್ಯೆಯಲ್ಲಿ ಸೇರಿದ್ದ ಬೆಂಬಲಿಗರನ್ನು ಯಾವುದೇ ರೀತಿಯಲ್ಲಿ ಹಾನಿ ಮಾಡದಂತೆ ಸಮಾಧಾನ ಮಾಡಿ ಕಳುಹಿಸಿದ್ದೆ. ನಾನು ಗಾಂಧಿ ತತ್ವವನ್ನು ಅನುಸರಿಸುವವ. ಹಾಗಾಗಿ ನಾನು ಯಾವುದೇ ದೂರು ನೀಡಲು ಹೋಗಿಲ್ಲ ಎಂದು ಮೊಯ್ದಿನ್ ಬಾವ ಹೇಳಿದರು.

ಚೊಕ್ಕಬೆಟ್ಟು ಕ್ಷೇತ್ರದಲ್ಲಿ ಮೂರು ಬಾರಿ ಕಾಂಗ್ರೆಸ್ನಿಂದ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ಗುಲ್ಝಾರ್ ಬಾನು ಎರಡು ಬಾರಿ ಗೆದ್ದು, ಮೇಯರ್ ಆಗಿದ್ದರು. ಕಳೆದ ಸಂದರ್ಭ ಮೀಸಲಾತಿಯಡಿ ಸಾಮಾನ್ಯ ಅಭ್ಯರ್ಥಿಗೆ ಅವಕಾಶವಿದ್ದರೂ ಮತ್ತೆ ಅವರಿಗೇ ನೀಡಿದ್ದರಿಂದ ಸೋಲಬೇಕಾಯಿತು. ಆಕಾಂಕ್ಷಿಗಳಿಗೆ ತಮಗೆ ಟಿಕೆಟ್ ಸಿಗಬೇಕೆಂಬ ಆಶಯವಿರುತ್ತದೆ. ಕಾಂಗ್ರೆಸ್ ಪಕ್ಷ ನಿಂತ ನೀರಾಗಬಾರದು. ಹೊಸ ಮುಖಗಳಿಗೆ ಅವಕಾಶ ನೀಡಬೇಕೆಂಬ ನಿಟ್ಟಿನಲ್ಲಿ ವೀಕ್ಷಕರು ಈ ಬಾರಿಯೂ ಕ್ಷೇತ್ರಲ್ಲಿ ಅಹವಾಲುಗಳನ್ನು ಕೇಳಿದ್ದರು. ಸಾರ್ವಜನಿಕವಾಗಿ ಚೊಕ್ಕಬೆಟ್ಟುವಿನಲ್ಲಿ ನಾನು ವಿವರ ನೀಡಿದ್ದೆ. ಗೆಲ್ಲುವ ಅಭ್ಯರ್ಥಿಯನ್ನು ಈ ಬಾರಿ ಈ ಕ್ಷೇತ್ರದಲ್ಲಿ ಆಯ್ಕೆ ಮಾಡುವುದು ಅನಿವಾರ್ಯವಾಗಿತ್ತು. ಅದರಂತೆ ಮಾಜಿ ಶಾಸಕ ಬಿ ಎ ಉಮರಬ್ಬ ಅವರ ಪುತ್ರಿ ಉನ್ನತ ಶಿಕ್ಷಣ ಪಡೆದವರಾಗಿದ್ದು, ಅವರಿಗೆ ಟಿಕೆಟ್ ನೀಡಲಾಗಿದೆ ಎಂದು ಅವರು ಹೇಳಿದರು.

ವಿಧಾನಸಭಾ ಚುನಾವಣೆ ಸಂದರ್ಭದಲ್ಲೂ ಗುಲ್ಝಾರ್ ಬಾನು ನನ್ನ ಜತೆ ದುಡಿದಿದ್ದಾರೆ. ಅವರ ಬಗ್ಗೆ ಅಪಾರ ಗೌರವವಿದೆ. ಕಳೆದ ವಿಧಾನಸಭಾ ಚುನಾವಣೆಯಲ್ಲಿ ಚೊಕ್ಕಬೆಟ್ಟು ಕ್ಷೇತ್ರದಲ್ಲಿ 2800 ಮತಗಳಿಂದ ಲೀಡ್ ಇದ್ದೆ. ಲೋಕಸಭಾ ಚುನಾವಣೆಯಲ್ಲೂ ಈ ಕ್ಷೇತ್ರದಲ್ಲಿ ಕಾಂಗ್ರೆಸ್ ಲೀಡ್ ಪಡೆದಿತ್ತು. ಆದರೆ ಕಳೆದ ಮನಪಾ ಚುನಾವಣೆಯಲ್ಲಿ ಆ ಕ್ಷೇತ್ರದಲ್ಲಿ ಎಸ್ಡಿಪಿಐಯ ಅಯಾಝ್ ಜಯಗಳಿಸಿದ್ದರು. ಆ ಕ್ಷೇತ್ರದಲ್ಲಿ ಎರಡು ಬಾರಿ ಗೆದ್ದಿದ್ದ ಗುಲ್ಝಾರ್ ಬಾನು ಅವರಿಗೆ ಕಳೆದ ಬಾರಿ ಆ ಕ್ಷೇತ್ರ ಸಾಮಾನ್ಯ ಮೀಸಲಾತಿ ಬಂದಿದ್ದರೂ ಟಿಕೆಟ್ ನೀಡಲಾಗಿತ್ತು. ಆದರೆ ಸಾಮಾನ್ಯ ಕ್ಷೇತ್ರದಲ್ಲಿ ಮತ್ತೆ ಮಹಿಳೆಗೆ ನೀಡಿದ ಕಾರಣಕ್ಕೆ ಗುಲ್ಝಾರ್ ಬಾನು ಜತೆಗಿದ್ದ ಅಯಾಝ್ ಅಸಮಾಧಾನಗೊಂಡು ಎಸ್ಡಿಪಿಐಯಿಂದ ಸ್ಪರ್ಧಿಸಿದ್ದರು. ಹಾಗಾಗಿ ಈ ಬಾರಿ ಆ ಕ್ಷೇತ್ರದಲ್ಲಿ ಕಾಂಗ್ರೆಸ್ ಗೆಲುವಿಗಾಗಿ ಹೊಸ ಅಭ್ಯರ್ಥಿ ಸ್ಪರ್ಧೆ ಅನಿವಾರ್ಯ ಎಂದು ಮೊಯ್ದಿನ್ ಬಾವ ಹೇಳಿದರು.

ಮಂಗಳೂರು ಉತ್ತರ ವಿಧಾನಸಭಾ ವ್ಯಾಪ್ತಿಗೆ ಮನಪಾದ 23 ವಾರ್ಡ್ಗಳು ಒಳಪಡುತ್ತವೆ. ಕಳೆದ ಅವಧಿಯಲ್ಲಿ ಮನಪಾದ 60 ವಾರ್ಡ್ಗಳಲ್ಲಿ ಅಭೂತಪೂರ್ವ ಅಭಿವೃದ್ಧಿ ಕಾಮಗಾರಿಗಳು ನಡೆದಿದ್ದು, ಇದಕ್ಕೆ ಸಿದ್ದರಾಮಯ್ಯ ನೇತೃತ್ವದ ಸರಕಾರ ಕಾರಣ. ವಿಧಾನಸಭೆಯಲ್ಲಿ ಬಿಜೆಪಿ ಕೋಮು ಭಾವನೆಯನ್ನು ಕೆರಳಿಸಿದ್ದರಿಂದ ಪಕ್ಷಕ್ಕೆ ಸೋಲಾಗಿರಬಹುದು. ಈ ಬಾರಿ ಮನಪಾದಲ್ಲಿ ಮತ್ತೆ ಕಾಂಗ್ರೆಸ್ ಅಧಿಕಾರಕ್ಕೆ ತರಬೇಕಿದೆ ಎಂದು ಅವರು ಹೇಳಿದರು.


Spread the love