ಡ್ರಗ್ಸ್ ಮಾಫಿಯಾ ನಿಯಂತ್ರಣಕ್ಕೆ ಉಡುಪಿ ಜಿಲ್ಲೆಯಲ್ಲಿ ವಿಶೇಷ ಪೊಲೀಸ್ ತಂಡ – ಬಸವರಾಜ ಬೊಮ್ಮಾಯಿ

Spread the love

ಡ್ರಗ್ಸ್ ಮಾಫಿಯಾ ನಿಯಂತ್ರಣಕ್ಕೆ ಉಡುಪಿ ಜಿಲ್ಲೆಯಲ್ಲಿ ವಿಶೇಷ ಪೊಲೀಸ್ ತಂಡ – ಬಸವರಾಜ ಬೊಮ್ಮಾಯಿ

ಬೈಂದೂರು: ಇನ್ನೆರಡು ವರ್ಷಗಳಲ್ಲಿ ರಾಜ್ಯ ಪೊಲೀಸ್ ಇಲಾಖೆಯಲ್ಲಿ 16 ಸಾವಿರ ಪೊಲೀಸ್ ಕಾನ್ಸ್ಟೇಬಲ್ಗಳು, ಒಂದು ಸಾವಿರ ಸಬ್ ಇನ್ಸ್ಪೆಕ್ಟರ್ಗಳನ್ನು ನೇಮಕ ಮಾಡಿಕೊಳ್ಳಲಾಗುವುದು ಎಂದು ಗೃಹ ಸಚಿವ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.

ಅವರು ಶುಕ್ರವಾರ ಬೈಂದೂರು ವೃತ್ತನಿರೀಕ್ಷಕರ ಕಚೇರಿ ಉದ್ಘಾಟನಾ ಸಮಾರಂಭಕ್ಕೆ ಆಗಮಿಸಿದ ವೇಳೆಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ ಸುಮಾರು 16,000 ಕಾನ್ಸ್ಟೇಬಲ್ಗಳನ್ನು, ಸಾವಿರಕ್ಕೂ ಹೆಚ್ಚು ಪಿಎಸ್ಐಗಳನ್ನು ಮುಂಬರುವ ಎರಡುವರೆ ವರ್ಷಗಳೊಳಗೆ ತುಂಬಬೇಕು ಮತ್ತು ಈ ವರ್ಷವೇ 6,000 ಸಿಬ್ಬಂದಿಗಳನ್ನು ಭರ್ತಿ ಮಾಡಲು ಈಗಾಗಲೇ ಅಧಿಸೂಚನೆಗಳನ್ನು ಹೊರಡಿಸಿದ್ದೇವೆ. ಮುಂದಿನ ದಿನಗಳಲ್ಲಿ ವಿಶೇಷವಾಗಿ ಉಡುಪಿ, ದ.ಕ ಜಿಲ್ಲೆಗಳ ವಿವಿಧ ಠಾಣೆಗಳಲ್ಲಿರುವ ಪೊಲೀಸ್ ಸಿಬ್ಬಂದಿಗಳ ಕೊರತೆಯನ್ನು ನೀಗಿಸುವ ಕೆಲಸಕ್ಕೆ ಮುಂದಾಗುತ್ತೇವೆ ಎಂದರು.

ಉಡುಪಿ, ಮಣಿಪಾಲ ಹಾಗೂ ಜಿಲ್ಲೆಯ ಗ್ರಾಮೀಣ ಭಾಗಗಳಲ್ಲಿರುವ ಯುವಕರು ಮಾದಕ ವ್ಯಸನಕ್ಕೆ ಬಲಿಯಾಗುತ್ತಿದ್ದಾರೆ. ಈಗಾಗಲೇ ಉಡುಪಿ ಪೊಲೀಸ್ ವರಿಷ್ಠಾಧಿಕಾರಿಗಳಿಗೆ ಮಾದಕ ವ್ಯಸನವನ್ನು ಸಂಪೂರ್ಣವಾಗಿ ತೊಡೆದುಹಾಕಬೇಕು ಮತ್ತು ಮಾದಕ ವ್ಯಸನ ಮಾರಾಟ ಜಾಲವನ್ನು ಪತ್ತೆ ಹಚ್ಚಿ ಎಲ್ಲಾ ರೀತಿಯ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಸೂಚನೆ ನೀಡಿದ್ದೇನೆ. ಇದಕ್ಕಾಗಿಯೇ ವಿಶೇಷ ಪೊಲೀಸರ ತಂಡವನ್ನು ರಚನೆ ಮಾಡಿದ್ದೇವೆ. ಇನ್ನು ಕೆಲವೇ ದಿನಗಳಲ್ಲಿ ದೊಡ್ಡ ಪ್ರಮಾಣದಲ್ಲಿ ಡ್ರಗ್ಸ್ ಮಾಫಿಯಾವನ್ನು ನಿಯಂತ್ರಣ ಮಾಡುತ್ತೇವೆ ಎಂದರು.

ಎರಡು ಜಿಲ್ಲೆಗಳ ಉಸ್ತುವಾರಿಯನ್ನು ವಹಿಸಿಕೊಂಡಿದ್ದೇನೆ. ಜೊತೆಗೆ ಗೃಹ ಮತ್ತು ಸಹಕಾರ ಸಚಿವನಾಗಿ ಇಡೀ ರಾಜ್ಯವನ್ನು ನೋಡಿಕೊಳ್ಳುವ ಜವಾಬ್ದಾರಿ ನನ್ನ ಮೇಲಿದೆ. ಹೀಗಾಗಿ ಹೆಚ್ಚಿನ ಸಮಯವನ್ನು ಉಡುಪಿಯಲ್ಲಿ ಕಳೆಯಲು ಸಾಧ್ಯವಿಲ್ಲ. ನನ್ನ ಜವಾಬ್ದಾರಿಗಳನ್ನು ಮನದಲ್ಲಿಟ್ಟುಕೊಂಡು ತಿಂಗಳಿಗೆ ಎರಡು ಬಾರಿಯಾದರೂ ಭೇಟಿ ನೀಡಿ ಜನರ ಸಮಸ್ಯೆಗೆ ಸ್ಪಂದಿಸುತ್ತೇನೆ ಎಂದು ಹೇಳಿದರು.

ಈ ಹಿಂದೆ ಕುಂದಾಪುರದಲ್ಲಿ ಮಹಿಳಾ ಠಾಣೆ ಕಾರ್ಯಾಚರಿಸುತ್ತಿದ್ದು, ಅದನ್ನು ಜಿಲ್ಲಾ ಕೇಂದ್ರಕ್ಕೆ ಸ್ಥಳಾಂತರಿಸಬೇಕೆಂಬ ಉದ್ದೇಶದಿಂದ ಉಡುಪಿಗೆ ಸ್ಥಳಾಂತರಿಸಲಾಗಿದೆ. ಹಲವು ಹೋರಾಟದ ಭಾಗವಾಗಿ ಕುಂದಾಪುರದಲ್ಲಿ ಮಹಿಳಾ ಠಾಣೆ ಸ್ಥಾಪನೆಯಾಗಿದೆ ಎನ್ನುವುದನ್ನು ತಿಳಿದಿದ್ದೇನೆ. ಕುಂದಾಪುರಕ್ಕೆ ಮಹಿಳಾ ಠಾಣೆಯ ಅವಶ್ಯವಿದೆ ಎಂದು ಈ ಭಾಗದ ಪೊಲೀಸ್ ಅಧಿಕಾರಿಗಳು ಪ್ರಸ್ತಾವವನ್ನು ಕಳುಹಿಸಿದ್ದಾರೆ. ಆದಷ್ಟು ಬೇಗ ಕುಂದಾಪುರದಲ್ಲಿ ಮೊದಲಿನಂತೆ ಮಹಿಳಾ ಠಾಣೆ ಕಾರ್ಯನಿರ್ವಹಿಸುವ ಕುರಿತು ಜರುಗಿಸಬೇಕಾದ ಅಗತ್ಯ ಕ್ರಮಗಳನ್ನು ಶೀಘ್ರವೇ ಕೈಗೊಳ್ಳುತ್ತೇವೆ ಎಂದು ಗೃಹ ಸಚಿವ ಬಸವರಾಜ್ ಬೊಮ್ಮಾಯಿ ಭರವಸೆ ವ್ಯಕ್ತಪಡಿಸಿದರು.


Spread the love