ಮನಸ್ಮಿತ ಫೌಂಡೇಶನ್ ವತಿಯಿಂದ ಯುವ ಗಾಯಕ ರಾಜೇಶ್ ಕೃಷ್ಣನ್ ಅವರಿಗೆ ಡಾ|ಎಸ್ ಜಾನಕಿ ರಾಷ್ಟ್ರೀಯ ಪ್ರಶಸ್ತಿ

Spread the love

ಮನಸ್ಮಿತ ಫೌಂಡೇಶನ್ ವತಿಯಿಂದ ಯುವ ಗಾಯಕ ರಾಜೇಶ್ ಕೃಷ್ಣನ್ ಅವರಿಗೆ ಡಾ|ಎಸ್ ಜಾನಕಿ ರಾಷ್ಟ್ರೀಯ ಪ್ರಶಸ್ತಿ

ಉಡುಪಿ: ಕಳೆದ 20 ವರ್ಷಗಳಿಂದ ಗಾಯಕರಾಗಿ ಜನಮನದಲ್ಲಿ ಮಾದುರ್ಯ ಧ್ವನಿಸುತ್ತಿರುವ ಯುವ ಗಾಯಕ ರಾಜೇಶ್ ಕೃಷ್ಣನ್ ಅವರಿಗೆ ಮೊದಲ ವರ್ಷದ ಪ್ರತಿಷ್ಠಿತ ಡಾ|ಎಸ್ ಜಾನಕಿ ರಾಷ್ಟ್ರೀಯ ಪ್ರಶಸ್ತಿ -2018 ನೀಡಿ ಗೌರವಿಸಲಾಗುವುದು ಎಂದು ಮನಸ್ಮಿತ ಫೌಂಡೇಶನ್ ಕೋಟ ಇದರ ಅಧ್ಯಕ್ಷ ಡಾ|ಸತೀಶ್ ಪೂಜಾರಿ ಹೇಳಿದರು.

ಅವರು ಗುರುವಾರ ಉಡುಪಿಯಲ್ಲಿ ಆಯೋಜಿಸಿದ ಸುದ್ದಿಗೋಷ್ಠಿಯಲ್ಲಿ ಮಾತನಾಡಿ ನಮ್ಮ ಕರಾವಳಿಯ ಸಮುದ್ರ ತೀರ ಸಾಹಿತ್ಯ ಸಂಗೀತ ಸಿನಿಮಾ ಚಟುವಟಿಕೆಗಳಿಗೆ ಸದಾ ಹೆಸರುವಾಸಿಯಾಗಿದ್ದು, ಇಲ್ಲಿನ ಮಣ್ಣಿನಲ್ಲಿ ಅರಳಿದ ಸಾಹಿತ್ಯ ಸಾಂಸ್ಕೃತಿಕ ಸೌರಭ ಜಗದಗಲ ಪಸರಿಸಿದೆ. ಕರಾವಳಿಯನ್ನು ವಿಶ್ವಮಾನ್ಯವನ್ನಾಗಿಸಿದ ಸ್ಪೂರ್ತಿಯಿಂದಲೋ ಏನೋ 4 ವರ್ಷಗಳ ಹಿಂದೆ ಭಾರತೀಯ ಚಿತ್ರರಂಗದ ಘನವೆತ್ತ ಗಾಯಕಿ, ದೇಶದ ವಿವಿಧ ಭಾಷೆಗಳಲ್ಲಿ ಸುಮಾರು 58000 ಹಾಡುಗಳನ್ನು ಹಾಡಿರುವ ಸ್ವರ ಸಾಮ್ರಾಜ್ಞೆ ಡಾ|ಎಸ್ ಜಾನಕಿಯವರನ್ನು ಕೋಟದ ಮನಸ್ಮಿತ ಫೌಂಡೇಶನ್ ಅಭಿನಂದಿಸಿತ್ತು.ಈ ಹಿನ್ನಲೆಯಲ್ಲಿ ಕುಂದಾಪುರದ ಯುವ ಗಾಯಕ ಡಾ| ಸತೀಶ್ ಪೂಜಾರಿ ಹಾಗೂ ಡಾ|ಪ್ರಕಾಶ್ ತೋಳಾರ್ ಸಾರಥ್ಯದಲ್ಲಿ ಮನಸ್ಮಿತ ಫೌಂಡೇಶನ್ ಕೋಟ 3018 ರಿಂದ ಗಾನಕೋಗಿಲೆ ಡಾ|ಎಸ್. ಜಾನಕಿಯವರ ಹೆಸರಿನಲ್ಲಿ ಭಾರತದಲ್ಲಿ ಮೊಟ್ಟ ಮೊದಲ ಬಾರಿಗೆ ಒಂದು ಲಕ್ಷ ನಗದು ಒಳಗೊಂಡಿರುವ ರಾಷ್ಟ್ರೀಯ ಪ್ರಶಸ್ತಿಯನ್ನು ಹುಟ್ಟು ಹಾಕಿದ್ದು, ಮೊದಲ ವರ್ಷದ ಪ್ರಶಸ್ತಿಗೆ ಕನ್ನಡ ಚಲನಚಿತ್ರರಂಗದಲ್ಲಿ ಕಳೆದ 20 ವರ್ಷಗಳಿಂದ ಗಾಯಕರಾಗಿ ಜನಮನದಲ್ಲಿ ಮಾದುರ್ಯ ಧ್ವನಿಸುತ್ತಿರುವ ಯುವ ಗಾಯಕ ರಾಜೇಶ್ ಕೃಷ್ಣನ್ ಅವರನ್ನು ಆಯ್ಕೆ ಮಾಡಲಾಗಿದೆ.

ಫೆಬ್ರವರಿ 24 ರಂದು ಶನಿವಾರ ಸಂಜೆ ಕುಂದಾಪುರ-ಕೋಟೇಶ್ವರದ ಯುವ ಮೆರಿಡಿಯನ್ ಸಹಭಾಗಿತ್ವದೊಂದಿಗೆ ಒಪೆರಾ ಪಾರ್ಕ್ ಆವರಣದಲ್ಲಿ ಪ್ರಶಸ್ತಿ ಪ್ರದಾನ ಹಾಗೂ ಅದ್ದೂರಿ ರಸಮಂಜರಿ ಕಾರ್ಯಕ್ರಮ ಆಯೋಜಿಸಲಾಗಿದೆ. ಭಾರತದ ಅಗ್ರಗಣ್ಯ ಗಾಯಕಿ ಡಾ|ಎಸ್ ಜಾನಕಿ ಅವರ ಹೆಸರಿನಲ್ಲಿ ಪ್ರಶಸ್ತಿ ಪ್ರದಾನ ಮಾಡಲು ಸಂಸ್ಥೆಗೆ ಅವಕಾಶ ಸಿಕ್ಕಿರುವುದು ಹೆಮ್ಮೆಯ ಸಂಗತಿ ಎಂದರು.

ಸುದ್ದಿಗೋಷ್ಟಿಯಲ್ಲಿ ಮನಸ್ಮಿತ ಫೌಂಡೇಶನ್ ಇದರ ವೈದ್ಯಕೀಯ ನಿರ್ದೇಶಕರಾದ ಡಾ. ಪ್ರಕಾಶ್ ತೋಳಾರ್, ಉಡುಪಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಇದರ ಪ್ರಧಾನ ಕಾರ್ಯದರ್ಶಿ ಸುಬ್ರಹ್ಮಣ್ಯ ಶೆಟ್ಟಿ, ರಾಷ್ಟ್ರಪ್ರಶಸ್ತಿ ವಿಜೇತ ರಿಸರ್ವೇಶನ್ ಚಿತ್ರದ ನಿರ್ಮಾಪಕ ಯಾಕೂಬ್ ಖಾದರ್ ಗುಲ್ವಾಡಿ ಉಪಸ್ಥಿತರಿದ್ದರು.


Spread the love