ಮನುಷತ್ವವನ್ನು ಉಳಿಸಿಕೊಂಡಿರುವ ದೇಶ ಭಾರತ : ಡಿ.ವಿ.ಸದಾನಂದ ಗೌಡ

Spread the love

ಮನುಷತ್ವವನ್ನು ಉಳಿಸಿಕೊಂಡಿರುವ ದೇಶ ಭಾರತ : ಡಿ.ವಿ.ಸದಾನಂದ ಗೌಡ

ಬಾರ್ಕೂರು: ಕರಾವಳಿ ಒಂದು ಅದ್ಭುತ ಪ್ರದೇಶ, ಇಲ್ಲಿನ ಜನರನ್ನು ಪ್ರಪಂಚದ ಯಾವ ಮೂಲೆಯಲ್ಲೂ ಬೇಕಾದರು ಕಾಣ ಸಿಗುವಷ್ಟು ಪ್ರತಿಭಾವಂತರು, ಪ್ರಪಂಚದ ಅತ್ಯುನ್ನತ ಹುದ್ದೆಯನ್ನು ಅಲಂಕರಿಸಿದವರು. ಯಾವ ಭಾಗದಲ್ಲಿ ಸಂಸ್ಕøತಿ ಸಂಸ್ಕಾರ ಪ್ರೀತಿ ವಿಶ್ವಾಸಗಳು ನೆಲೆಯಾಗಿರುತ್ತದೆಯೋ ಅಲ್ಲಿ ದೈವಿ ಶಕ್ತಿ ನೆಲೆಯಾಗಿರುತ್ತದೆ. ಪ್ರಪಂಚದಲ್ಲಿ ಮನುಷತ್ವವನ್ನು ಇನ್ನೂ ಕೂಡ ಉಳಿಸಿಕೊಂಡಿರುವ ದೇಶ ನಮ್ಮ ಭಾರತ ದೇಶ ಎಂದು ಕೇಂದ್ರ ಸಚಿವ ಡಿ.ವಿ.ಸದಾನಂದ ಗೌಡ ಹೇಳಿದರು.

ಅವರು ಬಾರ್ಕೂರು ಭಾರ್ಗವ ಬೀಡುವಿನಲ್ಲಿ ಶ್ರೀ ಬಾರ್ಕೂರು ಮಹಾ ಸಂಸ್ಥಾನಂ ಭಾರ್ಗವ ಬೀಡು ಬಾರ್ಕೂರು ಇದರ ಲೋಕಾರ್ಪಣೆ ಹಾಗೂ ಶ್ರೀ ನಾಗದೇವರ ಮತ್ತು ಮೂಲ ದೈವಗಳ ಪುನರ್ ಪ್ರತಿ ಷ್ಠಾಪನೆ ಮತ್ತು ಪರಮ ಪವಿತ್ರ ಮಹಾನಾಗಮಂಡಲೋತ್ಸವದ ಪ್ರಯುಕ್ತ ಆಯೋಜಿಸಲಾದ 2ನೇ ದಿನದ ಸಭಾ ಕಾರ್ಯಕ್ರಮಗಳಿಗೆ ಚಾಲನೆ ನೀಡಿ ಮಾತನಾಡಿದರು. ಇಂದು ನಮ್ಮಿಂದ ನಂಬಿಕೆ ಬಲ ನೀಡುವ ಕೆಲಸವಾಗಬೇಕಿದೆ. ದೈವಿಕ ಕಾರ್ಯಗಳನ್ನು ನಡೆಸುವುದರಿಂದ ನಮಗೆ ಮಾನಸಿಕ ನೆಮ್ಮದಿ ಸಿಗುತ್ತದೆ. ಮಾನಸಿಕ ನೆಮ್ಮದಿಯಿಲ್ಲದೇ ಇದ್ದರೆ ನಾವು ಗಳಿಸಿ ಹೆಸರು ಆಸ್ತಿ ಐಶ್ವರ್ಯಗಳು ನಗಣ್ಯವೆನಿಸುತ್ತದೆ. ನಮ್ಮ ಮನೆಯಲ್ಲಿ ಕುಳಿತು ದೇವರ ಪೂಜೆ ಮಾಡುವುದು ಉತ್ತಮವಾದರೂ ಕೂಡ ಸಾಮೂಹಕವಾಗಿ ದೈವಿಕ ಕಾರ್ಯಗಳನ್ನು ಮಾಡುವುದರಿಂದ ಸಮಾಜಕ್ಕೆ ಒಳಿತಾಗುತ್ತದೆ. ಇಂದು ಗುರುಗಳೊಂದಿಗೆ ನೀವು ಕೈ ಜೋಡಿಸಿ ಇಂತಹ ಮಹಾತ್ಕಾರ್ಯ ಮಾಡುತ್ತಿರುವುದು ಮತ್ತು ಇಷ್ಟೋಂದು ಮಂದಿ ಸೇರಿರುವುದು ಸಂತಸದ ವಿಚಾರ. ಕರಾವಳಿಯಲ್ಲಿ ತುಳುನಾಡಿನ ಸಂಸ್ಕøತಿ ಸಂಸ್ಕಾರ ಮತ್ತು ಆಚರಣೆಯನ್ನು ಮುಂದುವರಿಕೊಂಡು ಹೋಗಬೇಕಾದ ಅಗತ್ಯತೆ ಇದೆ. ಮುಂದೆ ಬಾರ್ಕೂರು ಜಗತ್ತಿನಲ್ಲಿಯೇ ಅತ್ಯಂತ ದೊಡ್ಡ ದೈವಿಕ ಕೇಂದ್ರವಾಗಿ ಬೆಳಗುವುದರಲ್ಲಿ ಯಾವುದೇ ಸಂಶಯವಿಲ್ಲ ಎಂದರು.

ಬಾರ್ಕೂರು ಮಹಾಸಂಸ್ಥಾನದ ವಿಶ್ವ ಸಂತೋಷ ಭಾರತಿ ಶ್ರೀಪಾದರು ತಮ್ಮ ಸಂಸ್ಥಾನವಾನಿಯಲ್ಲಿ, ಹಿಂದೆ ಸಂಸ್ಥಾನದ ಪ್ರಾರಂಭಿಸುವಾಗ ನಮ್ಮೊಂದಿಗೆ ಇದ್ದ 8 ಕಂಬಗಳು ಇಂದು 1008 ಕಂಬಗಳಾಗಿವೆ. ಇದಕ್ಕೆ ಕಾರಣ ಮನುಷ್ಯ ಶಕ್ತಿ ಮಾತ್ರವಲ್ಲ ಅವ್ಯಕ್ತವಾದ ನಾವು ನಂಬಿದ ದೈವ ದೇವರುಗಳು ಸಹಕಾರವಿರುವುದರಿಂದ ಸಂಸ್ಥಾನ ಇಂದು ಹಂತ ತಲುಪಿದೆ. ಸಂಸ್ಥಾನ ಸ್ಥಾಪನೆಯ ವಿಚಾರವಾಗಿ 2 ಲಕ್ಷದ 37 ಸಾವಿರ ಕಿಮೀ ತಿರುಗಾಟ ನಡೆಸಿ, ಬಂಟ ಬಾಂಧವರನ್ನು ಒಂದು ಸೂರಿನಡಿ ನಿಲ್ಲಿಸಿ ಮುಂದಿನ ಪೀಳಿಗೆ ಕೊಡುಗೆ ನೀಡಬೇಕು ಎನ್ನುವ ನಿಟ್ಟಿನಲ್ಲಿ ಯೋಜನೆ ರೂಪಿಸಲಾಗಿತ್ತು. ಇದು ದೈವಗಳ ಹೆಸರಿನಲ್ಲಿ ನಮ್ಮ ಸಮುದಾಯವನ್ನು ಒಗ್ಗೂಡಿಸುವ ಪ್ರಯತ್ನವೇ ಹೊರತು, ಓರ್ವ ವ್ಯಕ್ತಿ ಪೀಠವೇರಬೇಕು ಎನ್ನುವ ವಿಚಾರವಲ್ಲ. ಸಂಸ್ಥಾನ ಸ್ಥಾಪನೆ ಸಮುದಾಯದ ಅಭಿವೃದ್ದಿಗಾಗಿಯೇ ಹೊರತು ಪ್ರತಿಷ್ಠೆಗಾಗಿ ಅಲ್ಲ. ನಾವೇಲ್ಲರೂ ದೈವರ ಹೆಸರಿನಲ್ಲಿ ಒಂದಾಗಬೇಕಾದ ಅಗತ್ಯತೆ ಇದೆ ಎಂದರು.

ಪ್ರಕಾಶ್ ಶೆಟ್ಟಿ ಕಾರ್ಯಕ್ರಮದ ಅಧ್ಯಕ್ಷತೆವಹಿಸಿದ್ದರು ಕಾರ್ಯಕ್ರಮದಲ್ಲಿ ಶಾಸಕ ಸಿಟಿ ರವಿ, ಉದ್ಯಮಿ ಪದ್ಮಶ್ರೀ ಡಾ.ಬಿ.ಆರ್.ಶೆಟ್ಟಿ, ಆರ್‍ಎಸ್‍ಎಸ್ ಪ್ರಮುಖ ಕಲ್ಲಡ್ಕ ಪ್ರಭಾಕರ ಭಟ್, ಮುಂಬಯಿ ಬಂಟರ ಸಂಘದ ಅಧ್ಯಕ್ಷ ಎಲ್.ಪ್ರಭಾಕರ ಶೆಟ್ಟಿ, ಮುಂಬಯಿ ಬಂಟ್ಸ ಅಸೋಸಿಯೇಶನ್ ಅಧ್ಯಕ್ಷ ಉಪ್ಪೂರು ಶೇಖರ ಶೆಟ್ಟಿ, ವಿಶ್ವ ಬಂಟರ ಒಕ್ಕೂಟದ ಐಕಳ ಹರೀಶ ಶೆಟ್ಟಿ, ಉದ್ಯಮಿ ಕುಸುಮೋದರ ಶೆಟ್ಟಿ, ಉದ್ಯಮಿ ಬಿ.ವಿವೇಕ್ ಶೆಟ್ಟಿ, ಕಚ್ಚೂರು ನಾಗೇಶ್ವರ ದೇವಸ್ಥಾನದ ಆಡಳಿತ ಮೊಕ್ತೇಸರ ಕಡಂದಲೆ ಸುರೇಶ್ ಭಂಡಾರಿ, ರಾಜಶೇಖರ ಗುಳ್ಳದ ಗುಡ್ಡ, ವಿಶ್ವವಸ್ತ ಮಂಡಳಿಯ ಸರ್ವ ಸದಸ್ಯರು ಉಪಸ್ಥಿತರಿದ್ದರು.

ಗುರ್ಮೆ ಸುರೇಶ್ ಬಿ ಶೆಟ್ಟಿ ಸ್ವಾಗತಿಸಿದರು, ಅಕ್ಷಯ ಹೆಗ್ಡೆ ಕಾರ್ಯಕ್ರಮ ನಿರೂಪಿಸಿದರು.


Spread the love