ಮನೆಯಲ್ಲಿಯೇ ತರಕಾರಿ ಬೆಳೆಸಿ ಮಾದರಿಯಾದ ಆಲ್ವಿನ್ ಅಂದ್ರಾದೆ ದಂಪತಿ

Spread the love

ಮನೆಯಲ್ಲಿಯೇ ತರಕಾರಿ ಬೆಳೆಸಿ ಮಾದರಿಯಾದ ಆಲ್ವಿನ್ ಅಂದ್ರಾದೆ ದಂಪತಿ

ಬ್ರಹ್ಮಾವರ: ವೃತ್ತಿಯಲ್ಲಿ ಛಾಯಾಗ್ರಾಹಕನಾಗಿ, ನಾಟಕ ನಿರ್ದೇಶಕ, ಕಲಾವಿದನಾಗಿ, ಬ್ರಹ್ಮಾವರ ರೋಟರಿ ಅಧ್ಯಕ್ಷರಾಗಿ, ಆಸುಪಾಸಿನ ಹಲವಾರು ಸಂಘ ಸಂಸ್ಥೆಗಳಲ್ಲಿ ಸಕ್ರಿಯಾವಿ ತನ್ನನ್ನು ತೊಡಗಿಸಿಕೊಂಡಿದ್ದರೂ, ತನ್ನ ಬಿಡುವಿನ ಸಮಯದಲ್ಲಿ ಸದಾ ಮನೆಯ ಗಿಡಗಳ ಜೊತೆ ಕಾಲ ಕಳೆಯುವ ಸಾಸ್ತಾನ ಪಾಂಡೇಶ್ವರದ ಆಲ್ವಿನ್ ಅಂದ್ರಾದೆ ಮತ್ತು ಸುಜಾತ ಅಂದ್ರಾದೆ ಮನಸ್ಸಿದ್ದರೆ ಮಾರ್ಗ ಎನ್ನುವುದಕ್ಕೆ ಸಾಕ್ಷಿಯಾಗಿದ್ದಾರೆ.

alwyn-vegitable-story-04 alwyn-vegitable-story-00 alwyn-vegitable-story-01

ಸಾಸ್ತಾನದಿಂದ ಸುಮಾರು 1.5ಕಿ.ಮೀ ದೂರದಲ್ಲಿ ಪಾಂಡೇಶ್ವರ ಗ್ರಾಮದಲ್ಲಿರುವ ಆಲ್ವಿನ್ ಅವರು ಬ್ರಹ್ಮಾವರದಲ್ಲಿ ಸ್ಟುಡಿಯೋ ಹೊಂದಿದ್ದರೂ ಕೃಷಿಯಲ್ಲಿ ಅಪಾರ ಪ್ರೇಮ ಹೊಂದಿದವರು. ಪತ್ನಿ ಸುಜಾತ ಅಂದ್ರಾದೆಯೊಂದಿಗೆ ತನ್ನ ಮನೆಯ ಸುತ್ತಮುತ್ತ ಇರುವ ಜಾಗದಲ್ಲಿ ಕೇವಲ ಸಾವಯವ ಗೊಬ್ಬರಗಳನ್ನು ಉಪಯೋಗಿಸಿ ರೋಗಮುಕ್ತ ತರಕಾರಿ ಮತ್ತು ಹಣ್ಣಿನ ಗಿಡಗಳನ್ನು ಬೆಳೆಸಿರುವುದಲ್ಲದೇ, ಬೆಳೆದ ತರಕಾರಿ ಮತ್ತು ಹಣ್ಣುಗಳನ್ನು ತಾವೂ ಬಳಸಿ, ಮನೆಯ ಸುತ್ತಮುತ್ತ ಇರುವವರಿಗೆ ಮತ್ತು ಸಮೀಪದ ಶಾಲೆಗೂ ನೀಡುತ್ತಿದ್ದಾರೆ.

ಹಸಿಮೆಣಸು, ಗೆಣಸು, ಬದನೆ, ದೊಣ್ಣೆ ಮೆಣಸು, ಬಸಳೆ, ಕ್ಯಾಬೇಜ್, ಟೊಮೆಟೊ, ಬೆಂಡೆ, ಸಪೋಟ, ಮುಳ್ಳುಸೌತೆ, ಬಾಳೆ, ಪೇರಳೆ, ಪಪ್ಪಾಯಿ, ಕಾಳು ಮೆಣಸು, ಮುಸುಂಬಿ, ಹೀಗೆ 30ಕ್ಕೂ ಹೆಚ್ಚು ತರಕಾರಿ, ಹಣ್ಣಿನ ಗಿಡಗಳನ್ನು ಬೆಳೆಸಿದ್ದಾರೆ. ಇದರೊಂದಿಗೆ ಅನೇಕ ಹೂವಿನ ಗಿಡಗಳು ಇವರ ಕೃಷಿ ತೋಟದ ಅಂದವನ್ನು ಹೆಚ್ಚಿಸಿದೆ. ಮನೆಯಂಗಳದಲ್ಲಿ ಚಿಕ್ಕ ಚಿಕ್ಕ ಪ್ಲಾಸ್ಟಿಕ್ ಬ್ಯಾಗ್‍ಗಳಲ್ಲಿ ಗಿಡಗಳನ್ನು ನೆಟ್ಟು ಪೋಷಿಸುವ ಇವರು ಸಾಮಾನ್ಯವಾಗಿ ಅರಸಿಕೆರೆಯಿಂದ ತರಕಾರಿ ಮತ್ತು ಇನ್ನಿತರ ಗಿಡಗಳನ್ನು ತಂದು ನೆಡುತ್ತಾರೆ. ರಾಸಾಯನಿಕ ಪದಾರ್ಥಗಳನ್ನು ಬಳಸದೇ ಕೇವಲ ಹಟ್ಟಿಗೊಬ್ಬರವನ್ನು ಬಳಸಿ ಬೆಳೆಸಿದ ಈ ತರಕಾರಿ, ಹಣ್ಣುಗಳಿಂದ ಆರೋಗ್ಯವೂ ಉತ್ತಮವಾಗಿರುತ್ತದೆ ಎಂದು ಆಲ್ವಿನ್ ಹೇಳುತ್ತಾರೆ.

alwyn-vegitable-story-02 alwyn-vegitable-story-03 alwyn-vegitable-story-05

ಮನೆಯಲ್ಲಿಯೇ ಹೂಕೋಸು : ಹೂಕೋಸು ಬೆಳೆಗೆ ರೋಗಗಳು ಅನೇಕ. ಆದ್ದರಿಂದ ಹೂಕೋಸಿಗೆ ಹೆಚ್ಚು ಕೀಟ ನಾಶಕಗಳನ್ನು ಬಳಸಲಾಗುತ್ತದೆ. ಆದರೆ ಕೇವಲ ಸಾವಯವ ಗೊಬ್ಬರವನ್ನು ಮಾತ್ರ ಬಳಸಿ ಯಾವುದೇ ರೋಗಬಾಧೆ ಇಲ್ಲದೇ ಹೂಕೋಸನ್ನು ಬೆಳೆಸಿದ ಕೀರ್ತಿ ಆಲ್ವಿನ್ ಅಂದ್ರಾದೆ ಅವರಿಗೆ ಸೇರಬೇಕು.

ಕೆಂಪು ಮಿಶ್ರಿತ ಮಣ್ಣಿನಲ್ಲಿ ಹೇರಳವಾಗಿ ಈ ಎಲ್ಲಾ ತರಕಾರಿಗಳನ್ನು ಬೆಳೆಸುತ್ತಿರುವ ಇವರು ಬ್ರಹ್ಮಾವರದ ಕೃಷಿವಿಜ್ಞಾನಿಗಳು,  ಅರಸಿಕೆರೆಯ ನರ್ಸರಿ, ಅಲ್ಲಿಯ ರೈತರ ಸಲಹೆಗಳು ಮತ್ತು ಆಸುಪಾಸಿನ ಕೃಷಿಯಲ್ಲಿ ಆಸಕ್ತಿ ಇರುವವರ ಸಲಹೆಗಳನ್ನು ಪಡೆದು ಹೊಸ ಹೊಸ ಗಿಡಗಳನ್ನು ಬೆಳೆಸಿ ಕರಾವಳಿ ಜಿಲ್ಲೆಯಲ್ಲೂ ಕೆಲವೊಂದು ತರಕಾರಿಗಳನ್ನು ಬೆಳೆಸಬಹುದು ಎನ್ನುವುದನ್ನು ತೋರಿಸಿಕೊಟ್ಟಿದ್ದಾರೆ. ಸಾಮಾನ್ಯವಾಗಿ ಮಳೆಗಾಲದಲ್ಲಿ ತರಕಾರಿ ಫಸಲು ಕಡಿಮೆ ಆದರೂ, ಮಳೆಗಾಲ ಮುಗಿದು ಚಳಿಗಾಲದ ಸಮಯದಲ್ಲಿ(ನವೆಂಬರ್‍ನಿಂದ ಫೆಬ್ರವರಿ)ಒಳ್ಳೆಯ ರೀತಿಯಲ್ಲಿ ಗಿಡಗಳನ್ನು ಆರೈಕೆ ಮಾಡಿದಲ್ಲಿ ಉತ್ತಮ ಫಸಲು ಪಡೆಯಬಹುದು ಎಂದು ಪತ್ನಿ ಸುಜಾತ ಅಂದ್ರಾದೆ ಹೇಳುತ್ತಾರೆ. ಒಟ್ಟಾರೆ ಬಿಡುವಿನ ಸಮಯದಲ್ಲಿ ಮನೆ, ಮನಕ್ಕೆ ಖುಷಿ ನೀಡಲು, ಆರೋಗ್ಯ ಕಾಪಾಡಿಕೊಳ್ಳಲು ಮನೆಯ ಸುತ್ತಮುತ್ತ ತರಕಾರಿ, ಹಣ್ಣು, ಹೂವಿನ ಗಿಡಗಳನ್ನು ನೆಡಿ, ಅದರೊಂದಿಗೆ ಕಾಲ ಕಳೆಯಿರಿ ಎನ್ನುವ ಈ ದಂಪತಿಗಳ ಕಾರ್ಯ ನಿಜಕ್ಕೂ ಇತರರಿಗೂ ಮಾದರಿಯಾಗಿದೆ.


Spread the love

1 Comment

Comments are closed.