ಮರಳು ಲಭ್ಯತೆ ಬಗ್ಗೆ ಸ್ಪಷ್ಟ ಮಾಹಿತಿ ನೀಡಿ- ದಿನಕರ ಬಾಬು

Spread the love

ಮರಳು ಲಭ್ಯತೆ ಬಗ್ಗೆ ಸ್ಪಷ್ಟ ಮಾಹಿತಿ ನೀಡಿ- ದಿನಕರ ಬಾಬು

ಉಡುಪಿ: ಜಿಲ್ಲೆಯಲ್ಲಿ ಜನ ಸಾಮಾನ್ಯರಿಗೆ ಮರಳು ದೊರೆಯುವ ಕುರಿತಂತೆ ಸ್ಪಷ್ಟವಾದ ಮಾಹಿತಿ ನೀಡಿ, ಪ್ರಕಟಣೆಯಲ್ಲಿ ನಿರ್ಮಿತಿ ಕೇಂದ್ರದ ಆವರಣದಲ್ಲಿ ಮರಳು ಲಭ್ಯವಿದೆ ಎಂದು ಪ್ರಕಟಣೆ ನೀಡುತ್ತೀರಿ, ಆದರೆ ಅಲ್ಲಿ ವಿಚಾರಿಸಿದಾಗ ಮರಳು ಲಭ್ಯವಿಲ್ಲ ಎಂಬ ಮಾಹಿತಿ ಸಿಗುತ್ತಿದೆ, ಆದ್ದರಿಂದ ಸಾರ್ವಜನಿಕರಿಗೆ ಸ್ಪಷ್ಟ ಮಾಹಿತಿ ನೀಡುವಂತೆ ಜಿಲ್ಲಾ ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಅಧಿಕಾರಿಗಳಿಗೆ ಜಿಲ್ಲಾ ಪಂಚಾಯತ್ ಅಧ್ಯಕ್ಷ ದಿನಕರ ಬಾಬು ಸೂಚಿಸಿದರು.

ಅವರು ಬುಧವಾರ, ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ನಡೆದ ಮಾಸಿಕ ಕೆಡಿಪಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಜಿಲ್ಲೆಯ ಸಾರ್ವಜನಿಕರು ಜನಪ್ರತಿನಿಧಿಗಳಾದ ನಮಗೆ ಮರಳು ಅಲಭ್ಯತೆ ಕುರಿತು ದೂರುತ್ತಿದ್ದು, ಈ ಕುರಿತು ವಿಚಾರಿಸಿಲು ನಾನೇ ಖುದ್ದಾಗಿ ಗಣಿ ಮತ್ತು ಭೂ ವಿಜ್ಞಾನ ಇಲಾಖೆಗೆ ಸಂಪರ್ಕಿಸಿದಾಗ ಟ್ರಿಪ್ ಶೀಟ್ ಇಲ್ಲ, ಸ್ಟಾಕ್ ಇಲ್ಲ ಎಂಬ ಉತ್ತರ ನೀಡುತ್ತೀರಿ, ಜನರಿಗೆ ವಿತರಿಸಲು ಲಭ್ಯವಿಲ್ಲವಾದಲ್ಲಿ, ಮರಳು ಲಭ್ಯವಿದೆ ಪಡೆಯಿರಿ ಎಂದು ಪತ್ರಿಕಾ ಪ್ರಕಟಣೆ ನೀಡುವ ಉದ್ದೇಶವಾದರೂ ಏನು, ಎಂದು ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಅಧಿಕಾರಿಗೆ ದಿನಕರ ಬಾಬು ಪ್ರಶ್ನಿಸಿದರು.

ಈ ಬಗ್ಗೆ ಉತ್ತರಿಸಿದ ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಅಧಿಕಾರಿ, ಜಿಲ್ಲೆಯ ನಾನ್ ಸಿಆರ್ಝಡ್ ವ್ಯಾಪ್ತಿಯಲ್ಲಿ ಮೊದಲ ಹಂತದಲ್ಲಿ 5 ಬ್ಲಾಕ್ಗಳಲ್ಲಿ ಮರಳು ತೆಗೆಯಲು ಅನುಮತಿ ನೀಡಿದ್ದು, ಇದರಲ್ಲಿ 16000 ಮೆ.ಟನ್ ಮಾತ್ರ ಮರಳು ದೊರೆತಿದ್ದು, 2 ನೇ ಹಂತದಲ್ಲಿ 11 ಬ್ಲಾಕ್ ಗಳನ್ನು ಗುರುತಿಸಿ, ಮರಳು ತೆಗೆಯುವ ಕುರಿತಂತೆ ಕೆ.ಸಿ.ಝಡ್.ಎಂ.ಎ (ಕರ್ನಾಟಕ ಕೋಸ್ಟಲ್ ಝೋನ್ ಮ್ಯಾನೇಜ್ ಮೆಂಟ್ ಅಥಾರಿಟಿ)ಗೆ ಅನುಮತಿ ಕೋರಿದ್ದು, ಶೀಘ್ರದಲ್ಲಿ ಅನುಮತಿ ದೊರೆಯುವ ನೀರೀಕ್ಷೆಯಿದೆ, ಈ 11 ಬ್ಲಾಕ್ಗಳಲ್ಲಿ 16 ಲಕ್ಷ ಮೆ.ಟನ್ ಮರಳು ದೊರೆಯಲಿದ್ದು, ಜಿಲ್ಲೆಯ ಒಟ್ಟು ಮರಳಿನ ಬೇಡಿಕೆ 13 ಲಕ್ಷ ಮೆ.ಟನ್ ಇದ್ದು, ಜಿಲ್ಲೆಯ ಅಗತ್ಯಕ್ಕೆ ಸಾಕಷ್ಟು ಮರಳು ದೊರೆಯಲಿದ್ದು, ಮರಳಿನ ದರ ಸಹ ಕಡಿಮೆಯಾಗಲಿದೆ ಎಂದು ಹೇಳಿದರು.

ಗಂಗಾ ಕಲ್ಯಾಣ ಯೋಜನೆಯಡಿ ವಿದ್ಯುದೀಕರಣ ಮಾಡುವ ಕುರಿತಂತೆ, ಪ.ಜಾತಿಗೆ ಸಂಬಂದಿಸಿದಂತೆ ಎಲ್ಲಾ 20 ಅರ್ಜಿಗಳು ಬಾಕಿ ಇರುವ ಕುರಿತು ತೀವ್ರ ಅಸಮಾಧಾನ ವ್ಯಕ್ತಪಡಿಸಿದ ಅಧ್ಯಕ್ಷರು, ಕೂಡಲೇ ಈ ಬಗ್ಗೆ ಕ್ರಮಕೈಗೊಂಡು ವರದಿ ನೀಡುವಂತೆ ಸೂಚಿಸಿದರು.

ಪಶುಪಾಲನಾ ಇಲಾಖೆ ವತಿಯಿಂದ ಗಿರಿರಾಜ ಕೋಳಿಗಳನ್ನು ವಿತರಿಸಲಾಗುವ, ಫಲನುಭವಿಗಳ ಆಯ್ಕೆ ಮಾಡುವಾಗ ಸಂಬಂದಪಟ್ಟ ಜಿ.ಪಂ. ಅಧ್ಯಕ್ಷರ ಮತ್ತು ಸ್ಥಳಿಯ ಜಿ.ಪಂ ಸದಸ್ಯರ ಗಮನಕ್ಕೆ ತಾರದೇ ಫಲಾನುಭವಿಗಳನ್ನು ಆಯ್ಕೆ ಮಾಡುತ್ತಿದ್ದು, ಇನ್ನು ಮುಂದೆ ಜಿ.ಪಂ. ಅಧ್ಯಕ್ಷರ ಮತ್ತು ಸ್ಥಳಿಯ ಜಿ.ಪಂ ಸದಸ್ಯರ ಗಮನಕ್ಕೆ ತಂದು ಫಲಾನುಭವಿಗಳನ್ನು ಆಯ್ಕೆ ಮಾಡಿ ವಿತರಣೆಗೆ ಕ್ರಮ ಕೈಗೊಳ್ಳುವಂತೆ ಸೂಚಿಸಿದರು.

ಜಿಲ್ಲಾ ಪಂಚಾಯತ್ ಸದಸ್ಯರ ವ್ಯಾಪ್ತಿಯಲ್ಲಿ ಬರುವ ವಿದ್ಯಾರ್ಥಿ ನಿಲಯಗಳ ಸಮಸ್ಯೆಗಳ ಬಗ್ಗೆ ಪ್ರತಿ 2 ತಿಂಗಳಿಗೊಮ್ಮೆ ಸಭೆ ನಡೆಸಬೆಕೆಂದು ಈ ಹಿಂದೆಯೇ ನಿರ್ಣಯ ಮಾಡಿದ್ದರೂ ಸಹ, ಸಮರ್ಪಕವಾಗಿ ಸಭೆಗಳು ನಡೆಯುತ್ತಿಲ್ಲ ಹಾಗೂ ಸಂಬಂದಪಟ್ಟ ಸದಸ್ಯರ ಗಮನಕ್ಕೆ ತರುತ್ತಿಲ್ಲ ಈ ಬಗ್ಗೆ ಅಧಿಕಾರಿಗಳು ನಿಯಮಿತವಾಗಿ ಸಭೆಗಳನ್ನು ಆಯೋಜಿಸಿ ಮಾಹಿತಿ ನೀಡುವಂತೆ ಅಧ್ಯಕ್ಷರು ಸೂಚಿಸಿದರು.

ಶಿಕ್ಷಣ ಮತ್ತು ಆರೋಗ್ಯ ಸ್ಥಾಯಿ ಸಮಿತಿ ಅಧ್ಯಕ್ಷ ಬಾಬು ಶೆಟ್ಟಿ ಮಾತನಾಡಿ, ಗಂಗೊಳ್ಳಿ ಬಂದರುಕಟ್ಟೆ ನಿರ್ಮಾಣಕ್ಕೆ ದುಂಡಿಕಲ್ಲು ಹಾಕಿರುವ ಕುರಿತಂತೆ ಮತ್ತು ಬೈಂದೂರು ತಾಲೂಕು ವ್ಯಾಪ್ತಿಯ ಸಮುದ್ರಕ್ಕೆ ದುಂಡಿಕಲ್ಲು ಸಾಗಾಟವಾಗಿರುವ ಕುರುತಂತೆ, ಗಣಿ ಮತ್ತು ಭೂ ವಿಜ್ಞಾನ ಇಲಾಖೆಯಿಂದ ಪಾವತಿಸಿಕೊಂಡಿರುವ ರಾಜಧನದ ಕುರಿತು ಸಮರ್ಪಕ ಮಾಹಿತಿ ನೀಡುವಂತೆ ಮತ್ತು ರಾಜಧನದ ಪಾಲನ್ನು ಸ್ಥಳೀಯ ಪಂಚಾಯತ್ಗಳಿಗೆ ನೀಡುವಂತೆ ಸೂಚಿಸಿದರು.

ಜಿಲ್ಲೆಯಲ್ಲಿ ಕಿಂಡಿ ಅಣೆಕಟ್ಟುಗಳ ನಿರ್ವಹಣೆಯನ್ನು ಸ್ಥಳೀಯ ಪಂಚಾಯತ್ ವ್ಯಾಪ್ತಿಯಲ್ಲಿ ಬಳಕೆದಾರರ ಸಂಘಗಳನ್ನು ಸ್ಥಾಪಿಸಿ, ಅವುಗಳಿಗೆ ನೀಡುವಂತೆ ಬಾಬು ಶೆಟ್ಟಿ ತಿಳಿಸಿದರು.

ಸಾಮಾಜಿಕ ನ್ಯಾಯ ಸಮಿತಿ ಅಧ್ಯಕ್ಷ ಶಶಿಕಾಂತ್ ಪಡುಬಿದ್ರೆ ಮಾತನಾಡಿ, ಹೆಜಮಾಡಿಯಲ್ಲಿ ಟೋಲ್ ವಿರುದ್ದ ಅನಿರ್ದಿಷ್ಠಾವಧಿ ಪ್ರತಿಭಟನೆ ನೀಡುತ್ತಿದ್ದು, ಇದುವರೆಗೆ ಯಾವುದೇ ಕ್ರಮ ಕೈಗೊಳ್ಳದ ಹಿನ್ನಲೆಯಲ್ಲಿ, ಪ್ರತಿಭಟನಾಕಾರರು ಉಪವಾಸ ಸತ್ಯಾಗ್ರಹ ಮಾಡಲು ನಿರ್ಧರಿಸುತ್ತಿದ್ದು, ಸಮಸ್ಯೆ ಬಗ್ಗೆ ಜಿಲ್ಲಾಧಿಕಾರಿಗಳ ಗಮನಕ್ಕೆ ತರುವಂತೆ ನಿರ್ಣಯ ಮಾಡುವಂತೆ ತಿಳಿಸಿದರು.

ಎಲ್ಲಾ ಇಲಾಖೆಗಳು ತಮ್ಮ ಕಾಮಗಾರಿಗಳನ್ನು ಶೀಘ್ರದಲ್ಲಿ ಮುಗಿಸುವಂತೆ ಸೂಚಿಸಿದ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಸಿಂಧೂ ಬಿ.ರೂಪೇಶ್, ಎಸ್.ಸಿ.ಪಿ.ಟಿ.ಎಸ್.ಪಿ ಯೋಜನೆಯ ಕಾಮಗಾರಿಗಳನ್ನು ನಿಗಧಿತ ಅವಧಿಯೊಳಗೆ ಗುರಿ ಸಾಧಿಸದಿದ್ದಲ್ಲಿ ಸಂಬಂದಪಟ್ಟವರ ವಿರುದ್ದ ಕ್ರಮಕ್ಕೆ ಶಿಫಾರಸ್ಸು ಮಾಡುವುದು ಅನಿವಾರ್ಯವಾಗಲಿದ್ದು, ತಾಲೂಕು ಮಟ್ಟದಲ್ಲಿ ಅನುಷ್ಠಾನ ಸಮಿತಿಗಳನ್ನು ರಚಿಸಿಕೊಂಡು ಕಾರ್ಯ ನಿರ್ವಹಿಸುವಂತೆ ತಾ.ಪಂ. ಕಾರ್ಯ ನಿರ್ವಹಣಾಧಿಕಾರಿಗಳಿಗೆ ಸೂಚಿಸಿದರು.

ಜಿಲ್ಲೆಯಲ್ಲಿ ಜನವರಿ 1 ರಿಂದ 31 ರ ವರೆಗೆ “ಸ್ವಚ್ಛ ಸುಂದರ ಶೌಚಾಲಯ ಸ್ಪರ್ಧೆ ಆಯೋಜಿಸಿದ್ದು, ಆಂದೋಲನ ಅವಧಿಯಲ್ಲಿ ಅತೀ ಹೆಚ್ಚು ಶೌಚಾಲಯಗಳಿಗೆ ಬಣ್ಣ ಬಳಿಯುವ ಶೇಕಡಾವಾರು ಸಾಧನೆಯ ಆಧಾರದ ಮೇಲೆ ಜಿಲ್ಲೆ, ಗ್ರಾಮ ಪಂಚಾಯತ್ಗಳು ಹಾಗೂ ಕ್ರಿಯಾತ್ಮಕವಾಗಿ ಮತ್ತು ವರ್ಣರಂಜಿತವಾಗಿ ಬಣ್ಣ ಬಳಿದ ವೈಯಕ್ತಿಕ ಕುಟುಂಬಗಳಿಗೂ ಸಹ ಕೇಂದ್ರ ಸರಕಾರ ಪುರಸ್ಕಾರವನ್ನು ನೀಡಿ ಗೌರವಿಸಲಿಸಲಾಗುವುದು ,

ಈ ಹಿನ್ನಲೆಯಲ್ಲಿ ಜಿಲ್ಲೆಯ ಪ್ರತಿಯೊಂದು ಕುಟುಂಬದ ಮಾಲೀಕರು ತಮ್ಮ ಶೌಚಾಲಯಗಳಿಗೆ ಬಣ್ಣ ಬಳಿಸುವುದು, ಶೌಚಾಲಯದ ಗೋಡೆಯ ಮೇಲೆ ಚಿತ್ರ ಕಲೆ ಬಿಡಿಸುವುದು, ಸ್ವಚ್ಛ ಭಾರತ್ ಮಿಷನ್(ಗ್ರಾ) ಚಿಹ್ನೆ ಬಿಡಿಸುವುದು, ಶೌಚಾಲಯ ಬಳಕೆಯ ಕುರಿತು ಸಂದೇಶ, ಸ್ವಚ್ಛ ಭಾರತ್ ಮಿಷನ್ ಘೋಷ ವಾಕ್ಯಗಳ ಬರಹಗಳನ್ನು ಶೌಚಾಲಯದ ಮೇಲೆ ಬರೆಸಲು ಹಾಗೂ ಸ್ವಚ್ಛತೆ ಸಂಬಂಧಿಸಿದ ಈ ಆಂದೋಲನ ಯಶಸ್ವಿಯಾಗಲು ಜಿಲ್ಲೆಯ ಜನರು ಸಹಕರಿಸುವಂತೆ ಸಿಇಓ ತಿಳಿಸಿದರು.

ಸಭೆಯಲ್ಲಿ ಜಿಲ್ಲಾ ಪಂಚಾಯತ್ ಉಪಾಧ್ಯಕ್ಷೆ ಶೀಲಾ ಕೆ ಶೆಟ್ಟಿ, ಕೃಷಿ ಮತ್ತು ಕೈಗಾರಿಕಾ ಸ್ಥಾಯಿ ಸಮಿತಿ ಅಧ್ಯಕ್ಷ ಉದಯ ಎಸ್. ಕೋಟ್ಯಾನ್, ಜಿಲ್ಲಾ ಪಂಚಾಯತ್ ಉಪ ಕಾರ್ಯದರ್ಶಿ ನಾಗೇಶ್ ರಾಯ್ಕರ್, ಮುಖ್ಯ ಯೋಜನಾಧಿಕಾರಿ ಶ್ರೀನಿವಾಸ ರಾವ್ ಹಾಗೂ ವಿವಿಧ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು.


Spread the love