ಮಲ್ಪೆ ಕೊಚ್ಚಿನ್ ಶಿಪ್ ಯಾರ್ಡ್ ನಲ್ಲಿ ದೇಶದ ರಹಸ್ಯ ಮಾಹಿತಿ ಸೋರಿಕೆ: ಇಬ್ಬರ ಬಂಧನ
ಉಡುಪಿ:ಕೇಂದ್ರ ಸರ್ಕಾರದ ಸ್ವಾಮ್ಯದ ಬಂದರು ಮತ್ತು ಜಲಸಾರಿಗೆ ಇಲಾಖೆಯ ಅಧೀನದಲ್ಲಿರುವ ಮಲ್ಪೆಯ ಉಡುಪಿ ಕೊಚ್ಚಿನ್ ಶಿಪ್ಯಾರ್ಡ್ಗೆ ಸಂಬಂಧಿಸಿದಂತೆ, ಭಾರತದ ನೌಕಾ ಸೇನೆಗೆ ಸೇರಿದ ಗೌಪ್ಯ ಮಾಹಿತಿಯನ್ನು ಅನಧಿಕೃತವಾಗಿ ಸೋರಿಕೆ ಮಾಡಿದ ಆರೋಪದಲ್ಲಿ ಇಬ್ಬರನ್ನು ಮಲ್ಪೆ ಪೊಲೀಸರು ಬಂಧಿಸಿದ್ದಾರೆ.
ಕೊಚ್ಚಿನ್ ಶಿಪ್ಯಾರ್ಡ್ನಲ್ಲಿ ಕಾರ್ಯನಿರ್ವಹಿಸುತ್ತಿರುವ M/s Shushma Marine Private Limited ಸಂಸ್ಥೆಗೆ ಸಬ್-ಕಾಂಟ್ರಾಕ್ಟ್ ನೀಡಲಾಗಿದ್ದು, ಈ ಸಂಸ್ಥೆಯಲ್ಲಿ ಉತ್ತರಪ್ರದೇಶ ಮೂಲದ ರೋಹಿತ್ (29) ಎಂಬ ವ್ಯಕ್ತಿ ಇನ್ಸುಲೇಟರ್ ಆಗಿ ಕೆಲಸ ಮಾಡುತ್ತಿದ್ದನು. ಆತ ಈ ಹಿಂದೆ ಕೇರಳ ರಾಜ್ಯದ ಕೊಚ್ಚಿಯಲ್ಲಿ ಇರುವ ಕೊಚ್ಚಿನ್ ಶಿಪ್ಯಾರ್ಡ್ ಲಿಮಿಟೆಡ್ನಲ್ಲಿ ಕೆಲಸ ಮಾಡುತ್ತಿದ್ದನು.
ಆರೋಪಿಯು ಕೇರಳದಲ್ಲಿ ಕೆಲಸ ಮಾಡುವ ಅವಧಿಯಲ್ಲಿ, ಭಾರತದ ನೌಕಾ ಸೇನೆಗೆ ಸಂಬಂಧಿಸಿದ ಹಡಗುಗಳ ಸಂಖ್ಯೆಗಳು ಸೇರಿದಂತೆ ಹಲವು ಗೌಪ್ಯ ಮಾಹಿತಿಯನ್ನು ವಾಟ್ಸಾಪ್ ಮೂಲಕ ಅನಧಿಕೃತವಾಗಿ ಹಂಚಿಕೊಂಡು ಅಕ್ರಮಲಾಭ ಪಡೆದಿರುವುದು ತನಿಖೆಯಿಂದ ಬೆಳಕಿಗೆ ಬಂದಿದೆ. ಬಳಿಕ ಮಲ್ಪೆಗೆ ವರ್ಗಾವಣೆಯಾದ ನಂತರವೂ, ಕೊಚ್ಚಿಯಲ್ಲಿ ಇರುವ ಸ್ನೇಹಿತನಿಂದ ಮಾಹಿತಿ ಸಂಗ್ರಹಿಸಿ ಅದನ್ನು ಮತ್ತೊಬ್ಬ ಅನಧಿಕೃತ ವ್ಯಕ್ತಿಗೆ ವಾಟ್ಸಾಪ್ ಮೂಲಕ ಕಳುಹಿಸಿದ್ದಾನೆ ಎಂಬ ಆರೋಪ ಕೇಳಿಬಂದಿದೆ.
ಇದರಿಂದ ಭಾರತದ ಸಾರ್ವಭೌಮತೆ, ಏಕತೆ ಹಾಗೂ ಅಖಂಡತೆಗೆ ಅಪಾಯ ಉಂಟಾಗಿದ್ದು, ದೇಶದ ಆಂತರಿಕ ಭದ್ರತೆಗೆ ಧಕ್ಕೆ ತಂದಿರುವ ಗಂಭೀರ ಆರೋಪ ವ್ಯಕ್ತವಾಗಿದೆ.
ಈ ಬಗ್ಗೆ ಉಡುಪಿ ಕೊಚ್ಚಿನ್ ಶಿಪ್ಯಾರ್ಡ್, ಮಲ್ಪೆ ಸಂಸ್ಥೆಯ ಸಿಇಒ ನೀಡಿದ ದೂರಿನ ಮೇರೆಗೆ, ಮಲ್ಪೆ ಪೊಲೀಸ್ ಠಾಣೆಯಲ್ಲಿ ಅಪರಾಧ ಕ್ರಮಾಂಕ 128/2025 ಅಡಿಯಲ್ಲಿ BNS ಕಲಂ 152 ಹಾಗೂ Official Secrets Act, 1923ರ ಕಲಂ 3 ಮತ್ತು 5 ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.
ಈ ಪ್ರಕರಣದ ತನಿಖೆಯನ್ನು ಕಾರ್ಕಳ ಉಪವಿಭಾಗದ ಸಹಾಯಕ ಪೊಲೀಸ್ ಅಧೀಕ್ಷಕಿ ಹರ್ಷ ಪ್ರಿಯಂವದಾ ಐಪಿಎಸ್ ಅವರ ನೇತೃತ್ವದಲ್ಲಿ ಕೈಗೊಳ್ಳಲಾಗಿದ್ದು, ಮಲ್ಪೆ ಪೊಲೀಸ್ ಠಾಣೆಯ ಉಪನಿರೀಕ್ಷಕ ಅನೀಲ್ ಕುಮಾರ್ ಡಿ, ಎಎಸ್ಐ ಹರೀಶ್ ಹಾಗೂ ಪೊಲೀಸ್ ಕಾನ್ಸ್ಟೇಬಲ್ ರವಿ ಜಾಧವ್ ಒಳಗೊಂಡ ವಿಶೇಷ ತಂಡವು ಆರೋಪಿಗಳಾದ ಉತ್ತರಪ್ರದೇಶ ನಿವಾಸಿಗಳಾದ ರೋಹಿತ್ (29) ಮತ್ತು ಸಂತ್ರಿ (37)ಅವರನ್ನು ಬಂಧಿಸಿದೆ.
ಬಂಧಿತ ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ನ್ಯಾಯಾಲಯವು ದಿನಾಂಕ 03/12/2025ರ ವರೆಗೆ ನ್ಯಾಯಾಂಗ ಬಂಧನಕ್ಕೆ ಆದೇಶಿಸಿದೆ.
ಈ ಪ್ರಕರಣವು ರಾಷ್ಟ್ರ ಭದ್ರತೆ ದೃಷ್ಟಿಯಿಂದ ಅತ್ಯಂತ ಗಂಭೀರವಾಗಿದ್ದು, ಮುಂದಿನ ತನಿಖೆಯನ್ನು ಮತ್ತಷ್ಟು ತೀವ್ರಗೊಳಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.













