ಮಳಲಿ ಹಗಲು ದರೋಡೆ ಪ್ರಕರಣದ ಮೂವರು ಆರೋಪಿಗಳ ಸೆರೆ

Spread the love

ಮಳಲಿ ಹಗಲು ದರೋಡೆ ಪ್ರಕರಣದ ಮೂವರು ಆರೋಪಿಗಳ ಸೆರೆ

ಮಂಗಳೂರು: ಮಳಲಿಯಲ್ಲಿ ಮೂರು ದಿನಗಳ ಹಿಂದೆ ನಡೆದ ವ್ಯಕ್ತಿಯೊಬ್ಬರ ದರೋಡೆ ಪ್ರಕರಣಕ್ಕೆ ಸಂಬಂಧಿಸಿ ಮೂವರು ಆರೋಪಿಗಳನ್ನು ಬುಧವಾರ ಬಂಧಿಸಿರುವ ಬಜ್ಪೆ ಠಾಣಾ ಪೊಲೀಸರು ಸೊತ್ತುಗಳನ್ನು ವಶಪಡಿಸಿಕೊಂಡಿದ್ದಾರೆ.

ಉಳಾಯಿಬೆಟ್ಟು ಪಟ್ರಕೋಡಿ ನಿವಾಸಿ ಆಶ್ಲೇಷ್ ಎ. ಕೋಟ್ಯಾನ್, ಮೂಳೂರು ಗ್ರಾಮದ ಮಠದಗುಡ್ಡೆ ಸೈಟ್ ನಿವಾಸಿ ಅಬ್ದುಲ್ ಅಝೀಝ್ ನೌಶಾದ್ ಮತ್ತು ಕೈಕಂಬ, ಬಡಗುಳಿಪ್ಪಾಡಿ ನಿವಾಸಿ ಮುಹಮ್ಮದ್ ಮುಸ್ತಫ ಬಂಧಿತ ಆರೋಪಿಗಳಾಗಿದ್ದಾರೆ. ಬಂಧಿತರಿಂದ 21,800 ರೂ. ನಗದು, ಒಂದು ಬೈಕ್, ಮೂರು ಮೊಬೈಲ್ ಫೋನ್, ತಲವಾರು, ಚೂರಿಯೊಂದನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.

ಘಟನೆ ವಿವರ: ಫೈನಾನ್ಸ್ ವ್ಯವಹಾರ ಮಾಡುತ್ತಿದ್ದ ಮರೊಳಿಯ ಸೆಂಥಿಲ್ ಕುಮಾರ್ ಎಂಬವರು ಜು.14ರಂದು ಅಪರಾಹ್ನ ತನ್ನ ಬೈಕ್ನಲ್ಲಿ ಮೊಗರು ಗ್ರಾಮದ ಮಳಲಿ ಸೈಟ್ಗೆ ಹೋಗುತ್ತಿದ್ದ ವೇಳೆ ಎರಡು ಬೈಕ್ಗಳಲ್ಲಿ ಬಂದ ನಾಲ್ವರ ತಂಡ ಅವರನ್ನು ಅಡ್ಡಗಟ್ಟಿ, ಮಾರಕಾಯುಧಗಳಿಂದ ಬೆದರಿಸಿ 2.05 ಲಕ್ಷ ರೂ. ದೋಚಿ ಪರಾರಿಯಾಗಿತ್ತು. ಈ ಬಗ್ಗೆ ಅವರು ನೀಡಿರುವ ದೂರಿನಂತೆ ಬಜ್ಪೆ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

ಪ್ರಕರಣದ ತನಿಖೆ ನಡೆಸಿದ ಪೊಲೀಸರು ಖಚಿತ ಮಾಹಿತಿಯಾಧಾರದಲ್ಲಿ ಮೂವರು ಆರೋಪಿಗಳನ್ನು ಬುಧವಾರ ಬಂಧಿಸಿದ್ದಾರೆ. ಬಂಧಿತರಿಂದ ಒಟ್ಟು 60 ಸಾವಿರ ರೂ. ವೌಲ್ಯದ ಸೊತ್ತುಗಳನ್ನು ವಶಪಡಿಸಿಕೊಳ್ಳಲಾಗಿದ್ದು, ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ. ಪ್ರಕರಣದ ಭಾಗಿಯಾಗಿರುವ ಉಳಿದ ಆರೋಪಿಗಳಿಗಾಗಿ ಶೋಧ ಮುಂದುವರಿದಿದೆ.

ಪೊಲೀಸ್ ಆಯುಕ್ತರಾದ ಸಂದೀಪ್ ಪಾಟೀಲ್ ಐ.ಪಿ.ಎಸ್ ರವರ ಆದೇಶದಂತೆ ಹಾಗೂ ಉಪ ಪೊಲೀಸ್ ಆಯುಕ್ತರಾದ ಹನುಮಂತರಾಯ. ಐ.ಪಿ. ಎಸ್ (ಕಾಮತ್ತುಸು) ಮತ್ತು ಲಕ್ಷ್ಮೀ ಗಣೇಶ್. ಕೆ.ಎಸ್.ಪಿ.ಎಸ್ (ಅ ಮತ್ತು ಸ) ರವರ ಹಾಗೂ ಉತ್ತರ ಉಪವಿಭಾಗದ ಸಹಾಯಕ ಪೊಲೀಸ್ ಆಯುಕ್ತರಾದ ಶ್ರೀನಿವಾಸ ಗೌಡ ಐ.ಪಿ.ಎಸ್ ರವರ ನಿರ್ದೇಶನದಂತೆ ಆರೋಪಿಗಳ ಪತ್ತೆ ಕಾರ್ಯದಲ್ಲಿ ಬಜಪೆ ಠಾಣಾ ಪೊಲೀಸ್ ನಿರೀಕ್ಷಕರಾದ ಎಸ್. ಪರಶಿವ ಮೂರ್ತಿ. ಪಿ.ಎಸ್.ಐ ರವರುಗಳಾದ ಸತೀಶ್ ಎಂ.ಪಿ, ಶ್ರೀಮತಿ ಕಮಲ, ಸಹಾಯಕ ಉಪನಿರೀಕ್ಷಕರಾದ ರಾಮಚಂದ್ರ, ರಾಮ ಪೂಜಾರಿ, ಜನಾರ್ಧನಗೌಡ, ಹೆಚ್.ಸಿ. ಗಳಾದ ಚಂದ್ರಮೋಹನ್, ರಾಜೇಶ್, ಸುಧೀರ್ ಶೆಟ್ಟಿ, ಹೊನ್ನಪ್ಪ ಗೌಡ, ಸಂತೋಷ್ ಸುಳ್ಯ, ಪಿಸಿಗಳಾದ ಮಂಜುನಾಥ, ವಕೀಲ ಲಮಾಣಿ, ಕುಮಾರಸ್ವಾಮಿ, ಉಮೇಶ್, ಹೋಮ್ ಗಾರ್ಡ್ ಸತೀಶ್ ಮಹಿಳಾ ಪಿಸಿ ಜಯಶ್ರೀ ರವರು ಈ ಕಾರ್ಯಾಚರಣೆಯಲ್ಲಿ ಭಾಗವಹಿಸಿರುತ್ತಾರೆ.


Spread the love