ಮಳೆಗಾಗಿ ದೇವರಲ್ಲಿ ಸಾಮೂಹಿಕ ಪ್ರಾರ್ಥನೆ – ಶಾಸಕ ಕಾಮತ್

Spread the love

ಮಳೆಗಾಗಿ ದೇವರಲ್ಲಿ ಸಾಮೂಹಿಕ ಪ್ರಾರ್ಥನೆ – ಶಾಸಕ ಕಾಮತ್

ಮಂಗಳೂರು: ಎಲ್ಲಾ ಜಾತಿ, ಮತ, ಪಂಗಡ, ಧರ್ಮದ ನಾಗರಿಕ ಬಂಧುಗಳು ಇದೇ ಬುಧವಾರ ಮೇ 15 ರಂದು ತಮ್ಮ ಶ್ರದ್ಧಾ ಕೇಂದ್ರ, ಧಾರ್ಮಿಕ ಕೇಂದ್ರಗಳಲ್ಲಿ ಮಳೆಗಾಗಿ ವಿಶೇಷ ಸಾಮೂಹಿಕ ಪ್ರಾರ್ಥನೆಯನ್ನು ಮಾಡಬೇಕಾಗಿ ಮಂಗಳೂರು ನಗರ ದಕ್ಷಿಣ ಶಾಸಕ ಡಿ ವೇದವ್ಯಾಸ ಕಾಮತ್ ಮಂಗಳೂರಿನ ಮಹಾಜನತೆಯಲ್ಲಿ ವಿನಯಪೂರ್ವಕವಾಗಿ ಮನವಿ ಮಾಡಿದ್ದಾರೆ.

ಮಂಗಳೂರಿನಲ್ಲಿ ನೀರಿನ ಕೊರತೆ ಉಂಟಾಗಿದೆ. ಈ ಸಂದರ್ಭದಲ್ಲಿ ನಾವೆಲ್ಲರೂ ಪರಸ್ಪರರ ಒಳಿತಿಗಾಗಿ ಶುದ್ಧ ಅಂತ:ಕರಣಪೂರ್ವಕವಾಗಿ ನಾವು ನಂಬಿಕೊಂಡು ಬಂದ ದೇವರನ್ನು ಪ್ರಾರ್ಥಿಸಿದರೆ ಅದರಿಂದ ಖಂಡಿತ ಒಳ್ಳೆಯದಾಗುತ್ತದೆ. ನೀರು ಪ್ರತಿಯೊಂದು ಜೀವಿಗೂ ಅತ್ಯವಶ್ಯಕವಾಗಿ ಬೇಕು. ಮನುಷ್ಯನಿಗೆ ಮಾತ್ರವಲ್ಲ, ಪ್ರಾಣಿ, ಪಕ್ಷಿಗಳಿಗೂ ಬೇಕು. ಆದ್ದರಿಂದ ನಾವೆಲ್ಲರೂ ಸೇರಿ ದೇವಸ್ಥಾನ, ಚರ್ಚು, ಮಸೀದಿಗಳಲ್ಲಿ ಪ್ರಾರ್ಥನೆ ಸಲ್ಲಿಸಿ ಮಂಗಳೂರಿಗೆ ಬಂದಿರುವ ಈ ಸಂಕಟವನ್ನು ಪರಿಹರಿಸಲು ಬೇಡೋಣ. ಆಯಾ ಶ್ರದ್ಧಾ ಕೇಂದ್ರಗಳ ಪ್ರಮುಖರು, ಆಡಳಿತ ಮಂಡಳಿಗಳು, ಟ್ರಸ್ಟಿಗಳು, ಧರ್ಮಗುರುಗಳು ಬುಧವಾರ ಒಂದು ನಿರ್ದಿಷ್ಟ ಸಮಯವನ್ನು ಹೊಂದಿಸಿ ಆ ಪರಿಸರದ ನಾಗರಿಕರನ್ನು ಕರೆಸಿ ಸಾಮೂಹಿಕವಾಗಿ ನಮ್ಮ ಊರಿನ, ನಾಡಿನ ನೀರಿನ ಕೊರತೆಯನ್ನು ಬಗೆಹರಿಸಲು ಮಳೆಗಾಗಿ ಪ್ರಾರ್ಥಿಸೋಣ. ಎಲ್ಲರ ಪ್ರಾರ್ಥನೆ ಫಲಿಸಿ ಶೀಘ್ರದಲ್ಲಿ ಮಳೆ ಬಂದು ನಮ್ಮ ತೊಂದರೆಗಳು ಬಗೆಹರಿಯಬಹುದು ಎಂದು ಶಾಸಕ ಕಾಮತ್ ಆಶಯವನ್ನು ವ್ಯಕ್ತಪಡಿಸಿದ್ದಾರೆ.

ಮಂಗಳಾದೇವಿ ದೇವಸ್ಥಾನ, ಕದ್ರಿ ಮಂಜುನಾಥ ಸ್ವಾಮಿ ದೇವಸ್ಥಾನ, ಕುದ್ರೋಳಿ ಶ್ರೀ ಗೋಕರ್ಣನಾಥ ದೇವಸ್ಥಾನ, ಕಂಕನಾಡಿ ಗರೋಡಿ, ಕುಡುಪು ದೇವಸ್ಥಾನ, ಗಣಪತಿ ದೇವಸ್ಥಾನ ಉರ್ವಾ ಸ್ಟೋರ್, ಉರ್ವಾ ಮಾರಿಗುಡಿ ದೇವಸ್ಥಾನ, ಮುಖ್ಯಪ್ರಾಣ ದೇವಸ್ಥಾನ ಬೋಳಾರ, ಪಂಚಲಿಂಗೇಶ್ವರ ದೇವಸ್ಥಾನ ಪಾಂಡೇಶ್ವರ, ರಥಬೀದಿ ವೆಂಕಟರಮಣ ದೇವಸ್ಥಾನ, ಡೊಂಗರಕೇರಿ ವೆಂಕಟರಮಣ ದೇವಸ್ಥಾನ, ಮುಖ್ಯಪ್ರಾಣ ದೇವಸ್ಥಾನ ಬಜಿಲ್ ಕೇರಿ, ಕಾಳಿಕಾಂಬ ದೇವಸ್ಥಾನ, ಶರವು ಮಹಾಗಣಪತಿ ದೇವಸ್ಥಾನ, ಕಾವು ಪಂಚಲಿಂಗೇಶ್ವರ ದೇವಸ್ಥಾನ, ಮರೋಳಿ ಸೂರ್ಯನಾರಾಯಣ ದೇವಸ್ಥಾನ, ಗೋಪಾಲಕೃಷ್ಣ ದೇವಸ್ಥಾನ ಶಕ್ತಿನಗರ, ಕಾತ್ಯಾಯಿನಿ ಮಠ ರಥಬೀದಿ ಮತ್ತು ಇನ್ನೂ ಅನೇಕ ದೇವಸ್ಥಾನಗಳಲ್ಲಿ ಪ್ರಮುಖರನ್ನು ಸೇರಿಸಿ ವಿಶೇಷವಾದ ಪ್ರಾರ್ಥನೆ ಮತ್ತು ಪೂಜೆಯನ್ನು ಸಲ್ಲಿಸಲಿದ್ದಾರೆ. ಅದೇ ರೀತಿಯಲ್ಲಿ 3-4 ಕಡೆ ಮುಸ್ಲಿಂ ಭಾಂದವರು ಮಳೆಗಾಗಿ ವಿಶೇಷ ಪ್ರಾರ್ಥನೆ ನಡೆಸಲಿದ್ದಾರೆ. ಅದರೊಂದಿಗೆ 3-4 ಕಡೆ ಶ್ರದ್ಧಾಕೇಂದ್ರಗಳಲ್ಲಿ ಕ್ರೈಸ್ತ ಬಾಂಧವರು ಕೂಡ ಮಳೆಗಾಗಿ ವಿಶೇಷವಾಗಿ ಪ್ರಾರ್ಥನೆಯನ್ನು ಸಲ್ಲಿಸಲಿದ್ದಾರೆ ಎನ್ನುವ ಮಾಹಿತಿಯನ್ನು ಶಾಸಕರ ಕಚೇರಿಯಿಂದ ಪ್ರತಿಕಾ ಪ್ರಕಟನೆಯಲ್ಲಿ ತಿಳಿಸಲಾಗಿದೆ. ಆದ್ದರಿಂದ ಮಂಗಳೂರಿನ ಜನತೆ ಈ ವಿಶೇಷ ಪ್ರಾರ್ಥನೆಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡು ದೇವರಲ್ಲಿ ಭಕ್ತಿಯಿಂದ ಪ್ರಾರ್ಥಿಸಿ, ಪೂಜೆ ಪುನಸ್ಕಾರ ಮಾಡಿ, ಎಲ್ಲಾ ಜಾತಿ, ಮತ, ಧರ್ಮದವರು ಒಟ್ಟಾಗಿ ಪ್ರಾರ್ಥನೆಯನ್ನು ಸಲ್ಲಿಸಬೇಕು ಎಂದು ಶಾಸಕ ಕಾಮತ್ ಪತ್ರಿಕಾ ಪ್ರಕಟನೆಯಲ್ಲಿ ತಿಳಿಸಿರುತ್ತಾರೆ


Spread the love