ಮಸ್ಕತ್ತಿನಲ್ಲಿ ವಿಜೃಂಭಣೆಯ 35 ನೆಯ ವಾರ್ಷಿಕ ಗಣೇಶೋತ್ಸವ

Spread the love

ಮಸ್ಕತ್ತಿನಲ್ಲಿ ವಿಜೃಂಭಣೆಯ 35 ನೆಯ ವಾರ್ಷಿಕ ಗಣೇಶೋತ್ಸವ

ವಿಘ್ನ ವಿನಾಶಕ ಗಣಪತಿಯನ್ನು ನಮಿಸುವ ವಿನಾಯಕ ಚತುರ್ಥಿಯನ್ನು ಮರುಭೂಮಿಯ ನಾಡು ಮಸ್ಕತ್ತಿನಲ್ಲಿ ಸತತ 35 ವರ್ಷಗಳಿಂದ ಆಚರಿಸುತ್ತಾ ಬಂದಿರುವ ಇಲ್ಲಿನಗಣೇಶ ಸೇವಾ ಸಮಿತಿಯು ಈ ವರ್ಷದ ಗಣೇಶ ಚತುರ್ಥಿಯನ್ನು ಸಪ್ಟೆಂಬರ್ 2 ರಿಂದ 4ರ ತನಕ ಸಾಂಪ್ರದಾಯಿಕವಾಗಿ ಇಲ್ಲಿನ ಶಿವ ದೇವಾಲಯದಲ್ಲಿ ವಿಜೃಂಭಣೆಯಿಂದ ನೆರವೇರಿಸಿತು.ವಾಡಿಕೆಯಂತೆ ಭಾದ್ರಪದ ಶುಕ್ಲ ಪಕ್ಷದ ಚೌತಿಯಂದು ಬರುವ ಗಣಪನನ್ನು ಸುಮುಹೂರ್ತದಲ್ಲಿ ಮುಖ್ಯ ಅರ್ಚಕರಾದ ಶಂಕರನಾರಾಯಣ ಅಡಿಗರು ಶ್ರೀ ಗುರುದಾಸ್ ಪೆಜತ್ತಾಯ ಮತ್ತುಇನ್ನಿತರುಅರ್ಚಕರಸಹಕಾರದೊಂದಿಗೆ ಮಂತ್ರಘೋಷಗಳೊಂದಿಗೆ, ವಿಧಿ ವಿಧಾನ ಬದ್ಧವಾಗಿ ಪ್ರತಿಷ್ಠಾಪಿಸುವುದರೊಂದಿಗೆ ಗಣೇಶೋತ್ಸವ ಚಾಲನೆಗೊಂಡಿತು. ಓಂ ಶ್ರೀ ಗಣೇಶವೃಂದವು ಗಣಪತಿ ಸಹಸ್ರನಾಮವನ್ನು ಪಠಿಸಿ ಹಬ್ಬದ ವಾತಾವರಣಕ್ಕೆ ಕಳೆಕಟ್ಟಿದರು. ಶ್ರೀ ಗುರುದಾಸ್ ಪೆಜತ್ತಾಯ ಮತ್ತು ಶ್ರೀಮತಿ ಜ್ಯೋತಿ ಯವರು ಈ ಬಾರಿ ಪೂಜೆಗೆ ಕುಳಿತ ದಂಪತಿಗಳು. ಗಣಹೋಮ, ಮಹಾಪೂಜೆ, ರಂಗಪೂಜೆ, ಪುಷ್ಪಾರ್ಚನೆ, ಅರತಿಸೇವೆ,108 ಕಾಯಿಯ ಸೇವೆ, ಲಾಡು ಸೇವೆ, ಮೋದಕ ಸೇವೆ- ಹೀಗೆ ಹಲವು ಬಗೆಯ ಸೇವೆಗಳನ್ನು ಮೂರು ದಿನವೂ ಗಣಪನಿಗೆ ಭಕ್ತಿ ಪೂರ್ವಕವಾಗಿ ಸಲ್ಲಿಸಲಾಯಿತು

ಅಲಂಕಾರ ಮತ್ತು ರಂಗೋಲಿ:-

ದೇವಾಲಯದ ಪ್ರಾಂಗಣವು ಬಾಳೆ, ಮಾವಿನ ತೋರಣದಿಂದ, ಭಾರತದಿಂದ ಈ ಹಬ್ಬಕ್ಕೆಂದೇ ತರಿಸಿದ ಹಲವು ಬಗೆಯ ಪುಷ್ಪಗಳಿಂದ ಅಲಂಕೃಸಿಕೊಂಡು ಮಂಗಳೂರು ಮಲ್ಲಿಗೆಯ ಕಂಪಿನೊಂದಿಗೆ ಕಂಗೊಳಿಸಿ ಹಬ್ಬದ ವಾತಾವರಣವನ್ನು ಸೃಷ್ಟಿಸಿತ್ತು. ಡಾ. ಸಿ. ಕೆ. ಅಂಚನ್, ಶ್ರೀ ಕೋಣಿ ಪ್ರಕಾಶ್ ನಾಯಕ್, ಶ್ರೀ ವಿಶ್ವನಾಥ್ ಬಂಗೇರ , ಶ್ರೀ ವಿಠ್ಠಲ ಪೂಜಾರಿ ಮುಂತಾದವರ ಮುಂದಾಳತ್ವದ ಅಲಂಕಾರ ತಂಡವು ತಮ್ಮ ಕಾರ್ಯವನ್ನು ಸಮರ್ಥವಾಗಿ ನೆರವೇರಿಸಿ ಎಲ್ಲರ ಮೆಚ್ಚುಗೆಗೆ ಪಾತ್ರರಾದರು.ಪ್ರಾಂಗಣದಲ್ಲಿ ಅದ್ಭುತವಾದ ಗಣಪನ ರಂಗೋಲಿಯನ್ನು ಬಿಡಿಸಿದ ಶ್ರೀಮತಿ ಪಾರು ನೆಗಂಧಿ ಮತ್ತು ಶ್ರೀಮತಿ ಪ್ರಜ್ಞಾ ಶಾಹ್ ಅವರಪ್ರತಿಭೆ ಪ್ರಾಂಗಣಕ್ಕೆ ವಿಶೇಷ ಮೆರುಗನ್ನು ನೀಡಿತು.

ಸಾಂಸ್ಕೃತಿಕ ವೈವಿಧ್ಯ:

ಪ್ರತಿಷ್ಠಾಪನೆಯಿಂದ ವಿಸರ್ಜನೆಯ ತನಕ ಗಣೇಶನ ಸಮ್ಮುಖದಲ್ಲಿ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು, ಭಜನೆಗಳು, ನ್ರತ್ಯ ಸೇವೆಗಳು ನಿರಂತರವಾಗಿ ನಡೆದಿದ್ದು ಮಸ್ಕತ್ತಿನ ಗಣೇಶೋತ್ಸವದ ಇನ್ನೊಂದು ವೈಶಿಷ್ಟ್ಯ.ಶ್ರೀ ವೈದ್ಯನಾಥನ್ ಅವರ ಶಿಷ್ಯರಿಂದ ವೇದ ಪಠಣ, ಶ್ರೀ ಎ.ವಿ.ಮನೋಹರ್ ಅವ ಶುಕ್ಲ ಯಜುರ್ವೇದ ಪಠಣಗಳು ವಿದೇಶದಲ್ಲಿದ್ದುಕೊಂಡು ನಾವು ನಮ್ಮ ಸಂಸ್ಕೃತಿಯನ್ನು ಮುಂದುವರೆಸಿಕೊಂಡು ಹೋಗುತ್ತಿದೇವೆಂಬುದನ್ನು ತೋರಿಸಿಕೊಟ್ಟಿತು.ಡಾ. ಸಿ. ಕೆ. ಅಂಚನ್, ಶ್ರೀ ಕೋಣಿ ಪ್ರಕಾಶ್, ಕರುಣಾಕರ್ ರಾವ್, ರಾಜ್ ಸನಿಲ್, ವಿಜಯ್ ಸಾಲಿಯಾನ್, ನಿಶಾ ರಾವ್, ಪ್ರೇಮ ಉಮೇಶ್, ವಾಣಿಶ್ರೀ ನಾಗೇಶ್, ತೀರ್ಥಾ ಕಟೀಲ್, ನೀಲ್ ಅಂಚನ್, ಚೈತ್ರ ಕೋಟಿಯಾನ್ ಮುಂತಾದವರನ್ನೊಳಗೊಂಡ ಶ್ರೀ ಗಣೇಶ ವೃಂದವು ಈ ಕಾರ್ಯಕ್ರಮಕ್ಕೆಂದೇ ಭಾರತದಿಂದ ಬಂದ ಶ್ರೀ ಶೋಧನ್ ಅವರ ತಬಲಾದೊಂದಿಗೆ ಇಂಪಾದ ಭಜನೆಗಳನ್ನು ಭಕ್ತಿಯಿಂದ ಪ್ರಸ್ತುತಪಡಿಸಿದರು.ಮಕ್ಕಳಾದ ಪಾವನ, ಶರಣ್ಯ, ಶರ್ವಾಣಿ, ಶರತ್, ಅನನ್ಯ, ಶ್ರಾವ್ಯ ರನ್ನೊಳಗೊಂಡ ಶ್ರೀ ಗಣೇಶ ಬಾಲವೃಂದವು ನಮ್ಮ ಮುಂದಿನ ತಲೆಮಾರಿನ ಗಾಯನ ಕೌಶಲ್ಯವನ್ನು ಪ್ರದರ್ಶಿಸಿತು.

ಟವಲ್ ಇಂಜಿನಿಯರಿಂಗ್ ತಂಡ, ವಿಶ್ವ ಆರಾಧನಾ ತಂಡ, ಚಿನ್ಮಯ ಬಾಲವಿಹಾರದ ತಂಡ, ಶ್ರೀಮತಿ ಮೀನಾಕ್ಷಿ/ ಪದ್ಮಜಾ ರಾಮಾನುಜಂ ಮತ್ತು ತಂಡ, ಹರೆ ಕೃಷ್ಣ ತಂಡ, ಮಾತಾ ಅಮೃತಾನಂದಮಯಿ ತಂಡ, ಶ್ರೀಮತಿ ಮುಕ್ತಕಲಾ ಅವರ ಗುಂಪು, ಡಿವೈನ್ ಸ್ಪಾರ್ಕ್ ತಂಡ, ಓಂಕಾರ ಮಹಿಳೆಯರ ಭಜನಾ ಗುಂಪು, ತ್ಯಾಗರಾಜ ಸಮಿತಿ, ಸಾಯಿ ಭಕ್ತರ ಗುಂಪು, ವಿದ್ಯಾ ಶ್ರೀಧರ್ ಮತ್ತು ಬಳಗ, ಆರ್ಟ್ ಆಫ್ ಲಿವಿಂಗ್ ತಂಡ, ಜಿ ಎಸ್ ಬಿ ಗುಂಪು, ನಳಿನಿ ಕಣ್ಣನ್ ಮತ್ತು ಶಿಷ್ಯರು, ಜಯಶ್ರೀ ಮತ್ತು ಶಿಷ್ಯರು, ಕಾಂತಿಬಾಯ್ ಮತ್ತು ಬಳಗ, ಕೇರಳ ಜಿ ಎಸ್ ಬಿ ಗುಂಪು- ಮುಂತಾದ ಭಜನಾ ಮಂಡಳಿಗಳು ಭಕ್ತಿ ಪೂರ್ವಕವಾಗಿ ತಮ್ಮ ಭಜನಾ ಸೇವೆಯನ್ನು ವಿಘ್ನೇಶ್ವರನ ಚರಣಕ್ಕೆ ಸಮರ್ಪಿಸಿದರು

ಶ್ರೀಮತಿ ತೀರ್ಥ ಕಟೀಲ್, ನಳಿನಿ ಕಣ್ಣನ್, ಸಂಗೀತಾ ಶ್ರೀಜಿತ್, ಪದ್ಮಿನಿ ಕೃಷ್ಣಮೂರ್ತಿ ಮತ್ತು ಪ್ರಮೀಳಾ ರಮೇಶ್ ಅವರ ತಂಡಗಳ ಭಕ್ತಿಪೂರ್ವಕ ನೃತ್ಯ ಸೇವೆಗಳು ಗಣೇಶನ ಪಾದರಾವಿಂದಕ್ಕೆ ಸಮರ್ಪಿಸಲ್ಪಟ್ಟವು

ಶ್ರೀಮತಿ ಧನ್ಯಾ ರತೀಶ್ ಮತ್ತು ತಂಡದ 12 ಜನರ ವೀಣಾ ವಾದನವು ಮರುಳುಗಾಡಿನ ಲ್ಲಿನ ಒಯಸಿಸ್ ನಂತೆ ಜನರ ಮನಸ್ಸನ್ನು ಸೆಳೆಯಿತು.

ವಿಸರ್ಜನೆ ಮತ್ತು ಅನ್ನ ಸಂತರ್ಪಣೆ:-

ಮೂರು ದಿನದ ವಿಜೃಂಭಣೆಯ ಸಮಾರಂಭವು ಗಣೇಶ ವಿಸರ್ಜನೆಯೊಂದಿಗೆ ಸಂಪ್ರದಾಯಿಕ ಪೂಜೆಗಳು ಮತ್ತು ನೆರೆದ ಭಕ್ತ ಸಮೂಹದಒಕ್ಕೊರಲಿನ “ಗಣಪತಿ ಬಪ್ಪ ಮೊರೆಯ” ನಾದದ ಮೂಲಕ ಕೊನೆಗೊಂಡಿತು.ನಂತರ ಪ್ರಸಾದ ವಿತರಣೆ. ಮೂಡೆ, ಮೆಣಸುಕಾಯಿ, ಪಾಯಸ, ಹೋಳಿಗೆ, ಕೋಸುಂಬರಿ, ಬಾಳೆಕಾಯಿಪೋಡಿ, ಸಾರು, ಹುಳಿ- ಮುಂತಾದ ಮಂಗಳೂರಿನ ಸಾಂಪ್ರದಾಯಿಕ ಅಡಿಗೆಯನ್ನು ಬಾಳೆ ಎಲೆಯ ಮೇಲೆ ಬಡಿಸಿ ಭಕ್ತಾದಿಗಳಿಗೆ ಅನ್ನ ಸಂತರ್ಪಣೆಯನ್ನು ಮಾಡಲಾಯಿತು. ಮಹಾಪ್ರಸಾದವನ್ನು ಸ್ವಾಗತ ಹೋಟೆಲ್ ನ ರವಿರಾಜ್ ಬಲ್ಲಾಳರು ಅನ್ನ ಸಂತರ್ಪಣೆಯನ್ನು ಒದಗಿಸಿದ್ದರು. ಒಮಾನ್ ಎಕ್ಸ್ಪ್ರೆಸ್ ಹೋಟೆಲ್ ಮತ್ತು ಉಡುಪಿ ಹೋಮ್ ಹೋಟೆಲ್ ಗಳು ಮೊದಲೆರಡು ದಿನಗಳ ಪ್ರಸಾದದ ವ್ಯವಸ್ಥೆಯನ್ನು ಮಾಡಿದ್ದರು. ಬಹು ಸಂಖ್ಯೆಯಲ್ಲಿ ಆಗಮಿಸಿದ ಇಲ್ಲಿನ ಭಾರತೀಯರುಮೂರು ದಿನಗಳು ಉತ್ಸವವನ್ನು ಭಕ್ತಿ ಮತ್ತು ಶ್ರದ್ಧೆಯಿಂದ ಭಾಗವಹಿಸಿದ್ದರು. ಒಮಾನ್ ದೇಶದ ಭಾರತದ ರಾಯಭಾರಿ ಮನು ಮಹಾವರ್, ಡಾ. ಸತೀಶ್ನಂಬಿಯಾರ್, ಅಧ್ಯಕ್ಷರುಭಾರತೀಯಸಾಂಸ್ಕ್ರತಿಕಸಂಸ್ಥೆ, ಮಸ್ಕತ್. ಇಲ್ಲಿನ ಭಾರತೀಯ ಮೂಲದ ಉದ್ಯಮಿ ಅನಿಲ್ ಕಿಂಜಿ,ಅಶ್ವಿನ್ನಾನ್ಸಿ, ಬಕುಲ್ಭಾಯ್ಮೆಹ್ತಾ- ಮುಂತಾದ ಗಣ್ಯರು ಉತ್ಸವದಲ್ಲಿ ಭಾಗವಹಿಸಿ ಉತ್ಸವದ ಕಳೆಯನ್ನು ಹೆಚ್ಚಿಸಿದರು.

35 ವರ್ಷಗಳ ನಿರಂತರ ಗಣೇಶೋತ್ಸವವನ್ನು ಪೂರೈಸಿದ ಮಸ್ಕತ್ತಿನ ಗಣೇಶ ಸೇವಾ ಸಮಿತಿಯು ಈ ಪ್ರಯುಕ್ತ ಸಪ್ಟೆಂಬರ್ 20ರ ಶುಕ್ರವಾರ ಇಲ್ಲಿನ ಶ್ರೀ ಕೃಷ್ಣ ದೇವಾಲಯದ ಸಭಾಂಗಣದಲ್ಲಿ ಶ್ರೀ ತೋನ್ಸೆ ಪುಷ್ಕಲ್ ಕುಮಾರ್ ಅವರಿಂದ ‘ಚೌತಿಯ ಚಂದ್ರ’ ಹರಿಕಥಾ ಪಠಣ ಮತ್ತು ವಿದುಷಿ ಗೀತಾ ಸರಳಾಯ , ರಶ್ಮಿ ಚಿದಾನಂದ್ ಮತ್ತು ಮಸ್ಕತ್ತಿನ ಕೆಲವು ಕಲಾವಿದರೊಂದಿಗೆ ನೃತ್ಯರೂಪಕ ‘ಏಕದಂತ’ ಮತ್ತು ‘ಕೃಷ್ಣನಅಂತರಂಗ’ ಗಳ ಪ್ರದರ್ಶನವನ್ನು ಏರ್ಪಡಿಸದ್ದಾರೆ.

ಮಸ್ಕತ್ತಿನಲ್ಲಿನ ಭಾರತೀಯರಿಗೆ ಸೇವೆಯ ಅವಕಾಶವನ್ನು ಆ ವಿಘ್ನೇಶ್ವರ ನಿರಂತರ ನೀಡಲಿ ಎನ್ನುವುದು ನಮ್ಮೆಲ್ಲರ ಆಶಯ.

ವರದಿ: ಸುಧಾ ಶಶಿಕಾಂತ್ ಮತ್ತು ಕೋಣಿ ಪ್ರಕಾಶ್ ನಾಯಕ್


Spread the love

1 Comment

  1. ಒಮಾನನಲ್ಲಿಯ ಗಣೇಶೋತ್ಸವದ ವರದಿ ಓದಿ ಬಹಳ ಸಂತೋಷವಾಯಿತು.ನಾವೇ ಪ್ರತ್ಯಕ್ಷವಾಗಿ ನೋಡಿದಂತಾಯಿತು.ಗಣೇಶನ ಆಶೀರ್ವಾದ ಮಸ್ಕತ್ ಕನ್ನಡಿಗರ ಮೇಲೆ ಯಾವಾಗಲೂ ಇರಲಿ.ವರದಿಗಾರರಿಗೆ ಧನ್ಯವಾದಗಳು.

Comments are closed.