ಮಾಜಿ ರಾಷ್ಟ್ರಪತಿ ಅಬ್ದುಲ್ ಕಲಾಂ ರ ಸಹಿ ಪೋರ್ಜರಿ ಪ್ರಕರಣ; ಆರೋಪಿಗೆ 3 ವರ್ಷ ಜೈಲು ಶಿಕ್ಷೆ

Spread the love

ಮಾಜಿ ರಾಷ್ಟ್ರಪತಿ ಅಬ್ದುಲ್ ಕಲಾಂ ರ ಸಹಿ ಪೋರ್ಜರಿ ಪ್ರಕರಣ; ಆರೋಪಿಗೆ 3 ವರ್ಷ ಜೈಲು ಶಿಕ್ಷೆ

ಉಡುಪಿ: ಎಂಟು ವರ್ಷಗಳ ಹಿಂದೆ ಮಾಜಿ ರಾಷ್ಟ್ರಪತಿ ದಿವಂಗತ ಡಾ. ಎ.ಪಿ.ಜೆ.ಅಬ್ದುಲ್ ಕಲಾಂ ಅವರ ಸಹಿಯನ್ನು ಪೋರ್ಜರಿ ಮಾಡಿ ಅವರ ವ್ಯಕ್ತಿತ್ವ ಮತ್ತು ಗೌರವಕ್ಕೆ ಧಕ್ಕೆ ಉಂಟು ಮಾಡಿರುವ ಪ್ರಕರಣದ ಆರೋಪಿಗೆ ಉಡುಪಿ ಹೆಚ್ಚುವರಿ ಜೆಎಂಎಫ್‌ಸಿ ನ್ಯಾಯಾಲಯವು ಮೂರು ವರ್ಷ ಕಠಿಣ ಕಾರಾಗೃಹ ಶಿಕ್ಷೆ ವಿಧಿಸಿ ತೀರ್ಪು ನೀಡಿದೆ.

ಶಿಕ್ಷೆಗೆ ಗುರಿಯಾದ ಆರೋಪಿಯನ್ನು ಕೊಡವೂರು ಗ್ರಾಮದ ಮೂಡಬೆಟ್ಟು ನಿವಾಸಿ ನಿರಂಜನ್ ಚಿದಾನಂದ ಭಟ್ (37) ಎಂದು ಗುರುತಿಸಲಾಗಿದೆ

 2010ರಲ್ಲಿ ಈತ ವಂಚಿಸುವ ಮತ್ತು ತಾನೆ ಭಾರತ ದೇಶದ ರಾಷ್ಟ್ರಪತಿ ಡಾ. ಎ.ಪಿ.ಜೆ.ಅಬ್ದುಲ್ ಕಲಾಂ ಎಂದು ವ್ಯವಹರಿಸಿ ರಾಷ್ಟ್ರಪತಿಯ ವ್ಯಕ್ತಿತ್ವ ಮತ್ತು ಗೌರವಕ್ಕೆ ಧಕ್ಕೆ ಉಂಟು ಮಾಡುವ ಉದ್ದೇಶದಿಂದ ತನ್ನ ಮನೆಯಲ್ಲಿ ಎ.ಪಿ.ಜೆ. ಅಬ್ದುಲ್ ಕಲಾಂ ಅವರ ಸಹಿಯನ್ನು ನಕಲಿ ಮಾಡಿ, ನಕಲಿ ದಾಖಲೆಗಳನ್ನು ಸೃಷ್ಠಿಸಿದ್ದನು.
ಉಡುಪಿ ಕರಾವಳಿ ಬೈಪಾಸ್ ಬಳಿಯ ಸರ್ಫ್ ಆಯಂಡ್ ವೀವ್ ಎಂಬ ಹೆಸರಿನ ಸೈಬರ್ ಕೆಫೆಯಲ್ಲಿ ಅಬ್ದುಲ್ ಕಲಾಂ ಅವರ ಹೆಸರಿನಲ್ಲಿ ಈತ ನಕಲಿ ಇಮೇಲ್ ಐಡಿಯನ್ನು ತಯಾರಿಸಿ, ಅದರ ಮೂಲಕ ಅಬ್ದುಲ್ ಕಲಾಂ ಅವರಿಗೆ ಅಭಿನಂದನಾ ಪತ್ರ ವನ್ನು ಕಳುಹಿಸಿಕೊಟ್ಟಿದ್ದನು. ಅದಕ್ಕೆ ಉತ್ತರವಾಗಿ ಅಬ್ದುಲ್ ಕಲಾಂ ಕಳುಹಿಸಿದ್ದ ಕೃತಜ್ಞತಾ ಪತ್ರದಲ್ಲಿದ್ದ ಅವರ ಸಹಿಯನ್ನು ಆರೋಪಿ ನಕಲಿ ಮಾಡಿದ್ದನು.

ಮಾನವ ಕುಲಕ್ಕಾಗಿ ಅತ್ಯುನ್ನತ ಸೇವೆಗಳನ್ನು ಮಾಡಿದ ಇಂಜಿನಿಯರ್ಸ್‌ಗಳಿಗೆ ಅಮೆರಿಕನ್ ಇಂಜಿನಿಯರಿಂಗ್ ಆರ್ಗನೈಝೇಶನ್ ನೀಡುವ ಹೂವೇರ್ ಪ್ರಶಸ್ತಿ ಗಾಗಿ ಆರೋಪಿಯು ನಾಮಪತ್ರವನ್ನು ಅಬ್ದುಲ್ ಕಲಾಂ ಅವರ ನಕಲಿ ಶಿಫಾರಸ್ಸು ಪತ್ರದೊಂದಿಗೆ ಕಳುಹಿಸಿದ್ದನು. ಅಲ್ಲದೆ ಅಬ್ದುಲ್ ಕಲಾಂ ಅವರ ನಕಲಿ ಇಮೇಲ್ ಐಡಿಯಿಂದ ಗೋಸ್ವಾಮಿ ಡಿ.ಯೋಗಿ ನ್ಯೂಯಾರ್ಕ್ ಇವರಿಗೆ ಭಾರತ ದೇಶದಲ್ಲಿರುವ 50 ಎಂಡಬ್ಲ್ಯೂ ಸೋಲಾರ್ ಥರ್ಮಲ್ ಪ್ಲಾಂಟ್‌ನ ಪ್ರಾಜೆಕ್ಟ್ ರಿಪೋರ್ಟನ್ನು ಕಳುಹಿಸಿಕೊಡುವಂತೆ ಕೋರಿ, ತಾನು ಸೃಷ್ಠಿಸಿದ ದಾಖಲೆಗಳು ನೈಜ ದಾಖಲೆಗಳು ಎಂದು ಬಳಸಿದ್ದನು. ಈ ಮೂಲಕ ಆತ ತಾನೇ ರಾಷ್ಟ್ರಪತಿ ಅಬ್ಧುಲ್ ಕಲಾಂ ಎಂದು ವ್ಯವಹರಿಸಿ ಅವರ ವ್ಯಕ್ತಿತ್ವ ಹಾಗೂ ಗೌರವಕ್ಕೆ ಧಕ್ಕೆಯುಂಟು ಮಾಡಿದ್ದನು ಎಂದು ದೂರಲಾಗಿತ್ತು.

ಈ ಬಗ್ಗೆ ಆಗಿನ ಜಿಲ್ಲಾ ಅಪರಾಧ ಗುಪ್ತ ವಾರ್ತೆ ವಿಭಾಗದ ಪೊಲೀಸ್ ನಿರೀಕ್ಷಕ ಶ್ರೀನಿವಾಸ ರಾಜ್ ನೀಡಿದ ದೂರಿನಂತೆ ಮಲ್ಪೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಆಗಿನ ಉಡುಪಿ ವೃತ್ತ ನಿರೀಕ್ಷಕರಾಗಿದ್ದ ಗಣೇಶ ಹೆಗ್ಡೆ ಈ ಕುರಿತು ತನಿಖೆ ನಡೆಸಿದ್ದು, ನಂತರ ವೃತ್ತ ನಿರೀಕ್ಷಕರಾಗಿದ್ದ ಎಸ್.ವಿ.ಗಿರೀಶ್ ಆರೋಪಿ ವಿರುದ್ಧ ದೊಷಾರೋಪಣೆ ಪಟ್ಟಿಯನ್ನು ನ್ಯಾಯಾಲಯಕ್ಕೆ ಸಲ್ಲಿಸಿದ್ದರು.

ಈ ಪ್ರಕರಣದ ವಿಚಾರಣೆ ನಡೆಸಿದ ಉಡುಪಿ ಹೆಚ್ಚುವರಿ ಜೆಎಂಎಫ್‌ಸಿ ನ್ಯಾಯಾಲಯದ ನ್ಯಾಯಾಧೀಶ ಮಂಜುನಾಥ್ ಎಂ.ಎಸ್., ಸಾಕ್ಷಿದಾರರ ಸಾಕ್ಷ್ಯ, ದಾಖಲೆಗಳು ಹಾಗೂ ವಾದವನ್ನು ಆಲಿಸಿ ಆರೋಪಿ ಮೇಲಿನ ಆರೋಪ ಸಾಬೀತಾಗಿದೆ ಎಂದು ತೀರ್ಮಾನಿಸಿದರು. ಅದರಂತೆ ನ್ಯಾಯಾಧೀಶರು, ಆರೋಪಿ ನಿರಂಜನ್ ಚಿದಾನಂದ ಭಟ್‌ಗೆ ಭಾರತೀಯ ದಂಡ ಸಂಹಿತೆ ಕಲಂ 419, 465, 468, 469, 471ರಡಿ ಮೂರು ವರ್ಷ ಕಠಿಣ ಶಿಕ್ಷೆ ಮತ್ತು 7ಸಾವಿರ ರೂ. ದಂಡ ವಿಧಿಸಿ ತೀರ್ಪು ನೀಡಿದರು.

ಸರಕಾರ ಪರವಾಗಿ ಹಿಂದಿನ ಸಹಾಯಕ ಸರಕಾರಿ ಅಭಿಯೋಜಕಿ ಹಾಗೂ ಈಗಿನ ಕಾನೂನು ಅಧಿಕಾರಿ ಮಮ್ತಾಝ್ ವಿಚಾರಣೆ ನಡೆಸಿದ್ದು, ಈಗಿನ ಸಹಾಯಕ ಸರಕಾರಿ ಅಭಿಯೋಜಕಿ ಜಯಂತಿ ಕೆ. ವಾದ ಮಂಡಿಸಿದ್ದರು.


Spread the love