ಮಾದರಿ ಪಟ್ಟಣ ಪಂಚಾಯತ್ ಆಗಿ ಕಡಬ: ಹರೀಶ್ ಕುಮಾರ್

Spread the love

ಮಾದರಿ ಪಟ್ಟಣ ಪಂಚಾಯತ್ ಆಗಿ ಕಡಬ: ಹರೀಶ್ ಕುಮಾರ್

ಮಂಗಳೂರು: ಚುನಾವಣೆಯ ಸಂದರ್ಭ ಕಾಂಗ್ರೆಸ್ ನೀಡಿರುವ ಭರವಸೆಯಂತೆ ಕಡಬ ಪಟ್ಟಣ ಪಂಚಾಯತ್‌ನ್ನು ಮಾದರಿಯಾಗಿ ರೂಪಿಸಲಾಗುವುದು ಎಂದು ಕಾಂಗ್ರೆಸ್ ಜಿಲ್ಲಾಧ್ಯಕ್ಷ ಹರೀಶ್ ಕುಮಾರ್ ಆಶ್ವಾಸನೆ ನೀಡಿದ್ದಾರೆ.

ದ.ಕ.ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಶುಕ್ರವಾರ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಚುನಾವಣೆಯಲ್ಲಿ ಗೆಲುವಿಗೆ ಪಕ್ಷದ ನಾಯಕರ ಒಗ್ಗಟ್ಟಿನ ಹೋರಾಟದ ಜತೆಗೆ ರಾಜ್ಯ ಸರಕಾರದ ಪಂಚ ಗ್ಯಾರಂಟಿಗಳು ಕಾರಣವಾಗಿವೆ ಎಂದರು.

ಹಣ, ಹೆಂಡ ಹಂಚಿದ ಕಾರಣ ಕಡಬ ಪ.ಪಂ. ಚುನಾವಣೆಯಲ್ಲಿ ಕಾಂಗ್ರೆಸ್ ಗೆದ್ದಿಗೆ ಎಂಬ ಆರೋಪ ಬಿಜೆಪಿಯವರಿಂದ ಕೇಳಿ ಬಂದಿದೆ. ಆದರೆ ವಾಸ್ತವದಲ್ಲಿ ಹಣ ಹಂಚಿದ್ದು ಬಿಜೆಪಿಯವರು. ಚುನಾವಣಾ ದಿನ ಕಾರ್ಯಕರ್ತರು ಬೂತ್‌ನಲ್ಲಿದ್ದ ವೇಳೆ ನಾಲ್ಕು ವಾರ್ಡ್‌ಗಳಲ್ಲಿ ಬಿಜೆಪಿಯವರು ಹಣ ಹಂಚಿದ್ದಾರೆ. ಈ ಮೂಲಕ ಎರಡು ವಾರ್ಡಗಳನ್ನು ಕಿತ್ತುಕೊಂಡಿದ್ದಾರೆ. ಅವರು ಮಾಡಿರುವುದನ್ನು ಕಾಂಗ್ರೆಸ್ ಮಾಡಿದೆ ಎಂದು ಹೇಳಲು ಹೊರಟಿದ್ದಾರೆ. ಮತದಾರರಿಗೆ ಈ ಬಗ್ಗೆ ಅರಿವಿದೆ ಎಂದವರು ಹೇಳಿದರು.

ಬಿಜೆಪಿಯವರು ಕಾಂಗ್ರೆಸ್‌ನಿಂದ ಅಭಿವೃದ್ಧಿ ಆಗುತ್ತಿಲ್ಲ ಎಂದು ಆರೋಪಿಸುತ್ತಿದ್ದಾರೆ. ಅಭಿವೃದ್ಧಿ ಎಂದರೆ ಕೇವಲ ರಸ್ತೆ, ಕಟ್ಟಡ ನಿರ್ಮಾಣ ಮಾತ್ರವಲ್ಲ. ಜನರ ಜೀವನ ಮಟ್ಟ ಸುಧಾರಿಸುವುದು ಕೂಡಾ ಪ್ರಮುಖ. ಪಂಚ ಗ್ಯಾರಂಟಿಗಳು ಜನರ ಜೀವನ ಮಟ್ಟ ಸುಧಾರಿಸಲು ಸಹಕಾರಿಯಾಗಿವೆ. ಈ ಗ್ಯಾರಂಟಿ ಯೋಜನೆಗಳಿಗಾಗಿ 55000 ಕೋಟಿ ರೂ. ಹಾಗೂ ಕೃಷಿ ಪಂಪ್ ಸೆಟ್‌ಗಳಿಗಾಗಿ 10000 ಕೋಟಿ ರೂ ಖರ್ಚು ಮಾಡಲಾಗುತ್ತಿದೆ ಎಂದವರು ಹೇಳಿದರು.

ಒಳ ಮೀಸಲಾತಿ ಮೂರು ದಶಕಗಳ ಹೋರಾಟವಾಗಿದ್ದು, ಸಮರ್ಪಕವಾಗಿ ಅನುಷ್ಟಾನ ಮಾಡುವ ಗೌರವ ಇದೀಗ ಕಾಂಗ್ರೆಸ್ ಪಕ್ಷಕ್ಕೆ ದೊರಕಿದೆ. ಒಳ ಮೀಸಲಾತಿ ಎಂಬುದು ಜೇನುಗೂಡಿಗೆ ಕೈಹಾಕಿದಂತೆ. ಎಲ್ಲರಿಗೂ ಸಮಾಧಾನ ಪಡಿಸುವುದು ಕಷ್ಟ. ಆದರೆ ಪಕ್ಷ ಎಲ್ಲ ಸಮುದಾಯಗಳಿಗೂ ನ್ಯಾಯ ಒದಗಿಸುವ ಕೆಲಸ ಮಾಡಿದೆ ಎಂದವರು ಹೇಳಿದರು.

ಪಕ್ಷ ಸಂಘಟನೆ ಪಕ್ಷದ ಮಟ್ಟದಲ್ಲಿ ನಿರಂತರ ಪ್ರಕ್ರಿಯೆ. ಸ್ಥಳೀಯ ಚುನಾವಣೆಗಳ ಸಂದರ್ಭ ಮತದಾರರು ಸರಕಾರದ ಕಾರ್ಯಕ್ರಮ, ಜನಜೀವನಕ್ಕೆ ಸ್ಪಂದನೆಯ ವಿಚಾರವನ್ನೂ ಗಮನಿಸುತ್ತಾರೆ ಎಂದು ಸುದ್ದಿಗಾರರ ಪ್ರಶ್ನೆಯೊಂದಕ್ಕೆ ಅವರು ಉತ್ತರಿಸಿದರು.

ಗೋಷ್ಟಿಯಲ್ಲಿ ಮುಖಂಡರಾದ ಎಂ.ಎಸ್. ಮುಹಮ್ಮದ್, ನವೀನ್ ಡಿಸೋಜಾ, ಸುಭಾಶ್ಚಂದ್ರ ಶೆಟ್ಟಿ, ಅಪ್ಪಿಲತಾ, ಶಶಿಧರ ಹೆಗ್ಡೆ, ಚಿತ್ತರಂಜನ್, ಶಾಹುಲ್ ಹಮೀದ್, ನವಾಜ್, ದಿನೇಶ್, ವಿಕಾಸ್, ನೀರಜ್‌ಪಾಲ್, ಪ್ರೇಮ್ ಬಳ್ಳಾಲ್‌ಬಾಗ್ ಮೊದಲಾದವರು ಉಪಸ್ಥಿತರಿದ್ದರು.

ಸಂಸ್ಕೃತಿ ಪ್ರಕಾರ ಹಬ್ಬಗಳ ಆಚರಣೆಗೆ ತೊಂದರೆ ಆಗದು: ಪದ್ಮರಾಜ್

ನಮ್ಮ ಧರ್ಮಗಳ ಸಂಸ್ಕೃತಿ ಪ್ರಕಾರದಲ್ಲಿ ಹಬ್ಬಗಳ ಆಚರಣೆಗೆ ಯಾರಿಂದಲೂ ತೊಂದರೆ ಆಗದು. ಹಬ್ಬ ಹರಿದಿನಗಳನ್ನು ವೈಭದಿಂದ ಆಚರಿಸಲು ಯಾವ ಅಡೆತಡೆಯೂ ಇಲ್ಲ ಎಂದು ಕೆಪಿಸಿಸಿ ಮಾಜಿ ಪ್ರಧಾನ ಕಾರ್ಯದರ್ಶಿ ಪದ್ಮರಾಜ್ ಆರ್. ಪೂಜಾರಿ ಹೇಳಿದರು.

ಕಾನೂನಿನ ಚೌಕಟ್ಟಿನಲ್ಲಿ ಡಿಜೆ ನಿಷೇಧಿಸಲಾಗಿದೆ. ಕಾಲಮಿತಿ ಬಿಜೆಪಿ ಆಡಳಿತದ ಅವಧಿಯಲ್ಲಿಯೂ ಇತ್ತು. ಅಧಿಕಾರಿಗಳ ಕೆಲಸ ಕಾನೂನು ಪಾಲನೆ ಮಾಡುವುದು. ಶ್ರದ್ಧಾಭಕ್ತಿಯ ಆಚರಣೆಗೆ ಪೊಲೀಸರು ಹಿಂದೆಯೂ ಅಡ್ಡಿ ಪಡಿಸಿಲ್ಲ. ಆದರೆ ಬಿಜೆಪಿಯವರಿಗೆ ಇಂತಹ ವಿಚಾರ ಬಿಟ್ಟರೆ ಮಾತನಾಡಲು ವಿಷಯವೇ ಇಲ್ಲ. ಜನರನ್ನು ತಪ್ಪುದಾರಿಗೆ ಎಳೆಯುವ ಕೆಲಸ ಹಿಂದಿನಿಂದಲೂ ಮಾಡಿಕೊಂಡು ಬಂದಿದ್ದಾರೆ. ಜನಪ್ರತಿನಿಧಿಗಳನ್ನು ಮತದಾರರು ಆಯ್ಕೆ ಮಾಡಿದ್ದು, ಜನಪರ ಕೆಲಸ ಮಾಡಲು ಎಂದವರು ಹೇಳಿದರು.


Spread the love
Subscribe
Notify of

0 Comments
Inline Feedbacks
View all comments