ಮಾರ್ಚ್‌ 31: ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರದ ಮತದಾರರ ಜಾಗೃತಿಗಾಗಿ ಮ್ಯಾರಥಾನ್

Spread the love

ಮಾರ್ಚ್‌ 31: ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರದ ಮತದಾರರ ಜಾಗೃತಿಗಾಗಿ ಮ್ಯಾರಥಾನ್

ಮಂಗಳೂರು: ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರದಲ್ಲಿ ಏಪ್ರಿಲ್‌ 18ರಂದು ನಡೆಯಲಿರುವ ಮತದಾನದಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳುವಂತೆ ಜನರಲ್ಲಿ ಜಾಗೃತಿ ಮೂಡಿಸುವ ಉದ್ದೇಶದಿಂದ ಜಿಲ್ಲಾ ಮಟ್ಟದ ಮತದಾರರ ಶಿಕ್ಷಣ ಮತ್ತು ಮತದಾನದಲ್ಲಿ ಪಾಲ್ಗೊಳ್ಳುವಿಕೆ (ಸ್ವೀಪ್‌) ಕಾರ್ಯಕ್ರಮದ ವತಿಯಿಂದ ಮಾರ್ಚ್‌ 31ರಂದು ಮಂಗಳೂರಿನಲ್ಲಿ ಮ್ಯಾರಥಾನ್‌ ಆಯೋಜಿಸಲಾಗಿದೆ.

ಮಂಗಳವಾರ ಈ ಕುರಿತು ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದ ಜಿಲ್ಲಾ ಮಟ್ಟದ ಸ್ವೀಪ್‌ ಕಾರ್ಯಕ್ರಮ ಅನುಷ್ಠಾನ ಸಮಿತಿಯ ಅಧ್ಯಕ್ಷರೂ ಆಗಿರುವ ದಕ್ಷಿಣ ಕನ್ನಡ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾ ಅಧಿಕಾರಿ ಡಾ.ಆರ್‌. ಸೆಲ್ವಮಣಿ, ‘ಏಪ್ರಿಲ್‌ 18ರಂದು ಮತದಾನ ನಡೆಯಲಿದೆ. 18 ವರ್ಷ ವಯಸ್ಸಾಗಿದ್ದು, ಮತದಾರರ ಪಟ್ಟಿಯಲ್ಲಿ ಹೆಸರು ಇರುವವರು ಮತ ಚಲಾಯಿಸಬಹುದು. ಇದನ್ನು ನೆನಪಿಸಲು 18 ಕಿಲೋ ಮೀಟರ್‌ ಉದ್ದದ ಮ್ಯಾರಥಾನ್‌ ಆಯೋಜಿಸಲಾಗಿದೆ’ ಎಂದರು.

ಜಿಲ್ಲಾ ಪಂಚಾಯಿತಿ, ಮಹಾನಗರ ಪಾಲಿಕೆ ಹಾಗೂ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಭಾಗಿತ್ವದಲ್ಲಿ ಈ ಮ್ಯಾರಥಾನ್ ನಡೆಯಲಿದೆ. 16 ವರ್ಷ ಮೇಲ್ಪಟ್ಟವರಿಗೆ 18 ಕಿ.ಮೀ., 16 ವರ್ಷದೊಳಗಿನವರಿಗೆ 6 ಕಿ.ಮೀ. ಉದ್ದದ ಮ್ಯಾರಥಾನ್‌ ಆಯೋಜಿಸಲಾಗಿದೆ. ಮ್ಯಾರಥಾನ್‍ಗ ಳಲ್ಲಿ ಭಾಗವಹಿಸಲು ಸಾಧ್ಯವಾಗದ ಹಿರಿಯ ನಾಗರಿಕರು, ಸಾರ್ವಜನಿ ಕರಿಗಾಗಿ ಮತದಾನದ ಕಡೆಗೆ ನಮ್ಮ ನಡಿಗೆ 2019 ಕಾರ್ಯಕ್ರಮ ನಡೆಯಲಿದೆ ಎಂದು ಹೇಳಿದರು.

ಮ್ಯಾರಥಾನ್‌ ಮಾರ್ಗ: ಮಹಾನಗರ ಪಾಲಿಕೆ ಆಯುಕ್ತ ಮೊಹಮ್ಮದ್ ನಝೀರ್‌ ಮಾತನಾಡಿ, ‘16 ವರ್ಷದೊಳಗಿನ ಬಾಲಕ ಬಾಲಕಿಯರ ಮ್ಯಾರಥಾನ್‌ ಮಂಗಳಾ ಕ್ರೀಡಾಂಗಣದಿಂದ ಆರಂಭವಾಗಿ ಮಣ್ಣಗುಡ್ಡೆ ರಸ್ತೆ, ನ್ಯೂಚಿತ್ರಾ, ರಥಬೀದಿ, ಮಂಗಳೂರು ಸೆಂಟ್ರಲ್ ಮಾರುಕಟ್ಟೆ, ಹಂಪನಕಟ್ಟೆ ರಸ್ತೆ ಮೂಲಕ ಸಾಗಿ ಪಿವಿಎಸ್ ವೃತ್ತ, ಬಳ್ಳಾಲ್‍ಬಾಗ್, ಲಾಲ್‍ಬಾಗ್, ದಿವ್ಯದೀಪ ಟವರ್ಸ್ ಮುಂಭಾಗದಲ್ಲಿ ತಿರುಗಿ ಮಂಗಳಾ ಕ್ರೀಡಾಂಗಣದಲ್ಲಿ ಸಮಾರೋಪಗೊಳ್ಳಲಿದೆ’ ಎಂದರು.

16 ವರ್ಷ ಮೇಲ್ಪಟ್ಟವರ ಮ್ಯಾರ ಥಾನ್‌ ಮಂಗಳಾ ಕ್ರೀಡಾಂಗಣದಿಂದ ಆರಂಭವಾಗಿ ಮಣ್ಣಗುಡ್ಡೆ ರಸ್ತೆ, ನ್ಯೂಚಿತ್ರಾ, ರಥಬೀದಿ, ಶರವು ದೇವಸ್ಥನ ರಸ್ತೆ, ಕಾರ್ನಾಡ್ ಸದಾಶಿವ ರಾವ್ ರಸ್ತೆ, ನವಭಾರತ ವೃತ್ತ, ಪಿವಿಎಸ್ ವೃತ್ತ, ಸಲ್ಮಾ ಆರ್ಕೇಡ್, ಕದ್ರಿ ದೇವಸ್ಥಾನ ರಸ್ತೆ, ಬಿಜೈ, ಕೆಎಸ್‍ಆರ್‍ಟಿಸಿ, ಲಾಲ್‍ಬಾಗ್ ವೃತ್ತದಿಂದ ‘ಯೂ’ ತಿರುವು ಪಡೆದು ಪಂಚಮಿ ಕಾಂಪ್ಲೆಕ್ಸ್, ಕಾಪಿಕಾಡು, ದಡ್ಡಲಕಾಡು, ಉರ್ವ ಸ್ಟೋರ್, ಅಶೋಕ್‍ನಗರ, ಉರ್ವ ಮಾರುಕಟ್ಟೆ, ಲೇಡಿಹಿಲ್ ಮೂಲಕ ಮಂಗಳಾ ಕ್ರೀಡಾಂಗಣ ತಲುಪಲಿದೆ ಎಂದು ವಿವರಿಸಿದರು.

‘ಮತದಾನದ ಕಡೆಗೆ ನಮ್ಮ ನಡಿಗೆ’ ಮಂಗಳಾ ಕ್ರೀಡಾಂಗಣದಿಂದ ಮಣ್ಣಗುಡ್ಡೆ, ಬಳ್ಳಾಲ್‍ಬಾಗ್, ಲಾಲ್‍ಬಾಗ್, ಲೇಡಿಹಿಲ್ ಸಾಗಿ ಮಂಗಳಾ ಕ್ರೀಡಾಂಗಣ ಸೇರಲಿದೆ. ಮ್ಯಾರಥಾನ್ ಸ್ಪರ್ಧೆಯಲ್ಲಿ ಭಾಗವಹಿಸಿ ವಿಜೇತರಾಗುವವರಿಗೆ ನಗದು ಬಹುಮಾನ ನೀಡಿ ಪುರಸ್ಕರಿಸಲಾಗುವುದು ಎಂದು ತಿಳಿಸಿದರು.

ನೆಹರೂ ಯುವ ಕೇಂದ್ರದ ಸಂಯೋಜಕ ರಘುವೀರ್ ಸೂಟರ್‍ಪೇಟೆ, ಮನಪಾ ಜಂಟಿ ಆಯುಕ್ತರಾದ ಗಾಯತ್ರಿ, ಜಿಲ್ಲಾ ಪಂಚಾಯಿತಿ ಸುಧಾಕರ್ ಉಪಸ್ಥಿತರಿದ್ದರು.


Spread the love