ಮೀನುಗಾರರ ಪತ್ತೆಗಾಗಿ ರಾಜ್ಯ- ಕೇಂದ್ರದಿಂದ ಜಂಟಿ ಕಾರ್ಯಾಚರಣೆ ಮುಂದುವರಿಕೆ:  ಗೃಹ ಸಚಿವ ಎಂ.ಬಿ.ಪಾಟೀಲ್

Spread the love

ಮೀನುಗಾರರ ಪತ್ತೆಗಾಗಿ ರಾಜ್ಯ- ಕೇಂದ್ರದಿಂದ ಜಂಟಿ ಕಾರ್ಯಾಚರಣೆ ಮುಂದುವರಿಕೆ:  ಗೃಹ ಸಚಿವ ಎಂ.ಬಿ.ಪಾಟೀಲ್

ಉಡುಪಿ: ಉಡುಪಿ ಜಿಲ್ಲಾಧಿಕಾರಿ ಕಚೇರಿಯಲ್ಲಿ ಸಂಜೆ ಗೃಹ ಸಚಿವ ಎಂ.ಬಿ ಪಾಟೀಲ್ ಮಲ್ಪೆಯ ಸುವರ್ಣ ತ್ರಿಭುಜ ಬೋಟು ಸಹಿತ ಏಳು ಮಂದಿ ಮೀನುಗಾರರು ನಾಪತ್ತೆಯಾಗಿರುವ ಸಂಬಂಧ ಮಹತ್ವದ ಸಮಾಲೋಚನಾ ಸಭೆಯನ್ನು ಮಣಿಪಾಲದ ಜಿಲ್ಲಾಧಿಕಾರಿ ಕಚೇರಿಯಲ್ಲಿ ಶನಿವಾರ ನಡೆಸಿದರು.

ಜಿಲ್ಲೆಯ ಜನಪ್ರತಿನಿಧಿಗಳು ,ಪೊಲೀಸ್ ಅಧಿಕಾರಿಗಳು ,ಕೋಸ್ಟ್ ಗಾರ್ಡ್ ಅಧಿಕಾರಿಗಳು ,ಮೀನುಗಾರ ಮುಖಂಡರು ಈ ಸಭೆಯಲ್ಲಿ ಭಾಗಿಯಾಗಿದರು.ಮುಖ್ಯವಾಗಿ ಮಲ್ಪೆ ಬಂದರಿನಿಂದ ತೆರಳಿದ ಏಳು ಮೀನುಗಾರರು ನಾಪತ್ತೆಯಾಗಿರುವ ಬಗ್ಗೆ ಸಮಾಲೋಚನೆ ನಡೆಸಲು ಈ ಸಭೆ ನಿಗದಿಯಾಗಿತ್ತು.

ಡಿಸೆಂಬರ್ ತಿಂಗಳ ಹದಿಮೂರನೇ ತಾರೀಕಿಗೆ ಮಲ್ಪೆಯಿಂದ ಮೀನುಗಾರಿಕೆಗೆ ತೆರಳಿದ ಸುವರ್ಣ ತ್ರಿಭುಜ ಬೋಟ್ ನಾಪತ್ತೆಯಾಗಿ ಇವತ್ತಿಗೆ 22 ದಿನಗಳೇ ಕಳೆದಿವೆ.ಬೋಟ್ ನಲ್ಲಿದ್ದ  ಏಳು ಮೀನುಗಾರರ ಕುಟುಂಬ ಕಂಗಾಲಾಗಿವೆ.ಈ ಸಂಬಂಧ ಕೋಸ್ಟ್ ಗಾರ್ಡ್ ಎಷ್ಡೇ ಶೋಧ ನಡೆಸಿದ್ರೂ ಪ್ರಯೋಜನವಾಗಿಲ್ಲ.ಹೀಗಾಗಿ ಇವತ್ತಿನ ಸಭೆಯ ಉದ್ದೇಶವೂ ಅದೇ ಆಗಿತ್ತು.ಈತನಕ ಕೋಸ್ಟ್ ಗಾರ್ಡ್ ಮತ್ತು ನೌಕಾಸೇನೆ ಯಾವ ರೀತಿ ಶೋಧಕಾರ್ಯಾಚರಣೆ ನಡೆಸಿದೆ ಎಂಬ ಬಗ್ಗೆಯೂ ಸಭೆಯಲ್ಲಿ ಪ್ರಾತ್ಯಕ್ಷಿಕೆ ಮೂಲಕ ತೋರಿಸಲಾಯಿತು.ಇನ್ನಷ್ಡು ಪರಿಣಾಮಕಾರಿಯಾಗಿ ಯಾವ ರೀತಿ ಕಾರ್ಯಾಚರಣೆ ನಡೆಸಬಹುದು ಎಂದು ಮೀನುಗಾರರು ಗೃಹ ಸಚಿವರ ಸಭೆಯಲ್ಲಿ ಸಲಹೆ ಸೂಚನೆಗಳನ್ನು ನೀಡಿತು.

ಕೊನೆಗೆ ಮಾತನಾಡಿದ ಸಚಿವ ಎಂ.ಬಿ.ಪಾಟೀಲ್ ,ರಾಜ್ಯ ಮತ್ತು ಕೇಂದ್ರ ಸರಕಾರ ಮೀನುಗಾರರ ಶೋಧಕ್ಕೆ ಗರಿಷ್ಢ ಪ್ರಯತ್ನ ನಡೆಸುತ್ತಿದೆ.ಅವರೆಲ್ಲ ಸುರಕ್ಷಿತವಾಗಿ ವಾಪಾಸು ಬರಬೇಕು ಎಂಬುದೇ ನಮ್ಮೆಲ್ಲರ ಬಯಕೆಯಾಗಿದೆ. ದೂರು ದಾಖಲಾದ ದಿನದಿಂದ ಕೇಂದ್ರ ಹಾಗೂ ರಾಜ್ಯ ಸರಕಾರಗಳು ಶೋಧ ಕಾರ್ಯ ನಡೆಸುತ್ತಿವೆ. ರಾಜ್ಯ ಸರಕಾರ ಹಾಗೂ ಕೇಂದ್ರ ಸರಕಾರಗಳು ಎಲ್ಲ ಪಡೆಯ ಜೊತೆ ಎಲ್ಲ ಪ್ರಯತ್ನಗಳನ್ನು ಮಾಡುತ್ತಿವೆ. ಇದರಲ್ಲಿ ಯಾವುದೇ ರೀತಿಯ ಲೋಪಗಳು ಆಗಿಲ್ಲ. ಈ ವಿಚಾರದಲ್ಲಿ ಯಾವುದೇ ರಾಜಕೀಯ ಬೆರೆಸುವುದು ಬೇಡ ಎಂದು ಅವರು ಹೇಳಿದರು.

ಕೇಂದ್ರ ಹಾಗೂ ರಾಜ್ಯ ಸರಕಾರಗಳು ಎಲ್ಲ ರೀತಿಯ ಪ್ರಯತ್ನ ಮಾಡುತ್ತಿರುವಾಗ ಜ.6ರಂದು ಪ್ರತಿಭಟನೆ ನಡೆಸುವುದು ಬೇಡ. ನಮ್ಮ ಮೇಲೆ ವಿಶ್ವಾಸ ಇಡಿ. ನಮ್ಮ ಪ್ರಯತ್ನ ಮಾಡುತ್ತಿದ್ದೇವೆ. ಆದುದರಿಂದ ಪ್ರತಿಭಟನೆ ಯಾರಿಗೋಸ್ಕರ ಮಾಡಲಾಗುತ್ತದೆ ಎಂದು ಸಚಿವ ಎಂ.ಬಿ.ಪಾಟೀಲ್ ಪ್ರಶ್ನಿಸಿದರು.

ಇದನ್ನು ನಿರಾಕರಿಸಿದ ಮಲ್ಪೆ ಮೀನುಗಾರರ ಸಂಘದ ಅಧ್ಯಕ್ಷ ಸತೀಶ್ ಕುಂದರ್, 19 ದಿನಗಳವರೆಗೆ ಸರಕಾರ ಯಾವುದೇ ರೀತಿ ಸ್ಪಂದನೆ ಮಾಡದಿ ರುವುದರಿಂದ ನಾವು ಹೋರಾಟಕ್ಕೆ ಇಳಿದಿದ್ದೇವೆ. ಈಗಾಗಲೇ ಎಲ್ಲ ರೀತಿಯ ಸಿದ್ಧತೆ ಮಾಡಲಾಗಿದೆ. ಉಸ್ತುವಾರಿ ಸಚಿವರು ಸ್ಥಳಕ್ಕೆ ಬಂದು ಮೀನುಗಾರರಿಗೆ ಈ ಬಗ್ಗೆ ಮಾಹಿತಿ ನೀಡಲಿ ಎಂದರು.

ಗೃಹ ಸಚಿವರ ಸೂಚನೆಯಂತೆ ಜಿಲ್ಲಾ ಉಸ್ತುವಾರಿ ಸಚಿವೆ ಜಯಾಮಾಲ ನಾಳಿನ ತಮ್ಮ ಕಾರ್ಯಕ್ರಮವನ್ನು ರದ್ದುಗೊಳಿಸಿ ಪ್ರತಿಭಟನಾ ಸಭೆಗೆ ತೆರಳಿ ಮನವಿ ಸ್ವೀಕರಿಸುವುದಾಗಿ ಸಭೆಯಲ್ಲಿ ಹೇಳಿದರು.

ಈ ಸಂಬಂಧ ಮಹಾರಾಷ್ಡ್ರ ಗೃಹ ಸಚಿವರ ಜೊತೆ ಶೀಘ್ರ ಸಭೆ ಕರೆಯುತ್ತೇವೆ.ನಮಗೆ ಮೀನುಗಾರರ ಜೀವ ಮುಖ್ಯ.ಇಲ್ಲಿ ರಾಜ್ಯ ಸರಕಾರ ಕೇಂದ್ರ ಸರಕಾರ ಎಂಬ ಪ್ರಶ್ನೆ ಉದ್ಬವಿಸುವುದಿಲ್ಲ.ಎರಡೂ ಸರಕಾರ ಇನ್ನಷ್ಡು ಪ್ರಯತ್ನ ನಡೆಸಿ ಮೀನುಗಾರರ ಇರುವಿಕೆಯನ್ನು ಪತ್ತೆ ಹಚ್ಚಲಿದೆ.ಮೀನುಗಾರರು ನಾಳೆ ನಡೆಸಲು ಉದ್ದೇಶಿಸಿರುವ ಪ್ರತಿಭಟನೆಯನ್ನು ಕೈ ಬಿಡಬೇಕು.ಜಿಲ್ಲಾ ಉಸ್ತುವಾರಿ ಸಚಿವರು ನಾಳೆ ನಿಮ್ಮಲ್ಲಿಗೆ ಬಂದು ನಿಮ್ಮ ಅಹವಾಲು ಆಲಿಸಲಿದ್ದಾರೆ ಎಂದು ಮೀನುಗಾರ ಮುಖಂಡರನ್ನು ಸಮಾಧಾನಪಡಿಸಿದರು.


Spread the love