ಮೀನುಗಾರ ಮಹಿಳೆಯರನ್ನು ಸನ್ಮಾನಿಸಿ ಮಹಿಳಾ ದಿನಾಚರಣೆ ಆಚರಿಸಿದ ಐ.ಸಿ.ವೈ.ಎಮ್. ಉದ್ಯಾವರ

Spread the love

ಮೀನುಗಾರ ಮಹಿಳೆಯರನ್ನು ಸನ್ಮಾನಿಸಿ ಮಹಿಳಾ ದಿನಾಚರಣೆ ಆಚರಿಸಿದ ಐ.ಸಿ.ವೈ.ಎಮ್. ಉದ್ಯಾವರ

ಉಡುಪಿ: ಭಾರತೀಯ ಕೆಥೋಲಿಕ್ ಯುವ ಸಂಚಲನ (ಐಸಿವೈಎಂ) ಉದ್ಯಾವರ ಘಟಕವು ಸುವರ್ಣ ಮಹೋತ್ಸವದ ಸಂಭ್ರಮದಲ್ಲಿದ್ದು’ ವಿಶ್ವ ಮಹಿಳಾ ದಿನಾಚರಣೆಯನ್ನು ಉಡುಪಿ ಮೀನು ಮಾರುಕಟ್ಟೆಯಲ್ಲಿರುವ ಮೀನು ಮಾರಾಟ ಮಾಡುವ ಮಹಿಳೆಯರನ್ನು ಸನ್ಮಾನಿಸುವ ಮೂಲಕ ವಿಶಿಷ್ಟ ರೀತಿಯಲ್ಲಿ ಆಚರಿಸಿದರು.

ಉಡುಪಿ ಮೀನು ಮಾರುಕಟ್ಟೆಯಲ್ಲಿರುವ ಮೀನುಗಾರ ಮಹಿಳೆಯರ ಸೇವೆಯನ್ನು ಗುರುತಿಸಿ ಐಸಿವೈಎಂ ಉದ್ಯಾವರ ಸುವರ್ಣ ಮಹೋತ್ಸವ ಸಮಿತಿಯು, ಜನಪ್ರತಿನಿಧಿ ಮತ್ತು ಸಮಾಜ ಸೇವಕರ ಉಪಸ್ಥಿತಿಯಲ್ಲಿ ಎಲ್ಲ ಮೀನು ಮಾರಾಟ ಮಾಡುವ ಮಹಿಳೆಯರನ್ನು ಶಾಲು ಹೊದಿಸಿ, ಸಿಹಿ ತಿಂಡಿ ನೀಡಿ ಸನ್ಮಾನಿಸಲಾಯಿತು.

ಮುಖ್ಯ ಅತಿಥಿಯಾಗಿ ಭಾಗವಹಿಸಿದ ಕಿನ್ನಿಮೂಲ್ಕಿ ವಾರ್ಡ್ನ ನಗರಸಭಾ ಸದಸ್ಯೆ ಅಮೃತಾ ಕೃಷ್ಣಮೂರ್ತಿ ಆಚಾರ್ಯ ಮಾತನಾಡುತ್ತಾ, ನಾನು ಮೀನನ್ನು ತಿನ್ನುವುದಿಲ್ಲ. ಆದರೆ ಮೀನು ಮಾರಾಟ ಮಾಡುವ ಮಹಿಳೆಯರು ಪುರುಷರಿಗೆ ಸಮಾನರಂತೆ ಕೆಲಸ ಮಾಡುತ್ತಿದ್ದು, ನಿಜಕ್ಕೂ ಮೆಚ್ಚುವಂಥದ್ದು. ಇಂದಿನ ಸಮಾಜದಲ್ಲಿ ಪುರುಷರಷ್ಟೇ ಮಹಿಳೆಯರಿಗೂ ಸ್ಥಾನಮಾನವಿದ್ದು, ಮೀನು ಮಾರಾಟ ಮಾಡುವ ಮಹಿಳೆಯರಿಗೆ ಸನ್ಮಾನಿಸಿದ್ದು ನಿಜಕ್ಕೂ ಉತ್ತಮ ಕಾರ್ಯಕ್ರಮವೆಂದರು.

ಉಡುಪಿ ಮೀನು ಮಾರುಕಟ್ಟೆಯಲ್ಲಿ ಹಿರಿಯ ಮೂರು ಮಹಿಳೆಯರಿಗೆ ಅವರ ಸೇವೆಯನ್ನು ಗುರುತಿಸಿ ಐಸಿವೈಎಂ ಉದ್ಯಾವರ ಸುವರ್ಣ ಮಹೋತ್ಸವ ಸಮಿತಿ ಸನ್ಮಾನಿಸಿತು. ಬೇಬಿ ಸಾಲ್ಯಾನ್ ಕೊಡವೂರು, ಲಲಿತಾ ಅಮೀನ್ ಪಡುಕೆರೆ, ಸುಮತಿ ಬಂಗೇರ ಪಿತ್ರೋಡಿ ಇವರನ್ನು ಅತಿಥಿಗಳು ಸನ್ಮಾನಿಸಿದರು.

ಮೀನುಗಾರ ಮಹಿಳೆಯರ ಸಂಘದ ಅಧ್ಯಕ್ಷೆ ಬೇಬಿ ಸಾಲ್ಯಾನ್ ಮಾತನಾಡುತ್ತಾ, ನಮ್ಮ ಮಹಿಳೆಯರು ತಮ್ಮ ಕುಟುಂಬವನ್ನು ನಡೆಸುವುದರ ಜೊತೆಗೆ, ಮೀನು ಮಾರಾಟ ಮಾಡುವ ಮೂಲಕ ತಮ್ಮ ಕುಟುಂಬವನ್ನು ನಡೆಸುತ್ತಿದ್ದಾರೆ. ಹಲವು ಬಾರಿ ತಾವು ಖರೀದಿಸಿದ ಮೀನುಗಳನ್ನು ಉತ್ತಮ ಬೆಲೆಗೆ ಮಾರಾಟ ಮಾಡಲು ಅಸಾಧ್ಯವಾದರೂ, ತಮ್ಮ ಬಳಿಗೆ ಬರುವ ಗ್ರಾಹಕರಿಗೆ ತೃಪ್ತ ರಾಗುವಂತೆ ಮಾಡುತ್ತಿದ್ದಾರೆ. ಬಂದಂತಹ ಗ್ರಾಹಕರು ಹೆಚ್ಚು ಚರ್ಚೆ ಮಾಡದೆ ಮೀನುಗಳನ್ನು ತೆಗೆದುಕೊಂಡರೆ, ಮಹಿಳೆಯರಿಗೂ ತಮ್ಮ ಕುಟುಂಬ ಜೀವನ ನಡೆಸಲು ಆಧಾರವಾಗುತ್ತದೆ ಎಂದರು.

ಉಡುಪಿ ಮೀನು ಮಾರುಕಟ್ಟೆಯಲ್ಲಿರುವ ನೂರಕ್ಕೂ ಅಧಿಕ ಮಹಿಳೆಯರಿಗೆ ಐಸಿವೈಎಂ ಉದ್ಯಾವರ ಸುವರ್ಣ ಮಹೋತ್ಸವ ಸಮಿತಿಯ ಪರವಾಗಿ ಅತಿಥಿಗಳು ಶಾಲು ಹೊದಿಸಿ, ಗುಲಾಬಿ ಹೂ ನೀಡಿ ಮತ್ತು ಸಿಹಿ ತಿಂಡಿ ನೀಡಿ ಗೌರವಿಸಿದರು.

ಸಂತ ಫ್ರಾನ್ಸಿಸ್ ಜೇವಿಯರ್ ದೇವಾಲಯದ ಪಾಲನಾ ಮಂಡಳಿಯ ಉಪಾಧ್ಯಕ್ಷ ಮೆಲ್ವಿನ್ ನೊರೋನ್ನ, ಮದರ್ ತೆರೇಸಾ ಸ್ತ್ರೀ ಸಂಘಟನೆಯ ಅಧ್ಯಕ್ಷೆ ಲೀನಾ ಮೆಂಡೋನ್ಸಾ, ಐಸಿವೈಎಂ ಸುವರ್ಣ ಮಹೋತ್ಸವ ಸಮಿತಿಯ ನಿರ್ದೇಶಕರಾದ ರೊನಾಲ್ಡ್ ಡಿಸೋಜ, ಜೆರಾಲ್ಡ್ ಪಿರೇರ, ಟೆರೆನ್ಸ್ ಪಿರೇರ, ಮ್ಯಾಕ್ಸಿಂ ಡಿಸಿಲ್ವ, ಪ್ರಧಾನ ಕಾರ್ಯದರ್ಶಿ ಡೋರಾ ಅರೋಜ, ಐಸಿವೈಎಂ ಅಧ್ಯಕ್ಷ ರೋಯಲ್ ಕಾಸ್ತೆಲಿನೋ, ಸಲಹೆಗಾರ ಜೂಲಿಯಾ ಡಿಸೋಜಾ ಮತ್ತು ಪ್ರಮುಖರಾದ ವಿಲ್ಫ್ರೆಡ್ ಡಿಸೋಜ, ಜಾನ್ ಪ್ರಶಾಂತ್ ಗೋಮ್ಸ್, ಪ್ರಿಯಾಂಕಾ ಡಿಸೋಜಾ, ಜೂಲಿಯನ್ ದಾಂತಿ, ಪ್ರೇಮ್ ಮಿನೇಜಸ್ ಮತ್ತಿತರರು ಉಪಸ್ಥಿತರಿದ್ದರು.

ಐಸಿವೈಎಂ ಉದ್ಯಾವರ ಸುವರ್ಣ ಮಹೋತ್ಸವ ಸಮಿತಿಯ ಅಧ್ಯಕ್ಷ ಮೈಕಲ್ ಡಿಸೋಜಾ ಸ್ವಾಗತಿಸಿದರೆ, ಕಾರ್ಯಕ್ರಮಗಳ ಸಂಚಾಲಕ ಸ್ಟೀವನ್ ಕುಲಾಸೊ ಧನ್ಯವಾದ ಸಮರ್ಪಿಸಿ, ಕಾರ್ಯಕ್ರಮ ನಿರೂಪಿಸಿದರು.


Spread the love