ಮೀನು ಸಾಗಣೆ ಲಾರಿಗಳಿಗೆ ಟ್ಯಾಂಕ್ ಅಳವಡಿಕೆ: ತಿಂಗಳ ಕಾಲಾವಧಿ – ನಗರ ಪೊಲೀಸ್‌ ಆಯುಕ್ತ ಸಂದೀಪ ಪಾಟೀಲ 

Spread the love

ಮೀನು ಸಾಗಣೆ ಲಾರಿಗಳಿಗೆ ಟ್ಯಾಂಕ್ ಅಳವಡಿಕೆ: ತಿಂಗಳ ಕಾಲಾವಧಿ – ನಗರ ಪೊಲೀಸ್‌ ಆಯುಕ್ತ ಸಂದೀಪ ಪಾಟೀಲ 

ಮಂಗಳೂರು: ನಗರದ ರಸ್ತೆಗಳಲ್ಲಿ ಮೀನಿನ ತ್ಯಾಜ್ಯ ಸುರಿಯುವ ಲಾರಿಗಳ ವಿರುದ್ಧ ಕಾರ್ಯಾಚರಣೆ ಆರಂಭಿಸಲಾಗಿದ್ದು, ಇದು ನಿರಂತರವಾಗಿ ನಡೆಯಲಿದೆ ಎಂದು ನಗರ ಪೊಲೀಸ್‌ ಆಯುಕ್ತ ಸಂದೀಪ ಪಾಟೀಲ ಹೇಳಿದರು.

ನಗರದ ಪೊಲೀಸ್‌ ಆಯುಕ್ತರ ಕಚೇರಿಯಲ್ಲಿ ಶುಕ್ರವಾರ ನಡೆದ ಫೋನ್–ಇನ್‌ ಕಾರ್ಯಕ್ರಮದಲ್ಲಿ ಬಿಜೈನ ಜಿ.ಆರ್. ಪ್ರಭು ಅವರ ಕರೆಗೆ ಉತ್ತರಿಸಿ ಅವರು ಮಾತನಾಡಿದರು.

ಮೀನು ಸಾಗಣೆಯ ಲಾರಿಗಳಲ್ಲಿ ಶುಚಿತ್ವ ಕಾಪಾಡಲು ಹಾಗೂ ತ್ಯಾಜ್ಯ ನೀರು ರಸ್ತೆಗೆ ಸುರಿಯದಂತೆ ಟ್ಯಾಂಕ್‌ ಅಳವಡಿಸಲು ಮಾಲೀಕರಿಗೆ ಇದೇ 6 ರಂದು ನೋಟಿಸ್‌ ನೀಡಲಾಗಿದೆ. ಹಸಿರು ಪೀಠದ ಆದೇಶದಂತೆ ತ್ಯಾಜ್ಯ ಸುರಿಯುವುದು ಅಪರಾಧವಾಗಿದ್ದು, ಈ ನಿಟ್ಟಿನಲ್ಲಿ ಟ್ಯಾಂಕ್‌ ಅಳವಡಿಕೆ ಸೇರಿದಂತೆ ಅಗತ್ಯ ಕ್ರಮಗಳನ್ನು ಕೈಗೊಳ್ಳಲು ಒಂದು ತಿಂಗಳ ಅವಧಿ ನೀಡಲಾಗಿದೆ ಎಂದು ತಿಳಿಸಿದರು.

ಮಹಾನಗರ ಪಾಲಿಕೆಯ ತ್ಯಾಜ್ಯ ಸಾಗಿಸುವ ಲಾರಿಗಳ ಮೇಲೆ ಹೊದಿಕೆ ಹಾಕದೇ ಸಾಗಿಸಲಾಗುತ್ತಿದೆ ಎಂದು ಸುರತ್ಕಲ್‌ನ ಯಶಪಾಲ್‌ ದೂರಿದರು.

ಸಲ್ಫರ್‌ ಮತ್ತು ಯುರಿಯಾ ಸಾಗಿಸುವ ಲಾರಿಗಳಲ್ಲೂ ಹೊದಿಕೆ ಹಾಕುತ್ತಿಲ್ಲ. ಇಂತಹ ರಾಸಾಯನಿಕಗಳಿಂದ ದ್ವಿಚಕ್ರ ವಾಹನಗಳ ಸವಾರರಿಗೆ ತೊಂದರೆ ಉಂಟಾಗುತ್ತಿದೆ. ಅಲ್ಲದೇ ಈ ಲಾರಿಗಳು ಅತಿಯಾದ ವೇಗದಲ್ಲಿ ಸಂಚರಿಸುತ್ತಿವೆ ಎಂದು ಸುನಿಲ್‌ ಕುಳಾಯಿ ತಿಳಿಸಿದರು.
ಬಿಜೈನ ಪಿ.ಜಿ. ರಾವ್ ಕರೆ ಮಾಡಿ, ಕಾಂಕ್ರೀಟ್‌ ಮಿಶ್ರಣ ಮಾಡುವ ಲಾರಿಗಳಿಂದ ರಸ್ತೆಗಳಲ್ಲಿ ಕಾಂಕ್ರೀಟ್‌ ಬೀಳುತ್ತಿದೆ. ಅಲ್ಲದೇ ಈ ಲಾರಿಗಳ ನಂಬರ್ ಪ್ಲೇಟ್‌ಗಳ ಮೇಲೂ ಕಾಂಕ್ರೀಟ್‌ ಬಿದ್ದು, ಕಾಣದಂತಾಗಿದೆ ಎಂದು ಹೇಳಿದರು.

ನಗರದಲ್ಲಿ ಸಂಚರಿಸುವ ಖಾಸಗಿ ಬಸ್‌ಗಳ ವಿರುದ್ಧ ಹಲವು ನಾಗರಿಕರು ಕರೆ ಮಾಡಿ ಖಾಸಗಿ ಬಸ್‌ಗಳ ಚಾಲಕರು, ಬಸ್‌ಗಳ ಚಾಲನೆ ಮಾಡುತ್ತಿರುವಾಗ ಮೊಬೈಲ್‌ಗಳಲ್ಲಿ ಮಾತನಾಡುತ್ತಾರೆ ಎಂದು ಕದ್ರಿಯ ಲೋಕೋಶ್‌ ತಿಳಿಸಿದರು.

ಖಾಸಗಿ ಬಸ್‌ಗಳನ್ನು ಬಸ್‌ ನಿಲ್ದಾಣಗಳಲ್ಲಿ ನಿಲುಗಡೆ ಮಾಡದೇ, ರಸ್ತೆ ಮಧ್ಯದಲ್ಲಿ ನಿಲ್ಲಿಸಲಾಗುತ್ತಿದೆ. ಇದರಿಂದ ವಾಹನ ಸಂಚಾರಕ್ಕೆ ತೊಂದರೆ ಆಗುತ್ತಿದೆ ಎಂದು ಕೊಟ್ಟಾರದ ಎಸ್‌.ಪಿ. ಶೆಣೈ ದೂರಿದರು.

ಮೂಲ್ಕಿಯ ಸ್ಮಿತಾ ಅವರು, ಮೂಲ್ಕಿ ಬೈಪಾಸ್‌ನಲ್ಲಿ ಕೆಎಸ್‌ಆರ್‌ಟಿಸಿ ಬಸ್‌ ನಿಲುಗಡೆಗೆ ಅವಕಾಶ ನೀಡಬೇಕು. ಕಾರ್ನಾಡು ಬೈಪಾಸ್‌ ಬಳಿ ಇರುವ ಯು ಟರ್ನ್‌ ಅವೈಜ್ಞಾನಿಕವಾಗಿದೆ. ಇದರಿಂದ ಅಪಘಾತಗಳು ಹೆಚ್ಚಾಗುತ್ತಿವೆ ಎಂದು ತಿಳಿಸಿದರು.

ರೂಟ್ ನಂಬರ್ 30 ಬಿ ಬಸ್‌ನವರು ಮರೋಳಿಗೆ ಬರುವ ಟ್ರಿಪ್‌ಗಳ ಸಂಖ್ಯೆ ಕಡಿತಗೊಳಿಸಿದ್ದಾರೆ ಎಂದು ಮರೋಳಿಯ ಕೃಷ್ಣ ದೂರಿದರೆ, ಸ್ಟೇಟ್‌ ಬ್ಯಾಂಕ್‌ನಿಂದ ಕುಂಪಲ ವೃತ್ತದವರೆಗೆ ರೂಟ್‌ ನಂಬರ್‌ 44 ರ ಬಸ್‌ನಿಂದಲೂ ಟ್ರಿಪ್‌ಗಳ ಸಂಖ್ಯೆ ಕಡಿಮೆ ಮಾಡಲಾಗಿದೆ ಎಂದು ಕುಂಪಲದ ಚಂದ್ರಹಾಸ್‌ ಹೇಳಿದರು.

ಡಿಸಿಪಿಗಳಾದ ಹನುಮಂತ್ರಾಯ, ಲಕ್ಷ್ಮಿ ಗಣೇಶ್‌, ಇತರ ಅಧಿಕಾರಿಗಳು ಭಾಗವಹಿಸಿದ್ದರು.


Spread the love