ಮುಸ್ಲಿಂ ಮುಖಂಡರಿಂದ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಗೆ ಸನ್ಮಾನ

Spread the love

ಮುಸ್ಲಿಂ ಮುಖಂಡರಿಂದ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಗೆ ಸನ್ಮಾನ

ಮಂಗಳೂರು: ವಿವಿಧ ಸಂಘಟನೆಗಳು ಹಾಗೂ ಮುಸ್ಲಿಮ್ ಮುಖಂಡರ ವತಿಯಿಂದ ನೂತನವಾಗಿ ಬಿಜೆಪಿ ರಾಜ್ಯಾಧ್ಯಕ್ಷರಾಗಿ ಆಯ್ಕೆಯಾಗಿರುವ ನಳಿನ್ ಕುಮಾರ್ ಕಟೀಲ್ ಅವರನ್ನು ನಗರದ ಓಶಿಯನ್ ಪರ್ಲ್ ಹೊಟೇಲ್ ಸಭಾಂಗಣದಲ್ಲಿ ಮಂಗಳವಾರ ಅಭಿನಂದಿಸಲಾಯಿತು.

ಅಭಿನಂದನೆ ಸ್ವೀಕರಿಸಿ ಮಾತನಾಡಿದ ನಳಿನ್ ಕುಮಾರ್ ಅವರು ನಾನು ರಾಷ್ಟ್ರೀಯ ಸ್ವಯಂ ಸೇವಕ ಸಂಘದಿಂದ ಬಂದವನು. ಅಲ್ಲಿ ನನಗೆ ರಾಷ್ಟ್ರಭಕ್ತಿ ಹಾಗೂ ಮನುಷ್ಯನಲ್ಲಿ ದೇವರನ್ನು ಕಾಣು ಎಂದು ತಿಳಿಸಿಕೊಟ್ಟಿದ್ದಾರೆ. ಈ ಬಗ್ಗೆ ಯಾರಿಗೂ ಸಂಶಯ ಬೇಡ. ನಾನು ಹುಟ್ಟಿ ಬೆಳೆದ ನನ್ನ ಹಳ್ಳಿಯ ವಾರ್ಡ್ ಶೇ.80ರಷ್ಟು ಮುಸ್ಲಿಮರು ಇದ್ದ ಪ್ರದೇಶ. ಆದರೆ ಅಲ್ಲಿ ಬಿಜೆಪಿ ಸದಸ್ಯರು ಆಯ್ಕೆಯಾಗುತ್ತಿದ್ದರು.ರಾಜಕೀಯ ಕಾರಣದಿಂದ ಈ ವಾತಾವರಣ ಬದಲಾಗಿದೆ. ಈ ದಿನ ನೀವು ಪ್ರೀತಿ, ವಿಶ್ವಾಸದಿಂದ ಮಾಡಿದ ಗೌರವ ನನ್ನ ಬದುಕಿನಲ್ಲಿ ಅವಿಸ್ಮರಣೀಯ ಎಂದು ನಳಿನ್ ಕುಮಾರ್ ನುಡಿದರು.

ನಾನು ಕಂಡ ಹಿಂದು-ಮುಸ್ಲಿಮರ ನಡುವಿನ ಪ್ರೀತಿ, ವಿಶ್ವಾಸ ಈ ಜಿಲ್ಲೆಯಲ್ಲಿ ಇನ್ನೂ ಇದೆ. ನನಗೂ ನನ್ನ ಕಷ್ಟದ ದಿನಗಳಲ್ಲಿ ಮುಸ್ಲಿಮ್ ಬಂಧುಗಳು ಪ್ರೀತಿ, ವಿಶ್ವಾಸ ತೋರಿದ್ದಾರೆ. ನಾನು ತೋರಿಕೆಗಾಗಿ ನಾಟಕ ಮಾಡುತ್ತಿಲ್ಲ. ನ್ಯಾಯಯುತವಾಗಿ ದೊರೆಯಬೇಕಾದ ಸೌಲಭ್ಯಗಳನ್ನು ಎಲ್ಲರಿಗೂ ದೊರಕಿಸಿಕೊಡುವುದು ನನ್ನ ಹೊಣೆಗಾರಿಕೆ ಎಂದು ತಿಳಿದು ಕಾರ್ಯನಿರ್ವಹಿಸುತ್ತೇನೆ. ಈ ಸನ್ಮಾನ ನನ್ನ ಜವಾಬ್ದಾರಿ ಯನ್ನು ಹೆಚ್ಚಿಸಿದೆ. ದ.ಕ. ಜಿಲ್ಲೆಯ ಅಭಿವೃದ್ಧಿಗಾಗಿ ಎಲ್ಲರೊಂದಿಗೆ ಪ್ರೀತಿ ವಿಶ್ವಾಸದೊಂದಿಗೆ ಬೆರೆತು ಆದರ್ಶ ರಾಜಕಾರಣಕ್ಕಾಗಿ ಪ್ರಯತ್ನ ಮಾಡುತ್ತೇನೆ ಎಂದು ನಳಿನ್ ಕುಮಾರ್ ಕಟೀಲು ಹೇಳಿದರು.

ಮಾಜಿ ಶಾಸಕ ರುಕ್ಮಯ ಪೂಜಾಇರ, ದ.ಕ. ಜಿಲ್ಲಾ ಹಜ್ ಕಮಿಟಿಯ ಅಧ್ಯಕ್ಷ ವೈ.ಮುಹಮ್ಮದ್ ಕುಂಞಿ, ಯೆನೆಪೊಯ ವಿ.ವಿ. ಕುಲಾಧಿಪತಿ ಅಬ್ದುಲ್ಲಾ ಕುಂಞಿ , ಕೆನರಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಅಧ್ಯಕ್ಷ ಪಿ.ಬಿ.ಅಬ್ದುಲ್ ಹಮೀದ್ , ಬ್ಯಾರೀಸ್ ಚೇಂಬರ್ ಆಫ್ ಕಾಮರ್ಸ್ ಆಯಂಡ್ ಇಂಡಸ್ಟ್ರೀಸ್ ಅಧ್ಯಕ್ಷ ಎಸ್.ಎಂ.ರಶೀದ್ ಹಾಜಿ, ಉಳ್ಳಾಲದ ಸೈಯದ್ ಮದನಿ ದರ್ಗಾದ ಅಧ್ಯಕ್ಷ ಹಾಜಿ ಅಬ್ದುಲ್ ರಶೀದ್, ಕರ್ನಾಟಕ ರಾಜ್ಯ ಅಲ್ಪಸಂಖ್ಯಾತರ ಆಯೋಗದ ಅಧ್ಯಕ್ಷ ಜಿ.ಎ.ಬಾವ, ಟ್ಯಾಲೆಂಟ್ ರೀಸರ್ಚ್ ಫೌಂಡೇಶನ್ನ ಸಂಸ್ಥಾಪಕ ಅಬ್ದುರ್ರವೂಫ್ ಪುತ್ತಿಗೆ, ಅಬ್ದುಲ್ ಮಜೀದ್ ಸೂರಲ್ಪಾಡಿ, ಯೂಸುಫ್ ಬಾಖವಿ ಮತ್ತಿತರರು ಉಪಸ್ಥಿತರಿದ್ದರು.


Spread the love