ಮೆಡಿಕಲ್ ಸೀಟ್ ಕೊಡಿಸುವುದಾಗಿ ಮೋಸ ಮಾಡಿದ 10 ಮಂದಿಯ ಬಂಧನ

Spread the love

ಮೆಡಿಕಲ್ ಸೀಟ್ ಕೊಡಿಸುವುದಾಗಿ ಮೋಸ ಮಾಡಿದ 10 ಮಂದಿಯ ಬಂಧನ

ಮಂಗಳೂರು: ವಿದ್ಯಾರ್ಥೀಗಳಿಗೆ ಎಜೆ ಆಸ್ಪತ್ರೆಯಲ್ಲಿ ಎಂ.ಬಿ.ಬಿ.ಎಸ್. ಸೀಟು ಕೊಡಿಸುವುದಾಗಿ ನಂಬಿಸಿ ಲಕ್ಷಾಂತರ ರೂಪಾಯಿ ಮೋಸ ಮಾಡಿದ ಬೃಹತ್ ಜಾಲದ ಹತ್ತು ಮಂದಿಯನ್ನು ಕದ್ರಿ ಪೋಲಿಸರು ಬಂಧಿಸಿದ್ದಾರೆ.

ಬಂಧಿತರನ್ನು ಪಶ್ಚಿಮ ಬಂಗಾಳದ ಅಜಯ್ ನಾಯಕ್ ಮುಖರ್ಜಿ(41), ಲಕ್ನೋದ ಸೌರಭ್ ಗುಪ್ತಾ (32), ಜಾರ್ಖಂಡ್ ರಾಜ್ಯದ ಅನೂಪ್ ಸಿಂಗ್ (35), ಬಿಹಾರದ ಅಮಿತ್ ರಂಜನ್ (25), ಮಾಲಿಪುರ ನಿವಾಸಿ ಸ್ವಪಾನ್ ಬಿಶ್ವಾಸ್ (54), ಹೈದರಬಾದ್ ನಿವಾಸಿ ರಾಜೀವ್ ಕುಮಾರ್ (30), ಅನಿಲ್ ತುಲ್ಸಿರಾಮ್ (62), ಜಾರ್ಖಂಡ್ ನಿವಾಸಿ ಮನಿಷ್ ಕುಮಾರ್ ಷಾ (30), ಧೀರಜ್ ಶರ್ಮ (30), ಸಂಜಯ್ ಕುಮಾರ್ (26) ಎಂದು ಗುರುತಿಸಲಾಗಿದೆ.

ಬಂಧಿತರು ದಿಲ್ಲಿ ಮೂಲದ ಕಮಲ್ ಸಿಂಗ್ ರಾಜ್ ಪುರೋಹಿತ್ ಮತ್ತು ರಾಜಸ್ಥಾನದ ಮಹೇಂದರ್ ಎಂಬವರ ಮಕ್ಕಳಿಗೆ ಎಜೆ ಆಸ್ಪತ್ರೆಯಲ್ಲಿ ವೈದ್ಯಕೀಯ ಸೀಟು ಕೊಡಿಸುವುದಾಗಿ ನಂಬಿಸಿ, ಮಂಗಳೂರು ಎಜೆ ಆಸ್ಪತ್ರೆಗೆ ಕರೆಸಿಕೊಂಡು, ಎಜೆ ಮೆಡಿಕಲ್ ಕಾಲೇಜಿನ ಪದಾಧಿಕಾರಿಗಳೆಂದು ನಕಲಿ ಗುರುತು ಪತ್ರವನ್ನು ತೋರಿಸಿ ರೂ 5,40,000 ಮೌಲ್ಯದ 2 ಡಿಮಾಂಡ್ ಡ್ರಾಫ್ಟ್ ಗಳನ್ನು ಪಡೆದು ಕೊಂಡು ಸೀಟು ಕೊಡಿಸದೆ ಡಿಮಾಂಡ್ ಡ್ರಾಫ್ಟಿನೊಂದಿಗೆ ಪರಾರಿಯಾಗಿದ್ದರು.

ಈ ಕುರಿತು ಕಮಲ್ ಸಿಂಗ್ ರಾಜ್ ಪುರಗೋಹಿತ್ ಅವರು ಪೂರ್ವ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದರು. ಅದರಂತೆ ಹುಡುಕಾಟ ಆರಂಭಿಸಿದ ಕದ್ರಿ ಠಾಣ ಇನ್ಸ್ ಪೆಕ್ಟರ್ ಮಾರುತಿ ಜಿ. ನಾಯಕ್ ಮತ್ತು ಪಿಎಸ್ಐ ಹರೀಶ್ ಹೆಚ್ ವಿ ಹಾಗೂ ಸಿಬಂದಿಗಳು ಸೇರಿಕೊಂಡು ಆರೋಪಿಗಳನ್ನು ಶನಿವಾರ ಬಂಧೀಸಿದ್ದಾರೆ.

ಬಂಧಿತರಿಂದ ರೂ. 5,40,000 ಮೌಲ್ಯದ ಎರಡು ಡಿಡಿ, 20 ಮೊಬೈಲ್ ಫೋನ್, 2 ಲ್ಯಾಪ್ ಟಾಪ್, 1 ಐಪ್ಯಾಡ್, 1 ಪ್ರಿಂಟರ್, ನಗದು ರೂ 10,00,700, ಒಂದು ಇನ್ನೋವಾ ಕಾರು ಹಾಗೂ ಒಂದು ಚವರ್ ಲೆಟ್ ಕಾರಿನ ಜೊತೆಗೆ ಆರೋಪಿತರಿಂದ ನಕಲಿಯಾಗಿ ತಯಾರಿಸಿದ ಐಡೆಂಟಿಟಿ ಕಾರ್ಡ್, ಎಜೆ ಮೆಡಿಕಲ್ ಸೈನ್ಸ್ ಮತ್ತು ದೇರಳಕಟ್ಟೆ ಕೆ.ಎಸ್ ಹೆಗ್ಡೆ ಮೆಡಿಕಲ್ ಆಕಾಡೆಮಿಯ ಮೊಹರುಗಳನ್ನು ಸ್ವಾಧೀನಪಡಿಸಿಕೊಳ್ಳಲಾಗಿದೆ. ಆರೋಪಿತರಿಂದ ವಶಪಡಿಸಿಕೊಂಡ ಸೊತ್ತುಗಳ ಒಟ್ಟು ಮೌಲ್ಯ ರೂ 30, 98,700 ಆಗಿರುತ್ತದೆ.


Spread the love