ಮೈಸೂರು: ಕಲಾಮಂದಿರದಲ್ಲಿ ಬೀಫ್ ಸೇವನೆ, ಕನ್ನಡ ವೇದಿಕೆಯಿಂದ ಪ್ರತಿಭಟನೆ

Spread the love

ಮೈಸೂರು: ಕಲಾಮಂದಿರದಲ್ಲಿ ಬೀಫ್ ಸೇವನೆ, ಕನ್ನಡ ವೇದಿಕೆಯಿಂದ ಪ್ರತಿಭಟನೆ

ಮೈಸೂರು: ಮೈಸೂರಿನಲ್ಲಿ ಚಾರ್ವಾಕ ಸಾಮಾಜಿಕ ಮತ್ತು ಸಾಂಸ್ಕೃತಿಕ ಟ್ರಸ್ಟ್ ಆಯೋಜಿಸಿದ್ದ ಆಹಾರ ಪದ್ಧತಿ ಸ್ವಾತಂತ್ರ್ಯಕ್ಕೆ ಸಂಬಂಧಿಸಿದ ಕಾರ್ಯಕ್ರಮದಲ್ಲಿ ಗೋಮಾಂಸ ಭಕ್ಷಣೆ ಮಾಡಲಾಗಿದ್ದು, ಪ್ರತಿಭಟನೆಗೆ ಕಾರಣವಾಗಿದೆ.

ಕಲಾಮಂದಿರದಲ್ಲಿ ಆಯೋಜಿಸಲಾಗಿದ್ದ ಕಾರ್ಯಕ್ರಮದಲ್ಲಿ ಬೆಳಗಿನ ಉಪಹಾರಕ್ಕೆ ಉಪ್ಮಾ, ಪೊಂಗಲ್, ಚಿಕನ್ ಕಬಾಬ್ ಹಾಗೂ ಬೀಫ್ ಪೂರೈಕೆ ಮಾಡಲಾಗಿತ್ತು. ಮಧ್ಯಾಹ್ನದ ಊಟಕ್ಕೆ ಕೇಸರಿ ಬಾತ್ ಬೀಫ್ ಬಿರ್ಯಾನಿ ಹಾಗೂ ಉಪ್ಮಾ ಪೂರೈಸಲಾಗಿತ್ತು.

ಈ ಬಗ್ಗೆ ತಿಳಿಯುತ್ತಿದ್ದಂತೆಯೇ ಮೈಸೂರಿನ ಕನ್ನಡ ವೇದಿಕೆ ಕಾರ್ಯಕರ್ತರು ಪ್ರತಿಭಟನೆ ನಡೆಸಲು ಮುಂದಾಗಿದ್ದು, ಕಲಾಮಂದಿರ ಸರ್ಕಾರಿ ಸಭಾಂಗಣವಾಗಿದ್ದು, ಸಾಂಸ್ಕೃತಿಕ ಕಾರ್ಯಕ್ರಮ ನಡೆಸಲು ಇರುವ ಸ್ಥಳ, ಅಲ್ಲಿ ಮಾಂಸಾಹಾರ ಸೇವನೆಯಾಗಬಾರದು. ಈ ಘಟನೆಯನ್ನು ನೋಡಿದಾಗ ಕಲಾಮಂದಿರ ನಾನ್ ವೆಜ್ ಹೋಟೆಲ್ ಆಗಿ ಪರಿವರ್ತನೆಯಾಗಿದೆಯೇ ಎಂದೆನಿಸುತ್ತಿದೆ. ಕಲಾಮಂದಿರದಲ್ಲಿ ಬೀಫ್ ಸೇವನೆ ಒಪ್ಪುವುದಕ್ಕೆ ಸಾಧ್ಯವಿಲ್ಲ. ಜಿಲ್ಲಾಡಳಿತ ಈ ಬಗೆಗ್ ಕ್ರಮ ಕೈಗೊಳ್ಳಬೇಕೆಂದು ಕನ್ನಡ ವೇದಿಕೆ ಕಾರ್ಯಕರ್ತ ಬಾಲಕೃಷ್ಣ ಆಗ್ರಹಿಸಿದ್ದಾರೆ.

ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ್ದ ಪ್ರೊ.ಕೆಎಸ್ ಭಗವಾನ್, ” ಗೋವಧೆಯ ವಿಷಯವಾಗಿ ಬಿಜೆಪಿ ಅನಗತ್ಯ ಚರ್ಚೆ ಸೃಷ್ಟಿಸುತ್ತಿದೆ. ವೇದಗಳ ಕಾಲದಲ್ಲಿಯೇ ಗೋವಧೆ ಪ್ರಸಂಗಗಳಿವೆ. ಯಜ್ಞಗಳನ್ನು ಮಾಡಬೇಕಾದರೆ ಗೋವಧೆ ನಡೆಯುತ್ತಿತ್ತು. ಕೆಲಸಕ್ಕೆ ಬಾರದ ಹಸುಗಳನ್ನು ಇಟ್ಟುಕೊಳ್ಳುವುದು ರೈತರಿಗೂ ಸಮಸ್ಯೆಯಾಗುತ್ತದೆ. ಆದ್ದರಿಂದ ಅದನ್ನು ಮಾರಾಟ ಮಾಡಬಹುದು ಎಂದು ಹೇಳಿದ್ದಾರೆ. ಕಾರ್ಯಕ್ರಮದಲ್ಲಿ ಮಾಜಿ ಮೇಯರ್ ಪುರುಷೋತ್ತಮ್ ಹಾಗೂ ಪ್ರೊ, ಮಹೇಶ್ ಚಂದ್ರ ಗುರು ಭಾಗವಹಿಸಿದ್ದರು.
ಕೃಪೆ: ಕನ್ನಡಪ್ರಭ


Spread the love