ಮೋದಿ ಕಾರ್ಯಕ್ರಮಕ್ಕೆ ಹೋಗಲ್ಲ, ಬಂಡಾಯ ಸ್ಪರ್ಧೆ ಖಚಿತ ಎಂದ ಕೆಎಸ್ ಈಶ್ವರಪ್ಪ
ಶಿವಮೊಗ್ಗ: ನಾಳೆ ಜಿಲ್ಲೆಗೆ ಪ್ರಧಾನಿ ನರೇಂದ್ರ ಮೋದಿ ಆಗಮನ ಹಿನ್ನೆಲೆ ಬಿಎಸ್ ಯಡಿಯೂರಪ್ಪ ಪುತ್ರ ಬಿವೈ ರಾಘವೇಂದ್ರ ವಿರುದ್ಧ ಬಂಡಾಯ ಘೋಷಣೆ ಮಾಡಿರುವ ಕೆಎಸ್ ಈಶ್ವರಪ್ಪ ಅವರ ನಿವಾಸದಲ್ಲಿ ನಡೆದ ಬಿಜೆಪಿ ಸಂಧಾನ ವಿಫಲಗೊಂಡಿದೆ. ಬಿಜೆಪಿ ನಾಯಕರು ತಮ್ಮ ನಿವಾಸದಿಂದ ವಾಪಸ್ ಹೋದ ಬಳಿಕ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಈಶ್ವರಪ್ಪ, ನಾನು ಮೋದಿ ಪರ ಧ್ವನಿ ಎತ್ತುತ್ತೇನೆ. ಆದರೆ ಮೋದಿ ಕಾರ್ಯಕ್ರಮಕ್ಕೆ ನಾನು ಹೋಗುವುದಿಲ್ಲ ಎಂದು ಖಚಿತಪಡಿಸಿದ್ದಾರೆ. ಅಲ್ಲದೆ, ಇಂದು ಆರಗ ಜ್ಞಾನೇಂದ್ರ ಹಾಗೂ ಕೆಲವರು ನಿವಾಸಕ್ಕೆ ಬಂದಿದ್ದರು. ಆದರೆ ಯಾವುದೇ ಕಾರಣಕ್ಕೂ ಪಕ್ಷೇತರ ಸ್ಪರ್ಧೆಯಿಂದ ಹಿಂದೆ ಸರಿಯುವ ಪ್ರಶ್ನೆ ಇಲ್ಲ ಎಂದು ಹೇಳಿ ಯಡಿಯೂರಪ್ಪ ಕುಟುಂಬದ ವಿರುದ್ಧ ವಾಗ್ದಾಳಿ ನಡೆಸಿದರು.
ನನ್ನ ಮಗನಿಗೆ ಟಿಕೆಟ್ ಕೊಟ್ಟಿಲ್ಲ ಎಂದು ಸ್ಪರ್ಧಿಸುತ್ತಿಲ್ಲ. ಪಕ್ಷದಲ್ಲಿ ಅನೇಕ ಹಿಂದುತ್ವವಾದಿಗಳಿಗೆ ಮೋಸವಾಗಿದೆ. ಯಡಿಯೂರಪ್ಪ ಕುಟುಂಬದ ಹಿಡಿತದಲ್ಲಿ ಬಿಜೆಪಿ ಸಿಲುಕಿದೆ. ರಾಜ್ಯಾಧ್ಯಕ್ಷರು ಲಿಂಗಾಯತರೇ ಬೇಕು ಅಂದಿದ್ದರೆ ಯತ್ನಾಳ್ ಅವರನ್ನು ಮಾಡಬೇಕಿತ್ತು. ಯತ್ನಾಳ್ ಅವರನ್ನ ಯಾಕೆ ಮಾಡಲಿಲ್ಲ? ಲಿಂಗಾಯತರು ಬೆಳೆಯುವುದು ಇವರಿಗೆ ಇಷ್ಟವಿಲ್ಲ ಓಕೆ. ಒಕ್ಕಲಿಗ ನಾಯಕರನ್ನಾದರೂ ಮಾಡಬಹುದಿತ್ತು. ಯಾಕೆ ಮಾಡಿಲ್ಲ ಎಂದು ಯಡಿಯೂರಪ್ಪ ಅವರನ್ನು ಪ್ರಶ್ನಿಸಿದರು.
ಶೋಭಾ ಕರಂದ್ಲಾಜೆ ವಿರುದ್ಧ ಗೋಬ್ಯಾಕ್ ಅಭಿಯಾನ ನಡೆದರೂ ಉಡುಪಿ ಚಿಕ್ಕಮಗಳೂರು ಕ್ಷೇತ್ರದಲ್ಲಿ ಸಿ.ಟಿ.ರವಿಗೆ ಟಿಕೆಟ್ ಯಾಕೆ ಕೊಡಿಸಲಿಲ್ಲ ಎಂದು ಯಡಿಯೂರಪ್ಪ ಅವರನ್ನು ಪ್ರಶ್ನಿಸಿದರು. ಪಕ್ಷವನ್ನ ಯಡಿಯೂರಪ್ಪ ಕಪಿಮುಷ್ಟಿಯಿಂದ ಮುಕ್ತಗೊಳಿಸಬೇಕು. ಪಕ್ಷ ಅಂದರೆ ತಾಯಿ, ತಾಯಿಯ ಕತ್ತು ಹಿಸುಕುತ್ತಿದ್ದಾರೆ ಎಂದು ವಾಗ್ದಾಳಿ ನಡೆಸಿದರು.
ಎಲ್ಲರೂ ಕರೆಮಾಡಿ ನೀವು ಸ್ಪರ್ಧಿಸಬೇಕೆಂದು ಹೇಳುತ್ತಿದ್ದಾರೆ. ಎಲ್ಲ ಮೋರ್ಚಾದವರು ನನಗೆ ಕರೆ ಮಾಡುತ್ತಿದ್ದಾರೆ. ನೀವು ಚುನಾವಣಾ ನಿವೃತ್ತಿ ತೆಗೆದುಕೊಳ್ಳಬೇಡಿ ಅಂತಿದ್ದಾರೆ. ನನ್ನ ನಿರ್ಧಾರದಲ್ಲಿ ಯಾವುದೇ ಬದಲಾವಣೆ ಇಲ್ಲ ಎಂದರು. ಅಲ್ಲದೆ, ಕುಟುಂಬ ರಾಜಕಾರಣದ ಬಗ್ಗೆ ಮಾತನಾಡಿದ ಅವರು, ನಾವು ದಿನನಿತ್ಯ ಕಾಂಗ್ರೆಸ್ ಪಕ್ಷವನ್ನ ಟೀಕೆ ಮಾಡುತ್ತಿದ್ದೇವೆ. ಆದರೆ, ರಾಜ್ಯದಲ್ಲಿ ಬಿಜೆಪಿ ಕುಟುಂಬದ ಕೈಯಲ್ಲಿ ಸಿಲುಕಿದೆ ಎಂದರು.
ಇತ್ತೀಚೆಗೆ ಶಿವಮೊಗ್ಗದಲ್ಲಿ ಬೆಂಬಲಿಗರ ಸಭೆ ನಡೆಸಿದಾದ ಅಭಿಪ್ರಾಯಗಳನ್ನು ಹಂಚಿಕೊಂಡಿದ್ದಾರೆ. ನಿರೀಕ್ಷೆ ಮೀರಿ ನನಗೆ ಬೆಂಬಲ ಸಿಕ್ಕಿದೆ. ಈಗಾಗಲೇ ನಾನು ಚುನಾವಣೆ ಸ್ಪರ್ಧೆ ನಿರ್ಧಾರ ಮಾಡಿದ್ದೇನೆ. ಯಾವುದೇ ಕಾರಣಕ್ಕೂ ನಾನು ಹಿಂದೆ ಸರಿಯುವುದಿಲ್ಲ ಎಂದರು.
ನನ್ನ ಮಗನಿಗೆ ಟಿಕೆಟ್ ನೀಡಿದೆ ಮೋಸ ಮಾಡಿದ್ದಾರೆ. ತುಂಬಾ ನಾಯಕರಿಗೆ ಮೋಸ ಆಗಿದೆ. ಅವರಿಗೆ ಟಿಕೆಟ್ ಕೈತಪ್ಪಿಸಿದ್ದಾರೆ. ಕುಟುಂಬದ ಹಿಡಿತದಲ್ಲಿ ಪಕ್ಷ ಇದೆ. ಯಡಿಯೂರಪ್ಪ ಅವರ ಮೇಲೆ ವರಿಷ್ಠರು ನಂಬಿಕೆ ಇಟ್ಟಿದ್ದಾರೆ. ದೊಡ್ಡ ನಾಯಕರು ಎನ್ನುವ ಭ್ರಮೆಯಲ್ಲಿ ವರಿಷ್ಠರು ಇದ್ದಾರೆ. ಹಠ ಹಿಡಿದು ಮಗನಿಗೆ ರಾಜ್ಯಾಧ್ಯಕ್ಷ ಕೊಡಿಸಿದ್ದಾರೆ ಎಂದು ಆಕ್ರೋಶ ಹೊರಹಾಕಿದರು.
ನಾನು ಕೊನೆಯವರೆಗೆ ಪಕ್ಷ ತಾಯಿ ಅಂತಾ ನಂಬಿದ್ದೇನೆ. ಪಕ್ಷ ಸೂಚನೆಯಂತೆ ನಾನು ನಡೆದುಕೊಂಡು ಬಂದಿದ್ದೇನೆ. ಈಗ ನಾನೂ ಸ್ಪರ್ಧೆ ಮಾಡುವ ಉದ್ದೇಶ ಕಪಿಮುಷ್ಠಿಯಿಂದ ಪಕ್ಷ ಹೊರಗೆ ಬರಬೇಕು. ಅಪ್ಪ ಮಕ್ಕಳ ಕೈಗೆ ಸಿಕ್ಕು ಪಕ್ಷ ಒದ್ದಾಡುತ್ತಿದೆ. ಯಡಿಯೂರಪ್ಪ ಕುಟುಂಬ ರಾಜಕಾರಣದಿಂದ ಪಕ್ಷ ಮುಕ್ತವಾಗಬೇಕಿದೆ ಎಂದರು.