ಯುವಜನರಲ್ಲಿ ಹೆಚ್ಚುತ್ತಿರುವ ಹೃದಯಾಘಾತ: ಖ್ಯಾತ ಹೃದ್ರೋಗ ತಜ್ಞ ಡಾ. ರಂಜನ್ ಶೆಟ್ಟಿ ನೇತೃತ್ವದಲ್ಲಿ ಉಡುಪಿಯಲ್ಲಿ ವಿಶೇಷ ತಪಾಸಣಾ ಶಿಬಿರ

Spread the love

ಯುವಜನರಲ್ಲಿ ಹೆಚ್ಚುತ್ತಿರುವ ಹೃದಯಾಘಾತ: ಖ್ಯಾತ ಹೃದ್ರೋಗ ತಜ್ಞ ಡಾ. ರಂಜನ್ ಶೆಟ್ಟಿ ನೇತೃತ್ವದಲ್ಲಿ ಉಡುಪಿಯಲ್ಲಿ ವಿಶೇಷ ತಪಾಸಣಾ ಶಿಬಿರ

ಉಡುಪಿ: ಭಾರತದಲ್ಲಿ ಯುವಜನರು ಚಿಕ್ಕ ವಯಸ್ಸಿನಲ್ಲಿಯೇ ಹೃದಯಾಘಾತ ಮತ್ತು ಇತರ ಹೃದ್ರೋಗಗಳಿಗೆ ತುತ್ತಾಗುತ್ತಿರುವ ಪ್ರಕರಣಗಳು ಇತ್ತೀಚೆಗೆ ಆತಂಕಕಾರಿಯಾಗಿ ಹೆಚ್ಚುತ್ತಿವೆ. ಅಧಿಕ ಕೊಲೆಸ್ಟ್ರಾಲ್ ಮತ್ತು ರಕ್ತನಾಳಗಳಲ್ಲಿನ ಅಡಚಣೆಯಂತಹ ಸಮಸ್ಯೆಗಳು ಬಾಲ್ಯದಿಂದಲೇ ಆರಂಭವಾಗಬಹುದು ಎಂಬುದು ಈ ಬೆಳವಣಿಗೆಯಿಂದ ಸ್ಪಷ್ಟವಾಗಿದೆ ಎಂದು ಸ್ಪರ್ಶ್ ಆಸ್ಪತ್ರೆಯ ಖ್ಯಾತ ಹೃದ್ರೋಗ ತಜ್ಞರಾದ ಡಾ. (ಪ್ರೊ) ರಂಜನ್ ಶೆಟ್ಟಿ ಹೇಳಿದರು.

ಅವರು ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ ಈ ಗಂಭೀರ ಸನ್ನಿವೇಶವನ್ನು ಗಮನದಲ್ಲಿಟ್ಟುಕೊಂಡು, ಸ್ಪರ್ಶ್ ಹಾಸ್ಪಿಟಲ್ಸ್ ಗ್ರೂಪ್ನ ವೈದ್ಯಕೀಯ ನಿರ್ದೇಶಕರು ಹಾಗೂ ಬೆಂಗಳೂರಿನ ಇನ್ನೆಂಟ್ರಿ ರಸ್ತೆಯಲ್ಲಿರುವ ಸ್ಪರ್ಶ್ ಆಸ್ಪತ್ರೆಯ ಖ್ಯಾತ ಹೃದ್ರೋಗ ತಜ್ಞರಾದ ಡಾ. (ಪ್ರೊ) ರಂಜನ್ ಶೆಟ್ಟಿ ಅವರು, ತಿಂಗಳಿಗೊಮ್ಮೆ ಉಡುಪಿಯ ಹೈಟೆಕ್ ಮೆಡಿಕೇರ್ ಆಸ್ಪತ್ರೆಯಲ್ಲಿ ವಿಶೇಷ ‘ಹೃದ್ರೋಗ ಆರೈಕೆ ಮತ್ತು ಜಾಗೃತಿ ಶಿಬಿರ’ವನ್ನು ನಡೆಸಿಕೊಡಲಿದ್ದಾರೆ. ರೋಗವನ್ನು ತಡೆಗಟ್ಟುವುದು, ಆರಂಭಿಕ ಹಂತದಲ್ಲೇ ಪತ್ತೆಹಚ್ಚುವುದು ಮತ್ತು ಆರೋಗ್ಯಕರ ಜೀವನಶೈಲಿಯನ್ನು ಅಳವಡಿಸಿಕೊಳ್ಳುವುದರ ಬಗ್ಗೆ ಜಾಗೃತಿ ಮೂಡಿಸುವುದು ಈ ಶಿಬಿರದ ಮುಖ್ಯ ಉದ್ದೇಶವಾಗಿದೆ.

“ಯುವಕರಲ್ಲಿ ಹೆಚ್ಚುತ್ತಿರುವ ಹೃದಯಾಘಾತದ ಪ್ರಮಾಣವು ತೀವ್ರ ಕಳವಳಕಾರಿ ಸಂಗತಿಯಾಗಿದೆ. ನಮ್ಮ ದೇಶದಲ್ಲಿ ಹೃದಯಾಘಾತಕ್ಕೆ ತುತ್ತಾಗುವವರಲ್ಲಿ ಶೇ. 50ರಷ್ಟು ಮಂದಿ 40 ವರ್ಷಕ್ಕಿಂತ ಕಡಿಮೆ ವಯಸ್ಸಿನವರು ಎಂಬುದು ಆಘಾತಕಾರಿ. ಆದರೆ, ಸಕಾಲಿಕ ಆರೋಗ್ಯ ತಪಾಸಣೆ ಮತ್ತು ಜೀವನಶೈಲಿಯಲ್ಲಿನ ಸಕಾರಾತ್ಮಕ ಬದಲಾವಣೆಗಳಿಂದ ಶೇ. 80ಕ್ಕಿಂತಲೂ ಹೆಚ್ಚು ಹೃದ್ರೋಗಗಳನ್ನು ಖಂಡಿತವಾಗಿಯೂ ತಡೆಯಲು ಸಾಧ್ಯವಿದೆ. 20ರಿಂದ 30 ಅಥವಾ 40ನೇ ವಯಸ್ಸಿನಲ್ಲಿಯೇ ಈ ಮುನ್ನೆಚ್ಚರಿಕಾ ಕ್ರಮಗಳನ್ನು ಅಳವಡಿಸಿಕೊಂಡರೆ, ಭವಿಷ್ಯದಲ್ಲಿ ಎದುರಾಗಬಹುದಾದ ಹೃದಯ ಸಂಬಂಧಿ ಸಮಸ್ಯೆಗಳ ಅಪಾಯವನ್ನು ದೊಡ್ಡ ಮಟ್ಟದಲ್ಲಿ ತಗ್ಗಿಸಬಹುದು’ ಎಂದು ವಿವರಿಸಿದರು.

ದಿನವಿಡೀ ನಡೆಯಲಿರುವ ಈ ಶಿಬಿರದಲ್ಲಿ ಡಾ. ರಂಜನ್ ಶೆಟ್ಟಿ ಅವರ ನೇತೃತ್ವದ ವೈದ್ಯಕೀಯ ತಂಡವು ಸಾರ್ವಜನಿಕರಿಗಾಗಿ ಹೃದ್ರೋಗ ತಪಾಸಣೆ ಮತ್ತು ಇತರ ಮೂಲಭೂತ ಪರೀಕ್ಷೆಗಳನ್ನು ನಡೆಸಲಿದೆ. ಇದಲ್ಲದೆ, ಆರೋಗ್ಯಕರ ಆಹಾರ ಪದ್ಧತಿ, ನಿಯಮಿತ ವ್ಯಾಯಾಮ, ಮತ್ತು ಒತ್ತಡ ನಿರ್ವಹಣೆಯ ಕುರಿತು ತಜ್ಞರಿಂದ ಸಮಾಲೋಚನೆ ಹಾಗೂ ಸಲಹೆಗಳನ್ನು ನೀಡಲಾಗುವುದು. ಜೊತೆಗೆ, ಹೃದ್ರೋಗದ ಆರಂಭಿಕ ಲಕ್ಷಣಗಳು ಹಾಗೂ ತಡೆಗಟ್ಟುವ ವಿಧಾನಗಳ ಕುರಿತು ಜಾಗೃತಿ ಮೂಡಿಸುವ ಕಾರ್ಯಕ್ರಮಗಳನ್ನೂ ಆಯೋಜಿಸಲಾಗಿದೆ.

ಯುವಜನರು ತಮ್ಮ ಹೃದಯದ ಆರೋಗ್ಯದ ಬಗ್ಗೆ ಸ್ವತಃ ಹೊಣೆಗಾರಿಕೆ ವಹಿಸಿಕೊಳ್ಳಬೇಕು ಮತ್ತು ಮುಂದೆಂದೂ ಸರಿಪಡಿಸಲಾಗದಂತಹ ಹಾನಿ ಸಂಭವಿಸುವ ಮುನ್ನವೇ ತಮ್ಮ ಜೀವನಶೈಲಿಯಲ್ಲಿ ಆರೋಗ್ಯಕರ ಬದಲಾವಣೆಗಳನ್ನು ಮಾಡಿಕೊಳ್ಳಬೇಕು. ಈ ನಿಟ್ಟಿನಲ್ಲಿ ಅವರನ್ನು ಪ್ರೇರೇಪಿಸುವುದೇ ಡಾ. ಶೆಟ್ಟಿ ಅವರ ಈ ಉಪಕ್ರಮದ ಪ್ರಮುಖ ಗುರಿಯಾಗಿದೆ.

ಉಡುಪಿಯ ಯುವಜನತೆ ಈ ಶಿಬಿರದ ಸದುಪಯೋಗ ಪಡೆದುಕೊಳ್ಳಬೇಕೆಂದು ಕರೆ ನೀಡಿದ ಡಾ. ಶೆಟ್ಟಿ, ಕೇವಲ 20ನೇ ವಯಸ್ಸಿನಿಂದಲೇ ನಿಯಮಿತ ಆರೋಗ್ಯ ತಪಾಸಣೆ ಮಾಡಬೇಕಾದ ಅಗತ್ಯವನ್ನು ಒತ್ತಿ ಹೇಳಿದರು. ”ಈ ಶಿಬಿರವು ಯುವಕರಲ್ಲಿ ಹೃದ್ರೋಗಕ್ಕೆ ಕಾರಣವಾಗುವ ಅಪಾಯಕಾರಿ ಅಂಶಗಳು ಹಾಗೂ ಅವುಗಳನ್ನು ತಡೆಯುವ ವಿಧಾನಗಳ ಬಗ್ಗೆ ಜಾಗೃತಿ ಮೂಡಿಸಲು ಉದ್ದೇಶಿಸಿದೆ,” ಎಂದು ಹೇಳಿದರು.


Spread the love
Subscribe
Notify of

0 Comments
Inline Feedbacks
View all comments