ಯುಸಿಎ ಸಾಸ್ತಾನ ಘಟಕ ವತಿಯಿಂದ ಸಾಮೂಹಿಕ ದೀಪಾವಳಿ ಹಬ್ಬದ ಆಚರಣೆ

Spread the love

ಯುಸಿಎ ಸಾಸ್ತಾನ ಘಟಕ ವತಿಯಿಂದ ಸಾಮೂಹಿಕ ದೀಪಾವಳಿ ಹಬ್ಬದ ಆಚರಣೆ

ಕೋಟ: ಯುನೈಟೆಡ್ ಕ್ರಿಶ್ಚಿಯನ್ ಎಸೋಸಿಯೇಶನ್ (ರಿ) ಕರ್ನಾಟಕ ಇದರ ಸಾಸ್ತಾನ ಸಂತ ಅಂತೋನಿ ದೇವಾಲಯ ಘಟಕ, ಗ್ರಾಮ ಹಿತರಕ್ಷಣಾ ಸಮಿತಿ ಸೂಲ್ಕುದ್ರು ಪಾಂಡೇಶ್ವರ ಮತ್ತು ಸ್ವಸಹಾಯ ಸಂಘಗಳು ಸೂಲ್ಕುದ್ರು ಇವರ ಜಂಟಿ ಆಶ್ರಯದಲ್ಲಿ ಹಿಂದೂ – ಕ್ರೈಸ್ತ ಬಾಂಧವರೊಂದಿಗೆ ಸಾಮೂಹಿಕ ದೀಪಾವಳಿ ಹಬ್ಬದ ಆಚರಣೆ ಶನಿವಾರ ಜರುಗಿತು.

ತಾಲೂಕು ಪಂಚಾಯತ್ ಸದಸ್ಯೆ ಜ್ಯೋತಿ ಉದಯ ಪೂಜಾರಿ ದೀಪಾವಳಿ ಹಬ್ಬದ ದೀಪಗಳನ್ನು ಬೆಳಗಿಸಿ ಮಾತನಾಡಿ ಸಂಘಟನೆಯ ವತಿಯಿಂದ ಹೊಸ ಆಚರಣೆಗೆ ನಾಂದಿ ಹಾಡಿದ್ದು ಎಲ್ಲಾ ಸಮುದಾಯಗಳನ್ನು ಬೆಸೆಯುವ ದೀಪಗಳ ಹಬ್ಬ ಪ್ರತಿಯೊಬ್ಬರ ಬಾಳಿನಲ್ಲಿ ಬೆಳಕು ಮೂಡಿಸಲಿ. ಈ ಮೂಲಕ ಸಮಾಜದಲ್ಲಿ ಶಾಂತಿ ಸಮೃದ್ದಿ ನೆಲೆಸಲಿ ಎಂದು ಶುಭ ಹಾರೈಸಿದರು.

ಕಾರ್ಯಕ್ರಮದಲ್ಲಿ ಸಾಂಪ್ರದಾಯಿಕ ಹಣತೆಗಳನ್ನು ಬೆಳಗಿಸಿ ದೀಪಾವಳಿ ಶುಭಾಶಯಗಳನ್ನು ಕೋರಲಾಯಿತು. ದೀಪಾವಳಿ ಹಬ್ಬದ ಸಾಂಪ್ರದಾಯಿಕ ತಿಂಡಿಗಳನ್ನು ಈ ಸಂದರ್ಭದಲ್ಲಿ ತಯಾರಿಸಲಾಗಿತ್ತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಪಾಂಡೇಶ್ವರ ಗ್ರಾಮ ಪಂಚಾಯತ್ ಅಧ್ಯಕ್ಷ ಗೋವಿಂದ ಪೂಜಾರಿ ವಹಿಸಿದ್ದರು. ಸಭಾ ಕಾರ್ಯಕ್ರಮವನ್ನು ಐರೋಡಿ ಗ್ರಾಮಪಂಚಾಯತ್ ಅಧ್ಯಕ್ಷರಾದ ಮೊಸೆಸ್ ರೊಡ್ರಿಗಸ್ ಉದ್ಘಾಟಿಸಿದರು. ಸಾರ್ವಜನಿಕರ ಪರವಾಗಿ ಪಾಂಡೇಶ್ವರ ಗ್ರಾಮ ಪಂಚಾಯತ್ ಮಾಜಿ ಉಪಾಧ್ಯಕ್ಷರಾದ ಪ್ರಶಾಂತ್ ಶೆಟ್ಟಿ ದೀಪಾವಳಿ ಶುಭಾಶಯ ಕೋರಿದರು.

ಕಾರ್ಯಕ್ರಮದಲ್ಲಿ ಉಡುಪಿ ಜಿಲ್ಲಾ ಯುನೈಟೆಡ್ ಕ್ರಿಶ್ಚಿಯನ್ ಎಸೋಸಿಯೇಶನ್ (ರಿ) ಇದರ ಜಿಲ್ಲಾಧ್ಯಕ್ಷರಾದ ಸಿಲ್ವೆಸ್ಟರ್ ಡಿಸೋಜಾ, ಸಾಸ್ತಾನ ಘಟಕದ ಅಧ್ಯಕ್ಷರಾದ ವಿಜಯ್ ಲೂವಿಸ್, ಸ್ವಸಹಾಯ ಸಂಘಗಳ ಅಧ್ಯಕ್ಷರಾದ ಸಿಸಿಲಿಯಾ ಒಲಿವೇರಾ ಉಪಸ್ಥಿತರಿದ್ದರು.

ಗ್ರಾಮ ಹಿತರಕ್ಷಣಾ ಸಮಿತಿ ಸೂಲ್ಕುದ್ರು ಪಾಂಡೇಶ್ವರ ಅಧ್ಯಕ್ಷ ಸುನೀಲ್ ಲೋಬೊ ಸ್ವಾಗತಿಸಿ, ಸ್ವಸಹಾಯ ಸಂಘಗಳು ಸೂಲ್ಕುದ್ರು ಕಾರ್ಯದರ್ಶಿ ಪ್ರಭಾಕರ ಪೂಜಾರಿ ವಂದಿಸಿದರು. ಜಸಿಂತಾ ನೆಲ್ಸನ್ ಬಾಂಜಿ ಕಾರ್ಯಕ್ರಮ ನಿರೂಪಿಸಿದರು.


Spread the love