ರಸ್ತೆ ನಿರ್ಮಾಣ, ನಿರ್ವಹಣೆಗೆ ಅನುದಾನದ ಕೊರತೆ ಇಲ್ಲ- ಕೃಷ್ಣಭೈರೇಗೌಡ

Spread the love

ರಸ್ತೆ ನಿರ್ಮಾಣ, ನಿರ್ವಹಣೆಗೆ ಅನುದಾನದ ಕೊರತೆ ಇಲ್ಲ- ಕೃಷ್ಣ ಭೈರೇಗೌಡ

ಮಂಗಳೂರು: ಗ್ರಾಮೀಣಾಭಿವೃದ್ಧಿ ಇಲಾಖೆಯಡಿ ನಿರ್ಮಾಣಗೊಂಡ ರಸ್ತೆಗಳಲ್ಲಿ ನಿರ್ವಹಣೆ ಇರುವ ರಸ್ತೆಗಳನ್ನು ಪ್ರತ್ಯೇಕಪಡಿಸಿ ಉಳಿದ ರಸ್ತೆಗಳಿಗೆ ಮಾತ್ರ ಪ್ರಾಕೃತಿಕ ವಿಕೋಪದಡಿ ಅನುದಾನದ ನೆರವು ಪಡೆದು ರಸ್ತೆ ಸರಿಪಡಿಸಿ. ನಮ್ಮ ಗ್ರಾಮ ನಮ್ಮ ರಸ್ತೆ ಯೋಜನೆಯಡಿ ನಿರ್ಮಿಸಿದ ರಸ್ತೆಗಳಿಗೆ ನಿರ್ವಹಣೆ ಹೊಣೆ ವಹಿಸಿರುವ ಏಜೆನ್ಸಿಗಳ ಹೊಣೆಯನ್ನು ಸಂಬಂಧಪಟ್ಟವರಿಗೆ ಜ್ಞಾಪಿಸಿ ರಸ್ತೆ ಸರಿಪಡಿಸಿ ಎಂದು ಗ್ರಾಮೀಣಾಭಿವೃದ್ದಿ ಮತ್ತು ಪಂಚಾಯತ್ ರಾಜ್ ಮತ್ತು ಕಾನೂನು ಮತ್ತು ಸಂಸದೀಯ ಸಚಿವರಾದ ಕೃಷ್ಣ ಭೈರೇಗೌಡರು ಹೇಳಿದರು.

ಜಿಲ್ಲಾಪಂಚಾಯತ್‍ನ ನೇತ್ರಾವತಿ ಸಭಾಂಗಣದಲ್ಲಿ ಗ್ರಾಮೀಣಾಭಿವೃದ್ದಿ ಮತ್ತು ಪಂಚಾಯತ್ ರಾಜ್ ಇಲಾಖೆಯ ಪ್ರಗತಿ ಪರಿಶೀಲನೆ ನಡೆಸಿದ ಅವರು, ಗ್ರಾಮೀಣಾಭಿವೃದ್ಧಿ ಇಲಾಖೆ ವ್ಯಾಪ್ತಿಯಡಿ ಬರುವ ರಸ್ತೆಗಳನ್ನು ಮೊದಲು ಗುರುತಿಸಿ ನಿರ್ವಹಣೆ ಇರುವ ರಸ್ತೆಗಳನ್ನು ಪ್ರತ್ಯೇಕಪಡಿಸಿ ಈ ಮಾಹಿತಿಯನ್ನು ಶಾಸಕರಿಗೆ ಮತ್ತು ಸಿಇಒ ಅವರಿಗೆ ನೀಡಿ ಎಂದ ಸಚಿವರು, ಇದರಿಂದ ರಸ್ತೆ ನಿರ್ವಹಣೆ ಸುಲಭ ಸಾಧ್ಯ ಎಂದರು. ಮಳೆಯಿಂದಾಗಿ ಪಾಳು ಬಿದ್ದ ಉಳಿದ ರಸ್ತೆಗಳಿಗೆ ಕ್ರಿಯಾ ಯೋಜನೆ ರೂಪಿಸಿ ಸಿಇಒ ಮೂಲಕ ಜಿಲ್ಲಾಧಿಕಾರಿಗಳಿಗೆ ನೀಡಿದರೆ ವಿಕೋಪ ನಿಧಿಯಡಿ ಪರಿಹಾರ ನೀಡುವರು ಎಂದರು.

ಜಿಲ್ಲೆಯಲ್ಲಿ ನರೇಗ ಯೋಜನೆಯಡಿ ರಚಿಸಲ್ಪಟ್ಟ ಕಿಂಡಿಅಣೆಕಟ್ಟು ಮತ್ತು ನೀರು ಸಂಗ್ರಹ ಯೋಜನೆಗಳು ಜಿಲ್ಲೆಗೆ ಪೂರಕವಾಗಿದ್ದು ಇದನ್ನು ಇನ್ನಷ್ಟು ವ್ಯಾಪಕವಾಗಿ ರಚಿಸಿ ಎಂದು ಸಲಹೆ ಮಾಡಿದ ಸಚಿವರು, ನರೇಗಾದಡಿ ಹಲವು ಕೋಟಿ ರೂ.ಗಳ ಕಾಮಗಾರಿ ಅನುಷ್ಟಾನ ಸಾಧ್ಯವಾಗಿದ್ದು, ಶಾಲೆಗಳ ಆವರಣಗೋಡೆ, ತೋಟಗಾರಿಕೆ ವಲಯ ಹೆಚ್ಚಳ ಸೇರಿದಂತೆ ರಚನಾತ್ಮಕವಾಗಿ ಹಲವು ಕಾಮಗಾರಿಗಳನ್ನು ಕೈಗೊಳ್ಳಲು ಸಾಧ್ಯವಾಗಿದ್ದು, ಎಲ್ಲದಕ್ಕೂ ಸರ್ಕಾರವನ್ನು ನೋಡದೆ ಲಭ್ಯ ಇರುವ ನರೇಗಾ ಯೋಜನಯಡಿಯಲ್ಲಿಯೇ ಕೈಗೊಳ್ಳಬಹುದಾದ ಸಾಧ್ಯತೆಗಳ ಬಗ್ಗೆ ಮಾಹಿತಿ ನೀಡಿದರು.

ತೋಟಗಾರಿಕಾ ಇಲಾಖೆಯಡಿ ಬೆಳೆ ವಿಸ್ತರಣೆಗೆ ನರೇಗಾದಲ್ಲೇ 150 ಕೋಟಿ ರೂ. ವೆಚ್ಚ ಮಾಡಲು ಅವಕಾಶವಿದ್ದು, ಇದರಿಂದ ಜಿಲ್ಲೆಗೆ ಆಸ್ತಿ ರಚನೆ ಸಾಧ್ಯ ಎಂದರು. ಈಗಾಗಲೇ ಜಿಲ್ಲೆಯಲ್ಲಿ ಉತ್ತಮ ಮಾದರಿ ಕಾರ್ಯಕ್ರಮಗಳು ನರೇಗಾದಡಿ ಅನುಷ್ಥಾನಗೊಂಡಿದ್ದು, ಇನ್ನಷ್ಟು ವ್ಯಾಪಕವಾಗಿ ಕೈಗೊಳ್ಳುವಂತೆ ಸಲಹೆ ಮಾಡಿದರು.

ಸ್ವಚ್ಛ ಭಾರತದಡಿ ನಮ್ಮಲ್ಲಿಂದು ಹಳ್ಳಿಗಳು ಸಣ್ಣ ನಗರಗಳಾಗಿವೆ; ನಗರದ ಸಮಸ್ಯೆಗಳನ್ನೇ ಅವು ಎದುರಿಸುತಿವೆ. ಕಸ ವಿಲೇ ಸವಾಲಾಗಿದೆ. ಹಳ್ಳಿಗಳಲ್ಲಿ ಸುಸ್ಥಿರ ಕಸ ವಿಲೇ ಸಾಧ್ಯವಾಗಬೇಕಿದ್ದು, ಜಿಲ್ಲೆಯಲ್ಲಿ 40 ಪಂಚಾಯತ್‍ನಲ್ಲಿ ಕಸ ವಿಲೇ ಆರಂಭವಾಗಿರುವುದು ಒಳ್ಳೆಯ ವಿಚಾರ. ಹಳ್ಳಿಗಳಲ್ಲಿ ಯಥೇಚ್ಚ ಕಸ ಉತ್ಪಾದನೆಯಾಗುತ್ತಿದ್ದು, ಪರಿಸರ ಮಾಲಿನ್ಯಕ್ಕೊಳಗಾಗುತ್ತಿದೆ; ಕಸವನ್ನು ರಸ ಮಾಡುವ ಬಗ್ಗೆ ಉಡುಪಿ ಜಿಲ್ಲೆ ಉತ್ತಮ ಮಾದರಿಯನ್ನು ರಾಜ್ಯಕ್ಕೆ ನೀಡಿದೆ ಎಂದರು. ಕಸ ವಿಭಜನೆ ಹಾಗೂ ವಿಲೆಗೆ ಜನರ ಸಹಕಾರ ಮುಖ್ಯ. ಕಸ ವಿಭಜನೆ ಬಗ್ಗೆ ಮಾಹಿತಿ ನೀಡಿ, ಮನವೊಲಿಸಿ; ಇದರಿಂದ ಎಲ್ಲರಿಗೂ ಅನುಕೂಲ ಎಂದರು.

ರೈತರಿಗೆ ಗೊಬ್ಬರದ ಅಗತ್ಯವಿದ್ದು ಹಸಿಕಸವನ್ನು ಗೊಬ್ಬರವಾಗಿಸಿ, ಇದರಿಂದಲೂ ಉತ್ತಮ ಆದಾಯ ಗಳಿಸಲು ಸಾಧ್ಯ. ನಗರಾಭಿವೃದ್ಧಿ ಸಚಿವ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಯು ಟಿ ಖಾದರ್, ಜಿಲ್ಲಾ ಪಂಚಾಯತ್ ಅಧ್ಯಕ್ಷರಾದ ಮೀನಾಕ್ಷಿ ಶಾಂತಿಗೋಡು, ಉಪಾಧ್ಯಕ್ಷರಾದ ಕಸ್ತೂರಿ ಪಂಜ, ಸ್ಥಾಯಿಸಮಿತಿ ಅಧ್ಯಕ್ಷರಾದ ಜನಾರ್ಧನ ಗೌಡ, ಯು ಪಿ ಇಬ್ರಾಹಿಂ,ಅನಿತಾ ಹೇಮನಾಥ್ ಕೋಟ್ಯಾನ್, ಶಾಸಕ ರಾಜೇಶ್ ನಾಯಕ್, ಕೆಂಪೇಗೌಡ ನಿರ್ದೇಶಕರು ಪಂಚಾಯತ್ ರಾಜ್, ಭುವನಹಳ್ಳಿ ನಾಗರಾಜ್ ನಿರ್ದೇಶಕರು ಗ್ರಾಮೀಣ ಮೂಲಭೂತ ಸೌಕರ್ಯ, ಸಿಇಒ ಡಾ ಎಂ ಆರ್ ರವಿ ಉಪಸ್ಥಿತರಿದ್ದರು.


Spread the love