ರಸ್ತೆ ಹೊಂಡಕ್ಕೆ ಮಹಿಳೆ ಬಲಿ: ರಾ.ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳು, ಲಾರಿ ಚಾಲಕನ ವಿರುದ್ದ ಪ್ರಕರಣ ದಾಖಲು
ಮಂಗಳೂರು: ಕೂಳೂರು ಬಳಿ ಮಹಿಳಾ ಸ್ಕೂಟರ್ ಸವಾರೆ ರಸ್ತೆಗುಂಡಿ ಕಾರಣದಿಂದ ಬಿದ್ದಾಗ, ಅತೀ ವೇಗ ಹಾಗೂ ಅಜಾಗರೂಕತೆಯಿಂದ ಬಂದ ಲಾರಿ ಆಕೆಯ ಮೇಲೆ ಹರಿದು ಮೃತಪಟ್ಟಿದ್ದು, ಈ ಬಗ್ಗೆ ಲಾರಿ ಚಾಲಕ ಹಾಗೂ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳ ವಿರುದ್ದ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.
ಸುರತ್ಕಲ್ ಕುಳಾಯಿ ನಿವಾಸಿ ಶ್ರೀಮತಿ ಮಾಧವಿ (44 ವರ್ಷ) ರವರು ತಮ್ಮ ಸ್ಕೂಟರಿನಲ್ಲಿ ಕುಳಾಯಿ ಕಡೆಯಿಂದ ಕುಂಟಿಕಾನ ಕಡೆಗೆ ರಾಷ್ಟ್ರೀಯ ಹೆದ್ದಾರಿ 66 ರಲ್ಲಿ ಸವಾರಿ ಮಾಡಿಕೊಂಡು ಬರುತ್ತಿದ್ದ ಅವಧಿಯಲ್ಲಿ ಬೆಳಿಗ್ಗೆ ಸುಮಾರು 8-30 ಗಂಟೆಗೆ ಕೂಳೂರಿನ ರಾಯಲ್ ಓಕ್ ಮುಂಭಾಗ ರಾಷ್ಟ್ರೀಯ ಹೆದ್ದಾರಿ ರಸ್ತೆಯಲ್ಲಿದ್ದ ದೊಡ್ಡ ಗುಂಡಿಯ ಪರಿಣಾಮ ಸ್ಕೂಟರ್ ಸಮೇತ ಬಿದ್ದ ಸಮಯ ಅವರ ಹಿಂಬದಿಯಿಂದ ಅಂದರೆ ಉಡುಪಿ ಕಡೆಯಂದ ಮಂಗಳೂರು ಕಡೆಗೆ ಬರುತ್ತಿದ್ದ ಲಾರಿಯನ್ನು ಅದರ ಚಾಲಕ ಮೊಹಮ್ಮದ್ ಫಾರೂಕ್ ಎಂಬವರು ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು ರಸ್ತೆ ಬದಿ ಬಿದ್ದಿದ್ದ ಮಾಧವಿಯವರ ಮೇಲೆ ಲಾರಿಯ ಚಕ್ರವು ಹರಿದು ಗಂಭೀರ ಸ್ವರೂಪದ ಗಾಯಗೊಂಡು ಮೃತಪಟ್ಟಿರುತ್ತಾರೆ.
ಈ ಅಪಘಾತಕ್ಕೆ ಹೆದ್ದಾರಿಯ ನಿರ್ವಾಹಣೆಯನ್ನು ಸರಿಯಾಗಿ ನಿರ್ವಹಿಸದೇ, ರಸ್ತೆಯಲ್ಲಿ ಆಗಿರುವ ರಸ್ತೆಗುಂಡಿಗಳನ್ನು ಮುಚ್ಚದೇ ನಿರ್ಲಕ್ಷ್ಯತನದಿಂದ ಅಪಘಾತಕ್ಕೆ ಕಾರಣವಾದ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಯವರ ಮೇಲೆ ಹಾಗೂ ನಿರ್ಲಕ್ಷ್ಯತನದ ಚಾಲನೆ ಮಾಡಿರುವ ಲಾರಿ ಚಾಲಕನ ಮೇಲೆ ಮಂ.ಸಂಚಾರ ಉತ್ತರ ಪೊಲೀಸ್ ಠಾಣೆಯಲ್ಲಿ ಅ.ಕ್ರ 224/2025 ಕಲಂ 281, 106(1) ಬಿ.ಎನ್.ಎಸ್ ಮತ್ತು 198(ಎ) ಐಎಂವಿ ಕಾಯ್ದೆ ರಂತೆ ಪ್ರಕರಣ ದಾಖಲಾಗಿ ತನಿಖೆ ಕೈಗೊಂಡಿರುತ್ತಾರೆ.