ರಾಜಕೀಯಕ್ಕಾಗಿ ಧರ್ಮಗಳ ನಡುವೆ ಕಿಚ್ಚು ಹಚ್ಚುವವರು ರಾಜಕಾರಣದಲ್ಲಿರಲು ಅನರ್ಹರು: ಸಿದ್ಧರಾಮಯ್ಯ

Spread the love

ರಾಜಕೀಯಕ್ಕಾಗಿ ಧರ್ಮಗಳ ನಡುವೆ ಕಿಚ್ಚು ಹಚ್ಚುವವರು ರಾಜಕಾರಣದಲ್ಲಿರಲು ಅನರ್ಹರು: ಸಿದ್ಧರಾಮಯ್ಯ

ಉಡುಪಿ: ರಾಜಕೀಯಕ್ಕೆ ಒಂದು ಧರ್ಮ ಬೇಕು, ಅದರೆ ರಾಜಕೀಯಕ್ಕಾಗಿ ಧರ್ಮ ಧರ್ಮಗಳ ನಡುವೆ, ಜಾತಿ ಜಾತಿಗಳ ನಡುವೆ ಕಿಚ್ಚು ಹಚ್ಚುವ ಕೆಲಸ ಮಾಡಬಾರದು. ಅಂತವರು ರಾಜಕಾರಣದಲ್ಲಿ ಇರಲು ಅನರ್ಹರು. ಹೆಣದ ಮೇಲೆ ರಾಜಕಾರಣ ಮಾಡಬಾರದು, ಮಾಡಿದವರಿಗೆ ಮುಂದೆ ಅವಕಾಶ ನೀಡಬಾರದು. ಇವೆಲ್ಲದರ ನಡುವೆ ಉಡುಪಿ ಜಿಲ್ಲೆ ಕೋಮು ವಿವಾದಗಳಿಂದ ಹೊರತಾಗಿರುವುದು ಸಂತಸದ ವಿಚಾರ ಎಂದು ರಾಜ್ಯದ ಮುಖ್ಯ ಮಂತ್ರಿ ಸಿದ್ಧರಾಮಯ್ಯ ಹೇಳಿದವರು.

ಅವರು ಸೋಮವಾರ ಬ್ರಹ್ಮಾವರದ ಗಾಂಧಿ ಮೈದಾನದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ ಮತ್ತು ವಿವಿಧ ಇಲಾಖೆಗಳ ಸಹಯೋಗದಲ್ಲಿ ಉಡುಪಿ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ವಿವಿಧ ಕಾಮಗಾರಿಗಳ ಉದ್ಘಾಟನೆ ಮತ್ತು ಶಂಕು ಸ್ಥಾಪನಾ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ

ಉಡುಪಿ ಜಿಲ್ಲೆಯ ನಿಮ್ಮ ಮಂತ್ರಿ ಪ್ರಮೋದ್ ಮಧ್ವರಾಜ್ ಅವರು ರಾಜಕೀಯ ಹಿನ್ನಲೆಯಿಂದ ಬಂದಿದ್ದರು ಕೂಡ ಅವರಲ್ಲಿ ಎಳ್ಳಷ್ಟು ಅಹಂಭಾವವಿಲ್ಲ. ಜನರು ನಮ್ಮನ್ನು ಆರಿಸಿರುವುದು, ನಂತರ ಮಂತ್ರಿಯಾಗಿಸಿರುವುದು ಅಧಿಕಾರ ಚಲಾಯಿಸಲು, ಅಧಿಕಾರ ಅನುಭವಿಸಲು ಅಲ್ಲ. ಅದು ಜನತೆ ನಮಗೆ ಸೇವೆ ಮಾಡಲು ನೀಡುವ ಅವಕಾಶವೆಂದು ಭಾವಿಸಿ ಅಧಿಕಾರ ನಡೆಸಬೇಕು. ಈ ನಿಟ್ಟಿನಲ್ಲಿ ಮಧ್ವರಾಜ್ ಅವರು ಉಡುಪಿ ಜನತೆಯ ಅಭಿವೃದ್ಧಿಗೆ ಶ್ರಮಿಸಿ ತಮಗೆ ಸಿಕ್ಕ ಅವಕಾಶ ಸಾರ್ಥಕವಾಗಿಸಿಕೊಂಡಿದ್ದಾರೆ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಜನರ ಆಶೀರ್ವಾದವೇ ನಮಗೆ ಶ್ರೀರಕ್ಷೆ ಜನರ ಆಶೀರ್ವಾದ ಇದ್ದರೆ ಮಾತ್ರ ನಾವು ಮಂತ್ರಿ ಕುರ್ಚಿಯಲ್ಲಿ ಕುಳಿತು ಆಡಳಿತ ನಡೆಸಲು ಸಾಧ್ಯವಿದೆ. ಜನರ ನಿರೀಕ್ಷೆ ತಕ್ಕ ಹಾಗೆ ಕೆಲಸ ಮಾಡಬೇಕು ಮತ್ತು ಜನರ ನಿರೀಕ್ಷೆಯನ್ನು ಮುಟ್ಟಬೇಕು ಎಂದರು.

ಪ್ರಾಸ್ತಾವಿಕವಾಗಿ ಮಾತನಾಡಿದ ಸಚಿವ ಪ್ರಮೋದ್ ಮಧ್ವರಾಜ್ ಉಡುಪಿ ವಿಧಾನ ಸಭಾ ಕ್ಷೇತ್ರದಲ್ಲಿ ಸುಮಾರು 18,300 ಕುಟುಂಬಗಳಿಗೆ ಬಿ.ಪಿ.ಎಲ್ ಕಾರ್ಡ್ ನೀಡಲಾಗಿದೆ. ಉಡುಪಿ ಜಿಲ್ಲೆಯಲ್ಲಿ ಶೇ.80ರಷ್ಟು ಎ.ಪಿ.ಎಲ್ ಕಾರ್ಡ್‍ದಾರರು ಇಂದು ಬಿಪಿಎಲ್ ಕಾರ್ಡ್ ಹೊಂದಿದ್ದಾರೆ. ಕ್ಷೇತ್ರ ವ್ಯಾಪ್ತಿಯಲ್ಲಿ 66 ಜನಸಂಪರ್ಕ ಸಮಸ್ಯೆ ನಡೆಸಿ ಜನರ ಸಮಸ್ಯೆಗೆ ಪರಿಹಾರವನ್ನು ಗ್ರಾಮಮಟ್ಟದಲ್ಲಿಯೇ ನೀಡಲಾಗಿದೆ. 771ಕಿ.ಮೀ ರಸ್ತೆ ಅಭಿವೃದ್ಧಿ,871ಕೋಟಿ ಅನುದಾನದಲ್ಲಿ ಹೊಸ ರಸ್ತೆ ಮತ್ತು ಸೇತುವೆಗಳ ನಿರ್ಮಾಣ ಮಾಡಲಾಗಿದೆ ಎಂದರು.

270ಕೋಟಿ ಅನುದಾನದಲ್ಲಿ ವಾರಾಹಿ ಯೋಜನೆಯಿಂದ ಉಡುಪಿ ನಗರಕ್ಕೆ ಕುಡಿಯುವ ನೀರನ್ನು ಒದಗಿಸುವ ಯೋಜನೆಗೆ ಶಂಕುಸ್ಥಾಪನೆ ಮಾಡಲಾಗಿದೆ. ಮೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಬಹುಗ್ರಾಮ ಯೋಜನೆ, ಸುಸಜ್ಜಿತ ರಾಜ್ಯ ರಸ್ತೆ ಸಾರಿಗೆ ನಿಗಮದ ಸ್ವಂತ ಬಸ್ ನಿಲ್ದಾಣ ಮಾಡಲಾಗಿದೆ ಎಂದರು.

ಕಾರ್ಯಕ್ರಮದಲ್ಲಿ ಆರೋಗ್ಯ ಸಚಿವ ಯು.ಟಿ.ಖಾದರ್, ಪ್ರಮುಖರಾದ ಆಸ್ಕರ್ ಫೆರ್ನಾಂಡಿಸ್, ಬ್ಲೋಸಂ ಫರ್ನಾಂಡಿಸ್,ಎಂ.ಎನ್ ರಾಜೇಂದ್ರ ಕುಮಾರ್, ಎಂ.ಎ.ಗಫೂರ್, ಬಸವರಾಜ್, ಮೀನಾಕ್ಷಿ ಮಾಧವ, ಜನಾರ್ಧನ ತೋನ್ಸೆ, ಜಿಲ್ಲಾಧಿಕಾರಿ ಪ್ರಿಯಾಂಕ ಮೇರಿ ಫ್ರಾನ್ಸಿಸ್, ಜನಾರ್ಧನ ತೋನ್ಸೆ, ಸತೀಶ್ ಅಮೀನ್ ಪಡುಕೆರೆ, ಸುಧಾಕರ ಶೆಟ್ಟಿ ಮೈರ್ಮಾಡಿ, ನಿತ್ಯಾನಂದ ಶೆಟ್ಟಿ ಹಾರಾಡಿ, ನರಸಿಂಹಮೂರ್ತಿ, ಸಂಧ್ಯಾ ತಿಲಕ್ ಮತ್ತಿತರರು ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ವಿವಿಧ ಇಲಾಖೆಯ ವತಿಯಿಂದ ಫಲಾನುಭವಿಗಳಿಗೆ ಸವಲತ್ತು ವಿತರಿಸಲಾಯಿತು.

ಉಡುಪಿ ವಿಧಾನಸಭಾ ಕ್ಷೇತ್ರದ ಪ್ರಗತಿಪಥ ಕೈಪಿಡಿಯನ್ನು ಬಿಡುಗಡೆಗೊಳಿಸಲಾಯಿತು. ಅಧ್ಯಾಪಕ ಪ್ರಶಾಂತ್ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.


Spread the love